Total Pageviews

Tuesday, April 30, 2013

ಓಟು... ನೋಟು ... ಬಿಡಿಸಲಾಗದ ಒಗಟು !


         

         ಮನಸ್ಸಿನಾಳದಲ್ಲಿ  ತುಂಬಾ ಗೊಂದಲಗಳು , ನನ್ನದೆ  ಆದ   ಪೂರ್ವ ನಿರ್ಧರಿತ ಸೊ ಕಾಲ್ಡ್ ಸ್ಟ್ಯಾಂಡರ್ಡ್ ವಿಚಾರಧಾರೆಗಳು  ತಮ್ಮೊಳಗೆ ತಾವು ವ್ಯವಸ್ಥಿತವಾಗಿ  ಘರ್ಷಣೆಗೊಳಗಾದವು  . ಬರೆಯಲು  ಸರಕಿಗೇನೂ  ಕಡಿಮೆ ಇಲ್ಲ . ಎಲ್ಲಿಂದ ಬರೆಯೋದು , ಎಲ್ಲಿ ಮುಗಿಸೋದು ? ಯಾವ  ವಿಷಯ ಎತ್ತಿ ಕೊಳ್ಳೋದು  ಎಂದು ಒದ್ದಾಟ ಶುರುವಾಗಿದೆ .

ನನ್ನಷ್ಟಕ್ಕೆ ನಾನು ಮಹಾನ್ ದೇಶ ಪ್ರೇಮಿ ಎಂದು ಕಳೆದ ೨೦ ವರ್ಷಗಳಿಂದ ನನ್ನ ಭ್ರಮಾ ಲೋಕದಲ್ಲಿದ್ದೆ.  ಹದಿನೆಂಟನೆ ವಯಸ್ಸಿಗೆ  ಮತ ಚಲಾಯಿಸಲು ಅಧಿಕಾರವಿದೆ ಎಂದು ಹೈ ಸ್ಕೂಲ್ ದಿನಗಳಲ್ಲಿ  ಓದಿದ ನೆನಪು. ನನಗೆ 18 ದಾಟಿ ಆಗಲೇ ಐದು ವರ್ಷ ಕಳೆದರೂ ನನಗೆ ಒಮ್ಮೆಯೂ ಮತ ಚಲಾಯಿಸಲು ಸಾಧ್ಯವೇ ಆಗಲಿಲ್ಲ. ಬರೋಬ್ಬರಿ ಆರು ವರ್ಷದ ಬಳಿಕ ನನಗೆ voter ID ಸಿಕ್ಕಿರುವುದು  ಪರಮ ಅದೃಷ್ಟವೇ ಸರಿ . ಪ್ರತೀ ವರ್ಷವೂ ಏನಾದರೂ ತಪ್ಪು ಮಾಹಿತಿ ಎಂಟ್ರಿ ಆಗಿದ್ದರಿಂದ ಕೆಲವೊಮ್ಮೆ ಗಣತಿಗೆ ಬಂದಾಗ ನನ್ನ ಹೆಸರನ್ನೇ ನೊಂದಾಯಿಸಿ ಕೊಳ್ಳದೆ ಹೋದ್ದರಿಂದ ಇಷ್ಟೆಲ್ಲಾ ಗೊಂದಲಗಳು. ಅದು ಅಷ್ಟು  ಕಷ್ಟದ ಕೆಲಸವೂ ಅಲ್ಲ. ಯಾರಾದರೊಬ್ಬ ಏಜೆಂಟ್ ನ  ಕೈ ಬಿಸಿ  ಮಾಡಿದ್ದರೆ 15 ದಿವಸದಲ್ಲೇ ಮತದಾರನ ಚೀಟಿ ಲಂಚ  ಕೊಟ್ಟವನ ಕೈ ಸೇರಿರುತ್ತದೆ .  ಅದಿರಲಿ  ಬಿಡಿ  ಲಂಚ  ಕೊಟ್ಟರೂ  ಕೈಗೆ ಸಿಗದೇ ಓಡುವ  ಏಜೆಂಟ್ ರನ್ನು ಇಟ್ಟುಕೊಂಡು ಮತ ಚಲಾಯಿಸಲು  ಲಂಚ  ಕೊಟ್ಟು, ನಮ್ಮನ್ನಾಳುವವರು ಲಂಚಕೊರರಾಗಿರಬಾರದು  ಎಂದು  ಪುಂಖಾನು ಪುಂಖವಾಗಿ  ಭಾಷಣ ಮಾಡುತ್ತೇವೆ !  ಇನ್ನು  ನನ್ನಂತೆ  ಸ್ವಘೋಷಿತ ದೇಶಭಕ್ತನದ್ದು '' ಅರೇ  ನನ್ನದೊಂದು ವೋಟಿನಿಂದ  ದೇಶ ಉದ್ಧಾರ ಆಗುತ್ತಾ ?" ಎನ್ನುವ ಉಡಾಫೆ  ಮಾತು. ಹೀಗೆ ಪ್ರತಿಯೊಬ್ಬ ನಾಗರಿಕನು ನನ್ನದೊಂದು ನನ್ನದೊಂದು ಎನ್ನುತ್ತಲ್ಲೇ  ಒಂದು   ಹತ್ತಾಗಿ, ಹತ್ತು ನೂರಾಗಿ,  ನೂರು  ಸಾವಿರಾಗಿ , ಸಾವಿರ ಲಕ್ಷವಾಗಿ, ನಮ್ಮ  ರಾಜ್ಯವನ್ನೇ  ತೆಗೆದುಕೊಳ್ಳುವುದಾದರೆ 18 ರಿಂದ ಮೇಲ್ಪಟ್ಟ ಹಾಗೂ  25 ದಾಟಿರದ  ವಯೋಮಾನದ  ಲಕ್ಷಾಂತರ  ವಿದ್ಯಾರ್ಥಿಗಳು ಮತ ಚಲಾಯಿಸುವುದೇ  ಇಲ್ಲ.  ನಾನು  ಎಂಜಿನಿಯರಿಂಗ್  ಓದುವಾಗ ಇಡೀ  ಕಾಲೇಜ್ ನಲ್ಲೆ  ಇಬ್ಬರೋ ಮೂವರೋ  ಮಾತ್ರ ವೋಟು ಮಾಡಿರುತ್ತಿದ್ದರು . M tech  ನಲ್ಲಂತೂ ಯಾರೂ ವೋಟ್  ಮಾಡಿದ ಸುದ್ದಿನೇ  ಇಲ್ಲ .


ಹೌದು  ವೋಟ್  ಮಾಡೋಣ ...  ಯಾರಿಗೆ?  ವೋಟ್  ಮಾಡಿದರೂ  ನಮ್ಮನ್ನು  , ನಮ್ಮ ದೇಶದ ಸಂಪತ್ತನ್ನು  ಇಡೀ  ಇಡೀಯಾಗಿ  ಲೂಟಿ  ಮಾಡುವುದನ್ನ  ಕಣ್ಣಾರೆ ನೋಡಿ  ಸಂಭ್ರಮಿಸಬೇಕೆ ? ನೀವು ಯಾರನ್ನೇ ಗೆಲ್ಲಿಸಿ ಯಾರನ್ನೇ  ಸೋಲಿಸಿ ನಮ್ಮ ದೇಶದ ಪರಿಸ್ಥಿತಿಯಲ್ಲಂತೂ ಸುಧಾರಣೆ  ದು:ಸಾಧ್ಯ. ಇಷ್ಟಾಗಿಯೂ  ಯಾವ ಸಂಭ್ರಮಕ್ಕೆ   ವೋಟ್  ಮಾಡಬೇಕು .? ಕೇವಲ ರಾಜಕಾರಣಿ  ಭ್ರಷ್ಟನಲ್ಲ  ನಮ್ಮ ದೇಶದ  ಪ್ರತಿಯೊಬ್ಬನೂ  ಭ್ರಷ್ಟನೇ  ಆಗಿ ಹೋಗಿರುವಾಗ , ಭ್ರಷ್ಟ  ಭ್ರಷ್ಟನನ್ನೇ  ಆರಿಸದೇ  ಬೇರೆ ದಾರಿ ಇಲ್ಲ . ನಮಗೆ ಎರಡು   ಮೂರೂ  ರುಪಾಯಿಯ ಭ್ರಷ್ಟತೆ , ನೂರು ಇನ್ನೂರರ  ಭ್ರಷ್ಟತೆ , ಐದು  ಸಾವಿರದ ಭ್ರಷ್ಟತೆ  ಭ್ರಷ್ಟತೆಯೇ ಅಲ್ಲ , ಯಾಕೆ ಹೇಳಿ , ನೂರಾರು ಸಾವಿರಾರು  ಕೋಟಿಯ  ಲೆಕ್ಕದಲ್ಲಿ  ಭ್ರಷ್ಟಾಚಾರ  ನಡೆಯುತ್ತಿರುವಾಗ  ನಮ್ಮದೇನು ಮಹಾ ? ಇದು ಭವ್ಯ  ಭಾರತದ ಪ್ರತೀ ಪ್ರಜೆಯ ಮನಸ್ಥಿತಿ . ಇದರಿಂದ  ನಾನೂ  ಹೊರತಾಗಿಲ್ಲ . ನಮ್  ಕಾಲೇಜ್ ಬಸ್ ಸ್ಟಾಪ್  ನಿಂದ  ಕದಿರೇನಹಳ್ಳಿ ಬಸ್ ಸ್ಟಾಪ್ ಗೆ ಹೋಗಲು ೫ ರೂಪಾಯಿ ಟಿಕೆಟ್ ತೆಗೆದುಕೊಳ್ಳಬೇಕು . ೫ ರುಪಾಯೀ  ಕೊಟ್ಟ ತಕ್ಷಣ ನೆಕ್ಸ್ಟ್  ಸ್ಟಾಪ್ ಏನಮ್ಮ  ಎಂದ ಕಂಡಕ್ಟರ್ ೫ ರುಪಾಯಿಗಳನ್ನು ತೆಗೆದುಕೊಂಡ  ತಕ್ಷಣವೆ ಎರೆಡು  ರುಪಾಯಿಯನ್ನು  ವಾಪಸ್ ಕೊಡುತ್ತಾನೆ ಟಿಕೆಟ್ ಕೊಡದೆಯೇ ! ಅಯ್ಯೋ  ಆ ವಯ್ಯನ್ನ ಯಾರೂ ಕೇಳೋರು ಅಂತ ನೆಕ್ಸ್ಟ್ ಸ್ಟಾಪ್ ಬಂದ್ ತಕ್ಷಣ ಇಳಿದು ಹೊರ ನಡೆಯುತ್ತೇವೆ . ದಿನಕ್ಕೆ ಸುಮಾರು ಜನರಿಗೆ  ಟಿಕೆಟ್ ನೀಡದೆ ಅನ್ಯಾಯವಾಗಿ  ಅವರನ್ನು ಭ್ರಷ್ಟರನ್ನಾಗಿಸಿ ತನ್ನ ಕಿಸೆ ತುಂಬಿಸಿಕೊಳ್ಳುವ ಸಾವಿರಾರು ಕಂಡಕ್ಟರ್ ಗಳು  ನಮ್ಮ ನಿಮ್ಮೆಲ್ಲರಿಗೂ  ಚಿರ ಪರಿಚಿತ. ಆದರೂ ನಾವು  ಭಾರತೀಯರು  ಗಾಂಧಿ ವಾದಿಗಳಲ್ಲವೇ  ಸರ್ವ ಕೃತ್ಯ  ಸಹಿಷ್ಣುಗಳು  ಮತ್ತು  ಮೂಕ ವೀಕ್ಷಕರು !


ರಸ್ತೆ ಅಪಘಾತದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುವ  ವ್ಯಕ್ತಿಯನ್ನು  ಆಸ್ಪತ್ರೆಗೆ ಸೇರಿಸಲು ಅವನೇನು ನಮ್ಮ ಬಂಧು ಬಳಗವೆ ? ಅಥವಾ ಸ್ನೇಹಿತನೆ ?  ಅವನ ಕರ್ಮ  ನಾವೇನು ಮಾಡೋಣ ಎನ್ನುವ  ರೀತಿಯಲ್ಲಿ ರಕ್ತದ  ಮಡುವಿನಲ್ಲಿ ಬಿದ್ದು ಹೊರಳಾಡುವನನ್ನು ನೋಡಿಯೂ  ನೋಡದಂತೆ ಹೋಗಿ , ಟಿವಿ ಚಾನೆಲ್ ಗೆ ಕಾಲ್  ಮಾಡಿ  ಮನುಶ್ಯತ್ವವೇ ಇಲ್ಲ  ಸರ್  ಅಂತ  ಭಾಷಣ ಕೊಡುವವರೂ  ನಾವೇ ! ಥೂ!  ಛಿ!  ನಾಚಿಕೆ  ಬರಬೇಕು  ನಮ್ಮ  ಜನಗಳಿಗೆ  ಎಂದು ಲಬೋ ಲಬೋ  ಬಾಯಿ ಬಡೆದು ಕೊಳ್ಳುವ  ಮಾಧ್ಯಮಗಳು, ನೇರ- ದಿಟ್ಟ- ನಿರಂತರ  ಎಂದು, ಉತ್ತಮ  ಸಮಾಜಕ್ಕಾಗಿ ಹಗಲಿರುಳು ಅವಿರತ  ಪ್ರಯತ್ನಿಸುತ್ತಿರುವ  ಮಾಧ್ಯಮದ  ಮಂದಿಗೆ , VTU ನ ಕುಲಪತಿಯ  ಹಗರಣಗಳು  ನಗಣ್ಯ , ಆದ್ರೆ  ಪೂಜೆ ಮಾಡಲು ದಕ್ಷಿಣೆ  ತೆಗೆದು ಕೊಂಡ ಭಟ್ಟರು ದೈವ ಭ್ರಷ್ಟರು !  ಆ ಅಭ್ಯರ್ತಿ ಬಳಿ ಅಷ್ಟು  ಕೋಟಿ ಆಸ್ತಿ ಇದೆ  ಇಷ್ಟು ಲಕ್ಷ ಜಪ್ತಿ ಮಾಡಲಾಯಿತು  ಎಂದು ಬೊಬ್ಬೆ ಇಡುವ ನಿರೂಪಕರಿಗೆ ತಮ್ಮ ಮಾಲಿಕರು ಕೋಟಿ ಕೋಟಿ  ಸುರಿದು MP ಸೀಟು  ಖರೀದಿಸಿದ್ದು  ಗೊತ್ತೇ ಇರುವುದಿಲ್ಲ ಪಾಪ. ಒಂದು ಪಕ್ಷವನ್ನು  ಮತ್ತು ಅದರ ಅಭ್ಯರ್ತಿಯನ್ನು ಟಾರ್ಗೆಟ್ ಮಾಡಿಟ್ಟುಕೊಂಡು  ಹಗಲಿರುಳು  ಅವರನ್ನು ನಿಂದಿಸಿ ಮಾರನೇ ದಿನ ಅವರ ಪರ ಜಾಹಿರಾತು  ನೀಡಿ ಅವರನ್ನು ಗೆಲ್ಲಿಸಿ ಎಂದು ಹೇಳುವ  ಈ ಮೂರ್ಖರು ನೇರವಾಗಿ ದಿಟ್ಟವಾಗಿ ನಿರಂತರವಾಗಿ ಮಣ್ಣು ತಿನ್ನುವ ಕೆಲಸವನ್ನಷ್ಟೇ ಮಾಡುತ್ತಿವೆ  ಅಷ್ಟೇ , ಇನ್ನೂ  ಇಂಥ ಅವಿವೆಕಿಗಳಿಂದ ಉತ್ತಮ ಸಮಾಜದ ನಿರೀಕ್ಷೆ ಬೇರೆ ಕೇಡು ! ನೀತಿ  ಸಂಹಿತೆಯನ್ನೇ ಮರೆತಿರುವ ಮಾಧ್ಯಮಗಳು  ರಾಜಕಾರಣಿಗಳಿಗೆ ಕಿವಿಮಾತು  ಹೇಳಿ ಕೊಡುತ್ತೇವೆ , ಎಂದು ಹೇಳಿಕೊಳ್ಳುವುದುಕ್ಕಿಂತ  ಹಾಸ್ಯಾಸ್ಪದ  ವಿಷಯ ಇನ್ನೊಂದು ಇಲ್ಲ !


ಒಂದು  ಉತ್ತಮ  ಸಮಾಜವನ್ನು ಕೇವಲ ಒಂದು ಮಾಧ್ಯಮ ಕೊಡುವ ಹಾಗಿದ್ದರೆ ನಮ್ಮ ದೇಶ ಎಂದೋ ರಾಮರಾಜ್ಯ ವಾಗಿ  ಬಿಡುತ್ತಿತ್ತು .  ಭ್ರಷ್ಟತೆಗೆ  ನಾವೆಲ್ಲರೂ  ಪ್ರತ್ಯಕ್ಷವಾಗಿ  ಪರೋಕ್ಷವಾಗಿ  ಕಾರಣೀಭೋತರಾಗಿದ್ದೆವೆ.  ಯಾಕೆಂದರೆ  ಮನೆಯ  ಕಸ ತೆಗೆಯುವುದು ನಮಗೆ ಮೊದಲಿನಿಂದ ಅಭ್ಯಾಸವಿಲ್ಲದ ಕೆಲಸ.  ಇದೇ  ನಮಗೂ ವಿದೇಶಿಯರಿಗೂ ಇರುವ ವ್ಯತ್ಯಾಸ .  ನಮ್ಮ ಮನೆಯ ಕಸವೇ ನಮಗೆ  ಅಸಹ್ಯ ಹುಟ್ಟಿಸುವುದಾದರೆ ನಮ್ಮ  ನಗರದ, ನಮ್ಮ ರಸ್ತೆಯ , ನಮ್ಮ  ದೇಶದ ಕಸವನ್ನು ಎಂದು   ತೆಗೆದೆವು?


WTC  ದಾಳಿಯ ನಂತರ  ಬಾಸ್ಟನ್ ನಲ್ಲಿ ಇನ್ನೊಂದು  ದಾಳಿ ನಡೆಯಲು ಬರೋಬ್ಬರಿ 12 ವರ್ಷಗಳೇ  ಬೆಕಾದವು. ಅದು  ಬ್ಲಾಸ್ಟ್  ಆದ ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ  ಯಾರು ಮಾಡಿದ್ದು  ಎಂದು  ತಿಳಿದು,  ಮುಂದಿನ  12 ಗಂಟೆಗಳಲ್ಲಿ  ಘಟನೆಯ ರೂವಾರಿಯ  ಹೆಣ  ಬಿದ್ದಿತ್ತು , ಇನ್ನೊಬ್ಬನನ್ನ ಹಿಡಿಯಲು ನಮ್ಮ ಪೊಲೀಸರಂತೆ ವರ್ಷಗಳನ್ನು  ತೆಗೆದು ಕೊಳ್ಳಲಿಲ್ಲ .  ಇಂಥ ಅನೇಕ ಸ್ಫೋಟಗಳು  ಗಲ್ಲಿ ಗಲ್ಲಿ ಗಳಲ್ಲಿ  ಪ್ರತಿ ವಾರ ನಮ್ಮ ದೇಶದಲ್ಲಿ ಮಾತ್ರವೇ ಆಗಲು ಸಾಧ್ಯ ! ಆಗ ಪಾಪ ಮಾಡಿದ  ಪುಣ್ಯಾತ್ಮರು  ಫೈವ್  ಸ್ಟಾರ್  ಹೋಟೆಲ್ಗಳಲ್ಲಿ  ನೆಮ್ಮದಿಯ ನಿಟ್ಟುಸಿರು  ಬಿಡುತ್ತಿರುವಾಗ , ಹಿಂದೂ ಉಗ್ರಗಾಮಿಗಳದ್ದೇ  ಕೈವಾಡ ಎಂದು  ಒಂದು ಪಕ್ಷ , ಮುಸ್ಲಿಂ ಉಗ್ರಗಾಮಿ ಎಂದು  ಇನ್ನೊಂದು ಪಕ್ಷ  ವೋಟು  ಬ್ಯಾಂಕಿಗಾಗಿ  ಕೆಸೆರೆರೆಚಾಟ ನಡೆಸುವುದನ್ನು ನೋಡಲು  ಎರೆಡೂ  ಕಣ್ಣುಗಳು  ಸಾಲವು ! .  ಅಪ್ಪಿ ತಪ್ಪಿ ಆರೋಪಿ  ಸಿಕ್ಕಿ ಹಾಕಿ ಕೊಂಡ  ಅಂದ್ರೆ   ಮುಗಿತು ಕತೆ. ಏನು  ರಾಜಮರ್ಯಾದೆ  ಏನು ವೈದ್ಯಕೀಯ ಚಿಕಿತ್ಸೆ! ಅದೆಂಥ ಭದ್ರತಾ ವ್ಯವಸ್ಥೆ.  ಜೀವಮಾನವೆಲ್ಲ ಈ  ಸುಪ್ಪತ್ತಿಗೆಯಲ್ಲೇ  ಕಳೆದರೂ  ಆರೋಪಿಗಳಿಗೆ  ಶಿಕ್ಷೆ ಘೋಷಣೆ  ಮಾತ್ರ ದೂರದ ಕನಸು ! ನಮ್ಮ  ದೇಶವೇನು ಅಮೇರಿಕಾದಂತೆ  ಕೆಟ್ಟ ಹೊಯ್ತ ಒಂದೇ ದಿವಸದಲ್ಲಿ  ಎಲ್ಲ  ಕೆಲಸ ಮುಗ್ಸಿ  ಆರೋಪಿಗಳನ್ನ  ಅರೆಸ್ಟ್  ಮಾಡಲಿಕ್ಕೆ ?


ಒಬ್ಬ ತನಗೆ ತೊಂದರೆ  ಯಾಗಿದೆ , ಕಳ್ಳತನ ವಾಗಿದೆ , ತನ್ನ ಮಗಳಿಗೆ  ಅನ್ಯಾಯವಾಗಿದೆ  , ಅತ್ಯಚಾರವಾಗಿದೆ , ಅಪಘಾತವಾಗಿದೆ  ಎಂದು  ದೂರು ಕೊಡಲು  ಹೋದರೆ , ದೂರನ್ನು  ದಾಖಲಿಸಿಕೊಳ್ಳೋದಕ್ಕೂ  ಲಂಚ ಕೊಡಬೇಕು. ಇನ್ನು  ಆರೋಪಿಯನ್ನು  ಕರೆಸಿ ವಿಚಾರಣೆ  ಮಾಡದಷ್ಟು  ನಮ್ಮ ಪೊಲೀಸರು ಬ್ಯುಸಿ ಮನುಷ್ಯರು . ಕಂಪ್ಲೇಂಟ್ ವಿಷಯ  ಏನಾಯ್ತು ಸರ್ ಎಂದು ಕೇಳಲು ಹೊದ  ಸಾಮಾನ್ಯನ  ಮನಸ್ಥಿತಿ  ಅರ್ಥ  ಮಾಡಿಕೊಳ್ಳದೆ ನಂಗೇನ್ ಬೇರೆ ಕೆಲಸ ಇಲ್ವೆನ್ರಿ  ಕರೆಸಿ ಮಾತಡ್ತಿವಿ  ಹೋಗ್ರಿ  ಎಂದು  ಅಂಜಿಸಿ ಅಲ್ಲಿಯೂ  ಕೇಸ್ ಮುಂದ್ ಹೋಗ್ಬೇಕು ಅಂದ್ರೆ ಮಿನಿಮಂ  ಮೂವತ್ತು  ಸಾವಿರ  ಕರ್ಚಾಗುತ್ತೆ. ಏನ್ ತಲೆ ಕೆಡಿಸ್ಕೋಬೇಡಿ  ಏನ್ ದು ಹಲ್ಲು ಗಿಂಜಿ  ಕಲಿಸುವ ಕಾನ್ಸ್ಟೇಬಲ್ ಗಳು , ಇನ್ಸ್ಪೆಕ್ಟರ್ ಗಳು , ರೋಗ ಗ್ರಸ್ಥ  ಠಾಣೆ ಗಳು. ಅಷ್ಟು ದುಡ್ಡು ಕರ್ಚು ಮಾಡಿ ಕೇಸ್ ಮುಂದುವರೆಸುವಷ್ಟ್ರಲ್ಲಿ  ದೌರ್ಜನ್ಯ ಕ್ಕೊಳಗಾದ ವನ  ಮಗ/ಮಗಳು  ಅಪಘಾತದಲ್ಲಿ  ಅತ್ಯಚರದಲ್ಲಿ ಜರ್ಜಜರಿತರಾಗಿ  ಪ್ರಾಣ ಕಳೆದು ಕೊಂಡಿರುತ್ತಾರೆ , ಕೇಸ್  ಕ್ಲೋಸ್ ಕೂಡ ಆಗಿರುವುದಿಲ್ಲ  ಸತ್ತ ಆ ದೇಹಗಳನ್ನ ಪೋಸ್ಟ್ ಮಾರ್ಟಂ  ಮಾಡಲೂ ಸಹ ವೈದ್ಯನಿಗೆ ಲಂಚ ಕೊಡಬೇಕು....!! ಅಸ್ಥಿ  ವಿಸ್ರ್ಜನೆ ಗೂ ಲಂಚ.  ಒಟ್ಟಿನಲ್ಲಿ  ಹೇಳುವುದಾದರೆ  ನಮ್ಮ ದೇಶದಲ್ಲಿ  ಹುಟ್ಟುವ  ಪ್ರತಿ ಮಗುವು ಲಂಚ ದಲ್ಲೇ ಹುಟ್ಟಿ ಲಂಚದಲ್ಲೇ ಬೆಳೆದು ಲಂಚದಲ್ಲೇ ಸಾಯುತ್ತದೆ .! ಜನ ಸಾಮಾನ್ಯ  ಈ  ಸಂಭ್ರಮಕ್ಕೆ ವೋಟ್  ಮಾಡಬೇಕ ?



 ನಾನು ಬರಿಯದೇ ಸುಮಾರು  ಆರೇಳು ತಿಂಗಳುಗಳೇ  ಆಗಿವೆ , ಆದರೂ ಓದುಗರು ಏನಾದರೂ ಬರೆದಿರಬಹುದಾ  ಎಂಬ ಕುತೂಹಲದಿಂದ ನನ್ನ ಬ್ಲಾಗ್ ಗೆ ಭೇಟಿ ನೀಡಿ, ತುಂಬಾ ದಿನಗಳ ನಂತರ ಈಗಲಾದರೂ  ಏನಾದರೂ ಬರಿ ಎಂದು ಕೈ  ಜಗ್ಗಿ   ಬರೆಯಲು ಪ್ರೇರೇಪಿಸಿದ , ಭಾರತದ ಓದುಗರಿಗೂ , ಹಾಗೂ ಕರ್ನಾಟಕದಿಂದ ಹೊರಗಿದ್ದೂ ಕನ್ನಡ ಬ್ಲಾಗ್ ಗಳನ್ನ ಓದುವ ಅನೇಕ ವಿದೇಶಿ ಕನ್ನಡಿಗರಿಗೆ , ಪ್ರಮುಖವಾಗಿ  ಅಮೇರಿಕಾದಲ್ಲಿರುವ  ಓದುಗರಿಗೆ, ಹಾಗೂ ಗಲ್ಫ್  ಕನ್ನಡಿಗರಿಗೆ  ಧನ್ಯವಾದ ತಿಳಿಸುತ್ತ , ಇನ್ನು ಮೇಲೆ ತಿಂಗಳಿಗೆ ಎರಡಾದರೂ  ಲೇಖನಗಳನ್ನು ಬರೆಯಬೇಕೆಂದು ನಿರ್ಧರಿಸಿರುವುದಾಗಿ ತಿಳಿಸಲು ನನಗೆ ತುಂಬಾ ಖುಷಿಯಾಗಿದೆ.... ಮತ್ತ್  ನಿಮಗ ?