Total Pageviews

Monday, May 4, 2020

ಜೀನಾ ಇಸೀ ಕಾ ನಾಮ್ ಹೈ 😍😇❤


Losing love is not the biggest loss, but Losing self Respect Is! ಒಂದೇ ವಾಕ್ಯದಲ್ಲಿ ಥಪ್ಪಡ್ ಚಿತ್ರದ ವಿಮರ್ಶೆ ಹೇಳುವುದು ತುಸು ಕಷ್ಟವೇ. ಆದರೂ ಒಂದೊಳ್ಳೆ ಸ್ಕ್ರಿಪ್ಟ್ ಹಾಗೂ ಸ್ಕ್ರೀನ್ ಪ್ಲೆ ಎನ್ನಲು ಅಡ್ಡಿಯಿಲ್ಲ. ಆ ಟೈಟಲ್ ಹೇಳುವಂತೆ ಗಂಡ ಕೊಟ್ಟ ಒಂದು ಏಟಿಗೆ ಆದರ್ಶ ಗೃಹಿಣಿ ಎನಿಸಿಕೊಂಡ ಹೆಂಡತಿಯಲ್ಲಿನ ಬದಲಾವಣೆಗಳ ಹಂದರವೇ ಇಡೀ ಚಿತ್ರ!!
ನಾನು ಮೊದಲಿಗೆ, ಇದೊಂದು ಫೆಮಿನಿಸಮ್ ಕೇಂದ್ರೀಕೃತ ಚಿತ್ರ ಎಂದುಕೊಂಡು ನೋಡಲು ಶುರುಮಾಡಿದ್ದು. ಆದರೆ ಹೋಗ್ತಾ ಹೋಗ್ತಾ, ಪ್ರತಿ ಮಹಿಳೆಯ ಆಂತರ್ಯವನ್ನು ಯಾವುದೋ ಹಂತದಲ್ಲಿ ತಟ್ಟಬಲ್ಲ ದೃಶ್ಯಕಾವ್ಯ ಎನಿಸಿದ್ದು ಸುಳ್ಳಲ್ಲ. ಭಯಂಕರ ಎಕ್ಪೆಕ್ಟೇಷನ್ ಇಲ್ಲದೇ, ಸೆನ್ಸಿಬಲ್ ಇಮೋಷನ್ ಇರೋ ಗಂಡಸರಿಗೆ ಹೆಚ್ಚು ಆಪ್ತ ಅನಿಸಬಹುದು, ಇನ್ನೂ ಒಂದೇ ಒಂದು ಏಟಿಗೆ ಸಿನಿಮಾನ ಅಂತ ಮೂಗುಮುರಿದು, ಹೆಣ್ಣೆಂದರೇ ಹೀಗೆ ಇರಬೇಕು ಎಂದು ಕಸ್ಟಮೈಸ್ ಮಾಡಿ ಬದುಕುತ್ತಿರುವ ಜನರಿಗಾಗಿಯೇ ಇರುವ ಸಿನಿಮಾ ಆದರೂ ಅವರ್ಯಾರೂ ಇದನ್ನ ಇಷ್ಟ ಪಡುವುದೇ ಡೌಟು!
ಹಾಗಿದ್ದರೇ ಕೇವಲ ಒಂದು ಥಪ್ಪಡ್ ಒಂದು ಹೆಣ್ಣನ್ನು ವಿಚ್ಛೇದನದ ಹಂತದವರೆಗೆ ಕರೆದುಕೊಂಡು ಹೋಗುತ್ತದಾ? ಅಷ್ಟೊಂದು ಸಿಲ್ಲಿ ವಿಷಯನಾ ಅಂತ ಮೇಲು ನೋಟಕ್ಕೆ ಕಂಡುಬಂದರೂ, ಏಟು ಕಾರಣವಷ್ಟೆ! ಸಾರ್ವಜನಿಕವಾಗಿ ಹೆಂಡತಿಯನ್ನು ಹೊಡೆಯುವುದು ತನ್ನ ಹಕ್ಕು ಎಂದುಕೊಂಡ ಗಂಡನನ್ನು, ಹೇಗೆ ಒಂದೀಡಿ ಸಮುದಾಯ, ಆತನ ಕುಟುಂಬ ಹಾಗೂ ನರೆಹೊರೆಯವರು ದೂಷಿಸದೇ ಒಪ್ಪಿಕೊಂಡು, ಹೆಣ್ಣೆಂದರೆ ಸಹಿಸಿಕೊಂಡು ಹೋಗುವುದು ಎನ್ನುವದನ್ನು ಹಲವು ಪಾತ್ರಗಳು ಸಾರಿ ಹೇಳುತ್ತವೆ!
ಚಿತ್ರದ ಹೊರತಾಗಿ ಚಿಂತನೆಗೆ ಹಚ್ಚಿದ ಹಲವು ಕಾರಣಗಳು ಕೆಳಗಿನಂತಿವೆ.
ಅಪ್ಪನನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಸಂಬೋಧಿಸಬಾರದು ಎಂದು ಮಕ್ಕಳಿಗೆ ಹೇಳಿಕೊಡುವ ತಾಯಿ, ತನ್ನನ್ನು ಮಕ್ಕಳು ಹೇಗೆ ಸಂಬೊಧಿಸಿದರೂ ಆದೀತು. ಆದರೆ ಅದೇ ಹೆಣ್ಣು ಮಗುವಿಗೆ ಗಂಡನೊಟ್ಟಿಗೆ ಹೀಗ್ ಹೀಗೇ ನಡೆದುಕೊಳ್ಳಬೇಕು ಅನ್ನುವ ಅಲಿಖಿತ ಸ್ಟ್ಯಾಂಡರ್ಡ್‌ ಸೆಟ್ ಮಾಡಿರುತ್ತಾಳೆ!
ಇಂತಿಪ್ಬ ನಿಲುವನ್ನು ಹೊಂದಿರುವ ಅನೇಕ ತಾಯಂದಿರು ನಮ್ಮ ಜೊತೆಯಲ್ಲಿ ಇದ್ದಾರೆ. ಸೆಲ್ಫ್ ಡಿಕ್ಲೆರ್ಡ ವಿಕ್ಟಿಮ್ ಗಳದ್ದೂ ಇದೇ ಗೋಳು, ಹೊಡಿಲಿ ಬಡಿಲಿ ಗಂಡ ಅಲ್ಲವಾ ಎಲ್ಲಾ ಸಂಭಾಳಿಸಿಕೊಂಡು ಹೋಗಬೇಕಷ್ಟೆ ಎಂದು ಬದಲಾಗದ ನಿತ್ಯ ಹಿಂಸೆಗೆ ಸಮಝಾಯಿಶಿ ಕೊಡುತ್ತಲೇ ತಮ್ಮನ್ನು ತಾವು ಸಂತೈಸಿಕೊಳ್ಳುತ್ತಿರುತ್ತಾರೆ.
ಇನ್ನು ಇವತ್ತಿನ ಮದ್ಯದಂಗಡಿ ಎದುರುಗಡೆ ನಿಂತ ಮಾನಿನಿಯರ ದೊಡ್ಡ ಕ್ಯು ಇಂದಿನ ವೈರಲ್ ಪಟ್ಟಿಗೆ ಸೆಡ್ಡು ಹೊಡೆದು ನಿಂತಿದೆ. ಸಮಾನತೆಯ ಹೆಸರಲ್ಲಿ ಇದನ್ಯಾಕೆ ಸೇರಿಸಬಾರದು ಎಂದು ಒಂದು ಬಣ, ನಮ್ಮ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಮತ್ತೊಂದು ಬಣ ಪೈಪೋಟಿಗೆ ಬಿದ್ದಾಗಿದೆ. ೨೦೨೦ ದಶಕದಲ್ಲಿ ವೈನ್ ಶಾಪ್ ಮುಂದೆ ನಿಂತು ರಾಜಾರೋಷವಾಗಿ ಮದ್ಯ ಖರೀದಿ ಮಾಡುವುದೇ ಸಮಾನತೆಯ ಲಕ್ಷಣ ಅನ್ನೋದಾದರೆ, ಇನ್ನೆಲ್ಲ ವಲಯಗಳಲ್ಲಿ ಮಹಿಳೆಯಾಗಿರುವ ಕಾರಣಕ್ಕೆ ಸಿಗುವ ರಿಸರ್ವೇಷನ್ ಹಾಗೂ ಬೆನಫಿಟ್ ಗಳನ್ನು ಬಿಡಲು ನಾವುಗಳು ತಯಾರಿದ್ದೇವೆಯೇ ಎಂದು ಕೇಳಿಕೊಳ್ಳುವ ಸಮಯ ಇದು!
ವೈಯಕ್ತಿಕವಾಗಿ ನನಗೆ ಫೆಮಿನಿಸ್ಂ ಎಂದರೆ, ಗಂಡಸು ಮಾಡಬಹುದಾದ ಎಲ್ಲ ಕೆಲಸವನ್ನು ಮುಲಾಜಿಲ್ಲದೇ ಮಾಡುವುದಲ್ಲ, ಗಂಡು ಹೆಣ್ಣಿನ ಮಧ್ಯೆ ನಿಸರ್ಗವೇ ನಿರ್ಮಿಸಿದ ವ್ಯತ್ಯಾಸಗಳನ್ನು ಪರಸ್ಪರ ಗೌರವಿಸಿಕೊಂಡು, ಒಬ್ಬರಿಗೊಬ್ಬರು ಕಾಂಪ್ಲಿಮೆಂಟರಿಯಾಗಿ ಬದುಕುವುದು! ಇದು ಯೋಚನಾ ಲಹರಿಯಿಂದ ಹಿಡಿದು ಮಾಡುವ ಪ್ರತಿಕೆಲಸದಲ್ಲೂ ತಮ್ಮ ತಮ್ಮದೇ ಛಾಪನ್ನು ಮೂಡಿಸುವ ಪ್ರತಿ ವ್ಯಕ್ತಿಗೂ ಅನ್ವಯ!
ಇನ್ನು ಹೊಡೆದು ಸರಿಮಾಡಲಾರದ ವಿಷಯ ತೆಗಡದುಕೊಂಡರೆ, ಭಾರತೀಯ ಮಕ್ಕಳು ಮುಂಚುಣಿಯಲ್ಲಿ ನಿಲ್ಲುತ್ತಾರೆ. ನಾಳೆ ಇನ್ಯಾರೋ ಅಮೆರಿಕದಲ್ಲಿ ಮಕ್ಕಳಿಗೆ ಹೊಡೆದರೆ ಜೈಲಾಗುತ್ತೆ, ನಮ್ಮಲ್ಲೂ ಅದು ಬರಬೇಕು ಅಂತ ಹೇಳಲು ನಾವು ತಯಾರಿದ್ದೇವೆಯೆ?!
ಪಾಶ್ಚಾತ್ಯರು ನಮಗಿಂತ ಮುಂಚೆ ಶತಮಾನಗಳ ಅಂತರದಲ್ಲಿ, ಒಂದೀಡಿ ಹೊಸ ಪರಂಪರೆಗೆ ಒಳಗಾದವರು! ನಮ್ಮ ಬೆಂಗಳೂರಿನಲ್ಲಿ ಐಟಿ ಬರುವ ಮುಂಚೆ ಲಿವಿಂಗ್ ಟುಗೆದರ್ ಎಂಬ ಪದಗಳನ್ನೇ ಕೇಳದ ಜನರಿದ್ದರು, ಬೈದುಕೊಂಡೋ ಆಡಿಕೊಂಡೊ ಈಗ ನಿಧಾನವಾಗಿ ಇದು ಅವರದ್ದೇ ಊರಿನ ಭಾಗವಾಗಿದೆ ಎಂಬ ಅರಿವು ಮೂಡಿದೆ! ಇದು ರಾತ್ರೋ ರಾತ್ರಿ ಆಗುವ ಬದಲಾವಣೆಯಲ್ಲ ಕಾಲಕ್ರಮೇಣ ಸುತ್ತಲೂ ನಡೆಯುವ ಘಟನಾವಳಿಗಳಿಂದ ಒಪ್ಪಿಕೊಂಡಿದ್ದು ಯಾಕೆಂದ್ರೆ ದೈಹಿಕವಾಗಿ ನಾವು ಹೇಗೆ ಕಂಡರೂ ಮಾನಸಿಕವಾಗಿ, ಅಮ್ಮ, ಅಜ್ಜಿ ಹಾಗೂ ಮನೆಯವರು ಹೇಳಿದ ಕಟ್ಟಳೆಗಳನ್ನು ಸುಲಭವಾಗಿ ಮೀರುವಂಥ ಜೀನ್ಸ ಮ್ಯುಟೇಷನ್ ಗೆ ನಮ್ಮ ಜನರೇಷನ್ ಒಳಗಾಗಿಲ್ಲ!
ಬಟ್ಟೆ ಬಳಸದೆ, ಸ್ಯಾನಿಟರಿ ಪ್ಯಾಡ್ ಬಳಸಬೇಕು ಎಂದು ಪಬ್ಲಿಕ್ ಆಗಿ ಹೇಳುವುದು ಕೂಡ ಟ್ಯಾಬು ಆಗಿದ್ದ ನಮ್ಮ ಸಮಾಜದಲ್ಲಿ, ಧೈರ್ಯವಾಗಿ ‌ಹೆಂಗಸೇ ಹೋಗಿ ಪ್ರೆಗ್ನೆನ್ಸಿ ಕಿಟ್ ತರುವವರೆಗೆ ಬದಲಾವಣೆಯಾಗಿಯೇ ಇದೆ! ಇದು ಕೂಡ ಬೆಳಗಾಗುವುದರೊಳಗಾಗಿ ಆದ ಬದಲಾವಣೆಯಲ್ಲ!
ಇನ್ನು ಪ್ರತಿ ಮನುಷ್ಯನ ಲಿಂಗಭೇದವಿಲ್ಲದೇ, ನಡೆಯುವ, ಯೋಚನಾ ‌ಲಹರಿ ಭಿನ್ನವಾದದ್ದು ಹಾಗೂ ಅದನ್ನು ಇನ್ಯಾರಿಗೋ ಹೆಳುವಂಥ ಅಥವಾ ಇನ್ಯಾರಿಂದಲೋ ಹೇಳಿಸಿಕೊಳ್ಳದಂಥ ಖಾಸಗೀ ವಿಷಯ! ಅದನ್ನ ಟಿವಿ ಪ್ಯಾನಲ್ ನಲ್ಲಿ, ಗಂಟೆಗಟ್ಟಲೇ ಚರ್ಚೆ ಮಾಡಿಯೋ ಅಥವಾ ಹ್ತಷ್ಟ್ಯಾಗ್ ಹಾಕಿ ಅಭಿಯಾನ ಮಾಡಿದಂತೆ ನಮ್ಮ ಪರ ಹಾಗೂ ವಿರೋಧದ ನಿಲುವುಗಳಿಂದ ಅಳೆಯುವುದಾಗಲೀ, ಅಥವಾ ಜಡ್ಜ್ಮೆಂಟ್ ಕೊಡವುದಕ್ಕೆ ನಾವ್ಯಾರು ನ್ಯಾಯಾಧೀಶರಲ್ಲ!
ಎಲ್ಲರಲ್ಲಿ ನ್ಯೂನ್ಯತೆಗಳಿವೆ, ಕಾರಣಗಳಿಲ್ಲದೇ ಪ್ರೀತಿಸುವ ಅಂಶಗಳೂ ಇವೆ! ಸಮಾನತೆ, ಸ್ವಾತಂತ್ರ್ಯ, ತಾರತಮ್ಯ, ಎಂಬ ಹೊಡೆದಾಟದ ಆಚೆಗೆ ನಮ್ಮ ಆತ್ಮ ತೃಪ್ತಿಪಡುವಂಥ ಅನೇಕ ಧನಾತ್ಮಕ ಅಂಶಗಳಿವೆ! ಭಾವನೆಗಳ ಅಲೆದಾಟವನ್ನು, ಮೊಮೆಂಟರಿ ಸಿಟ್ಟನ್ನೂ ಸಮತೋಲನದಿಂದ ತೂಗಿಸಿಕೊಂಡು ಹೋಗುವುದೇ ನಿಜವಾದ ಪ್ರಭುದ್ದತೆ!
ಕ್ಯುಂಕೀ 😍😇
ಜೀನಾ ಇಸೀ ಕಾ ನಾಮ್ ಹೈ