ಇನ್ನೇನು ಫುಟ್ಬಾಲ್ ವರ್ಲ್ಡ್ ಕಪ್ ಜ್ವರ ಶುರುವಾಗಿದೆ ಅನ್ನುವ ಖುಷಿ ಒಂದೆಡೆಯಾದರೆ , ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಅಧ್ಭುತ ಫಾರ್ವರ್ಡ್ ಆಟಗಾರ ಲಿಯೊನೆಲ್ ಮೆಸ್ಸಿ ಎಂಬ ಮಾಯಾವಿಯ ಕೊನೆಯ ವರ್ಲ್ಡ್ ಕಪ್ ಎಂಬ ನೋವು ಒಂದು ಕಡೆ !
ಇಡೀ ವಿಶ್ವದಲ್ಲೇ , ಅತ್ಯಂತ ಜನಪ್ರಿಯ ಹಾಗೂ ಅತೀ ಬಲಿಷ್ಠ ಆಟಗಾರ ಎಂದೆನಿಸಿಕೊಂಡಿರುವ ಅರ್ಜೆಂಟೀನಾ ತಂಡದ ಫಾರ್ವರ್ಡ್ ನಲ್ಲಿ ಎದುರಾಳಿ ತಂಡದ ಗೋಲ್ ಕೀಪರ್ ಗಳಿಗೆ ಮೆಸ್ಸಿ, ದುಃಸ್ವಪ್ನವಾಗಿ ಕಾಡಿದ್ದು ಒಂದು ದೊಡ್ಡ ಇತಿಹಾಸ! ಹಲವು ಬಾರಿ ಪಂದ್ಯ ಶ್ರೇಷ್ಠ ಆಟಗಾರ ಎಂದೆನಿಸಿಕೊಂಡೂ , ಅತ್ಯುತ್ತಮ ಗೋಲ್ ಗಳನ್ನೂ ತನ್ನ ಮುಡಿಗೇರಿಸಿಕೊಂಡೂ ಅರ್ಜೆಂಟೀನಾ ಕಳೆದ ವಿಶ್ವ ಕಪ್ ನಿಂದ ವಂಚಿತವಾಗಿತ್ತು , ಅಭಿಮಾನಿಗಳಿಗೆ ೨೦೧೮ರ ಕಪ್ ಅನ್ನು ಮೆಸ್ಸಿ ಎತ್ತಿಕೊಂಡು ಮುತ್ತಿಡಲಿ ಎಂಬ ಹೆಬ್ಬಯಕೆ!
ಫುಟ್ಬಾಲ್ ಇತಿಹಾಸದ ದಂತಕಥೆಗಳ ಸಾಲಿನಲ್ಲಿ ನಿಂತಿರುವ ಮೆಸ್ಸಿಯದು ಬಾಲ್ಯದಿಂದಲೂ ಹೋರಾಟದ ಬದುಕು ,ಅತೀ ಬಡತನ ಅಲ್ಲದಿದ್ದರೂ , ದೈಹಿಕ ಸಾಮರ್ಥ್ಯವೇ ಮಾನದಂಡವಾಗಿರುವ ಈ ಕ್ರೀಡೆಗೆ ಅಡ್ಡಿಯಾಗಿ ಮೆಸ್ಸಿಯ ೧೩ ನೇ ವಯಸ್ಸಿಗೆ ಬೆಳವಣಿಗೆಯ ಹಾರ್ಮೋನ್ ಕುಂಠಿತಗೊಂಡು ಅದರ ಚಿಕಿತ್ಸೆಗೆ ಭರಿಸುವಷ್ಟು ಹಣ ಕಾಸಿನ ತೊಂದರೆಯಾಗಿ, ಸ್ಪೇನ್ ನ ಬಾರ್ಸಿಲೋನಾ ಎಂಬ ಕ್ಲಬ್ ನ ಆಟಗಾರನಾಗಿ ಸೇರಿಕೊಂಡರೆ ಅವನ ಚಿಕಿತ್ಸೆಯನ್ನು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಬಾರ್ಸಿಲೋನಾ ಯೂಥ್ ಅಕಾಡೆಮಿ , ಮೆಸ್ಸಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುತ್ತದೆ ! ಕುಂಠಿತ ಬೆಳವಣಿಗೆಯ ಕಾಯಿಲೆಯ ಮಧ್ಯೆಯೂ ತನ್ನ ೧೭ನೇ ವಯಸ್ಸಿಗೆ ೨೦೦೪ ರಲ್ಲಿ ಚೊಚ್ಚಲ ಪಂದ್ಯದ ಆಟಗಾರನಾಗಿ ಪಾದಾರ್ಪಣೆ ಮಾಡುತ್ತಾನೆ ! ತದ ನಂತರ ಕೇವಲ ಮೂರ್ ಮೂರು ವರ್ಷಗಳಲ್ಲಿ ಅಂದರೆ ೨೦೦೭ ರ ಹೊತ್ತಿಗೆ ಇಡೀ ಪ್ರಪಂಚವೇ ಮೆಸ್ಸಿಯ ಆಟದ ಶೈಲಿ ಹಾಗೂ ಗೋಲ್ ಮಾಡುವ ವಿಧಾನವನ್ನು ಹಾಡಿ ಹೊಗಳುವಂತೆ ಮಾಡಿದ್ದಲ್ಲದೆ , ತನ್ನ ೨೨ ನೇ ವಯಸ್ಸಿಗೆ ಫಿಫಾ ನೀಡುವ ವಿಶ್ವದ ಅತ್ಯತ್ತಮ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾನೆ !
ಚೈನಾ ದಲ್ಲಿ ನಡೆದ ೨೦೦೮ ರ ಒಲಿಂಪಿಕ್ಸ್ ನಲ್ಲಿ ತನ್ನ ತಂಡಕ್ಕೆ ಬಂಗಾರದ ಪದಕ ಸಿಗುವುದಕ್ಕೆ ಮುಖ್ಯ ಕಾರಣ ಮೆಸ್ಸಿ ! ಇಷ್ಟೆಲ್ಲಾ ಸಾಧನೆಯ ನಂತರ ೨೦೧೧ಕ್ಕೆ ಅರ್ಜೆಂಟೀನಾ ತಂಡದ ನಾಯಕನ ಪಟ್ಟವನ್ನು ಹೊತ್ತ ಮೆಸ್ಸಿ ಸತತ ಮೂರು ಬಾರಿ ವಿಶ್ವ ಕಪ್ ಅಂತಿಮ ಪಂದ್ಯಕ್ಕೆ ಕೊಂಡೊಯ್ಯುತ್ತಾನೆ ! ಅಂದರೆ ನಾಯಕನ್ನಾಗಿ ನೇಮಕಗೊಂಡ ವರ್ಷದಿಂದ ಸತತವಾಗಿ ಮೂರು ವರ್ಷ ತಂಡ ಫೈನಲ್ ತಲುಪುತ್ತದೆ , ಕೆಲವೊಮ್ಮೆ ಅದೃಷ್ಟವೂ ಬೇಕಾಗುತ್ತದೆ ಎನ್ನುವುದು ಇದಕ್ಕೆ , ಅಷ್ಟು ಕಠಿಣ ಹಣಾ ಹಣಿಯ ನಂತರ ಮೂರು ಬಾರಿ ಕಪ್ ಮುಡಿಗೇರಿಸುವಲ್ಲಿ ಅರ್ಜೆಂಟೀನಾ ವಿಫಲವಾಗುತ್ತದೆ ! ಕಪ್ ಗೆಲ್ಲದಿದ್ದರೇನು , ಈ ಅವಧಿಯಲ್ಲಿ ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿ ನಿಲ್ಲುತ್ತಾನೆ, ಇವತ್ತು ವಿಶ್ವದಲ್ಲಿ ತಮ್ಮ ದೇಶದ ಫುಟ್ಬಾಲ್ ಆಟಗಾರನನ್ನು ಬಿಟ್ಟು ಬೇರೆ ದೇಶದ ಆಟಗಾರನನ್ನು ಆರಾಧಿಸುವಂತೆ ಮಾಡಿದ್ದು ಮೆಸ್ಸಿ ಮಾತ್ರ! ಬ್ರೆಝಿಲ್ ತಂಡದಲ್ಲಿ ರೊನಾಲ್ಡಿನೋ ಎಂಬ ಅತ್ಯತ್ತಮ ಆಟಗಾರನಿದ್ದೂ , ಹಲವು ಪ್ರದೇಶದ ಜನ ಮೆಸ್ಸಿ ಹಾಗೂ ಅರ್ಜೆಂಟೀನಾ ದೇಶವನ್ನು ಬೆಂಬಲಿಸುತ್ತಾರೆ ಎಂದರೆ ಅದೆಷ್ಟು ಮೋಡಿ ಮಾಡಿರಬೇಕು ಈ ಮೆಸ್ಸಿ ಎಂಬ ಮಾಂತ್ರಿಕ ?!
ಫುಟ್ಬಾಲ್ ಆಟಗಾರರಿಗೆ ಹೆಸರು ಮತ್ತು ಹಣ ನೀರಿನಂತೆ ಹರಿದು ಬರುತ್ತದೆ , ಇಂಥ ಸುಖದ ಸುಪತ್ತಿಗೆಯಲ್ಲಿರುವವರಿಗೆ ಹೆಣ್ಣಿನ ಸ್ನೇಹ ಸರಸ ಸರ್ವೇ ಸಾಮಾನ್ಯ ! ಈ ವಿಷಯದ್ಲಲೂ ಮೆಸ್ಸಿ ತಾನೇಕೆ ಉಳಿದ ತಾರೆಗಳಿಗಿಂತ ಭಿನ್ನ ಎಂದು ತೋರಿಸಿಕೊಟ್ಟಿದ್ದಾನೆ. ೨೦೦೯ ರಿಂದ ೨೦೧೪ರ ವರೆಗೆ ಮೆಸ್ಸಿ ಫಾಟ್ಬಾಲ್ ಕ್ಷೇತ್ರದ ಅತೀ ಹೆಚ್ಚು ಹಣ ಗಳಿಸಿದ ಆಟಗಾರ! ಯಾವುದೇ ಗಾಸಿಪ್ ಗಳಿಲ್ಲದ, ಕಪ್ಪು ಚಿಕ್ಕೆ ಇಲ್ಲದ ವೈಯಕ್ತಿಕ ಜೀವನ ,ತ ನಡೆಸಿದ ಮೆಸ್ಸಿ, ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ಇದ್ದ ಗರ್ಲ್ ಫ್ರೆಂಡ್ ಆಂಟೀನೆಲ್ಲಾ ರೋಕಝ್ಯ ಎಂಬಾಕೆಯನ್ನು ಎರಡು ಮಕ್ಕಳ ನಂತ್ರ ೨೦೧೭ ರಲ್ಲಿ ವಿವಾಹವಾಗಿ ಅನೇಕ ಹುಡುಗಿಯರ ಪಾಲಿನ ಮಿಸ್ಟರ್ ಪರ್ಫೆಕ್ಟ್ ಆಗಿ ಕಾಡುತ್ತಾನೆ !
ತಾನು ಅನುಭವಿಸಿದ ಬಾಲ್ಯದ ತೊಂದರೆ ಇನ್ಯಾರೂ ಅನುಭವಿಸದಿರುವಂತೆ ನೋಡಿಕೊಳ್ಳಲು ಮೆಸ್ಸಿ ತನ್ನದೇ ಬಾರ್ಸಿಲೋನಾ ಕ್ಲಬ್ ನ ಜೊತೆಗೆ ಹೊಂದಾಣಿಕೆ ಮಾಡಿಕೊಂಡ ಯೂನಿಸೆಫ್ ಎಂಬ ಸಂಸ್ಥೆಗೆ ಧಾರಾಳ ಹಣ ಸಹಾಯ ಒದಗಿಸಿದ್ದಲ್ಲದೆ , ತಾನು ಹುಟ್ಟಿ ಬೆಳೆದ ರೊಸಾರಿಯೋ ಎಂಬ ಊರಿನ ಪ್ರತಿ ಫುಟ್ಬಾಲ್ ಪಟು ಮೆಸ್ಸಿಯ ದೇಣಿಗೆಯಿಂದ ಮುಂದೆ ಬರುತ್ತಿದ್ದಾರೆ !
ಆಟದಮೈದಾನದಲ್ಲಿ ಯಾವತ್ತೂ ಮೋಸದಾಟವಾಗಲಿ ಎದುರಾಳಿಯನ್ನು ತುಚ್ಛವಾಗಿ ಕಾಣುವುದಾಗಲೀ ಎಂದೂ ಮಾಡದ ಮೆಸ್ಸಿಯ ಬೊಕ್ಕಸದಲ್ಲಿ ಅತೀ ಹೆಚ್ಚು ಗೋಲ್ ಮಾಡಿದ ಸಾಧನೆ ಒಂದೆಡೆಯಾದರೆ, ಫುಟ್ಬಾಲ್ ದಂತಕಥೆ ಮೆರಡೋನ ಮೆಸ್ಸಿ ಯನ್ನು ಸರ್ವ ಶ್ರೇಷ್ಠ ಆಟಗಾರ ಎಂದು ರೊನಾಲ್ಡಿನೋ ಹಾಗೂ ರೊನಾಲ್ಡೊರನ್ನು ಮೆಸ್ಸಿಯ ನಂತ್ರ ಎಂಬಂತೆ ಬಿಂಬಿಸಲಾಗುತ್ತಿದೆ.
ಒಂದು ಚೆಂಡಿನ ಹಿಂದೆ ೨೨ ಜನ ಓಡಾಡಿ ಬಡಿದಾಡುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ , ಅಂಥದರಲ್ಲಿ ಮೆಸ್ಸಿ ಎಂಬುದು ಅಸಾಧಾರಣ ಹಾಗೂ ಅಪರೂಪ ವ್ಯಕ್ತಿತ್ವ! ಸದಾ ವೃತ್ತಿಪರತೆ ತೋರುವ ಮೆಸ್ಸಿ ಅಂಥ ಒಬ್ಬ ಕ್ಯಾಪ್ಟನ್ ಕೂಲ್ ನನ್ನು ಮೈದಾನದಲ್ಲಿ ನೋಡುವುದು ಒಂದು ಸಂಭ್ರಮ ! ಮೆಸ್ಸಿಯ ಹಲವು ರೆಕಾರ್ಡ್ ಗಳು ಇನ್ನು ಯಾರಿಂದಲೂ ಭೇದಿಸಲಾಗದೆ ಉಳಿದಿರುವ ಬೆನ್ನಲ್ಲೇ , ಈ ಸಲದ ವಿಶ್ವ ಕಪ್ ಮೆಸ್ಸಿಯ ಕೊನೆಯ ಆಟವಾಗಿರುವರಿಂದ , ಇಂಥ ಅಪರೂಪದ ನಾಯಕ ತನ್ನ ತಂಡದ ಜಯಭೇರಿಗೆ ಕಾರಣನಾಗಿ ಕೊನೆಯ ಬಾರಿಯಾದರೂ ವಿಶ್ವ ಕಪ್ ಮೆಸ್ಸಿಯ ಪಾಲಾಗಲಿ ಎಂಬುದು ಎಲ್ಲ ಅಭಿಮಾನಿಗಳ ಆಸೆ!