Total Pageviews

Sunday, July 10, 2011

ಚರ್ಚೆ

''ಆರಂಭದಲ್ಲೇ ಆಂಗ್ಲ ಮಾಧ್ಯಮದಲ್ಲಿ ಅರೆಯುವುದು ಅವೈಜ್ನ್ಯಾನಿಕ'' ಎಂಬ ಶೀರ್ಷಿಕೆಯಡಿ ಪ್ರಕಟವಾದ ಡಾ. ಎಸ. ಎಲ್  ಭೈರಪ್ಪ ನವರ ಚರ್ಚೆ ಲೇಖನಕ್ಕೆ ನನ್ನ ಅನಿಸಿಕೆ.

                       ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಮಗುವು ತನ್ನ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಆಂಗ್ಲ ಅಥವಾ ಕನ್ನಡ ಮಾಧ್ಯಮ  ಅನ್ನುವುದಕ್ಕಿಂತ, ಗ್ಲೋಬಲ್  ಲಾಂಗ್ವೇಜ್  ಎಂದೇ ಕರೆಸಿಕೊಳ್ಳುವ ಭಾಷೆಯ ಕಲಿಕೆ ಮತ್ತು ತಿಳಿವಳಿಕೆ ಆರಂಭದಲ್ಲಿ ಅವಶ್ಯಕವಾಗಿ ಕಲಿಸಲೇಬೇಕಾದ ಅನಿವಾರ್ಯತೆ ಇದೆ. ನಮ್ಮ ಮಾತೃ ಭಾಷೆ ಕನ್ನಡ, ಹಾಗಾಗಿ ಮಗು ಮಾತು ಕಲಿಯುವ ಮುನ್ನ ಪ್ರಪ್ರಥಮವಾಗಿ ಹೇಳುವ ಪದವೇ ಅಮ್ಮ.(ಅಪ್ಪ-ಅಮ್ಮ ಆಂಗ್ಲ ವ್ಯಾಮೊಹಿಗಳು ಇರದಿದ್ದರೆ). ನಮ್ಮ ಮಾತೃ ಭಾಷೆಯನ್ನು ಕಲಿಯಲು ನಾವೆಂದು ವ್ಯಾಕರಣದ ಅಧ್ಯಾಯ ಮಾಡುವ ಅವಶ್ಯಕತೆ ಇಲ್ಲ. ಮಾತೃ ಭಾಷೆಯನ್ನು ಸುಲಲಿತವಾಗಿ ಮಾತನಾಡಲು ಬಂದ ಮೇಲೆ ತಾನೆ ಶಾಲೆಯಲ್ಲಿ ವ್ಯಾಕರಣದ ಪಾಠ  ಹೇಳಿ ಕೊಡುವುದು? ಹಾಗೆಯೇ ಯಾವುದೇ ಭಾಷೆಯಾಗಲಿ ಅಥವಾ ಆಂಗ್ಲ ಭಾಷೆಯಾಗಲಿ ಕೇವಲ ಪಾಠ ಹೇಳಿಕೊಡುವುದರಿಂದ ಬರುವಂಥದಲ್ಲ. ಹೀಗಿರುವಾಗ ಆರಂಭದಲ್ಲಿಯೇ ಮಕ್ಕಳಿಗೆ ಆಂಗ್ಲದಲ್ಲಿ ಹೇಳಿಕೊಡುವುದರಿಂದ ಆಗುವ ಹಾನಿ ಏನು?

                     ನಾನು ಮೊದಲಿನಿಂದ ಆಂಗ್ಲ ಮಾಧ್ಯಮದಲ್ಲೇ ಓದಿದವಳು, ಹಾಗಂತ ನನಗೆ ಕನ್ನಡ ಬರೆಯಲು, ಓದಲು ಬರುವುದಿಲ್ಲವೇ? ನನ್ನ ಹೈ ಸ್ಕೂಲ್  ದಿನಗಳಿಂದಲೇ ಭೈರಪ್ಪನವರು ನನ್ನ ನೆಚ್ಚಿನ ಲೇಖಕರು. ಇವತ್ತಿಗೂ ಕನ್ನಡ ಕೃತಿಗಳನ್ನ ಓದುತ್ತೇನೆ. ಮತ್ತು ಕನ್ನಡದಲ್ಲೇ ಬ್ಲಾಗ್ ಬರೆಯುತ್ತೇನೆ.ನನ್ನ ಹಾಗೆ ಇಂಜಿನಿಯರಿಂಗ್ ಮಾಡಿದ  ಅನೇಕ ಸ್ನೇಹಿತ-ಸ್ನೇಹಿತೆಯರು, ಮೊದಲಿನಿಂದಲೂ 
 ಆಂಗ್ಲ ಶಾಲೆಯಲ್ಲೇ ಓದಿದ್ದರೂ, ಆಂಗ್ಲಕ್ಕಿಂತ ಕನ್ನಡದ ಮೇಲೆಯೇ ಜಾಸ್ತಿ ವ್ಯಾಮೋಹ ಇರುವುದರಿಂದಲೇ ಇವತ್ತು ಕನ್ನಡ ಬ್ಲಾಗರ ಗಳ  ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅಲ್ಲಿಗೆ ಆಂಗ್ಲ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಕನ್ನಡದ ಜ್ನ್ಯಾನ ಕಡಿಮೆ ಎನ್ನುವ ಮಾತು ಅಪ್ರಸ್ತುತ!.

                     ಇನ್ನು ಮೊದಲಿನಿದ ಕನ್ನಡ ಮಾಧ್ಯಮದಲ್ಲಿ ಕಲಿತು, ಒಮ್ಮೆಲೇ ಪಿ.ಯು .ಸಿ  ಗೆ ಆಂಗ್ಲ ಮಾಧ್ಯಮಕ್ಕೆ ಸೇರಿದ ವಿಧ್ಯಾರ್ಥಿಗಳ ಗೋಳು ಕೇಳಿ ನೋಡಿ, ಅವರು ಹೇಳುವ ಒಂದೇ ಮಾತು ನಾವು ಮೊದಲಿನಿದ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಯಬೇಕಿತ್ತು ಅನ್ನುವುದು. ಕನ್ನಡ ಮಾಧ್ಯಮದಲ್ಲಿ ಓದಿದವರಿಗೆಲ್ಲ ಇಂಗ್ಲಿಷ್ ಬರುವುದಿಲ್ಲ್ವೆಂದಲ್ಲ, ಅಲ್ಲಿಯೂ ಆಂಗ್ಲ ಮಾಧ್ಯಮದವರನ್ನು ಮೀರಿಸುವ ಹಾಗೆ ಮಾತನಾಡುವ ವಿಧ್ಯಾರ್ಥಿಗಳು ಇರಬಹುದು, ಆದರೆ ಮೆಜೋರಿಟಿ ವಿಧ್ಯಾರ್ಥಿಗಳಿಗೆ ಅದು ಕಷ್ಟವೇ. ಕನ್ನಡ ಮಾಧ್ಯಮದ ವಿಧ್ಯಾರ್ಥಿಗಳು ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಯಾವ ತೊಂದರೆಯನ್ನು ಅನುಭವಿಸುವದಿಲ್ಲ, ಆದರೆ ಮಾತನಾಡಲು ಮಾತ್ರ ಹಿಂಜರಿಕೆ. ಕರ್ನಾಟಕದಲ್ಲಿದ್ದು ಕಡ್ಡಾಯವಾಗಿ ಕನ್ನಡದಲ್ಲಿಯೇ ಕಲಿಯಬೇಕು, ಕನ್ನಡದಲ್ಲಿಯೇ ಮಾತನಾಡಬೇಕು ಎಂದು ಹೇಳುವ ಅದೆಷ್ಟು ಜನ ಬುದ್ಧಿ  ಜೀವಿಗಳು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಕನ್ನಡ ಮಾಧ್ಯಮದಲ್ಲಿ ಓದಿಸಿದ್ದಾರೆ? ವ್ರತ್ತಿ ಪರ ಕೋರ್ಸ್  ತೆಗುದುಕೊಂಡ ವಿಧ್ಯಾರ್ಥಿಗಳಿಗೆ, ಅದರಲ್ಲೂ ಇಂಜಿನಿಯರಿಂಗ್ ಓದುವ ವಿಧ್ಯಾರ್ಥಿಗಳನ್ನು ಕಂಪನಿ ಗಳು  ಆರಿಸಿಕೊಳ್ಳುವಾಗ  ಇಂಗ್ಲಿಷ್ ಭಾಷೆಯೇ ಮಾನದಂಡ ವಾಗಿರುವ, ಇಂಗ್ಲಿಷ್ ಮಾತನಾಡಲು ಬಾರದ ಒಂದೇ ಕಾರಣಕ್ಕೆ, ನಾಲ್ಕು ವರ್ಷ ಪಟ್ಟ ಕಷ್ಟ ವ್ಯರ್ಥ ವಾಗಬೇಕೆ?

                      ಯಾವುದೇ ಭಾಷೆಯ ಕಲಿಕೆ ಇಂದ ಅಥವಾ ಆರಂಭದಿಂದಲೇ ಅದರ ಅಧ್ಯಯನದಿಂದ ಕನ್ನಡಕ್ಕೆ ಕುತ್ತು ಬರುವ ಹಾಗಿದ್ದರೆ, ನಮ್ಮೆಲ್ಲ ಕನ್ನಡ ದಿನಪತ್ರಿಕೆಗಳು, ಕನ್ನಡ ಪುಸ್ತಕಗಳು, ಕಾದಂಬರಿಗಳು,ಹಾಗೂ ಟೀವಿ ಚನ್ನೆಲ್ಲುಗಳು ಎಂದೋ ದಿವಾಳಿ ಎದ್ದು ಹೋಗಬೇಕಿತ್ತಲ್ಲವೇ? ಯಾವ ಮಾಧ್ಯಮದಲ್ಲಿ ಓದಿಸಿದರೂ ಮನೆಯಲ್ಲಿ ಮಾತೃ ಭಾಷೆ ಕನ್ನಡ ಆಗಿರುವುದರಿಂದ, ಆಂಗ್ಲವೇ ಇರಲಿ ಇನ್ನ್ಯಾವ ಭಾಷೆಯೇ ಇರಲಿ ಮಕ್ಕಳು ಅದನ್ನ ಕನ್ನಡಕ್ಕೆ ಅನುವಾದ ಮಾಡಿಕೊಂಡೆ ಕಲಿಯುತ್ತಾರಾದರಿಂದ, ಕನ್ನಡಕ್ಕಂತೂ  ಯಾವ ಕುತ್ತೂ ಇಲ್ಲ.

                      ಯಾವ  ಮಾಧ್ಯಮದಲ್ಲಿ ಓದುತ್ತಿದ್ದರೂ ಮಕ್ಕಳಿಗೆ ದಿನಪತ್ರಿಕೆಗಳನ್ನು ಓದಿಸಬೇಕು.ಕನ್ನಡ ಸಾಹಿತ್ಯದಬಗ್ಗೆ ಆಸಕ್ತಿ ಬೆಳೆಸಬೇಕು  ಮತ್ತು ಕನ್ನಡದ  ಅಪ್ರತಿಮ, ಲೇಖಕ, ಸಾಹಿತಿ ಹಾಗೂ ಕವಿಗಳ ಕೃತಿಗಳನ್ನು ಬಿಡುವಿನ ವೇಳೆಯಲ್ಲಿ  ಓದುವಂತೆ ಪ್ರೇರೇಪಿಸಬೇಕು.ಇದನ್ನು ಬಿಟ್ಟು ಕೇವಲ ಕನ್ನಡ ಕಲಿಸಿ ಕನ್ನಡ ಕಲಿಸಿ ಎಂದು ಹೇಳುವುದರಿಂದ, ಕನ್ನಡ ಕೇವಲ ಒಂದು ವಿಷಯವಾಗಿ ಉಳಿದು ಹೋಗುತ್ತದೆಯೇ ಹೊರತು ಅದರಿಂದಾಗುವ ಲಾಭ ಏನೂ ಇಲ್ಲ.ಕನ್ನಡ ಮಾಧ್ಯಮದಲ್ಲಿ ಕಲಿಯುವದಕ್ಕು ಮಕ್ಕಳು ಕನ್ನಡದ ಮೇಲೆ ಆಸಕ್ತಿ ಬೆಳೆಸಿಕೊಲ್ಲುವುದಕ್ಕು ಸಂಭಂದವಿಲ್ಲ. ಅದೆಷ್ಟು ಜನ ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳಿಗೆ ಕನ್ನಡ ಸಾಹಿತ್ಯದ ಅರಿವಿದೆ? ಕನ್ನಡ ಮಾಧ್ಯಮದಲ್ಲಿ ಕಲಿತ ಮಾತ್ರಕ್ಕೆ ಕನ್ನಡವನ್ನು ಉಳಿಸಲು ಸಾಧ್ಯವೇ? ಮಾಧ್ಯಮ ಯಾವುದಾದರೇನು? ಆಸಕ್ತಿ ಬೆಳೆಸಿ ಉಳಿಸುವುದು ನಮ್ಮ ಕೈಯಲ್ಲಿದೆ.