Total Pageviews

Wednesday, June 22, 2011

ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು.....

                

                 ಯಾವ ಮಹಾನುಭಾವ ಹೇಳಿದ್ದಾನೋ  ಗೊತ್ತಿಲ್ಲ, ನಮ್ಮ ಉತ್ತರ ಕರ್ನಾಟಕದೆಡೆಗೆ, ತುಂಬಾ popular ಮಾತೊಂದಿದೆ. ''ಧಾರವಾಡ ಮಳಿ ನಂಬ ಬ್ಯಾಡ, ಬೆಳಗಾವಿ ಹುಡುಗಿ ನಂಬ ಬ್ಯಾಡ!'' ನಮ್ಮ ವರಕವಿ ಬೇಂದ್ರೆ ಅವರು  ನಮ್ಮ ಧಾರವಾಡದ ಮಳೆಯ ಬಗ್ಗೆ ತುಂಬಾ ಅಧ್ಭುತವಾದ ಕವನಗಳನ್ನ ಬರೆದಿದ್ದಾರೆ, ಅವುಗಳೆಲ್ಲ ನಿಜ ಎಂದು ಕಳೆದು ನಾಲ್ಕು ದಿನಗಳಿಂದ ಅನ್ನಿಸುತ್ತಿದೆ, ನಾನು ಬೇಸಿಗೆಯಲ್ಲಿ ಹುಟ್ಟಿದ ಕಾರಣಕ್ಕೋ ಏನೋ ಮಳೆಗೂ ನಂಗು ಮೊದಲಿನಿಂದ ಅಷ್ಟಕ್ಕಷ್ಟೇ. ನನ್ನೆಲ್ಲ ಸ್ನೇಹಿತೆಯರು, ಮಳೆಯಂದ್ರೆ ಇಷ್ಟ ಇಲ್ವಾ? ಯಾವ ಸೀಮೆಯವಳೇ ನೀನು? ಅಂತ ರೆಗಿಸಿದಾಗ,ಮಳೆಗೆ ನನ್ನ ಕಂಡ್ರೆ ಇಷ್ಟ ಕಣ್ರೆ, ಅಂತ ಹೊಟ್ಟೆ ಉರಿಸುತ್ತಿದ್ದೆ! ಈಗಲೂ ಅಷ್ಟೇ ಬಿಟ್ಟು ಬಿಡದೆ ಧಾರಾಕಾರವಾಗಿ ಸುರಿಯುವ ಮಳೆ ನೋಡಲು ನನಗೆ ಕಷ್ಟವೇ.. 

               ಮನೆಯಿಂದ ಹೊರನಡೆದ ಎರಡನೇ ಹೆಜ್ಜೆಗೆ, ನನ್ನನ್ನು ಅತೀ ಯಾಗಿ ಪ್ರೀತಿಸುವ ಮಳೆರಾಯನೆಡೆಗೆ ಒಂದು ಅಕ್ಕರೆಯ ಮುಗುಳ್ನಗೆ! ನನ್ನ ಒಂದು ನಗುವಿಗಾಗಿ ವರ್ಷವಿಡಿ ಚಡಪಡಿಸಿದ ಹುಡುಗನಂತೆ, ಒಂದೇ ಕ್ಷಣದಲ್ಲಿ ತನ್ನೆಲ್ಲ ಮನದ ಭಾವನೆಗಳನ್ನು, ಹರ್ಷೋದ್ಗಾರಗಳನ್ನು  ನನ್ನ ಮೇಲೆ ಚಿಮ್ಮಿಸಿ ಆನಂದಿಸುವ ಮಳೆರಾಯನಿಗಿಂತ ಇನ್ನೊಬ್ಬ ಗೆಳೆಯ ಬೇಕೇ?


               ಇದೆಲ್ಲ ಕೇವಲ ನನ್ನ ಕಲ್ಪನೆಯೂ, ಅಥವಾ ಭ್ರಮೆಯೋ ನನಗಂತೂ ಕಳೆದ ನಾಲ್ಕು ದಿನಗಳಿಂದ ಮಳೆಯೊಂದಿಗೆ ವಿಪರೀತ ಪ್ರೇಮ! ನಮ್ಮಿಬ್ಬರಲ್ಲಿ ಕೇವಲ ನಾನೊಬ್ಬಳೆ ಮಾತಿನ ಮೂಲಕ ಪ್ರತಿಕ್ರಿಯುಸುತ್ತೇನೆ, ಮಳೆರಾಯನೋ ನಿರ್ಲಿಪ್ತ ಭಾವನೆಯ, ಅತ್ಯಂತ ಸಹನಶೀಲ ಮತ್ತು ಶಾಂತ ಸ್ವಭಾವದ, ಎಲ್ಲವನ್ನು ವರ್ಷಧಾರೆಯ ಮೂಲಕ ವ್ಯಕ್ತ ಪಡಿಸುವ ಅಪರೂಪದ ಹುಡುಗ!ಅವನು ನನ್ನ ಎಷ್ಟು ಪ್ರೀತಿಸುತ್ತನೆಂದರೆ, ನನ್ನ ಅನುಮತಿ ಇಲ್ಲದೆ ಹೋದರೆ ಬರದೆ ಕೇವಲ ಗುಡುಗು ಮತ್ತು ಮಿಂಚಿನ ಮೂಲಕ ನನ್ನ ಪ್ರತಿಕ್ರಿಯೆಗೆ ಕಾಯುತ್ತ ಕುಳಿತಿರುತ್ತಾನೆ.

              ಮೊನ್ನೆ ಕಲಾಭವನ್ ಸರ್ಕಲ್ ಇಂದ ನನ್ನ ಸ್ಕೂಟಿ ಕಿವಿ ಹಿಂಡಿ, ಮುಂದೆ ಹೋಗುವಾಗ ಧಬಲ್ಲನೆ ಎದುರಾದ ಸಿಗ್ನಲ್  ಕಂಡು ಗಾಡಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ, ಮಳೆರಾಯ ತನ್ನ ಆರ್ಭಟ ಶುರು ಮಾಡಿದ್ದನ್ನು ಕಂಡು, ಜರ್ಕಿನ್  ಮತ್ತು ಕ್ಯಾಪ್ ಮರೆತು ಬಂದ ನನ್ನನ್ನು ನಾನೇ  ಹಳಿದುಕೊಂಡು, ಉಪಾಯ ಮಾಡಿ ಆಕಾಶವನ್ನೇ ನೋಡುತ್ತಾ, ಮನದಲ್ಲೇ ಪ್ಲೀಸ್ ಕಣೋ ನಾನು ಮನೆಗೆ ಹೋಗುವ ವರೆಗೂ ಬರಬೇಡ, ನಿನ್ನ ಪ್ರೀತಿಯ ಹುಡುಗಿಯನ್ನ ಮನೆವರೆಗೂ ಸೇಫ್ ಆಗಿ ತಲುಪಿಸುವುದು ನಿನ್ನ ಜವಾಬ್ದಾರಿ ಅಲ್ವ? ಪ್ಲೀಸ್ ಬರಲ್ಲ ತಾನೆ ಅಂತ ಗೊಣಗುತ್ತಿರುವುದನ್ನು, ನನ್ನ ಪಕ್ಕದ ಬೈಕ್ ಮೇಲೆ ಕುಳಿತ ಸ್ಪುರದ್ರೂಪ ಹುಡುಗ  ಅವಕ್ಕಾಗಿ, what's going on? ಅಂದ, nothing serious, speaking to my boy friend Mr Rain! ಅಂದೆ, ಆ ಹುಡುಗನ reaction ಪಡೆಯುವದರೊಳಗಾಗಿ, ಗ್ರೀನ್ ಸಿಗ್ನಲ್  ಬಂತು, ಮತ್ತೆ ನನ್ನ ಸ್ಕೂಟಿಯ ಕಿವಿ ಹಿಂಡಿ ಮನೆಯೆಡೆಗೆ ಹೋಗುವಾಗ ಒಂದೇ ಪ್ರಶ್ನೆ ಮನದಲ್ಲಿ ಕಾಡುತ್ತಿತು ಮಳೆರಾಯ ನನ್ನ ಮಾತು ಕೇಳುತ್ತಾನ? ಕೇಳದೆ ಏನು ಮನೆ ತಲುಪೋ  ವರೆಗೂ ಒಂದು ಹನಿಯನ್ನೂ ಸುರಿಸದೇ,  ಇರುವದನ್ನು ಕಂಡು ಆಕಾಶವನ್ನು ನೋಡಿ ಸಿಹಿ ಮುತ್ತೊಂದನ್ನ ನನ್ನ ಪ್ರೀತಿಯ ಹುಡುಗನೆಡೆಗೆ  ತೇಲಿ  ಬಿಟ್ಟೆ. ಮನೆಸೇರಿದ ಎರಡೇ ನಿಮಿಷಕ್ಕೆ ಧಾರಾಕಾರ ಮಳೆ!

            ಅಮ್ಮ ಆಫೀಸಿಂದ ಮನೆಗೆ ಬಂದ ತಕ್ಷಣ, ಈವತ್ತು ಸಿಗ್ನಲ್ನಲ್ಲಿ ನಿಂತಾಗ.........................................................  ಹಿಂಗಾಯ್ತು. ಅಂತ ವಿವರಿಸಿದಾಗ ಅಮ್ಮ ನನ್ನನ್ನು ಪೆದ್ದಿ ಅನ್ನೋ ಹಾಗೆ ಒಂದು ಹುಸಿ ನಗು ನಕ್ಕಳು. ನಂಗೊತ್ತು  ನೀನು ನಂಬೋಲ್ಲ ಅಂತ, ಆಯಿತು ಈಗಲೇ prove ಮಾಡ್ತಿನಂತೆ. ಈಗ ಮಳೆ ಜೋರಾಗಿದೆ ತಾನೇ? ಆಯ್ತು ಈಗ ನಾನು ಹೊರಗೆ ಹೋಗಿ ಆಕಾಶವನ್ನು ನೋಡಿ ನಾನು ಮತ್ತು ಅಮ್ಮ ಪಾರ್ಕ್ ವರೆಗೂ ಹೋಗಿ ಬಾರೋ ತನಕ ನಿಲ್ಲು. ಅಂತ ಕೇಳ್ತೀನಿ ನೋಡು.ಅವಾಗ್ ನೀನೆ ನಂಬ್ತಿ.  ಅಮ್ಮ ಕಾಫಿ ಕುಡಿದು ಹೊರಗೆ ಬರುವದರೋಳಗಾಗಿ ನನ್ನ ಪ್ರೀತಿಯ ಹುಡುಗನಿಗೆ ನನ್ನ ವಿನಂತಿ ತಲುಪಿಸಿದ್ದೆ. ಅವನದು ನನ್ನಡೆಗೆ ನಿಜವಾದ ಪ್ರೀತಿಯಮ್ಮ, ನೋಡು ನನ್ನ ಮಾತನ್ನೆಲ್ಲ ಕೇಳುತ್ತಾನೆ, ಎಂದು ಹರಟುತ್ತ ನಡೆದ ಸ್ವಲ್ಪ ಸಮಯದ ನಂತರ, ಪುಟ್ಟ ಮನೆಗೆ ಮೆಂಟಲ್ ಹಾಸ್ಪಿಟಲ್ ತುಂಬಾ ಹತ್ರ ಇರೋದ್ರಿಂದ ನಿನಗೆ ಸೈಡ್ ಎಫ್ಫೆಕ್ಟ್ಸ್ ಆಗ್ತಾ ಇದೆ ಕಣೋ , ಒಂದ್ಸಲ  ಹೋಗಿ ಚೆಕ್ ಅಪ್ ಮಾಡಿಸೋಣ, ಮನೆಗೆ ಹೋಗುವ ಮೊದಲು ಆಸ್ಪತ್ರೆಗೆ ಹೋಗೋಣ್ವಾ? !

            ಅಮ್ಮ ......ಗುರ್ರ್ರ್ ...ಅನ್ನುವಾಗ ಮತ್ತೆ ನನ್ನ ಪ್ರೀತಿಯ ಹುಡುಗನ ಆರ್ಭಟ ಶುರುವಾಯ್ತು. ಮನೆಗೆ ಹೋಗೋ ವರೆಗೂ ಬರಲ್ಲ ಅಂದೆಲ್ಲ ಈಗ ಏನ್ ಹೇಳ್ತಿಯ? ನನ್ನ ಪ್ರೀತಿಯ ಹುಡುಗ ನನ್ನಷ್ಟೇ ಪ್ರೀತಿಸ್ತಾನೆ, ಅವನ ಅತ್ತೆಯನ್ನಲ್ಲ ! ಅಮ್ಮ ನನ್ನ ಕಿವಿ ಹಿಡಿದು ಏನಂದೆ ಅಂದಾಗ, ಹೌದಮ್ಮ  ನೀನು ನನ್ನ ಬೈದ್ರೆ ಅವನಿಗೆ ಕೋಪ ಬರುತ್ತೆ, ಎಲ್ಲಿ ಒಂದು ಮುತ್ತು ಕೊಡು ನೋಡೋಣ ? ಮತ್ತೆ ಮಳೆ ನಿಂತು ಹೋಗುತ್ತೆ  ಅಂದೆ. ನಿನಗೇನು ತೆಲೆ ಕೆಟ್ಟಿದೆಯ ? ಪಾರ್ಕ್ನಲ್ಲಿ ಮುತ್ತು ಕೊಡು ಅಂತಿಯ ? ಅಮ್ಮ ನಾನೇನು ಅಪ್ಪನಿಗೆ ಮುತ್ತು ಕೊಡು ಅಂದ್ನ ? ಇಲ್ವಲ್ಲ ನಾಚ್ಕೊಬೇಡ  ಬೇಗ ಕೊಡು ಇಲ್ದೆ ಹೋದ್ರೆ  ಇಬ್ರೂ ನೆನೆದು ಹೋಗ್ತೇವೆ ಅಮ್ಮ .  ಆಯ್ತು ನೋಡೇ ಬಿಡೋಣ ಅಮ್ಮ ನನ್ನ ಕೆನ್ನೆಗೆ ಮುತ್ತಿಡಲು ಮಳೆರಾಯ ಶಾಂತ! ಏನೇ ಕಂದ ಇದು ವಿಸ್ಮಯ? ಎಂದು ಅಮ್ಮ ಕಣ್ಣು ಬಿಟ್ಟು ನೋಡ್ತಾ ಕುಳಿತು ಬಿಟ್ಲು   ! ನೋಡು  ನಿನಗೆ ಮಳೆರಾಯನಿಗಿಂತ  ಒಳ್ಳೆ ಅಳಿಯ ಬೆಕ?  ಈವತ್ತೇ ಅಪ್ಪನೊಟ್ಟಿಗೆ ಮಾತಾಡಿ ನನಗು ಮಳೆರಾಯನಿಗು ಮದ್ವೆ ಫಿಕ್ಸ್ ಮಾಡು.    ''ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು, ಹಗಲಿರಲಿ ಇರುಳಿರಲಿ ನೀನಿರದೆ ನಾ ಹೇಗಿರಲಿ?.......'' ಪ್ರೇಮ ಕವಿ ಕಲ್ಯಾಣರ ಪತ್ನಿಯೆಡೆಗೆ, ಸಣ್ಣ ಮರುಕ! 

Sunday, June 19, 2011

ಜನ ಮರುಳೋ ಜಾತ್ರೆ ಮರುಳೋ?

                       Back home :-)! ಅಂತು- ಇಂತೂ  ಇಂಜಿನಿಯರಿಂಗ್ ಮುಗಿಸಿದ್ದಾಯ್ತು. ನಿನ್ನೆ ಮನೆಗೆ ಬಂದಾಗಿನಿಂದ ನಿಜವಾಗಲು ನಾನು ಡಿಗ್ರಿ ಮುಗಿಸಿದ್ದೇನ? ತುಂಬಾ ದೊಡ್ಡವಳು ಆದೆನ? ನನ್ನ ಪುಣ್ಯಕ್ಕೆ ಈವತ್ತು ಸಂಡೇ ಅಮ್ಮನಿಗೆ ರಜೆ, ಮನೆಯಲ್ಲಿ ಇದಾಳಲ್ಲ, ಸರಿ ಅಮ್ಮನ ತೆಲೆ ತಿನ್ನೋಣ ಅಂತ, ಅಮ್ಮ.. ನಾನು ನಿಜವಾಗಲು....? ಬಂದಾಗಿನಿಂದ ೧೦೦ ಸಲ ಕೇಳಿದ್ದೆ ಕೇಳ್ತಾ ಇದ್ದೀಯ ಏನಾಗಿದೆ ನಿನಗೆ? ಜಗತ್ತಿನಲ್ಲಿ ನೀನೊಬ್ಬಳೆ ಡಿಗ್ರಿ ಮುಗ್ಸಿದಿಯ ಏನ್ ಕಥೆ? ನನ್ನ ಪುಟ್ಟ ಮಗು ನನಗೆ ಯಾವಾಗಲು ಪುಟ್ಟ ಮಗುನೆ! ನಾಲ್ಕು ವರ್ಷ ನೀನು ಮನೇಲಿ ಇರಲಿಲ್ಲ ಅನ್ನೋದು ಬಿಟ್ಟರೆ, ನಿನ್ನಲ್ಲಂತೂ ಯಾವ maturity  ಕೂಡ ನನಗೆ ಕಾಣುತ್ತಿಲ್ಲ, ಆದರು ಹೊರಗಿನ ಜನಕ್ಕೆ ನೀನು ಈಗ ದೊಡ್ದವಳೇ! ಇನ್ನು ಮೇಲಾದರೂ ತಮ್ಮನ ಜೊತೆ  ಹೊಡೆದಾಡಬೇಡ, ದೊಡ್ಡ ದನಿಯಲ್ಲಿ ಕೂಗಾಡಬೇಡ, ಸ್ವಲ್ಪ ಸೀರಿಯಸ್ ಆಗಿ ಇರೋದನ್ನ ಕಲಿ, ಚೆಲ್ಲು ಚೆಲ್ಲಾಗಿ  ಆಡುವದನ್ನು ಬಿಡು........and the list continues...ಯಾಕಾದರೂ ಅಮ್ಮನ್ನ ಕೆಳಿದೇನೋ ಅನ್ನುವಷ್ಟು  advise ಗಳ  ಸುರಿಮಳೆ!

                     ಇತ್ತ ಅಮ್ಮ ಹೇಳಿದ್ದನ್ನೇ ಹೇಳುತ್ತಿರುವಾಗ,ಸದ್ದಿಲದಂತೆ  ಹಾಲಿನ ಲೋಟ ಎತ್ತುಕೊಂಡು, ಬಿಸಿ ಬಿಸಿ ಟೀ ಹೀರುತ್ತಾ ಪೇಪರ್ ಓದುತ್ತ ಕುಳಿತ ಅಪ್ಪನ ಪಕ್ಕದಲ್ಲಿ ಹೋಗಿ ಕುಳಿತು, ಟಿವಿ ಆನ್ ಮಾಡಿದಾಗ  ಬಂದ ಮೊದಲ ಸುದ್ದಿ FDA  ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕೇವಲ ೭ ಲಕ್ಷ ರುಪಾಯೀ ಎಂಬ breaking  ನ್ಯೂಸ್! ಅಮ್ಮ ಅಡುಗೆ ಮನೆಯಿಂದ ಹೊರ ಬಂದು, ನನ್ನ ತೆಲೆ ಮೊಟಕಿ , ನೋಡು ಬರೀ FDA ಪರೀಕ್ಷೆಗೆ ಈ ಪರಿಸ್ಥಿತಿ, ಇನ್ನು ನೀನು ಇಂಜಿನಿಯರಿಂಗ್ ಓದಿದ್ದು ಸಾಕು, Mtech ಮಾಡಲ್ಲ, IAS ಮಾಡ್ತೀನಿ ಅಂತೀಯ? ಎಲ್ಲ ಸರಕಾರೀ ಪರಿಕ್ಷೆಗಳದ್ದು ಇದೆ ಹಣೆ ಬರಹ, ಆಮೇಲೆ ನೀನು depressed ಆಗಿ ತೆಲೆ ಕೆಡಿಸಿಕೊಳ್ಳುವುದು ಬೇಕಿಲ್ಲ, ಸುಮ್ಮನೆ PGCET ಬರೆದು Mtech ಮಾಡು. ಅದಾದಮೇಲೆ ಏನು ಬೇಕೋ ಅದನ್ನ ಮಾಡ್ಕೋ...ಅಮ್ಮ ನಂಗೆ ಹೇಳುತ್ತಿಲ್ಲವೇನೋ ಎಂಬಂತೆ ಪೇಪರ್ ಓದುತ್ತ ಕುಳಿತುಕೊಂಡೆ.

                    ಅತ್ತ ಅಪ್ಪ ಕೂಡ, ಹೌದು ಪುಟ್ಟ ಸುಮ್ಮನೆ  ಸಮಯ ವ್ಯರ್ಥ ಮಾಡಬೇಡ PGCET preparation ಶುರು ಮಾಡು. ನಾನು ಯಾವತ್ತು ನಿನ್ನ ಕನಸುಗಳಿಗೆ ಅಡ್ಡ ಬಂದವನಲ್ಲ, ಈವತ್ತಿಗೂ ನನಗೆ ನಿನ್ನ ಸಾಮರ್ಥ್ಯದ ಬಗ್ಗೆ ಅನುಮಾನಗಳಿಲ್ಲ, ನೀನು ಮೊದಲು Mtech ಮುಗಿಸಿ ಆಮೇಲೆ ಇದರತ್ತ ಗಮನಹರಿಸು. ನಮ್ಮ ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಖಂಡಿಸುವ, ಖಂಡಿಸಿ ಬರೆಯುವ ಹುಮ್ಮಸ್ಸು, ಧೈರ್ಯ ಎರಡೂ ನಿನ್ನಲಿದೆ, ಆದರೆ ಇದು ಕೇವಲ ಇವೆರಡರಿಂದ ಆಗುವ ಕೆಲಸವಲ್ಲ. ನಾನು ಅಮ್ಮನ ಹಾಗೆ ಮಾತಾಡ್ತಾ ಇದೀನಿ ಅನ್ಕೊಬೇಡ, lets be practical, ನಮಗೆ ಇನ್ನೊಂದು option ಇರಲೇಬೇಕು, ಇದಾಗದಿದ್ದರೆ ಇನ್ನೊಂದು ಅನ್ನೋ ಥರ, ನೋಡು ಯೋಚನೆ ಮಾಡು, ಇಷ್ಟಾಗಿಯೂ ನಿನಗೆ ಅದೇ ಮಾಡುವುದಿದ್ದರೆ ಮಾಡು ಪರವಾಗಿಲ್ಲ, ನಾವೇನು ಅಡ್ಡ ಬರೋಲ್ಲ, ದೆಲ್ಹಿಗೆ ಹೋಗುವ ವ್ಯವಸ್ಥೆ ಮಾಡ್ತೇನೆ.

                   ಬೆಳಗ್ಗೆ ಬೆಳೆಗ್ಗೆನೆ ತುಂಬಾ ಖಿನ್ನತೆಗೆ ಆವರಿಸಿ ಕೊಂಡಿರುವಂತಾಗಿ, ಏನು ಮಾಡಿ ಏನು ಪ್ರಯೋಜನ? ನಾನು ಯಾವ  ಊರಿನ ದಾಸಯ್ಯ? ಯಾವ ಆದರ್ಶ ಅಂತ ಇಟ್ಟು ಕೊಂಡು ಬದುಕಿ ಏನಾಗ ಬೇಕಿದೆ? ಒಂದು ಕಡೆಯಲ್ಲಿ ಭ್ರಷ್ಟ ಸರಕಾರ, ಇನ್ನೊಂದು ಕಡೆ ತಮ್ಮನ್ನು ತಾವು ಸನ್ಯಾಸಿಗಳು ಎಂದು ಹೇಳಿಕೊಂಡು ೧೦೦ ತೆಲೆಮಾರಿಗಾಗುವಷ್ಟು ಸಾವಿರ ಕೋಟಿಗಳಲ್ಲಿ ದುಡ್ಡು ಮಾಡುವ ಬಾಬಾಗಳು, ಹೇಸಿಗೆ ಹುಟ್ಟುವಷ್ಟು ಜನರ ಮೌಢ್ಯ, ಇಂಥವರ ಮುಖವಾಡ ಬಯಲು ಮಾಡಿ ಪುಟಗಟ್ಟಲೆ ಲೇಖನ ಬರೆದು, ಗಂಟಗಟ್ಟಲೆ TV ಪರದೆಯ ಮೇಲೆ ಭಾಷಣ ಹೊಡೆದು, ಕಡೆಗೆ ಅವಕಾಶ ಸಿಕ್ಕಾಗಲೆಲ್ಲ ಇದೆ ಭ್ರಷ್ಟರಿಂದ ಸೈಟು-ಮನೆ  ಮಾಡಿಕೊಂಡು ಸಮಾಜಕ್ಕೆ ನೈತಿಕ ಪಾಠ ಹೇಳಿ ಕೊಡುತ್ತಿರುವಾಗ, ನನ್ನೊಬ್ಬಳಿಂದ ಅಥವಾ ನನ್ನಂಥ ಅನೆಕರಿಂದಾದರು ಏನು ಮಾಡಲು ಸಾಧ್ಯ? ನಾವೆಲ್ಲಾ ಎತ್ತ ಸಾಗುತ್ತಿದ್ದೇವೆ? ಮುಂತಾದ ಪ್ರಶ್ನೆಗಳು ತೆಲೆಯಲ್ಲಿ ಹೊಕ್ಕಿ ಕೊರೆಯಲು ಶುರು ಮಾಡಿದವು.

                    ಏನಾಗಿದೆ ನಮ್ಮ ಜನರಿಗೆ? ಬಾಬಾ ರಾಮದೇವ್ ಆಸ್ತಿ ಸವಿಸ್ತಾರವಾಗಿ ಅಂಕೆ ಅಂಶಗಳ  ಬಹಿರಂಗ ಪಡಿಸಿದ್ದಾಗಿಯು, ಪಕ್ಕದ ಮನೆ ಆಂಟಿ ಅವನಿಂದಲೇ ಅವರ ಮಧುಮೇಹ ವಾಸಿ ಆಯಿತು  ಅಂತ ಹೇಳ್ಕೊತಾರಲ್ಲ ಯಾಕೆ? ಪುಟ್ಟ ಪರ್ತಿಯ ಜನರಿಗಂತೂ ಸತ್ಯ ಸಾಯಿ ಬಾಬಾ ನಡೆದಾಡುವ ದೇವರು, ಸಚಿನ್ ತೆಂಡೂಲ್ಕರ್ ಅಂಥ ಸ್ಟಾರ್ ಕೂಡ ಬಾಬಾನ ಚಮತ್ಕಾರಗಳಿಗೆ ಮಾರು ಹೋಗಿದ್ದನೆಂದರೆ, ಉಳಿದ ಜನ ಸಾಮಾನ್ಯರ ಪಾಡೇನು? ಯಾಕೆ ಜನರು ಇಷ್ಟು ಸುಲಭವಾಗಿ ಮೋಸ ಹೋಗುತ್ತಾರೆ? ಜನರ ಅಮಯಕತೆಯನ್ನೇ ಬಂಡವಾಳ  ಮಾಡಿಕೊಂಡು, ಕೋಟಿಗಟ್ಟಲೆ ಹಣ ಮಾಡುವ ಇಂಥ ನೀಚ ಬಾಬಾಗಳನ್ನು ಅವತಾರ ಪುರುಷರು ಎಂಬಂತೆ 24x7 ಹೇಳಿದ್ದನ್ನೇ ಹೇಳುವ ಚನ್ನೆಲ್ಲುಗಳು, ಅಸಾಹಯಕ ವೀಕ್ಷಕರು ಥೂ-ಛಿ ಎಂಬ ಉಧ್ಗಾರಗಳನ್ನು ಬಿಟ್ಟು ಬೇರೆ ಇನ್ನೇನು ಮಾಡಲು ಸಾಧ್ಯ? 

                    ಸೆಕ್ಸ್-ಸ್ಕ್ಯಾಂಡಲ್  ಇಂದಾಗಿ ಇಡೀ ಸನ್ಯಾಸಿಗಳ ಅಸ್ತಿತ್ವವನ್ನೇ ಅವಮಾನಿಸಿದ, ಸ್ವಾಮಿ ನಿತ್ಯಾನಂದನಿಗೆ ಇವತ್ತಿಗೂ ದೇಶ ವಿದೇಶಗಳಿಂದ ಭಕ್ತ ಸಾಗರ ಹರಿದು ಬರುತ್ತಿರುವದು, ನಿಜಕ್ಕೂ ವಿಪರೀತ ಭಕ್ತಿಯ ಪರಾಕಾಷ್ಟೆ ಅಂತೆ ಹೇಳಬೇಕು..ನಮ್ಮಂತೆ ಅವನು ಕೂಡ ಉಪ್ಪು-ಖಾರ ತಿನ್ನುವ ಮನುಷ್ಯ ತಪ್ಪು ಮಾಡಿದ್ದರೂ ಮಾಡಿರಬಹುದು, ತಪ್ಪನ್ನು ನೋಡಿಕೊಳ್ಳಲು ಕೋರ್ಟ್ ಇದೆ, ಆದರು ಆತ ಕೇವಲ ಮುಟ್ಟಿಯೇ ನನ್ನ ರೋಗ ಗುಣ ಪಡಿಸಿರುವ ಪವಾಡ ಪುರುಷ. ಯಾರು ಏನೇ ಹೇಳಿದರು ಅವನಿಂದ ನಂಗೆ ಒಳ್ಳೆಯದೇ ಆಗಿದೆ ಹಾಗಾಗಿ ನಾನು ಅವನಲ್ಲಿಗೆ ಮತ್ತೆ ಮತ್ತೆ ಹೋಗಿ ನನ್ನ ರೋಗ ವಾಸಿ ಮಾಡಿಕೊಂಡು ಬರುತ್ತೇನೆ ಅಂತ ಹೇಳುವ ಅವಿವೇಕಿ ಭಕ್ತರಿಗೆ ಏನನ್ನು ಹೇಳಲು ಸಾಧ್ಯ? 

                  ಅಯ್ಯೋ ನಮ್ಮ ಬಾಬಾ ರಾಮದೇವ್, ಆ ನಿತ್ಯಾನಂದನಿಗಿಂತ  ಒಳ್ಳೆಯವನಲ್ಲವ? ಈವತ್ತು ಎಲ್ಲ ಸ್ವಾಮಿಗಳು ದುಡ್ಡು ಮಾಡುತ್ತಿದ್ದಾರೆ, ರಾಮದೇವ್ ಒಬ್ಬನೇ ಏನು ಅಲ್ಲವಲ್ಲ? ಅವನು ಎಷ್ಟೇ ದುಡ್ಡು ಮಾಡಿದ್ದರೆನಂತೆ, ಅವನು ಕ್ಯಾನ್ಸೆರ್ ಮತ್ತು ಏಡ್ಸ ರೋಗಗಳನ್ನು ವಾಸಿ ಮಾಡಬಲ್ಲ, ನಮಗೆ ಅವನ ವೈಯಕ್ತಿಕ ಬದುಕು, ಅವನ ಹಣ, ಆಸ್ಥಿಗಳಿಂದ ಏನಾಗಬೇಕಿದೆ? ನನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರೆ ಕತ್ತೆ ಕಾಲಾದರೂ ಹಿಡಿದು ಬಗೆ ಹರಿಸಿ ಕೊಳ್ಳಲು ಸಿದ್ಧನಿರುವಾಗ, ರಾಮದೇವ್ ಎಂಬ ಪರಮ ದೇಶ ಭಕ್ತನ ಅನುಯಾಯಿ ಆದರೆ ತಪ್ಪೇನು ಎಂದು ಕೇಳುವವರಿಗೆ ಏನು ಹೇಳಬಹುದು?

                 ಇವತ್ತು ನಮ್ಮ ದೇಶದಲ್ಲಿ ರಾಜಕೀಯ ಎಷ್ಟು ಗಬ್ಬೆದ್ದು ಹೋಗಿದೆಯೋ, ಅದರ ಎರಡು ಪಟ್ಟು ಮಠ-ಮಂದಿರಗಳು ಮತ್ತು ಅದರ ಸ್ವಾಮಿಗಳು ಆ ಗಬ್ಬಿನಲ್ಲೇ ಮುಳಿಗೆದ್ದು ಹೋಗಿದ್ದಾರೆ, ಹಿಂದೆ ಕೆಟ್ಟು ಹೋದ ಸಾಮ್ರಾಜ್ಯ  ಎಂದೇ  ಖ್ಯಾತಿಗಳಿಸಿದ್ದ ರಾಜಕೀಯ ಕೂಡ ಈ ಬಾಬಾಗಳ ಭ್ರಷ್ಟತೆ ಗಿಂತ ವಾಸಿ ಎನ್ನುವ ಪರಿಸ್ಥಿತಿ ನಮ್ಮ ದೇಶಕ್ಕೆ ಬಂದಿದಿರುವುದು ಎಂಥ ವಿಪರ್ಯಾಸ? ಭಾರತ ದೇಶ ತನ್ನ ಸಂಸ್ಕೃತಿ, ಧ್ಯಾನ, ಆಧ್ಯಾತ್ಮ, ಯೋಗಗಳಿಂದಲೇ, ಹೊರಜಗತ್ತಿಗೆ ತನ್ನನ್ನು ತಾನು ಪರಿಚಯಿಸಿಕೊಂಡಿದ್ದು, ಈವತ್ತು  ನಿಜವಾಗಲು ನಮ್ಮ ಮಣ್ಣಿನಲ್ಲೇ ಸ್ವಾಮಿ ವಿವೇಕಾನಂದ ನಂಥ ಮಹಾ ಪುರುಷರು   ಜನಿಸಿದ್ದರಾ? ಎಂಬ ಪ್ರಶ್ನೆ ಕೇಳುವ ಹಾಗಾಗಿದೆ? ಎಷ್ಟೋ ವರ್ಷಗಳ ಹಿಂದೆ ಸರ್ವಜ್ಞ್ಯ'' ತನ್ನ ಬಿಟ್ಟು ದೇವರಿಲ್ಲ'' ಎಂಬ ಉಕ್ತಿಯನ್ನು ಇಂಥ ಕಲಿಯುಗದ ಢೋಂಗಿ ಬಾಬಾಗಳನ್ನು ತೆಲೆಯಲ್ಲಿ ಇಟ್ಟುಕೊಂಡೆ ಹೇಳಿರಬಹುದ? ಏನೇ ಆದರು ಸರ್ವಜ್ನ್ಯನ ದೂರಾಲೋಚನೆಗೆ   HATS OFF!