ನಮ್ಮ ಧಾರವಾಡದ ಮಳೆಗಾಲಕ್ಕ, ಮೋಹಕ ಸೊಬಗಿದೆ, ಎರಡು ನಿಮಿಷವೂ ಬಿಡದೆ, ಆಗಸವೆಂಬ ಬಿಂದಿಗೆಗೆ ಯಾರೋ ತೂತು ಮಾಡಿದ ಹಾಗೆ ಬಿಟ್ಟು ಬಿಡದೇ ಸುರಿಯುವ ತವಕವಿದೆ !ಇಂತಿಪ್ಪ ಮಳೆಗಾಲದಲ್ಲಿ ಬರುವ ಪಂಚಮಿಯ ಹಬ್ಬಕ್ಕೆ ಪ್ರೀತಿಯ ಆಚರಣೆ ಇದೆ.
ತಂಪಾದ ಮಂಜಿನ ಬೆಳಗು, ಜಿಟಿ ಜಿಟಿ ಸುರಿಯುವ ಮಳೆ, ಬೆಚ್ಚಗೆ ಹೊದ್ದು ಮಲಗಿದ್ದ ನಮ್ಮನ್ನ , "ಇವತ್ತು ಪಂಚಮಿ ,ಇವತ್ತರೆ ಬೇಗ ಎದ್ದು ಹಾಲು ಎರೆದು ಬಂದ್ಮೇಲೆ ನಾಷ್ಟಾ ನೆನಪಿರಲಿ "ಎಂದು ಗದರಿಸಿ ಎಚ್ಚರಿಸುತ್ತಿದ್ದ ಅಮ್ಮ, ರೇಶಿಮೆಯ ಕೆಂಪು ಹಾಗೂ ಹಸಿರು ಬಣ್ಣದ ಲಂಗ ದಾವಣಿ, ಮಲ್ಲಿಗೆ ಹೂವು, ಝುಮಕಿ, ಕೈತುಂಬ ಬಳೆ, ಕಾಡಿಗೆ ಹಾಗೂ ಕುಂಕುಮ ಇಟ್ಟುಕೊಂಡು ಅಮ್ಮ ತಯಾರಿಸಿಟ್ಟ , ಸಣ್ಣ ಗಿಂಡಿಯಲ್ಲಿ ಹಾಲು, ಅಗರ್ ಬತ್ತಿ,ತಂಬಿಟ್ಟು, ಶೇಂಗಾ ಉಂಡಿ , ಹುರಿದ ಜೋಳದ ಅಳ್ಳು ,ಹೂವು , ನೈವೇದ್ಯೆಗೆಂದು ಮಾಡಿಟ್ಟ ಕರಿಗಡುಬು, ದೀಪದ ಎಣ್ಣೆ-ಬತ್ತಿ, ಎಲ್ಲವನ್ನು ಶ್ರದ್ಧೆಯಿಂದ ಒಂದು ತಟ್ಟೆಗೆ ಜೋಡಿಸಿಕೊಂಡು ಅದರ ಮೇಲೆ ಉಲೆನಿಂದ ಹಣೆದ ಮುಚ್ಚಿಗೆ, ಅಮ್ಮನ ಸೆರಗನ್ನು ಹಿಡಿದು ಹಾಲನ್ನು ಎರೆಯಲು ಹೋಗುವುದೇ ದೊಡ್ಡ ಸಂಭ್ರಮ !
ಹೋಗುವ ದಾರಿಯಲ್ಲಿ ನೆರೆಯವರು ಸಿಕ್ಕು "ಹಾಲ್ ಎರಿಯಾಕ್ ಹೊಂಟೇರಿ? ಎಷ್ಟು ಎತ್ತರ ಬೆಳದಾಳ ನೋಡ್ರಿ ಮಗಳು, ಲಕ್ಷಣದ ಗೌರಮ್ಮ" ಎಂದು ಕೆನ್ನೆ ತಟ್ಟಿ ಪ್ರೀತಿಯಿ೦ದ , ಮಾತನಾಡಿಸುತ್ತಿದ್ದ ಆಂಟಿಯರು , ಗಣೇಶನ ದೇವಸ್ಥಾನದ ಅಂಗಳದಲ್ಲಿ ಆಲದ ಮರಕ್ಕೆ ಅಂಟಿಕೊಂಡಿದ್ದ ಕೆಂಪು ಮಣ್ಣಿನ ಹುತ್ತು, ಪ್ರತಿವರ್ಷ ನಾಗಪ್ಪ, ನಾವು ಹೋಗುವ ವರೆಗೆ ಹೊರಗೆ ಬರದೇ ಇರಲಪ್ಪ ಎಂಬ ಅಂಜಿಕೆಯಿಂದಲೇ ಹಾಲು ಹಾಕುವಾಗ, "ಹೆದರ್ಬ್ಯಾಡ ಅರಾಮ್ ಪೂಜೆ ಮಾಡು ಏನೂ ಆಗುದಿಲ್ಲ ಎಂದು" ಅಮ್ಮ ಹೇಳುತ್ತಿದ್ದ ಧೈರ್ಯ, ಅರ್ಚಕರು ಹೊರಗೆ ಬಂದು ನಂಗೋಸ್ಕರ ಒಂದು ಮಂಗಳಾರತಿ ಮಾಡಿ ಗಣೇಶನ ಮೇಲಿದ್ದ ಹೂವು ತಂದುಕೊಟ್ಟು, ಎಲ್ಲ ಚೊಲೋ ಆಗ್ಲಿ ಅರಾಮ್ ಇರ್ರಿ , ನೀನೆ ಫಸ್ಟ್ ಬರಬೇಕು ಈ ಸಲ ಎಕ್ಸಾಮ್ಸ್ನ್ಯಾಗ , ಎನ್ನುವಾಗ ಎಂತದೋ ಹಿಗ್ಗು!
ಆಮೇಲೆ ದೀಪ ಹಚ್ಚಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮನೆಕಡೆ ಹೊರಟರೆ ಜೋಕಾಲಿಯದ್ದೇ ಗುಂಗು.
ದೊಡ್ಡ ಮರಕ್ಕೆ ಕಟ್ಟಿದ ಜೋಕಾಲಿ ಆಡುವುದಕ್ಕೆ ಹರ ಸಾಹಸ ಪಟ್ಟು, ಕಡೆಗೆ ನಾನು ಹೆಚ್ಚು ,ನೀನು ಹೆಚ್ಚು ಎಂದು ಕ್ವಾರ್ಟರ್ಸ್ ಹುಡುಗೀಯರ ಜೊತೆ ಜಗಳ ಆಡುವ ಗೋಜೇ ಬೇಡ ಎಂದು ಹೇಳಿ ಅಪ್ಪ ಮನೆಯಲ್ಲೇ ನನಗಾಗಿ ಕಟ್ಟುತ್ತಿದ್ದ ಜೋಕಾಲಿ, ಅಡುಗೆ ಮನೆಯಿಂದ ಹಾಲ್ ಗೆ ಬರುವ ಪ್ಯಾಸೇಜ್ ಬ್ಲಾಕ್ ಮಾಡಿ ಪ್ರತಿ ಸಲ ಅಮ್ಮನಿಗೆ ಹಾಯ್ದು ಬೈಸಿಕೊಳ್ಳುತ್ತಿದ್ದ ದಿನಗಳು, ಇದರ ಮಧ್ಯೆ ತಮ್ಮನಿಗೂ ಸ್ವಲ್ಪ ಹೊತ್ತು ಜೋಕಾಲಿ ಬಿಟ್ಟು ಕೊಡುವ ತ್ಯಾಗ, ಒಂದೇ ಎರಡೇ, ಪಂಚಮಿ ಕೇವಲ ಹಬ್ಬವಲ್ಲ ಹುಡುಗೀಯರ ಪಾಲಿಗೆ ಸಡಗರ !
ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು