''Antarmukhi''
Total Pageviews
Friday, March 8, 2024
ದುಡ್ಡಿರೋರೆಲ್ಲ ದಾನ ಮಾಡ್ಬೇಕು ಅನ್ನೋದನ್ನ ಅಡ್ವೊಕೇಟ್ ಮಾಡ್ಕೊಂಡು ಇರೋರು.....
Sunday, September 10, 2023
ಐರ್ಲೆಂಡ್ ಡೈರಿ!!
ಈ ಏರ್ಪೋರ್ಟ್ ಅಲ್ಲಿ ಕೂತು ಕಾಯೋ ಕೆಲಸ ಇದಿಯಲ್ಲ ಇದರಷ್ಟು, ಮಹಾ ಬೋರಿಂಗ್ ಕೆಲಸ ಮತ್ತ ಯವುದೂ ಇರಲಿಕಿಲ್ಲ!! ಆ ಕಡೆ ನೆಮ್ಮದಿಯಿಂದ ಮಲಗೋ ಹಾಗಿಲ್ಲ, ಈ ಕಡೆ ಎಚ್ಚರ ಕೂರುವಷ್ಟು ಎನರ್ಜಿ ಇರೋದಿಲ್ಲ. ಎಲ್ಲ ಹಾರಾಟ ಅಲೆದಾಟ ತಿರುಗಾಟಗಳ ನಡುವೆ ಸಿಗುವ ತಂಗುದಾಣಗಳು ಯಾಕೋ ನನ್ನ ತಾಳ್ಮೆಗೆ ಸರಿ ಹೊಂದುವುದಿಲ್ಲ. ಇರಲಿ ವಿಷಯ ಅದಲ್ಲ, ಹೆಂಗೂ ಕೂತು ಬೋರ್ ಹೊಡಿತಿದೆ.. ಒಂದಷ್ಟು ಐರ್ಲೆಂಡ್ ಎಂಬ ದೇಶ, ಜನ, ಭಾಷೆ ಬಗ್ಗೆ ಬರೆಯೋಣ ಅಂತ....
ಇತಿಹಾಸ ನೋಡೋದಾದ್ರೆ.. ಇವರುಗಳು ನಮ್ಮಂತೆ ಬ್ರಿಟಿಷರ ಮುಷ್ಟಿಯಲ್ಲಿ ನರಳಿ, ನಮ್ಮ ಸ್ವಾತಂತ್ರ್ಯದ ನಂತರದ ವರ್ಷದಲ್ಲಿ ಇಂಡಿಪೆಂಡೆಂಟ್ ಆದ್ರೂ ಕೂಡ ಅರ್ಧದಷ್ಟು ಐರ್ಲೆಂಡ್ ಇತ್ತಿಚಿನವರೆಗೆ ಯುನೈಟೆಡ್ ಕಿಂಗ್ಡಮ್ ಭಾಗವಾಗಿಯೇ ಗುರುತಿಸಿಕೊಳ್ಳುತ್ತಿದ್ದರು. ಯುರೋಪ್ ನ ಭಾಗವಾಗಿದ್ದರೂ, ಶೆಂಗನ್ ರಾಷ್ಟ್ರಗಳಲ್ಲಿ ಗುರುತಿಸೊಕೊಳ್ಳದೇ, ತನ್ನದೇ ವಿಶಿಷ್ಟ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಡಿದಾಡಿ, ಯಶಸ್ವಿಯಾಗಿ ರಿಪಬ್ಲಿಕ್ ಆಫ್ ಐರಲೆಂಡ್ ಎಂದು ಅಂಗ್ಲೋ ಐರಿಶ್ ಟ್ರಿಟಿ ಸಹಿ ಮಾಡಿಕೊಂಡಿದ್ದು, ಬರೊಬ್ಬರಿ ಎಳುನೂರು ವರ್ಷಗಳ ನಂತರ!! ಇವರದ್ದೇ ಆದ ಐರಿಶ್ ಭಾಷೆಯನ್ನು ಕೇವಲ ಐದರಿಂದ ಹತ್ತು ಪರ್ಸೆಂಟ್ ಜನ ಮಾತ್ರ ಮಾತನಾಡುತ್ತಾರೆ. ಬ್ರಿಟಿಷರ ಹಾವಳಿಯಿಂದ ಭಾಷೆಯನ್ನೆ ಮರೆತ ಜನರಿದ್ದಾರೆ ಇಲ್ಲಿ.
ಇಲ್ಲಿನ ಇವರ ಇಂಗ್ಲಿಷ್ ಆಕ್ಸೆಂಟ್ ನ ವಿಶ್ವದ ಸುಂದರ ಆಕ್ಸೆಂಟ್ ಅಂತಾನೆ ಹೇಳಬಹದು. ಅವರದೇ ಐರಿಶ್ ಭಾಷೆಯನ್ನ ಬಳಸುವರು ಅತೀ ವಿರಳ. ಇವರ ಇಂಗ್ಲಿಷ್ ನ ಕೇಳುವುದೇ ಹಿತ... ಆದರೆ ನಮ್ಮ ಇಂಡಿಯನ್ ಇಂಗ್ಲೀಷ್ ಆಕ್ಸೆಂಟ್ ಇವರಿಗೆ ಅರ್ಥ ಅಗೂದೇ ಇಲ್ಲ.. ಅವರಂತೆ ರಾಗವಾಗಿ ಮಾತಾಡಿದರೆ ಮಾತ್ರ ಅರ್ಥ ಮಾಡ್ಕೊಂತಾರೆ. ಸುಂದರ ದ್ವೀಪದಲ್ಲಿನ ಈ ದೇಶದ ಜನ ಭಯಂಕರ ಸ್ವಾಭಿಮಾನಿ ಹಾಗೂ ಇಂಡಿಪೆಂಡೆಂಟ್ ಮನಸ್ಥಿತಿಯನ್ನು ಹೊಂದಿರುವವರು.
ತುಂಬ ರಿಸರ್ವಡ್ ಆಗಿ ತಾವಾಯ್ತು ತಮ್ಮ ಕೆಲಸವಾಯ್ತು ಅನ್ನೋ ಗಂಟು ಮೂತಿಯ ಜನರ ಮಧ್ಯ ತುಂಬ ಫ್ರೆಂಡ್ಲಿಯಾಗಿ ಮಾತಾಡುವ ಹಲವು ಜನರು ಒಮ್ಮೆಲೆ ಭಯ ಬೀಳಿಸುತ್ತಾರೆ. ಬೀದಿಯಲ್ಲಿ ಸುಮ್ಮನೆ ನಡೆದು ಹೋಗುವಾಗ if your eyes catch their eyes, they make sure that they greet you. "Hey beautiful", "Hi lovely", "Have Lovely day.." ಅನ್ನೋದು ತೀರ casual greetings. ಮೊದಲಬಾರಿ ಹೋದವರಿಗೆ ಇವರ್ಯಾಕೆ ಹಿಂಗ್ ಆಡ್ತಾರೋ ಯಪ್ಪಾ.. ಲವ್ಲಿ ನಾ? ನಾನಾ?? ಅಂತ ನಾವ್ ತಲಿ ತಲಿ ಕೆಡಸ್ಕೊಳುವಷ್ಟರಲ್ಲಿ ಅವರು ನಮ್ಮನ್ನು ದಾಟಿ ಇನ್ಯಾರನ್ಮೋ ಗ್ರೀಟ್ ಮಾಡಿಕೊಂಡು ಮುಂದೆ ಸಾಗಿರುತ್ತಾರೆ.
ಸುಂದರ ಹುಡುಗಿಯರು, ವಾಲ್ ಪೇಪರಗಿಂತಲೂ ಚೆಂದದ ಜಾಗಗಳು, ಐರ್ಲೆಂಡ್ ಪ್ರವಾಸಿಗರ ಆಕರ್ಷಣೆಯ ತಾಣ.
ಮಕ್ಕಳಿಗಿಂತ ಜಾಸ್ತಿ ಬೀದಿಗಳಲ್ಲಿ ನಾಯಿಗಳದ್ದೇ ದರ್ಬಾರು! ಅವು ಮಾಡುವ ಹೊಲಸನ್ನು ಚೂರೂ ಬೇಜಾರಿಲ್ಲದೇ ಚೀಲದಲ್ಲಿ ಎತ್ತಿ ಎತ್ತಿ ಹಾಕುವ ನಾಯಿಗಳ ಓನರ್ಸ್, ಯಾರಿಗೂ ತೊಂದರೆ ಆಗದಂತೆ ತೀರ ಜಾಗೂರಕರಾಗಿ ನಡೆಯುವ ಜನ, ನಾವು ಫೋಟೋ ವಿಡಿಯೋ ತೆಗೆದುಕೊಳ್ಳುವಾಗ ಭಾರಿ ತಾಳ್ಮೆಯಿಂದ ಕಾಯ್ದು ಕೂಡ, ವಾಪಸ್ ನಮಗೆ ಸಾರಿ ಹೇಳಿ ಹೋಗುತ್ತಿದ್ದರು!! ಈ ಬ್ಯಾಗ್ ಪ್ಯಾಕ್ ಹಿಂದೆ ಹಾಕಿಕೊಂಡರೆ ಓಡಾಡುವಾಗ ಯಾರಿಗಾದರೂ ತಾಗೀತೂ ಅಂತ ಅದನ್ನು ಮುಂದೆ ನೇತು ಹಾಕಿಕೊಂಡು ಓಡಾಡುವಷ್ಟು ಒಳ್ಳೆ ಜನ!
ವೈಪರೀತ್ಯಗಳಿಂದ ಕೂಡಿದ ಹವಾಮಾನ, ಆಲುಗಡ್ಡೆ ಬಿಟ್ಟರೆ ಇನ್ನೆನೂ ಬೆಳೆಯದ ಪರಿಸ್ಥಿತಿ. ಅಲ್ಲೊಂದು ಇಲ್ಲೊಂದು ಆಪಲ್ ಗಿಡ ಕಂಡಿದ್ದು ಬಿಟ್ಟರೆ ಇವರ ಕೃಷಿ ಮಾರುಕಟ್ಟೆ ಬೇರೆ ದೇಶಗಳ ಮೇಲೆಯೇ ಅವಲಂಬಿತವಾಗಿದೆ. ಐರಿಶ್ ಹಸು ಹಾಗೂ ಕುರಿಗಳು ತುಂಬ ಫೇಮಸ್. ಇಲ್ಲಿನ ಫುಲ್‌ಫ್ಯಾಟ್ ಮಿಲ್ಕ್ ಹಾಗೂ ಗೋಟ್ ಚೀಸ್ ಒಮ್ಮೆ ಸವಿಯಲೇಬೇಕು!!
ಆದರೆ ವೆಜಿಟೆರಿಯನ್ನ್ ಗೇ ಮಾತ್ರ ಭಾರೀ ನಿರಾಸೆ ತರಿಸುವ ರೆಸ್ಟೊರೆಂಟ್ ಗಳು. ಅಲ್ಲಲ್ಲಿ ಸಿಗುವ ಇಂಡಿಯನ್ ರೆಸ್ಟೊರೆಂಟ್ ಕೂಡ ಉಪ್ಪು ಖಾರ ಕಮ್ಮಿ ಹಾಕಿನೇ ಅಡುಗೆ ಮಾಡ್ತಾರೆ.
ಜೆಟ್ ಸ್ಪ್ರೆ ಇಲ್ಲದ ಬಾತರೂಮ್, ಬಿಸಿಲಲ್ಲೂ ಕೋಟ್ ಧರಿಸಿ ಹೊರಹೋಗುವ ಪಧ್ದತಿ, ಎಷ್ಟೇ ಉಪ್ಪು ಹಾಕಿಕೊಂಡರೂ ಉಪ್ಪೇ ಇಲ್ಲ ಎನಿಸೋದು, ಸಿಹಿಯೇ ಇಲ್ಲದ ಸಕ್ಕರೆ, ಒಂದು ಕಪ್ಪು ಕಾಫಿಗೆ ಅಥವಾ ಚಹಾಕ್ಕೆ ಹನಿಯಷ್ಟು ಹಾಲು ಹಾಕಿಕೊಂಡು ಕುಡಿಯುವ ಪಧ್ದತಿ, ರಾತ್ರಿ ಒಂಭತ್ತು ಗಂಟೆಯವರೆಗೂ ಇರುವ ಬೆಳಕಿಗೆ ಅಡ್ಜಸ್ಟ್ ಆಗೋದು ಸ್ವಲ್ಲ ಕಷ್ಟ. ಆದರೂ ಕುಡಿಯುವವರ ಸ್ವರ್ಗವೆಂದೇ ಹೇಳಬಹುದು, ಬೆಳಿಗ್ಗೆ ಎದ್ದಾಗಿಂದ ಸಂಜೆವರೆಗೂ ಎಲ್ಲ ರೆಸ್ಟೋರೆಂಟ್ ಗಳಲ್ಲಿ ನಮ್ಮಲ್ಲಿ ನೀರು ಕೊಡುವಂತೆ ಅಲ್ಲಿ ಲೀಕರ್ ಕೊಟ್ಟೇ ಮೆನು ಕೊಡುತ್ತಾರೆ. ಹಣ್ಣು ಹಣ್ಣು ಮುದುಕರಾದರೂ ನಮಗಿಂತ ಗಟ್ಟಿ ಅಲ್ಲಿನ ವಯೋವೃಧ್ದ ಜನ. ಇಲ್ಲಿನ ಕ್ಲಿಫ್ ವಾಕಿಂಗ್ ಹೋದರೆ ನಿಮಗೆ ಸರಾಸರಿ ಅರವತ್ತರ ನಂತರದ ವಯಸ್ಸಿನ ಜನರೇ ಸಿಗುತ್ತಾರೆ ಮತ್ತೆ ನಾವುಗಳು ಎದೆಯುಸಿರು ಬಿಡುತ್ತ ಇನ್ನಾಗಲ್ಲ ಎನ್ನುವಾಗ ಅವರಾಗಲೇ ಬೆಟ್ಟದ ತುದಿ ಮುಟ್ಟಿ ವಾಪಾಸ್ ಬಂದಿರುತ್ತಾರೆ. ಫಿಟ್ನೆಸ್ ಹ್ಯಾಸ್ ನೋ ಎಜ್ ಲಿಮಿಟ್ ಅನ್ನೋವಷ್ಟು ಗಟ್ಟಿ ಜನ!!
ಆ ವಯಸ್ಸಲ್ಲೂ ಚೆಂದನೆ ರೆಡಿಯಾಗಿ, ಲೂಸ್ ಹೇರ್ ಬಿಟ್ಟು, ಮುತ್ತಿನ ಕ್ಲಿಪ್ ಹಾಕಿಕೊಂಡು, ಶಾರ್ಟ್ ಫ್ರಾಕ್ ಹಾಕಿ, ಕೆಂಪು ಲಿಪಸ್ಟಿಕ್, ಕೆಂಪು ನೇಲ್ ಕಲರ್,ಮ್ಯಾಚಿಂಗ್ ಸ್ಯಾಂಡಲ್ಸ್ ಹಾಕಿಕೊಂಡು ಬಸ್ ಹತ್ತು ಅಜ್ಜಿಯರನ್ನು ನೋಡುವುದೇ ಒಂದು ಸಂಭ್ರಮ. Honey... Careful ಅಂತ ಅಜ್ಜಿಯ ಕಾಳಜಿ ಮಾಡುವ ಹ್ಯಾಂಡ್ಸಮ್ ಅಜ್ಕಂದಿರೂ ಏನೂ ಕಮ್ಮಿಯಿಲ್ಲ. ಆ ವಯಸ್ಸಲ್ಲೂ ಟೀನೇಜ್ ನವರಂತೆ ಆದರೆ ಎಲ್ಲೇ ಮೀರದಂತೆ ಅವರಾಡುವ ಮಾತು, ಹಾಸ್ಯ, ರೊಮ್ಯಾನ್ಸ್ ಎಲ್ಲದೂ ಚೆಂದ 😍🤗
ಭಾರತೀಯರಿಗೆ ಅಲ್ಲಿನ ಎಂಬೆಸಿ ಒಂದು ವಿಶಿಷ್ಟ ಸವಲತ್ತು ಕೊಟ್ಟಿದೆ ನೀವು ಟೂರಿಸ್ಟ್ ಅಥವಾ ಆಫಿಸ್ ಕೆಲಸದ ಮೇಲೆ ಶಾರ್ಟ್ ಸ್ಟೇ ವಿಸಾ ಅಪ್ಲೈ ಮಾಡಿದ್ದಿರಾದರೆ, ನಿಮಗೆ ಬ್ರಿಟಿಷ್ ಐರಿಶ್ ವೀಸಾ ಎಂಡೋರ್ಸ ಮಾಡಿಕೊಳ್ಳುವ ಆಪ್ಷನ್ ಇದೆ. ಸೆಪೆರೇಟ್ ಆಗಿ ಯುಕೆ ವೀಸಾ ಅಗತ್ಯವಿಲ್ಲ. ಕಾಮನ್ ಟ್ರಾವೆಲ್ ಎರಿಯಾದಲ್ಲಿ ಎಷ್ಟು ಸಲ ಬೇಕಾದರೂ ಓಡಾಡಬಹುದು. ಮತ್ತು ಕೇವಲ ಒಂದು ಗಂಟೆಯ ಫ್ಲೈಟ್ ನಿಮ್ಮನ್ನು ಡಬ್ಲಿನ್ ಇಂದ ಲಂಡನ್ ಗೆ ಕರೆದೊಯ್ಯುತ್ತದೆ!!
#dublindiaries
Tuesday, April 11, 2023
ಸೋಲಿಗರ ಸಂಗಡ
ಭಾಷೆ ಅನ್ನೋದು ಎಂತಹ ದೊಡ್ಡ ಶಕ್ತಿ ಅಂತ ತುಂಬಾ ಸಲ ಯೋಚಿಸಿದ್ದೀನಿ, ಯಾಕೆ ನಮ್ಮ ಭಾಷೆಯವರನ್ನ ಕಂಡ್ರೆ ನಮ್ಮವರೇ ಅನ್ನೋ ಭಾವನೆ ಬರುತ್ತೆ, ಭಾಷೆ ಕೇವಲ ಸಂಹವನ ಮಾಧ್ಯಮ ಅಷ್ಟೇ ಅಂತ ಎಣಿಸೋದಾದರೆ, ನಮಗೆ ಗೊತ್ತಿರುವ ಯಾವುದೊ ಒಂದು ಕಾಮನ್ ಭಾಷೆ ಮಾತಾಡಬಹುದು, ಆದ್ರೂ ನಾವು ಪ್ರಿಫರ್ ಮಾಡೋದು ಮಾತೃಭಾಷೆ!! ನಮ್ಮ್ ನಿಜವಾದ ಅಭಿವ್ಯಕ್ತವನ್ನು ನಮ್ಮ ಭಾಷೆ ಮಾತ್ರ ಕೊಡಬಲ್ಲುದು, ನಮ್ಮ ಸಂಸ್ಕೃತಿ, ನಮ್ಮತನ, ನಮ್ಮ ಆಚರಣೆ, ನಮ್ಮ ಅನನ್ಯತೆ ಎಲ್ಲದೂ ಒಂದು ಭಾಷೆ ಎಂಬ ಶಕ್ತಿ ಎತ್ತಿ ಹಿಡಿಯುತ್ತೆ.
ಈಗಿನ ತಲೆಮಾರಿನವರು ಅವರ ಮೂಲಭಾಷೆಯನ್ನು ಮಾತನಾಡುವುದಿಲ್ಲ ಮತ್ತು ಆ ಪರಂಪರೆಯನ್ನು ಅವರ ಭಾಷೆಯ ಸೊಗಡಿನಲ್ಲೇ ಮುಂದುವರೆಸಬೇಕು ಎನ್ನುವು ಆಸೆ ಇದ್ದರೂ ಕೂಡ, ಕನ್ನಡಕ್ಕೆ ಒಗ್ಗಿ ಹೋಗಿ ಮೂಲಭಾಷೆ ಮರೆಯುತ್ತಿದ್ದಾರೆ. ಇಲ್ಲಿ ಎರಡು ತಲೆಮಾರಿನ ಅಂತರದಲ್ಲಿ ಭಾಷೆ ಸೊರಗುತ್ತಿದೆ. ಏನ್ ಮಹಾ ಲಾಸ್ ಬಿಡಿ ಅಂತ ಮೇಲು ನೋಟಕ್ಕೆ ಅನಿಸಿದರೂ, ಭಾಷೆಯನ್ನು ಉಳಿಸದೇ ಹೋದರೆ ಸೋಲಿಗರ ಫಾರೆಸ್ಟ್ ಮೆಡಿಸಿನಲ್ knowledge ಹೇಳ ಹೆಸರಿಲ್ಲದೆ ಮಾಯವಾಗುತ್ತದೆ. ಹಿತ್ತಲ ಗಿಡ ಮದ್ದಲ್ಲ ಅಂತ ನಾವು ತೋರಿಸುವ ಉದಾಸೀನವನ್ನ ಬಂಡವಾಳ ಮಾಡಿಕೊಂಡು ಬೇರೆ ದೇಶದವರು ನಮ್ಮದೇ ಜ್ನ್ಯಾನವನ್ನು ಸದ್ದಿಲ್ಲದೇ ಎತ್ತಿಕೊಂಡು ನಮಗೆ ವಾಪಾಸ್ ಮಾರುವ ಕಾಲ ದೂರವಿಲ್ಲ.
ಹಾಗಾಗಿ , ನಮ್ಮ ಸೋಲಿಗರನ್ನ ಮಾತನಾಡಿಸಲು ಎರಡನೇ ಸಲ ಹೋಗಿದ್ವಿ . ಈ ಸಲ ಅವರದ್ದೇ ಭಾಷೆಗೆ ಭಾಷಾಂತರ ಮಾಡುವ ಸ್ಪೀಚ್ ಟು ಸ್ಪೀಚ್ ಟ್ರಾನ್ಸ್ಲೇಷನ್ ಮಾಡೆಲ್ ರೆಡಿ ಮಾಡಿಕೊಂಡು, ಅವರ ಅನಿಸಿಕೆ ತೊಗೊಳೋಣ ಅಂತ ಅವರನ್ನು ಕರೆಸಿ ಟೆಸ್ಟ್ ಮಾಡಿಸಿದ್ವಿ . It was a lovely experience. ಇಂಗ್ಲಿಷ್ ಇಂದ ಸೋಲಿಗ ಭಾಷೆಗೆ ಹಾಗೂ ಸೋಲಿಗ ಭಾಷೆ ಇಂದ ಇಂಗ್ಲಿಷ್ ಗೆ ಭಾಷಾಂತರ ಮಾಡುವ ಪ್ರಾಜೆಕ್ಟ್ ಅನ್ನು ಭಾರತ ಸರ್ಕಾರ ಪ್ರಾಯೋಜಿಸಿದೆ. .ಅಜ್ಜಿಯರು, ಮಹಿಳೆಯರು , ಪುರುಷರು ಹಾಗೂ ಶಾಲೆಯ ಮಕ್ಕಳೊಂದಿಗೆ ಬೆರೆತು ಅವರ ಅಮೂಲ್ಯ ಪ್ರತಿಕ್ರಿಯೆ ಪಡೆಯಲಾಯಿತು. ಇನ್ನೂ ಬಾಲ್ಯಾವಸ್ಥೆಯಲ್ಲಿರುವ ಈ ಕೃತಕ ಬುದ್ಧಿಮತ್ತೆ ಹೊಂದಿರುವ ಮಷೀನ್ ಗೆ ಇನ್ನಷ್ಟು ಡೇಟಾ ಅವಶ್ಯಕೆತೆ ಇದೆ, ಸಧ್ಯದ ಮಟ್ಟಿಗೆ ನಿಯಮಿತ ವಾಕ್ಯಗಳನ್ನು ಮಾತ್ರ ತಪ್ಪಿಲ್ಲದೆ ಭಾಷಾಂತರ ಮಾಡುತ್ತಿದೆSaturday, March 25, 2023
ಜನಮಣ್ಣನೇ ಮಾತ್ರವೇ ಸಾಧನೆಯ ಮಾನದಂಡವೇ?
ಈ ದುರಿತ(?) ಕಾಲದಲ್ಲಿ ಏನೇ ಹೇಳಿದ್ರೂ ಏನೇ ಬರೆದರೂ ಕಾಂಟ್ರವರ್ಸಿ ಆಗುತ್ತೆ. ಪ್ರತಿಯೊಬ್ಬರಿಗೂ ತಮಗನಿಸಿದ್ದನ್ನ ನೇರ ನೇರ ಹೇಳುವ ವೇದಿಕೆ ಸಿಕ್ಕಾಗಿದೆ. ಈ ವೇದಿಕೆಗಳನ್ನೂ ತಮ್ಮ ರಾಜಕೀಯ ಹಾಗೂ ಸೈಧ್ದಾಂತಿಕ ಸಮೂಹಸನ್ನಿಗೆ ಒಳಪಡಿಸಿಕೊಳ್ಳುವ ಟ್ರಿಕ್ಸ್ ಕೂಡ ನಿಷ್ಪಕ್ಷಾತವಾಗಿ ಎಲ್ಲರೂ ಕಲಿತಿದ್ದಾರೆ. ಸೋ ರಾಜಕೀಯ ಹಾಗೂ ಜನರ ಪಲ್ಸ್ ಹೆಚ್ಚಿನ ಸಮಯದಲ್ಲಿ ಬೇರ್ಪಡಿಸಲಾಗದ ಎಂಟಿಟಿಸ್. ಹಾಗಾಗಿ ಸೋಷಿಯಲ್ ಮೀಡಿಯಾ ಒಪಿನಿಯನ್, ಜೆನರಿಕ್ ಆಗಿ ಒಂದು ಪ್ರಾಂತ್ಯದ, ಒಂದು ಕಮ್ಯುನಿಟಿಯ ಓವರ್ ಆಲ್ ಕನ್ಕ್ಕ್ಲೂಷನ್ ಪಾಸ್ ಮಾಡುತ್ತಲಿರುತ್ತೆ!!
ನಮಗರಿವಿಲ್ಲದೇ ನಮ್ಮ ಒಪಿನಿಯನ್ ಡೇಟಾ ರೂಪದಲ್ಲಿ ಎಲ್ಲಕಡೆ ಹರಿದಾಡಿ, ಬೇಕಾದ ರೀತಿಯಲ್ಲಿ ಬಳಸಿಕೊಂಡಿರಲಾಗುತ್ತೆ. Agree to terms and conditions ಅಂತ ಓದದೇ ಟಿಕ್ ಮಾಡಿದ ಎಲ್ಲ ಅ್ಯಾಪ್ ಗಳು ನಮ್ಮ ಖಾಸಗೀತವನ್ನ ಮಾರಿಕೊಂಡೇ ದುಡ್ಡು ಮಾಡುತ್ತಿವೆ!
ವಿಷಯಕ್ಕೆ ಬರುವುದಾದರೇ, ನಮ್ಮಲ್ಲಿ ಸುಲಭವಾಗಿ ಜನರಿಗೆ ತಲುಪಬಹುದಾದ ಒಂದೇ ಒಂದು ಮಿಡಿಯಮ್ ಅಂದ್ರೆ ಅದು ಸಿನಿಮಾ, ಅದನ್ನ ನೋಡಲು, ಕ್ರಿಟಿಸೈಜ್ ಮಾಡಲು, ಆರಾಧಿಸಲು ಇಲ್ಲ ಸುಮ್ನೆ ಎಂಟರ್ಟೇನ್ಮೆಂಟ್ ತೊಗೊಳ್ಳಲು, ಯಾವುದೇ ಡಿಗ್ರಿ, ಯಾವುದೇ ಪರಿಣಿತಿ ಅಸಲಿಗೆ ಬೇರ್ ಮಿನಿಮಮ್ ಎಂಬ ಸ್ಕಿಲ್ಸ್ ನ ಅವಶ್ಯಕತೆಯೇ ಇಲ್ಲ!! ಇಂತಹ ಸುಲಭವಾಗಿ ಜನರನ್ನು ರೀಚ್ ಆಗುವ ಮಾರ್ಗವನ್ನು, ಹೆಸರು ಮಾಡುವ, ಸಾಧನೆ ಮಾಡುವ ದಾರಿ ಅಂತ ಹೇಳೋದೇನೋ ಸರಿ, ಆದರೆ ಪಾಪ್ಯುಲಾರಿಟಿ ಒಂದನ್ನೇ ಸಾಧನೆಯ ಮಾನದಂಡ ಅಂತ ಮಾಡಿದಾಗ, ಸಾಧಕ ಎನ್ನುವ ಪದಕ್ಕೇ ಅವಮಾನ ಮಾಡಿದಂತಾಗುತ್ತದೆ!
ಅಲ್ಲೆಲ್ಲೋ ಹಗಲು ರಾತ್ರಿ ನಿದ್ದೆಗಟ್ಟಿ ಇಸ್ರೋದಲ್ಲಿ ಕೋಡ್ ಬರೆಯುವ, ತಂತ್ರಜ್ಞಾನದ ವಿಜ್ಞಾನಿಗಳು ಯಾರೆಂಬುದು ಕೂಡ ಜನರಿಗೆ ಗೊತ್ತಾಗದೇ ನಮ್ಮ ರಾಕೆಟ್ ಉಡ್ಡಯನವಾಗಿರುತ್ತೆ. ಕಂಡಕ್ಟರ್ ಕೆಲಸ ಮಾಡುತ್ತ ಯುಪಿಎಸಿ ಪಾಸ್ ಮಾಡಿದ ಹುಡುಗ ಒಂದು ದಿನದ ಪ್ರತಿಕೆಯ ಸುದ್ದಿ ಯಾಗಿ ಮರೆಯಾಗುತ್ತಾನೆ. ಇಂಡಿಜಿನಿಸ್ ಭತ್ತವನ್ನು ಕಾಪಿಟ್ಟ ರೈತ ರಾಷ್ಟ್ರಪ್ರತಿಗಳಿಂದ ಪ್ರಶಸ್ತಿ ಪಡೆದೂ, ನಮ್ಮ ಮೆಮೊರಿಯಲ್ಲಿ ಉಳಿಯಲಾರ. ನಮ್ಮ ಸುತ್ತ ಮುತ್ತಲಿನ ಸಾಧಕರಿಗೆ ಆಮತಹದ್ದೇನೋ ದೊಡ್ಡ ರೀಚ್ ಸಿಗೋದಿಲ್ಲ. ನಮ್ಮಂತೆ ಬದುಕು ನಡೆಸುವವರು, ದಿನ ನಮಗೆ ಸಿಗುವವರು, ನಮಗೆ ಆರಧನಾ ವ್ಯಕ್ತಿತ್ವಗಳಾಗೋದು ತೀರ ವಿರಳ.
ಅದೇ ಲಾರ್ಜರ್ ದ್ಯಾನ್ ಲೈಫ್ ಎಂಬ ಸುಡೋ ಮುದ ನಿಡುವ ಸಿನಿಮಾ, ಅದರಲ್ಲಿನ ವೈಭವೀಕರಣ, ಗ್ಲಾಮರ್, ಇದ್ಯಾವುದನ್ನೂ ನಿಜ ನೀವನದಲ್ಲಿ ಅನುಭವಿಸಲಾಗದ ಕಾರಣಕ್ಕೆ ಜನ ಸಲೀಸಾಗಿ ಅದರ ಮೋಹಕ್ಕೆ ಒಳಗಾಗುತ್ತಾರೆ, ಮತ್ತೆ ಅಲ್ಲಿ ಕಾಣುವ ತಾರೆಯರನ್ನು ತಲೆ ಮೇಲೆ ಹೊತ್ತು ಮೆರಯುತ್ತಾರೆ. That has helped them to experience some adrenaline rush in some way! ಅದನ್ನು ಇನ್ಯಾವುದೇ ಮಾರ್ಗ ಅಷ್ಟು ಸುಲಭವಾಗಿ ದಕ್ಕಿಸುವದಿಲ್ಲ.
ಸೋಷಿಯಲ್ ಮೀಡಿಯಾ ಬಂದ ಮೇಲಂತೂ ಫಾಲವರ್ಸ ಹೊಂದಿರುವ ಎಲ್ಲರೂ ಇನ್ಪ್ಲುಯೆನ್ಸರ್ಸ ಹಾಗೂ ಕಂಟೆಂಟ್ ಕ್ರಿಯೆಟರ್ಸ್. ಅದು ಕೂಡ ಈಗ ಜನಪ್ರಿಯತೆ ಜೊತೆಗೆ ಹೊಟ್ಟೆ ಪಾಡಿನ ಸಾಧನವಾಗಿದೆ.. ಇಲ್ಲಿ ಸರ್ವೈವ್ ಆಗೋದು ಕೂಡ ಅವರವರ ಕ್ರಿಯೆಟಿವಿಟಿಯ ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್ ಎಂಬ ಅಂಶವೇ!!
ಅದೇ ರೀತಿ ಸಾಹಿತ್ಯ, ಸಂಗೀತ, ವಿಜ್ಞಾನ, ಕ್ರೀಡೆ, ನೃತ್ಯ, ಹಾಸ್ಯ, ವೈದ್ಯಕೀಯ, ಇದೆಲ್ಲ ಕ್ಷೇತ್ರ ಆಯಾ ಕ್ಷೇತ್ರದ ಪರಿಣಿತಿಯನ್ನೂ ಮತ್ತು ಅದೇ ಕಮ್ಯಿನಿಟಿಯ ಜನರ ಪ್ರಶಂಸೆಗೆ ಹಾಗೂ ಮೆಚ್ಚುಗೆಗೆ ಪಾತ್ರವಾಗುವಂಥದ್ದು, ಯಾವುದಕ್ಕೆ ಪರಿಣತಿ ಬೇಕೋ ಅದಕ್ಕೆ ಹೆಚ್ಚಿನ ರೀಚ್ ಸಿಗುವುದಿಲ್ಲ, ಸುಲಭವಾಗಿ ಲೆಯ್ ಮ್ಯಾನ್ ಗೆ ಅರ್ಥವಾಗುವ ಭಾಷೆ ಸಿನೆಮಾ ಮಾತ್ರ!
ಮತ್ತು ಅಲ್ಲಿ ಸಿಗುವ ಸಾಧನೆ ಇಂಡೈರೆಕ್ಟ್ ಆಗಿ ಮೇಲಿನ ಹಲವು ಬೇರೆ ಕ್ಷೇತ್ರಗಳಿಗೆ ಪರೋಕ್ಷವಾಗಿ ಸಹಾಯ ಮಾಡಿರುತ್ತೆ, ಒಂದು ಸಿನಿಮಾದ ಸಾಧನೆ ಕೇವಲ ಒಂದೇ ಕಮ್ಯುನಿಟಿಯ ಸಾಧನೆ ಆಗುವುದಿಲ್ಲ. Lot of ಪೀಪಲ್ ಹ್ಯಾವ್ ಶೇರ್ ಇನ್ ಇಟ್. ದುಡ್ಡು ಮಾಡುವುದನ್ನು ಹೊರತುಪಡಿಸಿ, ಹಲವು ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಹಾಗಾಗಿ ಅದಕ್ಕೇ ಹೆಚ್ಚಿನ ಜನಮಣ್ಣನೇ ಕೂಡ ಇದ್ದೇ ಇದೆ. ಇದಷ್ಟೇ ಸಾಧನೆಯೋ ಎಂದು ಕೇಳುವವರು ಸರಿಯೆ! ಹಾಗೂ ಬೇರೆಯವರನ್ನು ತಂದು ಕೂರಿಸಿದಾಗ ಅದಕ್ಕೆ ಸಿಗುವ ಟಿ ಆರ್ ಪಿಯ ಆತಂಕ ವ್ಯಕ್ತ ಪಡಿಸುವ ಬಿಸಿನೆಸ್ ಮೈಂಡ್ ಗಳು ಕೂಡ ಸರಿಯೆ!! ನಾವು ಬಳಸುವ ಎಲ್ಲ ಎಲಕ್ಟ್ರಾನಿಕ ಸಾಧನ ಗಳ ಬೆನ್ನೆಲುಬಾಗಿರುವ ಸೆಮಿಕಂಡಕ್ಟರ್ ನ ಲೆಜೆಂಡ್, ಹಾಗೂ Moore's law ಜನಕ ಇವತ್ತು ಇಲ್ಲವಾಗಿದ್ದೂ ಹಲವು ಜನರಿಗೆ ಸುದ್ದಿಯೇ ಅಲ್ಲ!!
ಇಲ್ಲಿ ಎಲ್ಲದೂ ಅವರವರ ಲಾಭ ನಷ್ಟಗಳ ಲೆಕ್ಕಾಚಾರಾದಲ್ಲಿ ನಡೆಯುವಂಥದ್ದು, ಬೇಕೋ ನೋಡಿ, ಬೇಡವಾ ಬಿಡಿ ಎಂಬ ಕಾಲಘಟ್ಟದಲ್ಲಿರುವಾಗ, ಇಂತಹ ವ್ಲಾಗರ್ ಅಥವಾ ಬ್ಲಾಗರ್ ನ ಕರೆಸಿ ಅವರೇ ಸಾಧಕರು ನೀವು ಕರೆಸಿರುವವರದ್ದೇನು ಸಾಧನೆ ಎಂದು ಕೇಳುವುದು ಅಥವಾ ಹೇಳುವುದು ಬಾಲಿಶವಾಗುತ್ತದೆ. Because Success is very subjective!! ಹೇಗೆ ಜೀವನ ಎಂಬುದಕ್ಕೆ ನಿಖರವಾದ ಡೆಫಿನಿಷನ್ ಇಲ್ವೋ , ಹಾಗೆಯೆ ಸಾಧನೆಗೆ ಕೂಡ!! ಬಟ್ ಜನಮಣ್ಣನೇ ಮಾತ್ರವೇ ಸಾಧನೆಯ ಮಾನದಂಡ ಅಲ್ಲವೆಂಬುದು ಮಾತ್ರ ಸರ್ವಕಾಲಿಕ ಸತ್ಯವೇ!!
PS: when journo in me woke up after a year 😜☺😎
Thursday, November 12, 2020
ಬದುಕು ಮಹೋತ್ಸವ ಎಂದ ಬೆಳಗೆರೆ
ನಾವು ಎಂಜಿನಿಯರಿಂಗ್ ಓದುವ ದಿನಗಳಲ್ಲಿ (ನಮ್ಮನ್ನ ತುಂಬಾ ಹಳೆ ಕಾಲದವರು ಅಂದುಕೊಳ್ಳೋ ಅವಶ್ಯಕತೆ ಇಲ್ಲ , ತೊಂಭತ್ತರ ಕಿಡ್ಸ್ ) ವಾಟ್ಸ್ ಆಪ್ , ಇನ್ಸ್ಟಾ , ಅಮೆಜಾನ್ ನೆಟ್ಫ್ಲಿಸ್ ಯಾವದೂ ಇರ್ಲಿಲ್ಲ , ಆಗಷ್ಟೇ ಹವಾ ಶುರು ಮಾಡಿದ ಆರ್ಕುಟ್ ಬಳಕೆದಾರರನ್ನು ಫೇಸ್ಬುಕ್ ತನ್ನೆಡೆಗೆ ಸೆಳೆಯುತ್ತಲಿತ್ತು, ಆಗ ನನ್ನಂತೆ ಅನೇಕ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಬ್ಲಾಗಿಂಗ್ ಹವ್ಯಾಸ ಶುರು ಹಚ್ಚಿಕೊಂಡಿದ್ದರು, ಹಾಸ್ಟೆಲ್ ದಿನಗಳಲ್ಲಿ ಎಂಟ್ರ್ಟಟೈನ್ಮೆಂಟ್ ಅಂದ್ರೆ ಲ್ಯಾಪ್ಟಾಪ್ಗಳಲ್ಲಿ ಎಲ್ಲರೂ ಸೇರಿ ಮೂವಿ ನೋಡೋದು ಇಲ್ಲ ಒಬ್ಬರಾದಮೇಲೆ ಒಬ್ಬರು ರೊಟೇಷನ್ ಬೇಸ್ ಮೇಲೆ ಯಾವುದೊ ನಾವೆಲ್ ಓದುವುದು, ಸ್ವರ್ಗದಂಥ ದಿನಗಳವು.
ಇವತ್ತು ಕನ್ನಡದಲ್ಲಿ ನನಗೆ ಸಂತೋಷ ಹಾಗೂ ತೃಪ್ತಿ ಸಿಗುವಷ್ಟು ವಿಚಾರ ಹಂಚಿಕೊಂಡು ಬರೆಯಲು ಪ್ರೇರಣೆ ನೀಡಿದ ಅನೇಕ ಜನರಲ್ಲಿ ಬೆಳಗೆರೆ ಕೂಡ ಒಬ್ಬರು, ಆ ದಿನಗಳಲ್ಲಿ, ನೂರೆಂಟು ಮಾತು, ಬೆತ್ತಲೆ ಜಗತ್ತು ಕಾಲಂ ಗಳಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದೆ ನನ್ನ ಓದುವ ಹುಚ್ಚು ನೋಡಿ ಗೆಳತೀ ಅರ್ಪಿತಾ ರವಿ ಬೆಳಗೆರೆಯ "ಹಿಮಾಲಯನ್ ಬ್ಲಂಡರ್" , "ಹೇಳಿ ಹೋಗು ಕಾರಣ" ಹಾಗೂ "ಖಾಸ್ ಬಾತ್" ಸೀರೀಸ್ ಪುಸ್ತಕಗಳನ್ನು ಓದಲು ಕೊಟ್ಟಳು, ಹಿಮಾಲಯನ್ ಬ್ಲಂಡರ್ ಓದು ಮುಗಿಸುವಷ್ಟರಲ್ಲಿ ಈ ಬೆಳಗೆರೆ ಎಂಬ ಮಾಂತ್ರಿಕ ನನ್ನ ಪೂರ್ಣ ಪ್ರಮಾಣದಲ್ಲಿ ಮೋಡಿ ಮಾಡಿದ್ದ, ಅದು ಟ್ರಾನ್ಸ್ಲೇಷನ್ ಕಣೆ ಖಾಸ್ ಬಾತ್ ಓದು ಅಂತ ಹೇಳಿದಾಗ, ಇಲ್ಲೇ ಯಾರೋ ಪಕ್ಕದಲ್ಲೇ ನಿಂತು ಹರಟೆ ಹೊಡೆಯುತ್ತ ಹರಟೆಯಲ್ಲೇ ಕೆಲವು ಸೂಕ್ಷ ವಿಚಾರಗಳನ್ನು ಆಪ್ತವಾಗಿ ಹೇಳುತ್ತಿದ್ದಾರೇನೋ ಅನ್ನಿಸಲು ಶುರುವಾಗಿತ್ತು, ಖಾಸ್ ಬಾತ್ ಹುಚ್ಚು ಹಿಡಿದು ನಾನು ಅರ್ಪಿತಾ ಸೇರಿ ಪ್ರತಿ ವಾರ ಹೈ ಬೆಂಗಳೂರು ಓದಲು ಶುರು ಮಾಡಿದೆವು, ಜಾನಕೀ ಕಾಲಂ , ಹಾಗೂ ಖಾಸ್ ಬಾತ್ ಮತ್ತೆ ಕೆಲವು ಗಾಸಿಪ್ ಬರಹಗಳು ನಮ್ಮ ಚರ್ಚೆಯ ವಿಷಯಗಳಾಗಿದ್ದವು, ಜಾನಕಿ ಹೆಸರಲ್ಲಿ ಜೋಗಿ ಬರೆಯುತ್ತಿದ್ದಿದು ತುಂಬ ವರ್ಷಗಳ ಮೇಲೆ ಗೊತ್ತಾಯ್ತು.
ಅಷ್ಟರಲ್ಲಾಗಲೇ ಸಾಹಿತ್ಯ ಹಾಗೂ ಪತ್ರಿಕೋದ್ಯಮ ಎಂಥ happening ಕ್ಷೇತ್ರಗಳು ನಾವು ಮಾತ್ರ ಜೀವ ವಿಲ್ಲದ ಮಷೀನ್ , ಹಾಗೂ ಕಣ್ಣಿಗೆ ಕಾಣದ ಎಲೆಕ್ಟ್ರೋನ್ಸ್ಗಳ ಬಗ್ಗೆ ಓದುತ್ತ ಎಂಥ ಬೋರಿಂಗ್ ಜೀವನ ಮಾಡ್ತಾ ಇದೀವಿ ಅಂತ ಹಲವು ಬಾರಿ ಅನಿಸಿದರೂ ನಮ್ಮ ಜನರೇಶನ್ ನವರಿಗೆ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಬಿಟ್ರೆ ಆಯ್ಕೆಗಳೇ ಇರಲಿಲ್ಲವಲ್ಲ, ಓದು ಜೀವನ್ ನಡೆಸುವುದಕ್ಕಾಗಿ , ಹಾಗೂ ಒಳ್ಳೆಯ ಉದ್ಯೋಗಕ್ಕಾಗಿ, ಆತ್ಮ ಸಂತೋಷಕ್ಕಾಗಿ ಬ್ಲಾಗ್ ಶುರು ಮಾಡಿದೆ, ಅದಕ್ಕೆ ಸಿಕ್ಕ ರೆಸ್ಪಾನ್ಸ್ ಒಮ್ಮೆಲೇ ಜರ್ನಲಿಸ್ಟ್ ಆಗುವ ಉಮೇದಿ ಹೆಚ್ಚಿಸಿತು .
ಹೀಗೆ ಒಂದಿನ ಹೈ ಬೆಂಗಳೂರು ಓದುವಾಗ ಅಶೋಕ್ ಶೆಟ್ಟರ್ ಬಗ್ಗೆ ಒಂದು ಲೇಖನ ಬರೆದಿದ್ದರು ಬೆಳಗೆರೆ, ಆ ಲೇಖನ ಹೇಗಿತ್ತೆಂದರೆ, ಒಂದು ವರ್ಷದಿಂದ ಹೈ ಬೆಂಗಳೂರು, ಓದುತ್ತಿದ್ದರೂ ಬೆಳಗೆರೆಯನ್ನು ಭೇಟಿಯಾಗಬೇಕು ಎನಿಸಿರಲಿಲ್ಲ, ಶೆಟ್ಟರ್ ಸರ್ ಧಾರವಾಡ, ನಂಗೆ ಪರಿಚಯನೇ ಇಲ್ವಲ್ಲ ಈ ಸೆಮ್ಸ್ಟರ್ ರಜೆ ಲಿ ಹೋಗಿ ಅವ್ರನ್ನು ಭೇಟಿ ಆಗಲೇ ಬೇಕು ಎಂದುಕೊಂಡು ಫೇಸ್ಬುಕ್ ಅಲ್ಲಿ ಹುಡುಕಿ ರಿಕ್ವೆಸ್ಟ್ ಕಳ್ಸಿದೆ, ಒಂದು ಮೆಸೇಜ್ ಕೂಡ ಹಾಕಿದೆ ಸರ್ ನಿಮ್ಮನ್ನ ಭೇಟಿ ಆಗ್ಬೇಕು ಅಂತ ಕರ್ನಾಟಕ ಯೂನಿವರ್ಸಿಟಿ archeology ಡಿಪಾರ್ಟ್ಮೆಂಟ್ ಗೆ ನನ್ನ ಬ್ಲಾಗ್ ಬರಹಗಳ ಪ್ರಿಂಟ್ ಔಟ್ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದ ಎಲ್ಲ ಲೇಖನಗಳನ್ನು ಒಂದು ಫೈಲ್ನಲ್ಲಿ ಹಾಕಿಕೊಂಡು ನಾಳೆ ನೇ ಪತ್ರಕರ್ತೆ ಆಗಿ ಬಿಡುವ ಉತ್ಸಾಹದಿಂದ ಶೆಟ್ಟರ್ ಸರ್ ನ ಭೇಟಿಯಾದೆ, "ಭಾಳ್ ಚೊಲೋ ಬರೀತಿ ಆದ್ರ ರವಿ ಬೆಳೆಯಗೆ ಇನ್ಫ್ಲುಯೆನ್ಸ್ ಭಾಳ್ ಆಗೇತಿ ನಿಂಗ ಸ್ವಲ್ಪ ದಿನ ಅವನ ಬರಹ ಓದದೇ, ನಿನ್ನ ಲೇಖನ ಬರಿ" ಅಂದ್ರು. ಸರಿ ಅಂತ ಒಪ್ಪಿಕೊಂಡು "ಸರ್, ನಾ ಇಂಜಿನಿಯರಿಂಗ್ ವಲ್ಯ ಭಾಳ ಬೋರಿಂಗ್ ಇದು ನ್ಯೂಸ್ anchor ಆಗ್ತೀನಿ ನಂಗ್ ರೆಫರ್ ಮಾಡ್ರಿ ಬೆಳಗೆರೆಗೆ ಹೇಳಿ" ಅಂದೇ, ನನ್ನ ಮಾರ್ಕ್ಸು ಸೆಮಿಸ್ಟರ್ ರಿಸಲ್ಟ್ ಕೇಳಿ "ತಲಿ ಕೆಟ್ಟದೇನವಾ ?, ಚೊಲೋ ಓದುಮುಂದ ಅರ್ದಕ್ಕ ಯಾಕ್ ಬಿಡತಿ , ಎಲ್ಲವೂ ಒಂದು ಹಂತ ಆದ್ಮೇಲೆ ಮೊನೊಟೋನೂಸ್ ಅನ್ಸೇ ಅನ್ಸುತ್ತೆ , ಸುಮ್ನ ಬ್ಲಾಗ್ ಬರ್ಕೊಂಡು ಓದು ಮುಗಸು, ಜೀವನಕ್ಕ ಏನು ಬೇಕು ಅನ್ನೋಕಿಂತ ಬದುಕಿಗೆ ಏನು ಬೇಕು ಅನ್ನೋದು ಇನ್ನು ತಿಳಿಯದ ವಯಸ್ಸು ನಿಂದು , ಮುಂದೊಂದಿನ ನೀನೆ ಇದರ ಬಗ್ಗೆ ತಮಾಷೆ ಮಾಡ್ತಿ ನೋಡು ಅಂತ ಬುದ್ಧಿ ಹೇಳಿ ಕಳ್ಸಿದ್ರು .
ಅದಾದ್ಮೇಲೆ ನಿಧಾನವಾಗಿ, ಬೆಳಗೆರೆ ಮೇನಿಯಾ ಇಂದ ಹೊರಬರಲು ಶುರು ಮಾಡಿ ಅನೇಕ ಲೇಖಕರು, ಕಥೆಗಾರರು , ಕಾದಂಬರಿಗಾರರು ಭಿನ್ನ ಸಿದ್ಧಾಂತ, ಭಿನ್ನ ವೈಚಾರಿಕತೆ, ಎಲ್ಲದೂ ಅರ್ಥವಾಗುತ್ತಾ ಹೋದಂತೆ, ಬೆಳಗೆರೆಯವರ ಕಾಂಟ್ರವರ್ಸಿಗಳು ಒಹ್ ಇವರು ಇಷ್ಟೇ ಎಲ್ಲರೂ ಇಷ್ಟೇ ಬದುಕೇ ಬೇರೆ ಬರಹವೇ ಬೇರೆ ಎಂದು ಒಂದು ರೀತಿಯ ಘಾಸಿ ಉಂಟಾಯ್ತು, ಆವಾಗ್ಲೇ ಯಾರೇ ಇರಲಿ ಅವರ ವೈಯಕ್ತಿಕ ಬದುಕಿಗಿಂತ ಅವರ ಯಾವ ಗುಣದಿಂದ ಅಥವಾ ಯಾವ ಕೆಲಸದಿಂದ ಅವರು ನಮಗೆ ಇಷ್ಟ ಹಾಗೂ ಅದರಿಂದ ಯಾವ ಒಳ್ಳೆಯ ಗುಣವನ್ನು ನಾನು ಮೈಗೂಡಿಸಿಕೊಳ್ಳಬಹುದು ಎಂಬ transformational phase ನಲ್ಲಿ ಬೆಳಗೆರೆಯ ಹಾರ್ಡವರ್ಕ್ , ಅವರ ಅದಮ್ಯ ಜೀವನ ಪ್ರೀತಿ ಹಾಗೂ ಪೂರ್ಣ ಪ್ರಮಾಣದಲ್ಲಿ ಜೀವನ ಅನುಭವಿಸುವ ಗುಣಗಳು, ಅವರ ಕಷ್ಟದ ದಿನಗಳ ಹೋರಾಟ ಎಲ್ಲವನ್ನೂ ಮೆಚ್ಚಿಯೂ ಅವರನ್ನೂ ವೈಯಕ್ತಿಕವಾಗಿ ಭೇಟಿಯಾಗಲು ಬಯಸಲಿಲ್ಲ, ಭೇಟಿಯಾಗಲಿಲ್ಲ ಎಂಬ ಕೊರಗೂ ಇಲ್ಲ, ಆ ಮನುಷ್ಯನ ಅಕ್ಷರ ಕ್ರಾಂತಿ ನಮ್ಮ ಜನರೇಶನ್ ಹಲವು ಜನರಿಗೆ ಸ್ಪೂರ್ತಿ, ಈ ಬೆಳಗೆರೆಯವರ ಖಾಸ್ ಬಾತ್ ಓದದೇ ಇದ್ದಿದ್ದರೆ ನನಗೆ ಗುರುವರ್ಯ ಶೆಟ್ಟರ್ ಸರ್ ಸಿಗುತ್ತಿರಲಿಲ್ಲ.
೬೨ ಕಮ್ಮಿ ಅಂತ ನಮಗೆ ಅನ್ನಿಸಿದರೂ ಒಂದಿನಿತು ರಿಗ್ರೆಟ್ ಇಲ್ಲದೇ ಬದುಕಿಹೋದ ಅವರ ಛಲ ಹಾಗೂ ಜೀವವೋತ್ಸಾಹ ನಮಗೆಲ್ಲರಿಗೂ ಮಾದರಿ, He celebrated his life and Am Glad that I witnessed his existence !!
Thursday, September 10, 2020
ಭಾಷೆಯ ಹಾಗೂ ಗಡಿಯ ವಿಷಯಕ್ಕೆ ಬಂದರೆ ಮಹಾರಾಷ್ಟ್ರ ಮುಂಚೂಣಿಯಲ್ಲಿ ನಿಲ್ಲುತ್ತದೆ!
"ಶಿವಸೇನೆ", ಹೇಗೆ ಒಂದು ಕಟ್ಟರ್ ಹಿಂದುತ್ವ ಪ್ರತಿಪಾದಿಸುವ, ಭಾಷೆ ಹಾಗೂ ರಾಜ್ಯದ ಗಡಿಯ ಸಿದ್ಧಾಂತಕ್ಕೆ ಒತ್ತು ಕೊಡುವ ರಾಜಕೀಯ ಪಕ್ಷ ತಾನೇ ಖುದ್ದು ರಾಜಕೀಯ ಕಣ್ಣಾ ಮುಚ್ಚಾಲೆ ಆಟಗಳಿಗೆ ಬಲಿಯಾಯಿತು ಎನ್ನುವುದು ವಿಪರ್ಯಾಸವಾದರೂ ಸತ್ಯ!
ಮುಂಬೈ ಎಂಬ ಮಾಯಾನಗರಿಯಲ್ಲಿ ಮರಾಠಿಗಿರ ಹೊರತಾಗಿ ಅನೇಕ ಸಮುದಾಯಗಳು, ಹೊರ ರಾಜ್ಯದಿಂದ ವಲಸೆ ಬಂದ ಕಾರ್ಮಿಕರೂ, ನಮ್ಮ ಕರಾವಳಿ ಜನರನ್ನೂ ಸೇರಿಸಿಕೊಂಡೇ ನಮ್ಮ ಅಜ್ಜ ಅಪ್ಪಂದಿರ ಕಾಲಕ್ಕೆ ಬದುಕು ಕಟ್ಟಿಕೊಳ್ಳುವ ನಗರವೆಂದೇ ಖ್ಯಾತಿ ಪಡೆದ ಊರು. ಹೋದವರ್ಯಾರೂ ನಿರಾಶೆಯಾಗಿ ವಾಪಸ್ಸು ಬಂದ ನಿದರ್ಶನಗಳಿಲ್ಲ, ಐಟಿ ಬಿಟಿ ಕಂಪನಿಗಳ ಹಾವಳಿಯಿಂದ ನಮ್ಮ ಜೆನೆರೇಷನ್ ಗೆ ಬೆಂಗುಳೂರು ಇವತ್ತು ಹೇಗೋ , ಹಾಗೇ ಸುಮ್ಮರು ೨೫-೩೦ ವರ್ಷದ ಕೆಳಗೆ ಮುಂಬೈ ಕೂಡ ಹಲವರ ಅನ್ನದಾತ.
ಇಂತಿಪ್ಪ ಮುಂಬೈ ಜನರಿಗೆ ವಿಶೇಷವಾಗಿ ಮರಾಠೀ ಮಾತನಾಡುವ ಸಮುದಾಯ, ವಲಸಿಗರ ಇಂಗ್ಲಿಷ್ ಪಾಂಡಿತ್ಯದಿಂದೋ ಅಥವಾ ಹೆಚ್ಚಿನ ವಿದ್ಯಾರ್ಹತೆ ದೆಸೆಯಿಂದಲೋ ಎಪ್ಪತ್ತು ಹಾಗು ಎಂಭತ್ತರ ದಶಕಗಳಲ್ಲಿ, ಮೂಲ ಮುಂಬೈ ನಿವಾಸಿಗಳನ್ನು ಹೊರತುಪಡಿಸಿ ಹೊರಗಡೆ ಇಂದ ಬಂದವರನ್ನೆಲ್ಲ ಬಾಚಿ ತಬ್ಬಿಕೊಂಡು ಬೆಳಸುತ್ತಿರುವಾಗ ಹುಟ್ಟಿಕೊಂಡಿದ್ದೇ ಶಿವ ಸೇನೆ ಹಾಗೂ ಸೇನೆಯ ಮುಖ್ಯಸ್ಥ ಬಾಳ್ ಠಾಕ್ರೆ! ಟೀ ಮಾರಾಟ ಮಾಡುವ ಮಾಣಿಯಿಂದ ಹಿಡಿದು ಸರ್ಕಾರಿ ಕಚೇರಿಗಳ ವರೆಗೆ ಮರಾಠಿಗರಿಗೆ "ಮರಾಠಿಗರು" ಎಂಬ ಕಾರಣಕ್ಕೆ ಅನ್ಯಾಯವಾಗದಂತೆ ನೋಡಿಕೊಂಡ ಹೆಗ್ಗಳಿಕೆ ಆ ನಾಯಕನದ್ದು
ಮೂಲ ಮುಂಬೈ ನಿವಾಸಿಗಳಾದ ಹಾಗೂ ಮಾಧ್ಯಮ ವರ್ಗ ಹಾಗು ಕೆಲ ಮಧ್ಯಮ ವರ್ಗದ ಜನರ ಮನೆಗಳಲ್ಲಿ ಇವತ್ತೀಗೂ ಅವರ ಫೋಟೋ ನೇತು ಹಾಕಿರುವುದು ಕಾಣಸಿಗುತ್ತದೆ. ಇದು ಕೇವಲ ಅಂಧ ಶ್ರದ್ಧೆಯೋ, ಭಯವೂ ಆಗಿರಲಿಲ್ಲ, ಬದಲಾಗಿ ನಮನ್ನು ಕಾಪಾಡಲೆಂದೇ ಇರುವ ನಾಯಕ ಎಂಬ ವಿಶ್ವಾಸದ ನಂಬಿಕೆಯಾಗಿತ್ತು,
ತಳ ಮಟ್ಟದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೇ ದೊಡ್ಡ ಮಟ್ಟಕ್ಕೆ ಬೆಳೆಯಲಾಗುವುದಿಲ್ಲ ಹಾಗೂ ನಿಮ್ಮ ಗಡಿ ನಿಮ್ಮ ಭಾಷೆಯ ಜನರ ಹಿತಾಸಕ್ತಿ ಕಾಯ್ದುಕೊಳ್ಳುವ ಮೂಲ ಗುಣ ಇಲ್ಲದಿದ್ದರೆ ಒಬ್ಬ ನಾಯಕ ಸೋಶಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಇಷ್ಟು ಎತ್ತರವಾಗಿ ಬೆಳೆಯಲು ಸಾಧ್ಯವಿರಲಿಲ್ಲ. ರಾಜಕೀಯ ಹೊರತಾಗಿ ಇವತ್ತಿಗೂ ಬಲ ಠಾಕ್ರೆ ಹುಲಿಯೇ! ಅಂಥ ಒಂದು ಸಾಮ್ರಾಜ್ಯಕಟ್ಟಿ, ಮೈಕಲ್ ಜ್ಯಾಕ್ಸನ್ ಇಂದ ಹಿಡಿದು, ಇಂಡಿಯಾ ಪಾಕಿಸ್ತಾನದ ಕ್ರಿಕೆಟ್ ಮ್ಯಾಚ್ ಗಳನ್ನೂ ಸಹ ಕಂಟ್ರೋಲ್ ಮಾಡಬೇಕಿದ್ದರೆ ಅದೆಂತಹ ಸಾಮ್ರಾಜ್ಯ ಕಟ್ಟಿರಬೇಡ??!
ಆಗಿನ ಕಾಲಕ್ಕೆ, ಹಿಂದೂ ಮುಸ್ಲಿಂ ಗಲಾಟೆ, ಭೂಗತ ಲೋಕದ ಪಾತಕಿಗಳ ಸಂಘರ್ಷ , ಮತ್ತು ಭಯೋತ್ಪಾದನೆಯ ತಾಣವಾಗಿದ್ದ ಮುಂಬೈ ಎಂಬ ನಗರಿಯನ್ನು ಕೇಂದ್ರ ಸರ್ಕಾರವೂ ಪ್ರಶ್ನಿಸದಂತೆ ಕೇವಲ, ಭಾಷೆಯ ಹಾಗೂ ಒಂದು ಸಮುದಾಯದ ಜನರ ಪಲ್ಸ್ ಅನ್ನು ಆಳವಾಗಿ ಅರ್ಥೈಸಿಕೊಂಡು ಬೆಳೆದ ಪರಿ ರೋಚಕವೇ. ಇಂದಿರಾ ಗಾಂಧಿ ಖುದ್ದು ಅವರನ್ನು ಕರೆದು ರಾಜಿಗಾಗಿ ಬೇಡಿಕೆಯಿಡುತ್ತಿದ್ದರೆಂದರೆ ಸುಮ್ಮನೆ ಮಾತೆ??!
ಇಂತಿಪ್ಪ ಸಾಮ್ರಾಜ್ಯಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲದ ಮಕ್ಕಳು, ಮೊಮ್ಮಕ್ಕಳು, ಕೆಲವು ಹುಂಬ ಮನಸ್ಥಿತಿಯ ಜನರ ಸೇರ್ಪಡೆಯಿಂದ, ಶಿವ ಸೇನೆ ಪುಂಡಾಟಕೀಯ ಪಕ್ಶವೆಂದೇ ಕುಖ್ಯಾತಿ ಪಡೆಯಲು ಶುರುಮಾಡಿತು. ಯಾರೋ ಎಲ್ಲೋ ಮಾಡುವ ಧಾಂದಲೆಗಳನ್ನು ಈ ಪಕ್ಷದ ಕಾರ್ಯಕರ್ತರೆಂಬ ಸಮರ್ಥನೆಯಲ್ಲಿ ಮುಗಿದು ಹೋಗುತ್ತಿದ್ದವು.
ಇಡೀ ದೇಶದಲ್ಲಿ ಭಾಷೆಯ ಹಾಗೂ ಗಡಿಯ ವಿಷಯಕ್ಕೆ ಬಂದರೆ ಮಹಾರಾಷ್ಟ್ರ ಮುಂಚೂಣಿಯಲ್ಲಿ ನಿಲ್ಲುತ್ತದೆ, ಕನ್ನಡಿಗರಾಗಿ ನಮಗೆ ಕೋಪ ತಾಪ ಬಂದರೂ ಬೆಳಗಾವಿಯಲ್ಲಿ ಬಂದು ಧಾಂದಲೆ ನಡೆಸಿ ತಮ್ಮ ಬಾವುಟ ಹಾರಿಸುವಷ್ಟು ಉಡಾಫೆ ತೋರಿಸಲು ಮೂಲ ಕಾರಣ ಮತ್ತದೇ ನಾವೆಲ್ಲ ಒಂದೇ ಎಂದು ಸಾರುವ ಮರಾಠೀ ಭಾಷೆ!
ಕೇವಲ ಭಾಷೆಯ ಮಾನದಂಡ ತೆಗೆದುಕೊಂಡರೆ ತಮಿಳು ನಾಡು ಹಾಗೂ ಕೇರಳ ಕೂಡ ಅಷ್ಟೇ ಜತನದಿಂದ ಭಾಷಾ ಪ್ರೇಮ ಹಾಗೂ ಪ್ರಾದೇಶಿಕ ಬೆಳವಣಿಗೆಗೆ ಒತ್ತು ಕೊಡುವ ರಾಜ್ಯಗಳು. ಆ ಕಾರಣಗಳಿಂದಲೇ ಅಲ್ಲಿನ ಜನ ಹಾಗೂ ಸರ್ಕಾರಗಳೂ ಕೇಂದ್ರದ ಮೇಲೆ ಅವಲಂಬಿತರಾಗದೇ ಆರಾಮಾಗಿ ಉಸಿರಾಡುತ್ತಿವೆ.
ಇಂತಹ ಇತಿಹಾಸ ಹಾಗೂ ಅಪಾರ ಜನಮನ್ನಣೆ ಪಡೆದ ಪಕ್ಷವೊಂದು ಕೇವಲ ಒಬ್ಬ ಚಿತ್ರನಟಿಯ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ಹೋಗಿ ನಗೆಪಾಟಲಿಗೀಡಾಗಿ ಯುವ ಜನರ ಪಾಲಿನ ಖಳನಟ ಎಂಬಂತೆ ಚಿತ್ರಿಸಲ್ಪಟ್ಟಿದ್ದು ಮಾತ್ರ ದುರಂತ. ಇನ್ನು ಕಾಂಟ್ರೊವರ್ಸಿಗಳ ಜೀವಿತಾವಧಿ ನೋಡಲು ಹೊರಟರೆ ಅವು ನಮ್ಮ ಒಂದು ದಿನದ ಸ್ಟೇಟಸ್ ಸ್ಟೋರಿಗಳಷ್ಟೆಯೇ ಪ್ರಸ್ತುತ. ಇದರಿಂದ ಮುಖ ಭಂಗವಾಗಿದ್ದರೂ ಇದು ತೀರಾ ರಾಜಕೀಯವಾಗಿ ಪರಿಣಾಮ ಬೀಳಬಹುದೇ ಎಂದು ಕಾಡು ನೋಡಬೇಕಷ್ಟೆ!
ಎಲ್ಲ ವಿದ್ಯಾಮಾನಗಳೂ ಹೀಗೆ ನಡೆದೂ ಮೈತ್ರಿ ಸರ್ಕಾರ ಮಾತ್ರ ಬಿಜೆಪಿ ಹಾಗು ಶಿವ ಸೇನೆ ಇದ್ದಿದ್ದರೇ, ಇವತ್ತು #ಮನೆಮಗಳು #ಜೈ_ಕಂಗನಾ ಹಾಗೂ #love _you _kangana ಗಳು ಇಷ್ಟೇ ಪ್ರಬಲವಾಗಿ ಕೆಲಸ ಮಾಡುತ್ತಿದ್ದವೇ ಎಂದು ಯೋಚಿಸುವ ಸಮಯ!
Thursday, July 23, 2020
ಅಮ್ಮನ ಸೆರಗನ್ನು ಹಿಡಿದು ಹಾಲನ್ನು ಎರೆಯಲು ಹೋಗುವುದೇ ದೊಡ್ಡ ಸಂಭ್ರಮ !
ನಮ್ಮ ಧಾರವಾಡದ ಮಳೆಗಾಲಕ್ಕ, ಮೋಹಕ ಸೊಬಗಿದೆ, ಎರಡು ನಿಮಿಷವೂ ಬಿಡದೆ, ಆಗಸವೆಂಬ ಬಿಂದಿಗೆಗೆ ಯಾರೋ ತೂತು ಮಾಡಿದ ಹಾಗೆ ಬಿಟ್ಟು ಬಿಡದೇ ಸುರಿಯುವ ತವಕವಿದೆ !ಇಂತಿಪ್ಪ ಮಳೆಗಾಲದಲ್ಲಿ ಬರುವ ಪಂಚಮಿಯ ಹಬ್ಬಕ್ಕೆ ಪ್ರೀತಿಯ ಆಚರಣೆ ಇದೆ.
ತಂಪಾದ ಮಂಜಿನ ಬೆಳಗು, ಜಿಟಿ ಜಿಟಿ ಸುರಿಯುವ ಮಳೆ, ಬೆಚ್ಚಗೆ ಹೊದ್ದು ಮಲಗಿದ್ದ ನಮ್ಮನ್ನ , "ಇವತ್ತು ಪಂಚಮಿ ,ಇವತ್ತರೆ ಬೇಗ ಎದ್ದು ಹಾಲು ಎರೆದು ಬಂದ್ಮೇಲೆ ನಾಷ್ಟಾ ನೆನಪಿರಲಿ "ಎಂದು ಗದರಿಸಿ ಎಚ್ಚರಿಸುತ್ತಿದ್ದ ಅಮ್ಮ, ರೇಶಿಮೆಯ ಕೆಂಪು ಹಾಗೂ ಹಸಿರು ಬಣ್ಣದ ಲಂಗ ದಾವಣಿ, ಮಲ್ಲಿಗೆ ಹೂವು, ಝುಮಕಿ, ಕೈತುಂಬ ಬಳೆ, ಕಾಡಿಗೆ ಹಾಗೂ ಕುಂಕುಮ ಇಟ್ಟುಕೊಂಡು ಅಮ್ಮ ತಯಾರಿಸಿಟ್ಟ , ಸಣ್ಣ ಗಿಂಡಿಯಲ್ಲಿ ಹಾಲು, ಅಗರ್ ಬತ್ತಿ,ತಂಬಿಟ್ಟು, ಶೇಂಗಾ ಉಂಡಿ , ಹುರಿದ ಜೋಳದ ಅಳ್ಳು ,ಹೂವು , ನೈವೇದ್ಯೆಗೆಂದು ಮಾಡಿಟ್ಟ ಕರಿಗಡುಬು, ದೀಪದ ಎಣ್ಣೆ-ಬತ್ತಿ, ಎಲ್ಲವನ್ನು ಶ್ರದ್ಧೆಯಿಂದ ಒಂದು ತಟ್ಟೆಗೆ ಜೋಡಿಸಿಕೊಂಡು ಅದರ ಮೇಲೆ ಉಲೆನಿಂದ ಹಣೆದ ಮುಚ್ಚಿಗೆ, ಅಮ್ಮನ ಸೆರಗನ್ನು ಹಿಡಿದು ಹಾಲನ್ನು ಎರೆಯಲು ಹೋಗುವುದೇ ದೊಡ್ಡ ಸಂಭ್ರಮ !
ಹೋಗುವ ದಾರಿಯಲ್ಲಿ ನೆರೆಯವರು ಸಿಕ್ಕು "ಹಾಲ್ ಎರಿಯಾಕ್ ಹೊಂಟೇರಿ? ಎಷ್ಟು ಎತ್ತರ ಬೆಳದಾಳ ನೋಡ್ರಿ ಮಗಳು, ಲಕ್ಷಣದ ಗೌರಮ್ಮ" ಎಂದು ಕೆನ್ನೆ ತಟ್ಟಿ ಪ್ರೀತಿಯಿ೦ದ , ಮಾತನಾಡಿಸುತ್ತಿದ್ದ ಆಂಟಿಯರು , ಗಣೇಶನ ದೇವಸ್ಥಾನದ ಅಂಗಳದಲ್ಲಿ ಆಲದ ಮರಕ್ಕೆ ಅಂಟಿಕೊಂಡಿದ್ದ ಕೆಂಪು ಮಣ್ಣಿನ ಹುತ್ತು, ಪ್ರತಿವರ್ಷ ನಾಗಪ್ಪ, ನಾವು ಹೋಗುವ ವರೆಗೆ ಹೊರಗೆ ಬರದೇ ಇರಲಪ್ಪ ಎಂಬ ಅಂಜಿಕೆಯಿಂದಲೇ ಹಾಲು ಹಾಕುವಾಗ, "ಹೆದರ್ಬ್ಯಾಡ ಅರಾಮ್ ಪೂಜೆ ಮಾಡು ಏನೂ ಆಗುದಿಲ್ಲ ಎಂದು" ಅಮ್ಮ ಹೇಳುತ್ತಿದ್ದ ಧೈರ್ಯ, ಅರ್ಚಕರು ಹೊರಗೆ ಬಂದು ನಂಗೋಸ್ಕರ ಒಂದು ಮಂಗಳಾರತಿ ಮಾಡಿ ಗಣೇಶನ ಮೇಲಿದ್ದ ಹೂವು ತಂದುಕೊಟ್ಟು, ಎಲ್ಲ ಚೊಲೋ ಆಗ್ಲಿ ಅರಾಮ್ ಇರ್ರಿ , ನೀನೆ ಫಸ್ಟ್ ಬರಬೇಕು ಈ ಸಲ ಎಕ್ಸಾಮ್ಸ್ನ್ಯಾಗ , ಎನ್ನುವಾಗ ಎಂತದೋ ಹಿಗ್ಗು!
ಆಮೇಲೆ ದೀಪ ಹಚ್ಚಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮನೆಕಡೆ ಹೊರಟರೆ ಜೋಕಾಲಿಯದ್ದೇ ಗುಂಗು.
ದೊಡ್ಡ ಮರಕ್ಕೆ ಕಟ್ಟಿದ ಜೋಕಾಲಿ ಆಡುವುದಕ್ಕೆ ಹರ ಸಾಹಸ ಪಟ್ಟು, ಕಡೆಗೆ ನಾನು ಹೆಚ್ಚು ,ನೀನು ಹೆಚ್ಚು ಎಂದು ಕ್ವಾರ್ಟರ್ಸ್ ಹುಡುಗೀಯರ ಜೊತೆ ಜಗಳ ಆಡುವ ಗೋಜೇ ಬೇಡ ಎಂದು ಹೇಳಿ ಅಪ್ಪ ಮನೆಯಲ್ಲೇ ನನಗಾಗಿ ಕಟ್ಟುತ್ತಿದ್ದ ಜೋಕಾಲಿ, ಅಡುಗೆ ಮನೆಯಿಂದ ಹಾಲ್ ಗೆ ಬರುವ ಪ್ಯಾಸೇಜ್ ಬ್ಲಾಕ್ ಮಾಡಿ ಪ್ರತಿ ಸಲ ಅಮ್ಮನಿಗೆ ಹಾಯ್ದು ಬೈಸಿಕೊಳ್ಳುತ್ತಿದ್ದ ದಿನಗಳು, ಇದರ ಮಧ್ಯೆ ತಮ್ಮನಿಗೂ ಸ್ವಲ್ಪ ಹೊತ್ತು ಜೋಕಾಲಿ ಬಿಟ್ಟು ಕೊಡುವ ತ್ಯಾಗ, ಒಂದೇ ಎರಡೇ, ಪಂಚಮಿ ಕೇವಲ ಹಬ್ಬವಲ್ಲ ಹುಡುಗೀಯರ ಪಾಲಿಗೆ ಸಡಗರ !
ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು