ಯಾವ ಮಹಾನುಭಾವ ಹೇಳಿದ್ದಾನೋ ಗೊತ್ತಿಲ್ಲ, ನಮ್ಮ ಉತ್ತರ ಕರ್ನಾಟಕದೆಡೆಗೆ, ತುಂಬಾ popular ಮಾತೊಂದಿದೆ. ''ಧಾರವಾಡ ಮಳಿ ನಂಬ ಬ್ಯಾಡ, ಬೆಳಗಾವಿ ಹುಡುಗಿ ನಂಬ ಬ್ಯಾಡ!'' ನಮ್ಮ ವರಕವಿ ಬೇಂದ್ರೆ ಅವರು ನಮ್ಮ ಧಾರವಾಡದ ಮಳೆಯ ಬಗ್ಗೆ ತುಂಬಾ ಅಧ್ಭುತವಾದ ಕವನಗಳನ್ನ ಬರೆದಿದ್ದಾರೆ, ಅವುಗಳೆಲ್ಲ ನಿಜ ಎಂದು ಕಳೆದು ನಾಲ್ಕು ದಿನಗಳಿಂದ ಅನ್ನಿಸುತ್ತಿದೆ, ನಾನು ಬೇಸಿಗೆಯಲ್ಲಿ ಹುಟ್ಟಿದ ಕಾರಣಕ್ಕೋ ಏನೋ ಮಳೆಗೂ ನಂಗು ಮೊದಲಿನಿಂದ ಅಷ್ಟಕ್ಕಷ್ಟೇ. ನನ್ನೆಲ್ಲ ಸ್ನೇಹಿತೆಯರು, ಮಳೆಯಂದ್ರೆ ಇಷ್ಟ ಇಲ್ವಾ? ಯಾವ ಸೀಮೆಯವಳೇ ನೀನು? ಅಂತ ರೆಗಿಸಿದಾಗ,ಮಳೆಗೆ ನನ್ನ ಕಂಡ್ರೆ ಇಷ್ಟ ಕಣ್ರೆ, ಅಂತ ಹೊಟ್ಟೆ ಉರಿಸುತ್ತಿದ್ದೆ! ಈಗಲೂ ಅಷ್ಟೇ ಬಿಟ್ಟು ಬಿಡದೆ ಧಾರಾಕಾರವಾಗಿ ಸುರಿಯುವ ಮಳೆ ನೋಡಲು ನನಗೆ ಕಷ್ಟವೇ..
ಮನೆಯಿಂದ ಹೊರನಡೆದ ಎರಡನೇ ಹೆಜ್ಜೆಗೆ, ನನ್ನನ್ನು ಅತೀ ಯಾಗಿ ಪ್ರೀತಿಸುವ ಮಳೆರಾಯನೆಡೆಗೆ ಒಂದು ಅಕ್ಕರೆಯ ಮುಗುಳ್ನಗೆ! ನನ್ನ ಒಂದು ನಗುವಿಗಾಗಿ ವರ್ಷವಿಡಿ ಚಡಪಡಿಸಿದ ಹುಡುಗನಂತೆ, ಒಂದೇ ಕ್ಷಣದಲ್ಲಿ ತನ್ನೆಲ್ಲ ಮನದ ಭಾವನೆಗಳನ್ನು, ಹರ್ಷೋದ್ಗಾರಗಳನ್ನು ನನ್ನ ಮೇಲೆ ಚಿಮ್ಮಿಸಿ ಆನಂದಿಸುವ ಮಳೆರಾಯನಿಗಿಂತ ಇನ್ನೊಬ್ಬ ಗೆಳೆಯ ಬೇಕೇ?
ಇದೆಲ್ಲ ಕೇವಲ ನನ್ನ ಕಲ್ಪನೆಯೂ, ಅಥವಾ ಭ್ರಮೆಯೋ ನನಗಂತೂ ಕಳೆದ ನಾಲ್ಕು ದಿನಗಳಿಂದ ಮಳೆಯೊಂದಿಗೆ ವಿಪರೀತ ಪ್ರೇಮ! ನಮ್ಮಿಬ್ಬರಲ್ಲಿ ಕೇವಲ ನಾನೊಬ್ಬಳೆ ಮಾತಿನ ಮೂಲಕ ಪ್ರತಿಕ್ರಿಯುಸುತ್ತೇನೆ, ಮಳೆರಾಯನೋ ನಿರ್ಲಿಪ್ತ ಭಾವನೆಯ, ಅತ್ಯಂತ ಸಹನಶೀಲ ಮತ್ತು ಶಾಂತ ಸ್ವಭಾವದ, ಎಲ್ಲವನ್ನು ವರ್ಷಧಾರೆಯ ಮೂಲಕ ವ್ಯಕ್ತ ಪಡಿಸುವ ಅಪರೂಪದ ಹುಡುಗ!ಅವನು ನನ್ನ ಎಷ್ಟು ಪ್ರೀತಿಸುತ್ತನೆಂದರೆ, ನನ್ನ ಅನುಮತಿ ಇಲ್ಲದೆ ಹೋದರೆ ಬರದೆ ಕೇವಲ ಗುಡುಗು ಮತ್ತು ಮಿಂಚಿನ ಮೂಲಕ ನನ್ನ ಪ್ರತಿಕ್ರಿಯೆಗೆ ಕಾಯುತ್ತ ಕುಳಿತಿರುತ್ತಾನೆ.
ಮೊನ್ನೆ ಕಲಾಭವನ್ ಸರ್ಕಲ್ ಇಂದ ನನ್ನ ಸ್ಕೂಟಿ ಕಿವಿ ಹಿಂಡಿ, ಮುಂದೆ ಹೋಗುವಾಗ ಧಬಲ್ಲನೆ ಎದುರಾದ ಸಿಗ್ನಲ್ ಕಂಡು ಗಾಡಿ ನಿಲ್ಲಿಸಿದ ಕೆಲವೇ ಕ್ಷಣಗಳಲ್ಲಿ, ಮಳೆರಾಯ ತನ್ನ ಆರ್ಭಟ ಶುರು ಮಾಡಿದ್ದನ್ನು ಕಂಡು, ಜರ್ಕಿನ್ ಮತ್ತು ಕ್ಯಾಪ್ ಮರೆತು ಬಂದ ನನ್ನನ್ನು ನಾನೇ ಹಳಿದುಕೊಂಡು, ಉಪಾಯ ಮಾಡಿ ಆಕಾಶವನ್ನೇ ನೋಡುತ್ತಾ, ಮನದಲ್ಲೇ ಪ್ಲೀಸ್ ಕಣೋ ನಾನು ಮನೆಗೆ ಹೋಗುವ ವರೆಗೂ ಬರಬೇಡ, ನಿನ್ನ ಪ್ರೀತಿಯ ಹುಡುಗಿಯನ್ನ ಮನೆವರೆಗೂ ಸೇಫ್ ಆಗಿ ತಲುಪಿಸುವುದು ನಿನ್ನ ಜವಾಬ್ದಾರಿ ಅಲ್ವ? ಪ್ಲೀಸ್ ಬರಲ್ಲ ತಾನೆ ಅಂತ ಗೊಣಗುತ್ತಿರುವುದನ್ನು, ನನ್ನ ಪಕ್ಕದ ಬೈಕ್ ಮೇಲೆ ಕುಳಿತ ಸ್ಪುರದ್ರೂಪ ಹುಡುಗ ಅವಕ್ಕಾಗಿ, what's going on? ಅಂದ, nothing serious, speaking to my boy friend Mr Rain! ಅಂದೆ, ಆ ಹುಡುಗನ reaction ಪಡೆಯುವದರೊಳಗಾಗಿ, ಗ್ರೀನ್ ಸಿಗ್ನಲ್ ಬಂತು, ಮತ್ತೆ ನನ್ನ ಸ್ಕೂಟಿಯ ಕಿವಿ ಹಿಂಡಿ ಮನೆಯೆಡೆಗೆ ಹೋಗುವಾಗ ಒಂದೇ ಪ್ರಶ್ನೆ ಮನದಲ್ಲಿ ಕಾಡುತ್ತಿತು ಮಳೆರಾಯ ನನ್ನ ಮಾತು ಕೇಳುತ್ತಾನ? ಕೇಳದೆ ಏನು ಮನೆ ತಲುಪೋ ವರೆಗೂ ಒಂದು ಹನಿಯನ್ನೂ ಸುರಿಸದೇ, ಇರುವದನ್ನು ಕಂಡು ಆಕಾಶವನ್ನು ನೋಡಿ ಸಿಹಿ ಮುತ್ತೊಂದನ್ನ ನನ್ನ ಪ್ರೀತಿಯ ಹುಡುಗನೆಡೆಗೆ ತೇಲಿ ಬಿಟ್ಟೆ. ಮನೆಸೇರಿದ ಎರಡೇ ನಿಮಿಷಕ್ಕೆ ಧಾರಾಕಾರ ಮಳೆ!
ಅಮ್ಮ ಆಫೀಸಿಂದ ಮನೆಗೆ ಬಂದ ತಕ್ಷಣ, ಈವತ್ತು ಸಿಗ್ನಲ್ನಲ್ಲಿ ನಿಂತಾಗ......................................................... ಹಿಂಗಾಯ್ತು. ಅಂತ ವಿವರಿಸಿದಾಗ ಅಮ್ಮ ನನ್ನನ್ನು ಪೆದ್ದಿ ಅನ್ನೋ ಹಾಗೆ ಒಂದು ಹುಸಿ ನಗು ನಕ್ಕಳು. ನಂಗೊತ್ತು ನೀನು ನಂಬೋಲ್ಲ ಅಂತ, ಆಯಿತು ಈಗಲೇ prove ಮಾಡ್ತಿನಂತೆ. ಈಗ ಮಳೆ ಜೋರಾಗಿದೆ ತಾನೇ? ಆಯ್ತು ಈಗ ನಾನು ಹೊರಗೆ ಹೋಗಿ ಆಕಾಶವನ್ನು ನೋಡಿ ನಾನು ಮತ್ತು ಅಮ್ಮ ಪಾರ್ಕ್ ವರೆಗೂ ಹೋಗಿ ಬಾರೋ ತನಕ ನಿಲ್ಲು. ಅಂತ ಕೇಳ್ತೀನಿ ನೋಡು.ಅವಾಗ್ ನೀನೆ ನಂಬ್ತಿ. ಅಮ್ಮ ಕಾಫಿ ಕುಡಿದು ಹೊರಗೆ ಬರುವದರೋಳಗಾಗಿ ನನ್ನ ಪ್ರೀತಿಯ ಹುಡುಗನಿಗೆ ನನ್ನ ವಿನಂತಿ ತಲುಪಿಸಿದ್ದೆ. ಅವನದು ನನ್ನಡೆಗೆ ನಿಜವಾದ ಪ್ರೀತಿಯಮ್ಮ, ನೋಡು ನನ್ನ ಮಾತನ್ನೆಲ್ಲ ಕೇಳುತ್ತಾನೆ, ಎಂದು ಹರಟುತ್ತ ನಡೆದ ಸ್ವಲ್ಪ ಸಮಯದ ನಂತರ, ಪುಟ್ಟ ಮನೆಗೆ ಮೆಂಟಲ್ ಹಾಸ್ಪಿಟಲ್ ತುಂಬಾ ಹತ್ರ ಇರೋದ್ರಿಂದ ನಿನಗೆ ಸೈಡ್ ಎಫ್ಫೆಕ್ಟ್ಸ್ ಆಗ್ತಾ ಇದೆ ಕಣೋ , ಒಂದ್ಸಲ ಹೋಗಿ ಚೆಕ್ ಅಪ್ ಮಾಡಿಸೋಣ, ಮನೆಗೆ ಹೋಗುವ ಮೊದಲು ಆಸ್ಪತ್ರೆಗೆ ಹೋಗೋಣ್ವಾ? !
ಅಮ್ಮ ......ಗುರ್ರ್ರ್ ...ಅನ್ನುವಾಗ ಮತ್ತೆ ನನ್ನ ಪ್ರೀತಿಯ ಹುಡುಗನ ಆರ್ಭಟ ಶುರುವಾಯ್ತು. ಮನೆಗೆ ಹೋಗೋ ವರೆಗೂ ಬರಲ್ಲ ಅಂದೆಲ್ಲ ಈಗ ಏನ್ ಹೇಳ್ತಿಯ? ನನ್ನ ಪ್ರೀತಿಯ ಹುಡುಗ ನನ್ನಷ್ಟೇ ಪ್ರೀತಿಸ್ತಾನೆ, ಅವನ ಅತ್ತೆಯನ್ನಲ್ಲ ! ಅಮ್ಮ ನನ್ನ ಕಿವಿ ಹಿಡಿದು ಏನಂದೆ ಅಂದಾಗ, ಹೌದಮ್ಮ ನೀನು ನನ್ನ ಬೈದ್ರೆ ಅವನಿಗೆ ಕೋಪ ಬರುತ್ತೆ, ಎಲ್ಲಿ ಒಂದು ಮುತ್ತು ಕೊಡು ನೋಡೋಣ ? ಮತ್ತೆ ಮಳೆ ನಿಂತು ಹೋಗುತ್ತೆ ಅಂದೆ. ನಿನಗೇನು ತೆಲೆ ಕೆಟ್ಟಿದೆಯ ? ಪಾರ್ಕ್ನಲ್ಲಿ ಮುತ್ತು ಕೊಡು ಅಂತಿಯ ? ಅಮ್ಮ ನಾನೇನು ಅಪ್ಪನಿಗೆ ಮುತ್ತು ಕೊಡು ಅಂದ್ನ ? ಇಲ್ವಲ್ಲ ನಾಚ್ಕೊಬೇಡ ಬೇಗ ಕೊಡು ಇಲ್ದೆ ಹೋದ್ರೆ ಇಬ್ರೂ ನೆನೆದು ಹೋಗ್ತೇವೆ ಅಮ್ಮ . ಆಯ್ತು ನೋಡೇ ಬಿಡೋಣ ಅಮ್ಮ ನನ್ನ ಕೆನ್ನೆಗೆ ಮುತ್ತಿಡಲು ಮಳೆರಾಯ ಶಾಂತ! ಏನೇ ಕಂದ ಇದು ವಿಸ್ಮಯ? ಎಂದು ಅಮ್ಮ ಕಣ್ಣು ಬಿಟ್ಟು ನೋಡ್ತಾ ಕುಳಿತು ಬಿಟ್ಲು ! ನೋಡು ನಿನಗೆ ಮಳೆರಾಯನಿಗಿಂತ ಒಳ್ಳೆ ಅಳಿಯ ಬೆಕ? ಈವತ್ತೇ ಅಪ್ಪನೊಟ್ಟಿಗೆ ಮಾತಾಡಿ ನನಗು ಮಳೆರಾಯನಿಗು ಮದ್ವೆ ಫಿಕ್ಸ್ ಮಾಡು. ''ತುಂತುರು ಅಲ್ಲಿ ನೀರ ಹಾಡು, ಕಂಪನ ಇಲ್ಲಿ ಪ್ರೀತಿ ಹಾಡು, ಹಗಲಿರಲಿ ಇರುಳಿರಲಿ ನೀನಿರದೆ ನಾ ಹೇಗಿರಲಿ?.......'' ಪ್ರೇಮ ಕವಿ ಕಲ್ಯಾಣರ ಪತ್ನಿಯೆಡೆಗೆ, ಸಣ್ಣ ಮರುಕ!