Total Pageviews

Monday, August 27, 2012

ನಿರಂತರ ಓಟ ...!!
                     ಚುಮು ಚುಮು ಚಳಿಯಲ್ಲಿ, ಬೆಳಗ್ಗೆ ಆಯ್ತಲ್ಲ ಇನ್ನು ಹೊರಡೋ ತಯಾರಿ ಮಾಡಿಕೊಳ್ಳಬೇಕು ಎಂದು ವಲ್ಲದ ಮನಸ್ಸಿನಿಂದೆದ್ದು , ನಿದ್ದೆಗಣ್ಣಿನಲ್ಲಿ ಬಾಲ್ಕನಿ ಯಲ್ಲಿ  ನಿಂತು ನೋಡಿದಾಗ ಕಂಡಿದ್ದು ,ಸುಮಾರು  3-4 ವರ್ಷದ ಮಗು ಪ್ರಪಂಚದ ಅರಿವೇ ಇಲ್ಲದೇ, ತನ್ನ ಪಾಡಿಗೆ ತಾನು ಅದ್ಯಾವ ಪರಿ ತನ್ನ ಆಟದಲ್ಲಿ ಮಗ್ನವಾಗಿತ್ತೆಂದರೆ , ತಾನೊಂದೆ  ಆಟ ಆಡುತ್ತಿದ್ದೇನೆ ಎನ್ನುವ ಅರಿವಿದ್ದೋ ಇಲ್ಲದೆಯೋ  ನಾಲ್ಕು  ಸುತ್ತು  ಹಾಕಿ, ನಿಂತು , ಎಲ್ಲರನ್ನು ನೋಡಿ, ಮತ್ತೆ ಅದೇನೋ ನೆನಪಾದಂತೆ ನಕ್ಕು , ಮತ್ತೆ ಜಿಗಿದು, ಕುಣಿದು, ಸಂಭ್ರಮಿಸಿ, ಬಾಲ್ಯದ  ಸಂಪೂರ್ಣತೆಯನ್ನು  ಅನುಭವಿಸುತ್ತಿದೆ ಎಂದೆನಿಸಿತು....

                     ಆ ಮಗುವಿನ ಲವಲವಿಕೆ ನನಗೆ ಬೆಳಗಿನ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತು , ಬದಲಿಗೆ ಆ ಪುಟ್ಟ ಮಗುವಿನ ಮೇಲೆ ಸಣ್ಣ ಅಸೂಯೆ ಮೂಡಿದಂತಾಗಿ  ನನ್ನ ನಾನೇ ಶಪಿಸಿಕೊಂಡೆ .. ನಾನು ಆ ಮಗು ಥರಾನೆ ಇದ್ದು ಬಿಡಬಹುದಿತ್ತಲ್ಲ ಅಂತ ಅನಿಸಿದ್ದು ಸುಳ್ಳಲ್ಲ!! ಬಹುಶ : ಬಾಲ್ಯದ ದಿನಗಳನ್ನು ನಾನೂ  ಹಾಗೆ ಸಂಭ್ರಮಿಸಿಯೇ ಕಳೆದಿರಬಹುದು , ಆದರೆ ನಾನು ಬೆಳೆಯುತ್ತ ಹೋದಂತೆಲ್ಲ ನನ್ನಲ್ಲಿರುವ ಆ ಪುಟ್ಟ ಮಗುವನ್ನು ಅದೆಲ್ಲಿ ಬಚ್ಚಿಟ್ಟೆ ?  ಅದು ಹೊರಗೆ ಬಾರದಂತೆ ಕಟ್ಟಿ ಹಾಕಿದ್ದೆನೆಯೇ? ಆ ಮಗುವಿನಂತೆ ಎಲ್ಲ ಮರೆತು ಒಂದು ಕ್ಷಣವಾದರೂ ಅನುಭವಿಸಬಲ್ಲೇನೆ ? ಅಮಾಯಕತೆಯನ್ನು ಮರೆತೇ ಬಿಟ್ಟೆನೆ? ಇಂತಹ ಅನೇಕ ವಿಚಾರ ಗಳನ್ನು  ಹೊತ್ತ ಇರುವೆಗಳು ಮಿದುಳಿನಲ್ಲಿ ಓಡಾಡಿದ ಅನುಭವ!!

                       ನಾವೆಲ್ಲರೂ ಸಮಯದ ಆಚಕ್ರವನ್ನು ಕಾಲಿಗೆ ಕಟ್ಟಿಕೊಂಡೆ ಓಡಾಡುತ್ತಿದೇವೆ . ಗುರಿ ತಲುಪಲೇ ಬೇಕಿದೆ, ದಾರಿ ಅಸ್ಪಷ್ಟ , ಎಲ್ಲರೂ ಒಟ್ಟಿನಲ್ಲಿ ಓಡುತ್ತಿದ್ದೇವೆ  ಜಿದ್ದಿಗೆ ಬಿದ್ದು , ಓಡುವುದು  ಅನಿವಾರ್ಯವೋ? ಅವಶ್ಯಕತೆಯೋ ? ಅಥವಾ ಅಸ್ತಿತ್ವವೋ ? ಗೊಂದಲ ! ದಾರಿ ಹೇಗಿದ್ದರೂ ಸರಿ ಗುರಿ ತಲುಪುವ ಭರದಲ್ಲಿ ಓಟದಲ್ಲಂತೂ ನಾವಿದ್ದೇವೆ , ಇರುತ್ತೇವೆ , ನಿರಂತರ..

                      ಮಗುವಿನ ಲವಲವಿಕೆ, ಅಮ್ಮನ ನಿರಂತರ ಪ್ರೋತ್ಸಾಹ , ಅಪ್ಪನ ಹೊಗಳಿಕೆ, ಅಜ್ಜಯ್ಯನ ಆಶೀರ್ವಾದ, ನನ್ನ ಓಟದಲ್ಲಿ  ಕಾಣ ಸಿಗುವ ಸಣ್ಣ ಸಣ್ಣ ತಂಗುದಾಣಗಳು ! ಮಗುವಿನಂತೆ ಇರಬಯಸಿ , ಒಂದು ತಾಣದಲ್ಲಿ ತಂಗಲು  ತೆರಳಿದರೆ , ಅದೆಲ್ಲೋ ದೂರ ನಿಂತ ಅಮ್ಮ  ನಿಧಾನವಾಗಿ ಓಡುತ್ತಿದೀಯ , ನಿನ್ನ ಜತೆ ಓಡುತ್ತಿರುವರು ದೂರ  ಬಂದಿದ್ದಾರೆ, ಓಡು  ಮಗು ಸಾಕು ವಿಶ್ರಾಂತಿ ಎಂಬಂತಾಗಿ ಹೇಳಲು , ಮತ್ತೆ ಕಷ್ಟ ಪಟ್ಟು ಓಡಿ ಇನ್ನರ್ಧ ಓಟ  ಮುಗಿಸಿ  ಅಪ್ಪನ ತಂಗುದಾಣಕ್ಕೆ ಬಂದು ನಿಂತರೆ, ಚೆನ್ನಾಗಿ ಓಡಿದೆ ಮಗು  ಇನ್ನು  ನಿಲ್ಲಬೇಡ, ನಿನ್ನ ಹಿಂದೆ ಓಡುವವರು ಇನ್ನೇನು ಇಲ್ಲಿ  ಬಂದು ಬಿಡಬಹುದು ಓಡಿನ್ನು ಎಂದು ಮತ್ತೆ  ಓಟಕ್ಕೆ ನನ್ನನ್ನು ಸಜ್ಜಾಗಿಸಿದರು..

                       ನಮಗಿಂತ ಮೊದಲು ಓಟ ಶುರು ಮಾಡಿದ  ಅಜ್ಜಯ್ಯ ಈಗ ಪೂರ್ಣಾವಸ್ಥೆಯ ವಿಶ್ರಾಂತಿಯಲ್ಲಿದ್ದಾನೆ, ಈಗ  ಅಜ್ಜಯನ ತಂಗುದಾಣದಲ್ಲಿ ಬಂದು ನಿಂತರೇ , ಅಜ್ಜಯ್ಯ  ಓಡು ಎನ್ನುವ ಯಾವುದೇ  ಸೂಚನೆಗಳನ್ನು ಕೊಡುತ್ತಿಲ್ಲ , ಹಾಗೆಯೇ ಇದೇ ನಿನ್ನ ಅಂತಿಮ ತಾಣವೆಂದೂ  ಹೇಳುತ್ತಿಲ್ಲ , ಸುಮ್ಮನೆ ನನ್ನ ಕಾಲು ಭಾಗ  ಓಟವನ್ನು ಮೆಲಕು ಹಾಕಿ ನಗು ಮುಖದಿಂದ ಇನ್ನು ಮುಕ್ಕಾಲು ಭಾಗ ಓಡುವುದಿದೆ, ಆದರೆ  ಓಡುವ  ಮುನ್ನ ಸಾಕಷ್ಟು ಜಾಗ್ರತೆ ಇಂದ  ಓಡು, ಇನ್ನು ಕಾಲು ಓಟದಲ್ಲಿ  ಮಾತ್ರ  ನಾ ಭಾಗಿಯಾಗಬಲ್ಲೆ , ಅದಾದ ನಂತರ  ನಿನ್ನ  ಬರಮಾಡಿಕೊಳ್ಳಲು  ನನ್ನ ತಂಗುದಾಣದಲ್ಲಿ  ನಾನಿರಲಾರೆ, ಅಪ್ಪ-ಅಮ್ಮನ  ತಂಗುದಾಣಗಳು, ಇನ್ನರ್ಧ  ಓಟದಲ್ಲಿ  ಸಹಾಯ ಮಾಡಬಲ್ಲವೇ  ಹೊರತು ಅದರಿಂದಾಚೆಗೆ ನಿನ್ನೋಬ್ಬಳದೆ ನಿರಂತರ ಹೋರಾಟದ ಓಟ  ಜಾಗ್ರತೆ...ಯಾತಕ್ಕೆ ಅಜ್ಜಯ್ಯ?? ಅಂತ ಕೇಳುವಷ್ಟರಲ್ಲಿ ಇನ್ಯಾರೋ  ನನ್ನ ದಾಟಿ ಮುಂದೆ ಓಡಿ ಹೋದಂತಾಗಿ , ಇನ್ನು ಸಮಯ ವ್ಯರ್ಥ ಮಾಡುವುದು ಬೇಡ , ಜಾಸ್ತಿ ಹೊತ್ತು ಇಲ್ಲಿರಬೇಡ ಸಾಗಿನ್ನು ಎನ್ನಲು , ಅವರಿವರು ಓಡುತ್ತಿದ್ದಾರೆಂದು ನಾನ್ಯಾಕೆ ಓಡಲಿ  ಅಜ್ಜಯಾ?? ನಾ  ವಲ್ಲೆ ..ಎಂದೆ.

                      ನಮ್ಮ ಓಟ ಓಡಲೇ ಬೇಕು ಮಗು , ಓಡದೆ ಇರಲಾಗುವುದಿಲ್ಲ , ನಿನ್ನ ಓಟದಲ್ಲೇ  ನಿನ್ನ ಉತ್ತರ ಹುಡುಕಿಕೊಳ್ಳಬೇಕು, ಉತ್ತರದ  ಹುಡುಕಾಟಕ್ಕಾದರೂ  ವಲ್ಲದ  ಮನಸ್ಸಿನಿಂದ ಓಡಲೇ ಬೇಕು  ಎಂದು ಮತ್ತೆ ಶುರು ಮಾಡಿದೆ .
ಮತ್ತದೇ ಅಸ್ಪಷ್ಟ  ದಾರಿ , ಮತ್ತದೇ  ಸಹ ಸ್ಪರ್ಧಿಗಳು , ಮತ್ತದೇ ಗುರಿ ,ಮತ್ತವೇ  ತಂಗುದಾಣಗಳು, ಓಡುತ್ತಿದೇನೆ , ಓಡಬೇಕು , ವಿಶ್ರಮಿಸುವಂತಿಲ್ಲ  ಇದಷ್ಟೇ  ತಲೆಯಲ್ಲಿ ಇಟ್ಟುಕೊಂಡು ಓಡುತ್ತಿರುವ  ನಾನು  ಯಾರಿಗೆ , ಏತಕ್ಕಾಗಿ  ಓಡುತ್ತಿದೇನೆ  ಎನ್ನುವುದನ್ನು  ವಿವರಿಸಲಾರೆ  ವಿಪರ್ಯಾಸ! ಆದರೆ  ಓಟ  ವ್ಯರ್ಥ ವೆನಿಸುತ್ತಿಲ್ಲ , ನಾನು ಓಡುತ್ತಲೇ  ಇದ್ದೇನೆ , ಇನ್ನು ಅದೆಷ್ಟು ಹೊಸ ತಂಗು ದಾಣ ಗಳಲ್ಲಿ  ವಿಶ್ರಮಿಸಲ್ಲಿದ್ದೇನೋ? ಅಸ್ಪಷ್ಟ, ಅನಿಖರತೆ ...ಉತ್ತರದ  ನಿರಂತರ  ಹುಡುಕಾಟದಲ್ಲಿ  ಮತ್ತೆ ನನ್ನ ಓಟ , ಜತೆಯಲ್ಲಿ  ನೀವು  ಇರುವಿರಲ್ಲ ???


8 comments:

 1. ಓಟದ ಮರ್ಮ 'ಬಹುಮಾನ'... ದಾರಿಯ ನೆನಪುಗಳು, ಸಾಧನೆಗಳೆ ಬದುಕಿನ ಬಹುಮಾನಗಳು. :)

  ReplyDelete
 2. If you can Dance then why are u running.

  ReplyDelete
 3. ತೀರದತ್ತ ಓಡುವ ಸಾಗರ, ಸಾಗರದತ್ತ ಓಡುವ ನದಿ, ಎಲ್ಲಿ ಎಂದೇ ಗೊತ್ತಾಗದಂತೆ ಓಡುವ ಮೋಡ, ನಿರಂತರ ಓಡುತ್ತಲೇ ಇರುವ ಕಾಲ....

  ಓಟವೂ ಆಗಾಗ ಸೊಗಸೇ ಅಲ್ಲವಾ... ಓಟದ ಮಾಟ ಮನಸ್ಸಿಗೆ ಇಷ್ಟವಾದಾಗಾ...
  ಚಲನಶೀಲತೆಗೆ ತಂಗುದಾಣದ ಹಂಗುಗಳಿವೆಯಾ...
  ಓಟ ಮತ್ತೊಬ್ಬರ ಜೊತೆಗಾ ನಮ್ಮೊಳಗಿನ ಬೆಳವಣಿಗೆಯೆಡೆಗಾ...

  ಚೆನ್ನಾಗಿದೆ ಬರಹ...

  ನಿಮ್ಮ ಉಳಿದ ಬರಹಗಳನ್ನೂ ಓದುವ ಆಸೆ,
  ಆದರೆ ಸಮಯ ಓಡುತ್ತಿದೆ, ಓದಗೊಡದಂತೆ
  ನಾನು ನಾನಾಗೇ ಓಡುವಾಗ ಓದೀಯೇನು...

  "ಸಮುದ್ರ ತೀರ"ದ ಅಲೆಯ ಒಲುಮೆಯ ವಿಹಾರಕ್ಕಾಗಿ ಸ್ವಾಗತ...
  http://samudrateera.blogspot.in/

  ReplyDelete
 4. Life is a race...run..iff u stop it will be like broken anda:) very nice Ashwini:)

  ReplyDelete
 5. ಓಟದ ಓಘ ವಿವರಿಉವ ಬರಹ.

  ReplyDelete
 6. ಕವಿಯೋಬ್ಬರಿಗೆ ಬದುಕು ಮಾಯೆಯ ಮಾಟ ಅನ್ನಿಸಿದರೆ
  ನಿಮಗೆ ಓಟ ಅನ್ನಿಸಿದೆ. ಖಂಡಿತ ಓಟವೂ ಹೌದು ಮಾಟವೂ ಹೌದು
  'ಬದುಕೂ' ಹೌದು :)
  ಖಂಡಿತಾ ಇದ್ದೇವೆ, ಓಡಿ
  ಸ್ವರ್ಣಾ

  ReplyDelete
 7. ತುಂಬಾ ಚಂದದ ಲೇಖನ ...ಅಶ್ವಿನಿ... :))

  ReplyDelete