Total Pageviews

Friday, July 20, 2018

ಯಾವುದು ಭಿನ್ನವಾಗಿರುತ್ತದೋ ಅದಕ್ಕೆ ತಾನೇ ಪ್ರಾಮುಖ್ಯತೆ ?!

                 





 " ಆಯ್ತಲ್ಲ ಮಗುವಿಗೆ ಎರೆಡು ವರ್ಷ ಯಾವ ಶಾಲೆಗೇ ಸೇರಿಸಿದ್ರಿ? ನಮ್ಮ ಮಗು ಅಂತೂ ಖುಷಿ ಇಂದ ಶಾಲೆಗೆ ಹೋಗಿ ಬರುತ್ತೆ, ರೈಮ್ಸ್, ವರ್ಡ್ಸ್ ಎಲ್ಲ ಕಲಿಸ್ತಾ ಇದಾರೆ ಒಳ್ಳೆ ಶಾಲೆ... ನೀವ್ಯಾವಾಗ ಸೇರ್ಸೋದು?" ಇದು ದಿನಕ್ಕೆ ಒಂದು ಬಾರಿಯಾದರೂ ನಾನು ಕೇಳಿಸಿಕೊಳ್ಳುವ ಸಾಮಾನ್ಯ ಪ್ರಶ್ನೆ ! ಹೀಗೆ ಎರೆಡು ಮೂರು ವರ್ಷದ ಹಿಂದೆ ಮದುವೆಯಾದ ನವ ದಂಪತಿಗಳೆಲ್ಲ ಸ್ವಂತ ಸೂರಿನ ಹುಡುಕಾಟದ ಹೋರಾಟ ಮಾಡಿ ಬೆಂಗಳೂರಿನ ದುಬಾರಿ ಬದುಕಿಗೆ ಅಪಾರ್ಟ್ಮೆಂಟ್ಗಳೇ ಯೋಗ್ಯ ಎಂಬ ನಿರ್ಧಾರ ಕೈಗೊಂಡು, ಮನೆ ಪ್ರವೇಶ ಮಾಡಿ ಬರೋಬ್ಬರಿ  ಎರಡು ಮೂರು ವರ್ಷದ ಒಳಗಾಗಿ ತಮ್ಮ ಪೀಳಿಗೆಯನ್ನು ಮುಂದು ವರಿಸಲು ಮನೆಗೊಬ್ಬ ಪುಟ್ಟ ನಾಯಕನನ್ನೋ/ನಾಯಕಿಯನ್ನೂ ಬರಮಾಡಿಕೊಂಡರು, ಆ ಪುಟ್ಟ ಹೆಜ್ಜೆ ಇತ್ತು ಬಂದ ಶಿಶು ಈಗ ಎರೆಡು ವರ್ಷ ತುಂಬಿದ ಅದಮ್ಯ ಚೈತನ್ಯದ ಚಿಲುಮೆ ! ಆ ಚೈತನ್ಯಕ್ಕೆ ಇನ್ನು ಹೆಚ್ಚಿನ ಸ್ಪೂರ್ತಿ ತುಂಬಿ ಅದನ್ನು ಶಾಲೆಗೆ ಕಳಿಸಿ ಸಂಭ್ರಮಿಸುತ್ತಿರುವ ಪಾಲಕರು.

                   ಪಾಲಕರೇಕೆ ತಮ್ಮ  ಮಕ್ಕಳನ್ನು ಬೇರೆಯವರ ಮಕ್ಕಳೊಂದಿಗೆ ಹೋಲಿಕೆ ಮಾಡುತ್ತಾರೆ ಅನ್ನುವುದು ಮಗು ಆಗುವ ವರೆಗೂ ಗೊತ್ತಾಗುವುದಿಲ್ಲ ! ಒಮ್ಮೆ ಮಗುವನ್ನು ಎತ್ತುಕೊಂಡು ಸುಮ್ಮನೆ ಹೀಗೆ ವಾಯು ವಿಹಾರಕ್ಕೆಂದು ಹೋಗಿ ನೋಡಿ... ಎಲ್ಲ ಹಲ್ಲು ಬಂತಾ ? ಮಾತು? ನಡಿತಾಳ ? ಕೂದಲು  ಸ್ವಲ್ಪ ಕಮ್ಮಿ ಅಲ್ವ? ಬಣ್ಣ ನಿಂದಲ್ಲ , ಮೂಗು ಸ್ವಲ್ಪ ಮೊಂಡು ಅನ್ಸುತ್ತೆ ಎಣ್ಣೆ ಹಾಕಿ ಸರಿ ಉಜ್ಜಬೇಕಿತ್ತು! ಒಂದು ಹೆಣ್ಣಾಯ್ತಲ್ಲ , ಹೂಂ ಗಂಡು ಮಗುವಿನ ತಯಾರಿ ಮಾಡಿ ! ಒಂದೇ ಎರಡೇ ನನ್ನದೇ ಮಗುವಿನ ಬಗ್ಗೆ ನಾನೂ ಯೋಚಿಸದಷ್ಟು ನಮ್ಮ ನೆರೆ ಹೊರೆಯವರು ಯೋಚಿಸುತ್ತಿರುತ್ತಾರೆ ! ಎಂಥ ಕಾಳಜಿ ಪ್ರೀತಿ !
ಇದೆಲ್ಲ ಏನು ಎಂದು ಅರ್ಥ ಮಾಡಿಕೊಳ್ಳುವಷ್ಟಿಗೆ ಮಗು ಶಾಲೆ ಎಂಬ ಬೆಂಗಳೂರಿನ ಬಿಸಿನೆಸ್ ಕೇಂದ್ರಕ್ಕೆ ನೊಂದಾಯಿಸಿಕೊಂಡಿರುತ್ತದೆ.

                "ಎಲ್ಲರೂ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದಾರೆ ನಾನೇದಾರೂ ಹೀಗೆ ಬಿಟ್ಟು ಬಿಟ್ಟರೆ ನನ್ನ ಮಗು ಉಳಿದೆಲ್ಲ ಮಕ್ಕಳಿಗಿಂತ ಹಿಂದೆ ಉಳಿದು ಹೋಗುತ್ತದೆ"! ಎಂಬಲ್ಲಿಗೆ ಪಾಲಕರ ಮೊದಲ ಭಯ ಮೊಳಕೆಯೊಡೆದಿರುತ್ತದೆ, ಅಲ್ಲಿನ್ಯಾರೋ ಅಯ್ಯೋ 'ಪ್ಲೇ ಹೊಂ'ಗೆ ಹೋಗದ ಮಕ್ಕಳನ್ನು ಒಳ್ಳೊಳ್ಳೆ ಶಾಲೆಗಳು L.K.G ಗೂ ಸೇರಿಸಲ್ವಂತೆ  ಅಂತ ಯಾರೋ ಉಧ್ಘರಿಸಿಬಿಟ್ಟರೆ ಮುಗಿತು ಎಲ್ಲರೂ ಜಿದ್ದಿಗೆ ಬಿದ್ದಂತೆ ಇನ್ನೂ ಪರಿಪೂರ್ಣವಾಗಿ ಮಾತೆ ಆಡದ ಮಗು ಇನ್ಯಾರದ್ದೋ ಭಯ ಹಾಗೂ ಪೈಪೋಟಿ ಎಂಬ ಕದ ತಟ್ಟಿ , ತನ್ನದಲ್ಲದ ಬಾಲ್ಯದ ಮನೆ ಪ್ರವೇಶ ಮಾಡಿರುತ್ತದೆ. ಅಂತೂ ಇಂತೂ ಎಲ್ಲ ಕೇಜಿಗಳನ್ನು ದಾಟಿ ಒಂದನೇ ಕ್ಲಾಸ್ ಸೇರಿಬಿಟ್ಟಮೇಲಂತೂ ಅಪ್ಪ ಅಮ್ಮ ಇಬ್ಬರೂ ಸೇರಿ ಪುನಹ ಒಂದನೇ ತರಗತಿಯಿಂದ ತಮ್ಮ ಎರಡನೇ ಆವೃತ್ತಿಯ ಅಭ್ಯಾಸ ಶುರು ಮಾಡುತ್ತಾರೆ !

                 ಇಂಥ ಅಭೂತಪೂರ್ವ ತಯಾರಿ ಹಾಗೂ ಓದಿದರೆ ಮಾತ್ರ ಜೀವನ ಅನ್ನುವ ಅಲಿಖಿತ ನಿಯಮ ನಾವು ಪಾಲಿಸಿದಷ್ಟು ಜಗತ್ತಿನ ಇನ್ಯಾವ ದೇಶದವರೂ ಪಾಲಿಸಲಿಕ್ಕಿಲ್ಲ ! ಸುಮ್ಮನೆ ಯೋಚನೆ ಮಾಡಿ ನೋಡಿ ಪ್ರತಿವರ್ಷ ಲಕ್ಷ ಲಕ್ಷ ಇಂಜಿನಿಯರ್ ಹಾಗೂ ಡಾಕ್ಟರ್ ಗಳು ಪದವೀಧರರಾಗುತ್ತಿದ್ದಾರೆ, ಅದೆಷ್ಟೋ ಲಕ್ಷಗಳಲ್ಲಿ ಕೆಲವು ಸಾವಿರಗಳಷ್ಟೇ ಕೆಲ್ಸಕ್ಕೆ ಯೋಗ್ಯರೆಂದು ಪರಿಗಣಿಸಲ್ಪಡುತ್ತಾರೆ, ಇನ್ನುಳಿದ ಅರ್ಧದಷ್ಟು ಜನ ತಾವು ಪಡೆದ ಪದವಿಗೂ ಮಾಡುವ ಕೆಲಸಕ್ಕೂ ಸಂಭಂದ ಇರದ ಇನ್ಯಾವುದೊ ಕೆಲಸ ಮಾಡುತ್ತಿರುತ್ತಾರೆ ! ಯಾಕೆ ಹೀಗೆ? ಬದುಕಲು ಹಣ ಬೇಕು ನಿಜ ಬರಿ ಹಣ ಗಳಿಕೆಯೇ ಜೀವನದ ಉದ್ದೇಶವೇ ? ಹೆಸರು ಮಾಡಿದವ್ರೆಲ್ಲ ಹಣವಂತರಾಗಿರುವುದಿಲ್ಲ, ಹಣವಿರುವರೆಲ್ಲ ಹೆಸರು ಮಾಡಿರುವುದಿಲ್ಲ ! ಒಟ್ಟಿನಲ್ಲಿ ಹೆಸರು ಹಣ ಮಾಡಲು ತನಗಿಷ್ಟವಿಲ್ಲದನ್ನು ಮಾಡಲೇ ಬೇಕಾದ ಅನಿವಾರ್ಯತೆ !

                 ಅತ್ಯುತ್ತಮ ಇಂಜಿನಿಯರ್ ,ಡಾಕ್ಟರ್ , ವಿಜ್ನ್ಯಾನಿ , ಕ್ರಿಕೆಟರ್ , ಗಾಯಕ , ಲೇಖಕ , ಕಲಾವಿದ , ಹೀಗೆ ಪ್ರತಿ ಕ್ಷೇತ್ರದಲ್ಲೂ ನಮ್ಮ ಅತ್ತ್ಯುತ್ತಮ ಕೊಡುಗೆ ಕೊಟ್ಟ ಶ್ರೇಯಸ್ಸು ಭಾರತಕ್ಕಿದೆ ! ಆದರೆ ಕಳೆದು ಇಪ್ಪತ್ತು ವರ್ಷದಲ್ಲಿ ಎಲ್ಲ ಪಾಲಕರು ಇಂಜಿನಿಯರ್ ಹಾಗೂ ಡಾಕ್ಟರ್ ಅನ್ನೋ ಮಷೀನ್ ಗಳನ್ನೇ ತಯಾರಿಸಲು ಹೊರಟು ವಿಫಲರಾದರು ! ಪಕ್ಕದ ಮನೆಯ ವಸ್ತುವನ್ನು ನೋಡಿ ಆಕರ್ಷಿತಗೊಂಡು ಅಂಥದ್ದೇ ನಮ್ಮನೆಯಲ್ಲೂ ಬರಲಿ ಎಂದು ಬಯಸುವದು ಮಾನವ ಸಹಜ ಗುಣ , ವಸ್ತುವಿನಿಂದ ಶುರುವಾದ ಬಯಕೆ ಮಕ್ಕಳ ಭವಿಷ್ಯದ ಕನಸಿಗೂ ತಾಗಿದರೆ ಇಂಥ ವಿಚಿತ್ರ ಅನಾಹುತಗಳಾಗುತ್ತವೆ . ೮೦ ಪ್ರತಿಶತ ಜನ ಇಂದು ತಾವು ಮಾಡುವ ಕೆಲಸದಲ್ಲಿ ಸಂತೋಷವಾಗಲಿ ಸಂತೃಪ್ತಿಯಾಗಲಿ ಕಾಣುವುದಿಲ್ಲ . ದುಡ್ಡು ಬರುತ್ತದೆ ದುಡೀಬೇಕು ದುಡೀತೀವಿ , ಇಷ್ಟಾನ ಕಷ್ಟ ನೊ ಯಾರಿಗೆ ಬೇಕು ?! 

              ನಮ್ಮ ಹಾಗೆ ಜೀವನ ನಡೆಸುತ್ತಿರುವ ಚೈನಾ, ಅಮೇರಿಕಾ, ಯೂರೋಪ್ ದೇಶಗಳು  ಹೇಗೆ ಎಲ್ಲ ಕ್ಷೇತ್ರದಲ್ಲೂ ನಮಗಿಂತ ಭಿನ್ನ ಹಾಗೂ ಶ್ರೇಷ್ಠ ?!  ಆ ದೇಶದಲ್ಲಿರುವ ಮುಂದಿನ ಪೀಳಿಗೆಯ ಭವಿಷ್ಯ ನಿರ್ಮಾಣದ ಯೋಜನೆ ಹಾಗೂ ಆಲೋಚನೆಗಳು ನಿಜಕ್ಕೊ ಶ್ಲಾಘನೀಯ ! ಇವತ್ತು ಕ್ರಿಕೆಟ್ ಒಂದನ್ನು ಬಿಟ್ಟು ಬೇರೆಲ್ಲ ಕ್ಷೇತ್ರದಲ್ಲೂ  ನಮ್ಮನ್ನು ನಾವು ತೊಡಗಿಸಿಕೊಳ್ಳುವಲ್ಲಿ ನಮ್ಮನ್ನು ನಾವು ಗುರುತಿಸುಕೊಳ್ಳುವಲ್ಲಿ ಸಫಲರಾಗುವ ಅನೇಕ ಅವಕಾಶಗಳಿವೆ ! ಆದರೆ ಅದರಷ್ಟು ದುಡ್ಡಿಲ್ಲ ! ಫುಟ್ಬಾಲ್ ಮ್ಯಾಚುಗಳನ್ನು ನೋಡಿ , ಭೂಪಟದಲ್ಲಿ ಇವೆಯೋ ಇಲ್ಲವೋ ಎನ್ನುವಂಥ ಪುಟ್ಟ ಪುಟ್ಟ ಹೆಸರೇ ಕೇಳದ ದೇಶಗಳು ಈಗ ವರ್ಲ್ಡ್ ಕಪ್ ಆಡಲು ಅವಕಾಶ ಗಿಟ್ಟಿಸಿಕೊಂಡಿದ್ದಲ್ಲದೇ ಘಟಾನು ಘಟಿಗಳಾದ ದೈತ್ಯ ತಂಡಗಳನ್ನು ಸೋಲಿಸಿದ್ದಾವೆ ! ನಮ್ಮಲ್ಲಿ ಇನ್ನು ಅನೇಕ ಜನರಿಗೆ ಫುಟ್ಬಾಲ್ ಆಟದಲ್ಲಿ ಎಷ್ಟು ಜನ ಆಡುತ್ತಾರೆ ಅನ್ನುವುದೇ ಗೊತ್ತಿಲ್ಲ . ನಮ್ಮಲ್ಲಿ ಮಗು ಫುಟ್ಬಾಲ್  ಆಡುತ್ತೆನೆ  ಎಂದು ಹೇಳಿದರೆ ನಮ್ಮ ಪಾಲಕರು ಮಗುವನ್ನು ಕೂರಿಸಿಕೊಂಡು ಬರೋಬ್ಬರಿ ಒಂದು ಗಂಟೆಯ ಉಪದೇಶ ಕೊಟ್ಟು ಮರಳಿ ಪುಸ್ತಕ ಹಿಡಿಯುವಂತೆ ನೋಡಿಕೊಳ್ಳುತ್ತಾರೆ ! 


                    ನಾನು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರಿಂದ ಅನೇಕ ಮಕ್ಕಳ ಪಾಲಕರ ಮನಸ್ಥಿತಿ ಅರ್ಥ ಮಾಡಿಕೊಳ್ಳುವಂತಾಗಿದೆ ! ನಮಗೆ ಇಂಜಿನಿಯರ್ ಆಗಲೂ ಮನಸ್ಸೇ ಇರ್ಲಿಲ್ಲ ಮೇಡಂ ಒತ್ತಾಯ ಮಾಡಿ ಇಲ್ಲಿ ಸೇರಿಸಿದ್ದಾರೆ ! ನನಗೆ ಸಿಂಗರ್ ಆಗೋಕೆ ಇಷ್ಟ ಡ್ಯಾನ್ಸರ್ ಆಗೋಕೆ ಇಷ್ಟ , ಪತ್ರಕರ್ತ ಆಗೋಕೆ ಇಷ್ಟ ಅಂತ ಅನೇಕ ಮಕ್ಕಳು ಹೇಳುವಾಗ ಪಾಲಕರನ್ನು ಕರೆಸಿ ಮಾತಡಿದಾಗ , ಏನ್ ಮೇಡಂ ಮಕ್ಕಳ ಮಾತು ಕೇಳಿಕೊಂಡು ನೀವು ಹೀಗೆ ಮಾತಾಡ್ತೀರಲ್ಲ, ಇಂಜಿನಿಯರಿಂಗ್ ಓದದೇ ಇರುವವರನ್ನು ಯಾರೂ ಮೂಸಿಯೂ ನೋಡಲ್ಲ, ಮದುವೆಯಂತು ದೂರದ ಕನಸು, ನಮ್ಮ ಫ್ಯಾಮಿಲಿಯಲ್ಲಿ ಎಲ್ಲ ಡಾಕ್ಟರ್ಸ್ ಇಂಜಿನಿಯರ್ ಗಾಲೆ ಇದಾರೆ ಇವನನ್ನ ಏನ ಅಂತ ಹೇಳಲಿ? ಎಲ್ಲರೂ ಸಾಫ್ಟ್ವೇರ್ ಇಂಜಿನಿಯರ್ ಆಗ್ತೀನಿ ಅಂದ್ರೆ ಇವನು ಪೈಂಟರ್ ಆಗ್ತಾನಂತೆ , ಸರಿ ಆಗ್ಲಿ ಎಷ್ಟು ದುಡಿಬಹುದು ಮೇಡಂ ಅಲ್ಲಿ? ಕಂಪನಿ ಕೊಡುವಷ್ಟು ದುಡ್ಡು ಸಿಗುತ್ತಾ? ಹೋಗ್ಲಿ ಒಂದು ಡೆಸಿಗ್ನೇಷನ್ ಆದ್ರೂ ಬೇಡ್ವಾ?! ದುಡ್ಡಿದ್ರೆ ಎಲ್ಲ ಮಾತಾಡ್ತಾರೆ ಅದಿಲ್ಲ ಅಂದ್ರೆ ಏನು ಇಲ್ಲ ನೀವೇ ಸ್ವಲ್ಪ ತಿಳಿಸಿ ಹೇಳಿ ಎಂದು ಎದ್ದು ಹೊರಡುತ್ತಾರೆ !
            
                   ಇವತ್ತಿನ ಕಾಲಮಾನದಲ್ಲಿ ಎಲ್ಲ ಕ್ಷೇತ್ರಕ್ಕೋ ಬೇಡಿಕೆ ಇದೆ ಎಲ್ಲ ಕ್ಷೇತ್ರದಲ್ಲೂ ವಿಪುಲ ಅವಕಾಶಗಳಿವೆ ! ನಮ್ಮ ಮನಸ್ಥಿತಿಗೆ ಹಿಡಿದ ಜಿಡ್ಡನ್ನು ತೊಳೆದು ನೋಡಿದರೆ ಎಲ್ಲವೂ ಸುಂದರ ಮತ್ತು ರಂಜನೀಯ ! ಸ್ವಲ್ಪ ಕಷ್ಟ ಪಡಬೇಕಾದ ಅನಿವಾರ್ಯತೆ ಎಲ್ಲ ಕ್ಷೇತ್ರದಲ್ಲೂ ಇದೆ , ಕೆಲವು ಕ್ಷೇತ್ರ ತುಸು ಜಾಸ್ತಿಯೇ  ಪ್ರಯತ್ನ ಬಯಸಿದರೂ ಅದು ನಾವೇ ಆರಿಸಿಕೊಂಡ ಕ್ಷೇತ್ರವಾಗಿರುವುದರಿಂದ ಅಂಥ ಕಷ್ಟ ಅನಿಸುವುದಿಲ್ಲ ! ಸುಲಭ ಪ್ರಯತ್ನವೇ ಆದರೂ ನಮ್ಮದಲ್ಲದ ಕ್ಷೇತ್ರ ನಮಗೆಂದಿಗೂ ಸಹ್ಯವಲ್ಲದ ಆದರೂ ಅದರೊಟ್ಟಿಗೆಯೇ ಇರುವ ವಿಚಿತ್ರ ಮಾನಸಿಕ ಹಿಂಸೆ ನೀಡುವ ತಾಣ ! ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಯಾರೂ ಇಂಜಿನಿಯರ್ ಗಳನ್ನಾಗಲಿ ಡಾಕ್ಟರ್ ಗಳನ್ನಾಗಲಿ ಮಾತನಾಡಿಸುವುದಿಲ್ಲ , ಗಲ್ಲಿ ಗಲ್ಲಿಗೆ ನೂರಾರು ಒಂದೇ ರೀತಿಯ ಜನ  ಇರುವಾಗ  ಯಾವುದು ಭಿನ್ನವಾಗಿರುತ್ತದೋ ಅದಕ್ಕೆ ತಾನೇ ಪ್ರಾಮುಖ್ಯತೆ ?!

                   ಯಾವುದೇ ಕ್ಷೇತ್ರ ಇರಲಿ , ಯಾವುದೇ ಕ್ಷೇತ್ರ ಅತ್ಯತ್ತಮವಾದ್ದನ್ನ ಮಾತ್ರವೇ ತನ್ನ ಮಡಿಲಿಗೆ  ಹಾಕಿಕೊಂಡು ಬೆಳೆಸುತ್ತದೆ ! ಹಾಗೆ ಬೆಳೆದ ಪ್ರತಿ ಅತ್ಯತ್ತಮವೂ ಶ್ರೇಷ್ಟವಾಗೇ ಇರುತ್ತದೆ ಮತ್ತು ಶ್ರೇಷ್ಟವಾದ ಎಲ್ಲದಕ್ಕೂ ಹೆಸರು, ಕೀರ್ತಿ ಹಾಗೂ ಹಣ ತಾನಾಗೇ ಹರಿದು ಬರುತ್ತದೆ ! ಹಾಗಾಗಿ ಪಾಲಕರಾಗಿ ನಮ್ಮೆಲ್ಲರ ದೊಡ್ಡ ಜವಾಬ್ದಾರಿ ಎಂದರೆ ನಮ್ಮ ಮಕ್ಕಳನ್ನು ನಾವು ಹೇಗೆ ಶ್ರೇಷ್ಟರಾಗುವಂತೆ ಬೆಳೆಸಬೇಕು ಎಂಬುದನ್ನು ಆಲೋಚಿಸಬೇಕು ! ಹಣವನ್ನು ಎಟಿಎಂ ಮಷೀನ್ ಕೂಡ ಕೊಡುತ್ತದೆ! ಯಾರೇ ಕಾರ್ಡ್ ಹಾಕಿದರೂ ಕೊಡುತ್ತದೆ ! ನಮ್ಮ ಮಕ್ಕಳು ದುಡ್ಡು ಮಾಡುವ ಮಷೀನ್ ಗಳಾಗುವುದು ಒಳ್ಳೆಯದೋ ಅಥವಾ ತಾನಾರಿಸಿಕೊಂಡ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಕೀರ್ತಿ ಪತಾಕೆ ಹಾರಿಸುವುದೊಳಿತೊ?!