Total Pageviews

Tuesday, August 27, 2019

ಎಡ- ಬಲಗಳ ಮಧ್ಯೆ!



 ತುಂಬಾ ಹಿಂದೆ ಹೋಗಿ ನೋಡೋದು ಬೇಡ ನಮ್ಮ ನಮ್ಮ ಮನೆಗಳಲ್ಲಿ ನೋಡಿಕೊಳ್ಳೋಣ ! ಎಷ್ಟೇ ಮುಂದುವರೆದ ಕುಟುಂಬ ಅಂತ ಹೇಳಿಕೊಂಡರೂ , ಎಷ್ಟೇ ವಿದ್ಯಾವಂತರಾಗಿದ್ದರೂ ನಮ್ಮ ಸಮಾಜದಲ್ಲಿ ಕೆಲವು ಕ್ಷೇತ್ರಗಳನ್ನು ಪ್ರೊಫೆಶನ್ ಆಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಸ್ವಾತಂತ್ರ್ಯ ತೀರಾ ಕಡಿಮೆ! ಇದ್ಯಾಕೆ ಹೀಗೆ ಅಂತ ಯೋಚಿಸಿದರೆ ನನಗೆ ಅನ್ನಿಸಿದ್ದಿಷ್ಟು! ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೇ ಹಾಗೂ ಚರ್ಚೆಗೆ ಮುಕ್ತ ಅವಕಾಶ ಇದೆ !

 ಇವತ್ತಿಗೂ ನಮ್ಮ ಪಾಲಕರು ಚಲನಚಿತ್ರ , ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ತಮ್ಮ ಮಕ್ಕಳು ತೊಡಗಿಕೊಳ್ಳುವುದನ್ನು ಇಷ್ಟ ಪಡುವುದಿಲ್ಲ ಆದರೆ ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಳ್ಳಲು ತೊಂದರೆ ಇಲ್ಲ ! ಇನ್ಸ್ಟಂಟ್ ಹೆಸರು, ಇನ್ಸ್ಟಂಟ್ ಜನಪ್ರಿಯತೆ ಅಂದ್ರೆ ಯಾರಿಗೆ ತಾನೇ ಬೇಡ? ಸರಿ ಇದರಲ್ಲಿ ಕಾಣಿಸಿಕೊಂಡವರೆಲ್ಲರಿಗೂ ಅದೃಷ್ಟ ಇರುವುದಿಲ್ಲ ನೂರರಲ್ಲಿ ಇಬ್ಬರೋ ಮೂವರೋ ಮುಂದೆ ಇದೆ ಕ್ಷೇತ್ರವನ್ನು ಆರಿಸಿಕೊಳ್ಳಬಹುದು . ಹಾಗೆ ಇದು ನಿರಂತರ ಮೇಲೆ ಕೆಳಗಾಗುವ ಚಕ್ರ! ಇಲ್ಲಿ ತಾಳ್ಮೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿ ಇಂತಹ ಕ್ಷೇತ್ರಗಳನ್ನು ಆರಿಸಿಕೊಳ್ಳುವ ಪ್ರತಿ ವ್ಯಕ್ತಿಯು ಪಾಲಕರ ನಕಾರಗಳು, ಸಮಾಜದ ವಿಚಿತ್ರ ಕಳಕಳಿಯ ಮಧ್ಯೆ  ತನಗೆ ಅರಿವಿಲ್ಲದಂತೆ ಒಂದು ರೀತಿಯ ರೆಬೆಲ್ ಕ್ಯಾರೆಕ್ಟರ್ ಅನ್ನು ಅಳವಡಿಸಿಕೊಂಡಿರುತ್ತಾನೆ !

ಅದೇನೋ ಬರಿತಾಳಂತೆ , ಕೆಲಸಕ್ಕೆ ಬರದೇ ಇರೋದು ನಾಲ್ಕು ಜನ ಶಬಾಷ್ ಅಂದ್ರೆ ಹೊಟ್ಟೆ ತುಂಬಲ್ಲ , ಅದೇನೋ ಸಿನಿಮಾ ಅಂತೇ , ಯಾರು ಬಂಡವಾಳ ಹಾಕೋವ್ರು , ವಿಜಯ್ ಪ್ರಕಾಶ್ ಗೆ ೪೫ ವರ್ಷ ಆದ್ಮೇಲೆ ಸಕ್ಸಸ್ ಸಿಕ್ಕಿದ್ದು ಗೊತ್ತ ? ರಘು ದೀಕ್ಷಿತ್ ಇನ್ನೇನ್ ಮತ್ತೆ ಹಾಡ್ಕೊಂಡಿಲ್ಲ ಜೀವನ ಆಗಲ್ಲ ಕಣ್ರೀ ಅನ್ನೋ ವಿಲಕ್ಷಣ ಜನಗಳ ಮಧ್ಯೆ ಹೇಗೋ ಕಷ್ಟ ಪಟ್ಟು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ತಮ್ಮ ತಮ್ಮ ವಲಯಗಳಲ್ಲಿ ಹೊಗಳುವಂತ ಸಾಧನೆ ಮಾಡಿದ ಪ್ರತಿ ವ್ಯಕ್ತಿಗೂ ತನ್ನದೇ ಆದ ವೈಯಕ್ತಿಕ ಅಭಿವ್ಯಕ್ತ್ಯ ಇದ್ದೇ ಇರುತ್ತದೆ ಮತ್ತು ಇರಲೇಬೇಕು ! ತನ್ನ ಹೋರಾಟದಾಯಕ ಮನೋಭಾವವನ್ನು ಅವನೂ ಪ್ರತಿ ಹಂತದಲ್ಲೂ ಹಾಗೂ ತನ್ನ ಸುತ್ತಲು ನಡೆಯುವ ಪ್ರತಿವಿದ್ಯಮಾನಗಳಲ್ಲೂ,ತನಗೆಲ್ಲಿ ಇದನ್ನು ತಪ್ಪು ಎಂದು ಹೇಳಲು ಅವಕಾಶ ಸಿಗುತ್ತದೆ ಎಂದು ಹುಡುಕುತ್ತಲಿರುತ್ತಾನೆ !

ಇವತ್ತಿಗೂ ನಮ್ಮ ದೇಶದ ಇತಿಹಾಸ ತೆಗೆದು ನೋಡಿದರೆ ಅತ್ಯುತ್ತಮ ಅನ್ನುವ ಸಾಹಿತ್ಯ ಸಂಗೀತ ನಾಟಕ ಚಲನಚಿತ್ರ ಕವನಗಳನ್ನು ಕೊಟ್ಟ ಬಹುತೇಕ ಗಣ್ಯರು ಎಡಪಂಥೀಯ ವಿಚಾರಧಾರಿಗಳೇ! ನಮ್ಮ ಫೇಸ್ ಬುಕ್ ಸ್ನೇಹಿತರ ಪಟ್ಟಿಯಲ್ಲೂ ಸಹ ಅತ್ಯುತ್ತಮ ಕವನ ಬರೆಯುವರು,ಸುಂದರ ಛಾಯಾಚಿತ್ರ ತೆಗೆಯುವರು,ಮನ ಮುಟ್ಟುವಂತೆ ಬರೆಯುವ ಅನೇಕ ಲೇಖಕರೂ ಹೆಚ್ಚಿನವರು ಎಡ ಪಂಥದವರೇ ! ಇವರೆಲ್ಲ ತುಂಬಾ ಕೆಳಮಟ್ಟದ ಬಡತನ, ಹತಾಶೆ, ಅನ್ಯಾಯ ಹಾಗೂ ಅವಮಾನಗಳನ್ನು ಸಹಿಸಿಕೊಂಡು ಬೆಳೆದವರು ! ಹಸಿವು ಅನ್ನೋ ಪದ ಇಟ್ಟುಕೊಂಡೆ ಪುಟಗಟ್ಟಲೆ ಬರೆಯುವಂಥವರು . ಫೇರ್ ಇನಫ್ ! ಆದರೆ ಇವರ ಪ್ರತಿ ವಿಚಾರವನ್ನು ಒಪ್ಪಲೇ ಬೇಕಾದ ಅನಿವಾರ್ಯತೆ ಇಲ್ಲದಿರುವಾಗ ಇವರ ಬ್ರಿಲಿಯನ್ಸ್ನ್ ಒಪ್ಪಲೇ ಬೇಕಾದ ಸಮಯಕ್ಕೆ ಒಪ್ಪಿ ಒಂದು ಮೆಚ್ಚುಗೆಯನ್ನು ಕೊಡುವುದರಲ್ಲಿ ತಪ್ಪೇನಿದೆ ?? ಅವನಾ ಭಯಂಕರ ಮೋದಿ ವಿರೋಧಿ , ಅವಳ ಮಿಟೂ ಹುಡಗಿ ಅಂತ ಟ್ಯಾಗ್ ಮಾಡಿ ಅವರ ಕಲೆಗೆ ಅವರ ಪ್ರತಿಭೆಗೆ ಅನ್ಯಾಯ ಮಾಡಿದಂತಾಗುತ್ತದಲ್ಲವೇ ??!

ನಾನೂ ಕೂಡ ಮಿಟೂ ಅಲೆಯನ್ನು ಬಹಿರಂಗವಾಗಿ ವಿರೋಧಿಸಿದವಳೇ! ಆದರೆ ಈ ಅಲೆಯಲ್ಲಿ ಹಲವು ನಿಜವಾಗಿಯೂ ಬಯಲಿಗೆ ಬರಬೇಕಾದ ವಿಷಯಗಳು ಕೊಚ್ಚಿಕೊಂಡು ಹೋಗಿದ್ದವು! ಅದೇನೇ ಇರಲಿ ಮನುಷ್ಯನ ಹಲವು ಇನ್ಸ್ಟಿಂಕ್ಟ್ಗಳಲ್ಲಿ ಕಾಮಾವು ಒಂದು! ಯಾವ  ಸಮಯಕ್ಕೆ ಒಂದು ಗಂಡು ಹಾಗು ಹೆಣ್ಣಿನ ನಡುವೆ ಆ ರೀತಿಯ ಇನ್ಸ್ಟಿಂಕ್ಟ್ ಜಾಗೃತಗೊಂಡು ಗೊಂದಲವುಂಟುಮಾಡುತ್ತದೆ ಎಂದು ಹೇಳುವುದು ಅಷ್ಟು ಸುಲಭದ ವಿಷಯವಲ್ಲ ! ಹಾಗೂ ಆ ಭಾವನೆಯನ್ನು ಸಾರ ಸಗಟಾಗಿ ತಪ್ಪು ಅಪರಾಧ ಅನ್ನೋ ರೀತಿಯಲ್ಲಿ ಬಿಂಬಿಸುವುದೂ ಸರಿಯಲ್ಲ ! ಯಾರಿಗೋ ಹಾಗೆ ಅನ್ನಿಸಿದ್ದಕ್ಕೆ ಹೆಣ್ಣು ತನ್ನ ನಡವಳಿಕೆಯನ್ನು ಅನುಮಾನಿಸುವ ಅವಶ್ಯಕತೆಯೂ ಇಲ್ಲ !ಬಾಯಾರಿಕೆ ಆದಾಗ ನೀರು ಕುಡಿಯಬೇಕು ಅನ್ನುವುದು ನಿಯಮ ! ಹಾಗಂತ ಬಾಯಾರಿಕೆ ಯಾಕಾಗುತ್ತದೆ ಯಾರ ಮನೆಯಲ್ಲಿ ಆಗುತ್ತದೆ ಅವರು ಒಳ್ಳೆಯವರ ಕೆಟ್ಟವರ ಅಂತ ಲೆಕ್ಕ  ಹಾಕಿ ಆಗುವುದಲ್ಲ ! ಮನುಷ್ಯ ಸಹಜ ಬಯಕೆಗಳಲ್ಲಿ ಕಾಮವೂ ಒಂದು ದಾಹವೇ ! ಯಾರಿಗೆ ಯಾರ ಮೇಲೆ ಯಾವ ಸಂಧರ್ಭದಲ್ಲಿ ಯಾವ ರೀತಿಯ ಭಾವನೆ ಮೂಡುತ್ತದೆ ಅನ್ನೋದು ತೀರ ಕಾಂಪ್ಲೆಕ್ಸ್ ವಿಷಯ ! ಒಂದು ಗಂಡಸು ಹೆಂಗಸನ್ನು ಆ ವಿಚಾರವಾಗಿ ಕೇಳಿಯೂ ಇರಬಹುದು ಅದನ್ನು ಆ ಹೆಂಗಸು ನಿರಾಕರಿಸಿಯೂ ಇರಬಹುದು ಇದರಾಚೆ ನಮಗೆ ಸಿಕ್ಕ ಹಲವು ಕೆಲಸಕ್ಕೆ ಬಾರದ ವೈಯಕ್ತಿಕ  ವಿಚಾರಗಳ ಮೇಲೆ ನಮ್ಮ ನಿಲುವುಗಳು ಬದಲಾಗುತ್ತ ಹೋಗುತ್ತವೆ. ಅದೇನೇ ಇರಲಿ ಪ್ರತಿ ಯಶಸ್ವಿ ಪುರುಷರ ಸೆಕ್ಸ್ ಸ್ಕ್ಯಾಂಡಲ್ಸ್ ಬಹಿರಂಗವಾದ ಸಮಯ ನೋಡಿ ಅವರೆಲ್ಲ ಲೈಮ್ ಲೈಟ್ ಗೆ ಬಂದ್ಮೇಲೆಯೋ ಅಥವಾ ಅವರು ಜನಪ್ರಿಯತೆ ಗಳಿಸುವ ಸಮಯದ್ಲಲೋ ಹೊರಗೆ ಬರುತ್ತವೆ . ಅದು ಕೂಡ ಮನುಷ್ಯ ಸಹಜ ಸಂಕಟ ! ಅವನಿಂದ ತೊಂದರೆಗೊಳಗಾಗಿ ವರುಷಗಳೂ ಕಳೆದಿದ್ದರೂ ಅವನ ವಿರುದ್ಧ ಒಂದೇ ಒಂದು ವಾಕ್ಯವನ್ನು ಹೇಳದವರೂ , ರಾತ್ರೋ ರಾತ್ರಿ ಅವನು ದೊಡ್ಡ ಹುದ್ದೆಗೆ ಏರುತ್ತಾನೆ ಅಂತ ಗೊತ್ತಾದ ಕೂಡಲೇ ಪುಟಗಟ್ಟಲೆ ಬರೆದು ತನ್ನ ಜೊತೆಯಲ್ಲಿದ್ದ , ತನಗೆ ಇಷ್ಟೆಲ್ಲಾ ಮೋಸ ಮಾಡಿದ ವ್ಯಕ್ತಿ ಅದ್ಹೇಗೆ ನನಗಿಂತ ಹೆಚ್ಚಿನ ಸ್ಥಾನ ಮಾನ ಹಾಗೂ ಗೌರವಕ್ಕೆ ಪಾತ್ರನಾಗುತ್ತಾನೆ ಅನ್ನೋ ಸಹಜ ಅಸೂಯೆ ಈ ಕೆಲಸವನ್ನು ಮಾಡಿಸಿಬಿಟ್ಟಿರುತ್ತದೆ. ಇದು ಕೇವಲ ಲಾಜಿಕ್ ಪ್ರಶ್ನೆಯಲ್ಲ ಮಾನವನ ಸೈಕೊಲಾಜಿ ! ಅದು ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ತುಂಬ ಭಿನ್ನವಾಗಿರುವ ವಿಷಯ. ಇಂತಹ ಸೂಕ್ಷ್ಮ ಹಾಗೂ ಕ್ಲಿಷ್ಟ ವಿಚಾರಗಳನ್ನು ಒಂದು ಅಲೆಯಾಗಲಿ, ಒಂದು ವೇದಿಕೆಯಾಗಲಿ ಅಥವಾ ಒಂದು ಪಂಗಡವಾಗಲಿ ಸರಿ ತಪ್ಪುಗಳನ್ನೂ ನಿರ್ಧರಿಸಲು ಸಾಧ್ಯವಿಲ್ಲ ! ಹಾಗಂತ ಕೇವಲ ಅವರ ನಿಲುವುಗಳಿಂದಾಗಿಯೋ ಅಥವಾ ಅವರುಗಳ ಸೈದ್ಧಾಂತಿಕ ವೈಚಾರಿಕತೆಯ ಭಿನ್ನಾಭಿಪ್ರಾಯಗಳಿಂದಲೋ ವಿನಾಕಾರಣ ಅವರನ್ನ ದ್ವೇಷಿಸುವುದಾಗಲೀ , ಹೀಯಾಳಿಸುವುದಾಗಲೀ ಎಷ್ಟು ಸರಿ??! ಅವರವರ ನಿಲುವುಗಳು ಅವರವ ವೈಚಾರಿಕತೆ ಅವರವರ ಭಾವನೆಗಳು ಅವರಿಗೆ ಬಿಟ್ಟಿದ್ದು ಆದರೆ ಅವರ ಕಲೆ ಪ್ರತಿಭೆ ಹಾಗೂ ಒಳ್ಳೆಯವು ಅನಿಸುವ ಪ್ರತಿ ನಡತೆಗಳು ನಮಗೆ ಆಶಾ ಕಿರಣಗಳಲ್ಲವೇ ??

ಕನ್ನಡ ಚಿತ್ರರಂಗಕ್ಕೆ ೫ ರಾಷ್ಟೀಯ ಪ್ರಶಸ್ತಿ ಬಂದಿರುವುದು ಹೆಮ್ಮೆಯ ವಿಷಯ ! ಮಂಸೋರೆ ಆಗಲೀ , ಶ್ರುತಿ ಹರಿಹರನ್ ಆಗಲಿ ನಮ್ಮ ವೈಚಾರಿಕ ಭಿನ್ನತೆಗಳ ಮಧ್ಯೆಯೂ ಸಾಧಕರೇ ! ಅವರಿಗೆ ಸಿಗಬೇಕಾದ ಎಲ್ಲ ಯಶಸ್ಸು ಅವರಿಗೆ ಇನ್ನು ಹೆಚ್ಚೇ ಸಿಗುವಂತಾಗಲಿ ಅನ್ನೋ ಶುಭ ಹಾರೈಕೆಗಳೊಂದಿಗೆ ನಾತಿಚರಾಮಿ ನನ್ನ favorite ಚಿತ್ರ !ಚಿತ್ರ ತಂಡದ ಎಲ್ಲರಿಗೂ ಹಾರ್ದಿಕ ಶುಭಾಶಯಗಳು !