ಸುಂದರ ಬೆಳದಿಂಗಳು... ಜುಮ್ಮನೆ ಸೋಕಿದ ತಂಗಾಳಿ... ಸುಂದರ ಕನ್ನಿಕೆಯರು.. ಈಜು
ಕೊಳ... ಬಿಳಿ ಹಂಸಗಳು... ನವಿಲು ಗರಿ ಹಿಡಿದು ಸುತ್ತ ನಿಂತಿರುವ ದಾಸಿಯರು...ರಾಜ
ಮರ್ಯಾದೆಯಲ್ಲಿ ಕುಳಿತ ನಾನು ಇದೆಲ್ಲಿ ಅಂತ ಯೋಚಿಸುತ್ತಿರುವಾಗ, ಅದ್ಯಾರೋ ರಾಗವಾಗಿ
"ತಂಪು ತಂಗಾಳಿಯು ತಿಲ್ಲಾನ ಹಾಡಿತ್ತು ಕೇಳೋಕೆ ನಾ ಹೋದರೆ ..." ಎಂಬ
ಅಮೃತವರ್ಷಿಣಿಯ ಸಾಲುಗಳು ಕಿವಿಗಳನ್ನು ತೂರಿ ಬರುತ್ತಿತ್ತು... ಅದ್ಯಾವುದೋ ಲೋಕ
ಅಲ್ಲಿ ನಾನು... ಹಾಂ.. ನಾನೊಬ್ಬಳೆ ! ಪರಿಚಯವಿಲ್ಲದ ಹಲವರ ನಡುವೆ , ಚೂರು ಔಟ್
ಡೇಟೆಡ್ ಶೈಲಿಯಲ್ಲಿ ಇಷ್ಟೆಲ್ಲಾ ಸುಖದಲ್ಲಿ ತೇಲಾಡುತ್ತಿರುವಾಗ.... ಒಮ್ಮೆಲೇ ಚುರು
ಚುರು ಎನಿಸುವ ಬಿಸಿಲು ಮೈತಾಕಿದಂತಾಗಿ ಎದ್ದು ನೋಡಿದರೆ , ಆಹಾ! ಅಂತ:ಪುರದ ರಾಜಕುಮಾರಿಯಂತೆ ಕನಸು ಕಾಣುವಾಗ... ಕಿಟಕಿಯಿಂದ ಇಣುಕಿ ಒಳಬಂದ ಸೂರ್ಯನ ಕಿರಣಗಳ ಮೇಲೂ
ಅದನ್ನು ಬರಲನುವು ಮಾಡಿಕೊಟ್ಟ ಕಿಟಕಿಯಮೇಲೂ ಮುನಿಸಿಕೊಂಡು ಆಕಳಿಸುತ್ತಾ ಎದ್ದು
ನೋಡಿದರೆ ಸಮಯ ೮ ಗಂಟೆ ...ಮಿಂಚಿನ ವೇಗದಲ್ಲಿ ಕಾಲೇಜ್ ಹೋಗಲು ಸಿದ್ಧಳಾದೆ, ಕಿಟಕಿ
ಎಂಬ ಮಹಾನ್ ಮಿತ್ರನೆಡೆಗೆ ಮುಗುಳ್ನಗು ಬೀರಿ ಧನ್ಯವಾದ ಹೇಳಿ ಹೊರಟೆ.
ಬೆಳ್ಳಂ ಬೆಳಗ್ಗೆಯ ಸೂರ್ಯನ ರಶ್ಮಿ ನಮ್ಮನು
ಚುಂಬಿಸುವದರಿಂದ ಹಿಡಿದು , ಮುಸ್ಸಂಜೆಯ ತಂಗಾಳಿ ಸ್ಪರ್ಶದ ನವಿರಾದ ಅನುಭವಕ್ಕೆಲ್ಲ
ಕಿಟಕಿ ಮೂಕ ಪ್ರೇಕ್ಷಕ, ಅದು ನಮ್ಮಿಂದ ಬಯಸುವದಾದರು ಏನು? ನಾವುಗಳು ಅದಕ್ಕೆ
ಕೊಡಬಹುದಾದರೂ ಏನು ? ಇದೆಲ್ಲವುಗಳನ್ನು ಮೀರಿ ಅದು ನಮ್ಮ ಮನದಾಳದ, ಅನೇಕ ಗೊಂದಲಗಳಿಗೆ
ಆಪ್ತ ಸಲಹೆಗಾರ. ಎಷ್ಟೇ ಆತಂಕ, ದ್ವಂದ್ವಗಳಿದ್ದರೂ, ಕಿಟಕಿಯ ಮುಂದೆ ಅವುಗಳೆಲ್ಲ
ಗೌಣ! ಇಂತಿಪ್ಪ ಈ ಕಿಟಕಿ ಎಂಬ ಪುಟ್ಟ ಭಾಗ, ನಮ್ಮ ಕಲ್ಪನಾ ಲಹರಿಯನ್ನು ಮೀರಿಸುವಷ್ಟು
ದೈತ್ಯ ಶಕ್ತಿ ! ನಮಗೆ ಅರಿವಿದ್ದೋ , ಇಲ್ಲದೆಯೋ ಅಸಂಖ್ಯಾತ ಬಾರಿ ನಾವುಗಳೆಲ್ಲ
ಕಿಟಕಿಯ ತೆಕ್ಕೆಯನ್ನು ಒಂದಿಲ್ಲೊಂದು ರೀತಿಯಲ್ಲಿ ಅವಲಂಬಿಸಿರುರುತ್ತೇವೆ. ಕೆಲುವು
ಬಾರಿ ಮರೆತು ಹೋಗಿದಂತಾಗಿ , ಮತ್ತೆ ನೆನಪಾಗುವ ಹಳೇ ಗೆಳೆಯನಂತೆ, ಬಿಗಿ ಅಪ್ಪಿಗೆಯೆ ಮುದ ನೀಡುವಂತೆ ಭಾಸವಾಗುವ ನಿಮ್ಮ ಮನದ ಕಿಟಕಿಗಳನ್ನೊಮ್ಮೆ ಇಣುಕಿ ನೋಡಿ , ನಿಮ್ಮ ನೆನಪಿನಾಳದ ಸಾಗರದಲ್ಲಿ ಮನವನೊಮ್ಮೆ ಹಾಗೆ ತೇಲಿ ಬಿಡಿ, ಹೊಸ ಕನಸುಗಳೊಂದಿಗೆ ಜೀವನೋತ್ಸಾಹದೊಂದಿಗೆ ನಿಮ್ಮ ದಿನ ಶುರುವಾಗಲಿ.
ಬೆಳಗ್ಗೆ ನನಗೆ ಅಷ್ಟೊಂದು
ಸಹಾಯ ಮಾಡಿದ್ದಕ್ಕೋ ಏನೋ ತಲೆಯಲ್ಲಿ ಕಿಟಕಿಯದ್ದೆ ಯೋಚನಾ ಲಹರಿ ಹರಿದಾಡುತ್ತಿತು,
ಕ್ಲಾಸ್ನಲ್ಲಿ ಬಂದೆನೋ ಕುಳಿತೆ , ಪಾಠ ಕೇಳಲು ಕಿಟಕಿ ಬಿಡಲಿಲ್ಲ, ಸರಿ ತಲೆ
ಹೊಕ್ಕಿದೆಯಲ್ಲಾ ಎಂದು ಕಿಟಕಿಯನ್ನೇ ದಿಟ್ಟಿಸುತ್ತಾ ಕುಳಿತೆ. ನಮ್ಮ ಮೇಷ್ಟ್ರು
ಅದೇನೋ ಗಾದೆ ಹೇಳುತ್ತಿದ್ದರು , ''Let the doors of knowledge open'' ಅಂತ
.ಅರೇ ಇದೆಂಥ ಮೋಸ ಬರೀ ಬಾಗಿಲಿಗೇ ಯಾಕೆ ಅಷ್ಟು ಪ್ರಾಮುಖ್ಯತೆ ? ನಾನು
ಮನಸ್ಸಿನಲ್ಲೇ ''Let the windows of happiness be always open'' ಅಂದುಕೊಂಡು
ಸುಮ್ಮನಾದೆ. ಒಂದು ಮನೆ ಅಥವಾ ಬಂಗಲೆ ಅದೆಷ್ಟೇ ಭವ್ಯವಾಗಿ, ಸುಂದರವಾಗಿ
ಕಟ್ಟಿಸಿದರೂ , ಕಳೆ ಅಂತ ಬರುವುದು ಕಿಟಕಿಯಿಂದಲೇ ಅಲ್ಲವೇ ? ಕಿಟಕಿ ನಮ್ಮ ಮನೆಯ ಮನದ
ಅವಿಭಾಜ್ಯ ಅಂಗವೇ ಆಗಿ ಹೋಗಿದೆ.
ಬರಿಗಣ್ಣಿನಲ್ಲಿ ನೋಡಿದರೆ ಕಿಟಕಿಯು ಗಾಜು ,
ಕಟ್ಟಿಗೆ , ಕಬ್ಬಿಣದ ಸಲಾಕೆಯಿಂದ ಮಾಡಿದ ಗಂಭೀರ ಸೈನಿಕನಂತೆ ಗೋಚರಿಸುತ್ತದೆ, ನಮಗೆ
ಅರಿವಿಲ್ಲದೆಯೇ ನಮ್ಮ ಬಾಲ್ಯದಿಂದ ಶುರುವಾದ ಕಿಟಕಿಯ ಸ್ನೇಹ ವೃದ್ಧಾಪ್ಯದ
ದಿನದವರೆಗೂ ನಮ್ಮೊಂದಿಗೆ ಸಂಬಂಧ ಬೆಳೆಸಿಕೊಂಡಿರುತ್ತದೆ.. ಕಿಟಕಿಗೂ ಕನಸಿಗೂ ನಂಟಿದೆ.
ನನ್ನೆಲ್ಲಾ ಮಹತ್ವಾಕಾಂಕ್ಷೆಯ ಕನಸುಗಳು ಚಿಗುರಿದ್ದೆ ಕಿಟಕಿಯ ಮುಂದೆ .
ಕಿಟಕಿಯಿಂದಾಚೆ ಸುಂದರ ಪ್ರಪಂಚ , ವಿಪರೀತ ಸಂಚಲನ ಮೂಡಿಸುವ ವಾಸ್ತವ ಸಾಮಾಜಿಕ ಬದುಕು,
ಕಿಟಕಿಯೊಳಗೆ ನಮ್ಮದೇ ಎನ್ನುವ ಖಾಸಗಿ ಬದುಕು.
ನನ್ನ ಹದಿ ಹರೆಯದ ವಯಸ್ಸಿನಲ್ಲಿ ಕಿಟಕಿ
ಅದರಲ್ಲಿಯೂ ನನ್ನ ಕೋಣೆಯ ಕಿಟಕಿ ನನ್ನ excitement ನ ಒಂದು ಭಾಗವೇ ಆಗಿಹೋಗಿತ್ತು
ಅದೇನೋ ಗೊತ್ತಿಲ್ಲ , ಕಿಟಕಿಯಿಂದಾಚೆ ನನ್ನ ಕನಸಿನ ಹುಡುಗ ಸದಾ ನನ್ನ
ಗಮನಿಸುತ್ತಿರಬಹುದೇನೋ ಎಂಬ ಹುಚ್ಚು ಭ್ರಮೆ, ಸುಮ್ಮನೆ ಕಿಟಕಿಯ ಮುಂದೆ ನಾಚಿ ಕುಳಿತು
ಸಂಭ್ರಮಿಸಿದ ದಿನಗಳೆಷ್ಟೋ, ಅಲ್ಲಿ ಯಾರು ಇಲ್ಲವೆಂಬುದು ಗೊತ್ತಿದ್ದೂ , ಅದೆಂತಹ
ಹುಡುಕಾಟವೋ ನಾ ಕಾಣೆ, ಇವತ್ತಿಗೂ ಕಿಟಕಿಯಾಚೆ ಯಾರೋ ಬಂದು ನಿಂತ ಭಾವ ಆಗಾಗ ಬಂದು
ಹೋಗುತ್ತಿರುತ್ತದೆ.
ಕಣ್ಣಂಚಿನ ಭಾವನೆಗಳನ್ನು ಹರಿದು ಬಿಡಲು ಒಳ್ಳೆ
ಮಾಧ್ಯಮ ಈ ಕಿಟಕಿ. ಮೈತುಂಬ ಕಿಟಕಿ ಹೊದ್ದ ಮನೆಗೆ ಕಿಟಕಿ ಎಂದಿಗೂ ಭಾರವಲ್ಲ ,
ನಮ್ಮೆಲ್ಲ ಯೋಚನೆ, ಭಾವನೆ, ಕನಸು , ಸಿಟ್ಟು , ಹತಾಶೆ ,ದುಃಖ, ಸಂತಸಗಳನ್ನು ಯಾವುದೇ
ತಾರತಮ್ಯವಿಲ್ಲದೆ , ನಾವಿದ್ದ ರೀತಿಯಲ್ಲಿ ನಮ್ಮನ್ನು ಸ್ವೀಕರಿಸುವ ಅಪರೂಪದ
ಸ್ನೇಹಿತನಲ್ಲವೇ ಅದು? ಅದೆಷ್ಟೋ ದುರ್ಭರ ಅನಿಸುವ ಕ್ಷಣಗಳಲ್ಲಿ ಸುಮ್ಮನೆ ಕಿಟಕಿಯನ್ನು
ಬಿಗಿಯಾಗಿ ಹಿಡಿದು ಗಳ ಗಳ ಅತ್ತು ನಿರಮ್ಮಳಾಗುವ ಭಾವನೆ ಯನ್ನು ಮತ್ಯಾರು ಕೊಡಲು
ಸಾಧ್ಯವಿಲ್ಲ. ಕಿಟಕಿಯ ಬಾಗಿಲನ್ನು ತೆಗೆದು ನೋಡಿದರೆ ಮತ್ತದೇ ನವೋಲ್ಲಾಸ, ಬಣ್ಣ ಬಣ್ಣದ
ಕನಸುಗಳು ತುಂಬಿದ ಹೊಸ ಲೋಕ. ಅತ್ತರೆ ಸಮಾಧಾನ ಮಾಡುವವರು ಇದ್ದೆ ಇರುತ್ತಾರೆ , ಆ
ದುಃಖವನ್ನು ತಕ್ಷಣಕ್ಕೆ ಮರೆಸಿ ಹೊಸ ದಿಗಂತಕ್ಕೆ ಕೈ ಚಾಚುವಂತೆ ಪ್ರೇರೇಪಿಸುವ ಶಕ್ತಿ
ಕೊಡಲು ಕಿಟಕಿ ಎಂಬ ಮಹಾನ್ ಮಾಂತ್ರಿಕನಿಗಷ್ಟೇ ಸಾಧ್ಯ !