"ಶಿವಸೇನೆ", ಹೇಗೆ ಒಂದು ಕಟ್ಟರ್ ಹಿಂದುತ್ವ ಪ್ರತಿಪಾದಿಸುವ, ಭಾಷೆ ಹಾಗೂ ರಾಜ್ಯದ ಗಡಿಯ ಸಿದ್ಧಾಂತಕ್ಕೆ ಒತ್ತು ಕೊಡುವ ರಾಜಕೀಯ ಪಕ್ಷ ತಾನೇ ಖುದ್ದು ರಾಜಕೀಯ ಕಣ್ಣಾ ಮುಚ್ಚಾಲೆ ಆಟಗಳಿಗೆ ಬಲಿಯಾಯಿತು ಎನ್ನುವುದು ವಿಪರ್ಯಾಸವಾದರೂ ಸತ್ಯ!
ಮುಂಬೈ ಎಂಬ ಮಾಯಾನಗರಿಯಲ್ಲಿ ಮರಾಠಿಗಿರ ಹೊರತಾಗಿ ಅನೇಕ ಸಮುದಾಯಗಳು, ಹೊರ ರಾಜ್ಯದಿಂದ ವಲಸೆ ಬಂದ ಕಾರ್ಮಿಕರೂ, ನಮ್ಮ ಕರಾವಳಿ ಜನರನ್ನೂ ಸೇರಿಸಿಕೊಂಡೇ ನಮ್ಮ ಅಜ್ಜ ಅಪ್ಪಂದಿರ ಕಾಲಕ್ಕೆ ಬದುಕು ಕಟ್ಟಿಕೊಳ್ಳುವ ನಗರವೆಂದೇ ಖ್ಯಾತಿ ಪಡೆದ ಊರು. ಹೋದವರ್ಯಾರೂ ನಿರಾಶೆಯಾಗಿ ವಾಪಸ್ಸು ಬಂದ ನಿದರ್ಶನಗಳಿಲ್ಲ, ಐಟಿ ಬಿಟಿ ಕಂಪನಿಗಳ ಹಾವಳಿಯಿಂದ ನಮ್ಮ ಜೆನೆರೇಷನ್ ಗೆ ಬೆಂಗುಳೂರು ಇವತ್ತು ಹೇಗೋ , ಹಾಗೇ ಸುಮ್ಮರು ೨೫-೩೦ ವರ್ಷದ ಕೆಳಗೆ ಮುಂಬೈ ಕೂಡ ಹಲವರ ಅನ್ನದಾತ.
ಇಂತಿಪ್ಪ ಮುಂಬೈ ಜನರಿಗೆ ವಿಶೇಷವಾಗಿ ಮರಾಠೀ ಮಾತನಾಡುವ ಸಮುದಾಯ, ವಲಸಿಗರ ಇಂಗ್ಲಿಷ್ ಪಾಂಡಿತ್ಯದಿಂದೋ ಅಥವಾ ಹೆಚ್ಚಿನ ವಿದ್ಯಾರ್ಹತೆ ದೆಸೆಯಿಂದಲೋ ಎಪ್ಪತ್ತು ಹಾಗು ಎಂಭತ್ತರ ದಶಕಗಳಲ್ಲಿ, ಮೂಲ ಮುಂಬೈ ನಿವಾಸಿಗಳನ್ನು ಹೊರತುಪಡಿಸಿ ಹೊರಗಡೆ ಇಂದ ಬಂದವರನ್ನೆಲ್ಲ ಬಾಚಿ ತಬ್ಬಿಕೊಂಡು ಬೆಳಸುತ್ತಿರುವಾಗ ಹುಟ್ಟಿಕೊಂಡಿದ್ದೇ ಶಿವ ಸೇನೆ ಹಾಗೂ ಸೇನೆಯ ಮುಖ್ಯಸ್ಥ ಬಾಳ್ ಠಾಕ್ರೆ! ಟೀ ಮಾರಾಟ ಮಾಡುವ ಮಾಣಿಯಿಂದ ಹಿಡಿದು ಸರ್ಕಾರಿ ಕಚೇರಿಗಳ ವರೆಗೆ ಮರಾಠಿಗರಿಗೆ "ಮರಾಠಿಗರು" ಎಂಬ ಕಾರಣಕ್ಕೆ ಅನ್ಯಾಯವಾಗದಂತೆ ನೋಡಿಕೊಂಡ ಹೆಗ್ಗಳಿಕೆ ಆ ನಾಯಕನದ್ದು
ಮೂಲ ಮುಂಬೈ ನಿವಾಸಿಗಳಾದ ಹಾಗೂ ಮಾಧ್ಯಮ ವರ್ಗ ಹಾಗು ಕೆಲ ಮಧ್ಯಮ ವರ್ಗದ ಜನರ ಮನೆಗಳಲ್ಲಿ ಇವತ್ತೀಗೂ ಅವರ ಫೋಟೋ ನೇತು ಹಾಕಿರುವುದು ಕಾಣಸಿಗುತ್ತದೆ. ಇದು ಕೇವಲ ಅಂಧ ಶ್ರದ್ಧೆಯೋ, ಭಯವೂ ಆಗಿರಲಿಲ್ಲ, ಬದಲಾಗಿ ನಮನ್ನು ಕಾಪಾಡಲೆಂದೇ ಇರುವ ನಾಯಕ ಎಂಬ ವಿಶ್ವಾಸದ ನಂಬಿಕೆಯಾಗಿತ್ತು,
ತಳ ಮಟ್ಟದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೇ ದೊಡ್ಡ ಮಟ್ಟಕ್ಕೆ ಬೆಳೆಯಲಾಗುವುದಿಲ್ಲ ಹಾಗೂ ನಿಮ್ಮ ಗಡಿ ನಿಮ್ಮ ಭಾಷೆಯ ಜನರ ಹಿತಾಸಕ್ತಿ ಕಾಯ್ದುಕೊಳ್ಳುವ ಮೂಲ ಗುಣ ಇಲ್ಲದಿದ್ದರೆ ಒಬ್ಬ ನಾಯಕ ಸೋಶಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಇಷ್ಟು ಎತ್ತರವಾಗಿ ಬೆಳೆಯಲು ಸಾಧ್ಯವಿರಲಿಲ್ಲ. ರಾಜಕೀಯ ಹೊರತಾಗಿ ಇವತ್ತಿಗೂ ಬಲ ಠಾಕ್ರೆ ಹುಲಿಯೇ! ಅಂಥ ಒಂದು ಸಾಮ್ರಾಜ್ಯಕಟ್ಟಿ, ಮೈಕಲ್ ಜ್ಯಾಕ್ಸನ್ ಇಂದ ಹಿಡಿದು, ಇಂಡಿಯಾ ಪಾಕಿಸ್ತಾನದ ಕ್ರಿಕೆಟ್ ಮ್ಯಾಚ್ ಗಳನ್ನೂ ಸಹ ಕಂಟ್ರೋಲ್ ಮಾಡಬೇಕಿದ್ದರೆ ಅದೆಂತಹ ಸಾಮ್ರಾಜ್ಯ ಕಟ್ಟಿರಬೇಡ??!
ಆಗಿನ ಕಾಲಕ್ಕೆ, ಹಿಂದೂ ಮುಸ್ಲಿಂ ಗಲಾಟೆ, ಭೂಗತ ಲೋಕದ ಪಾತಕಿಗಳ ಸಂಘರ್ಷ , ಮತ್ತು ಭಯೋತ್ಪಾದನೆಯ ತಾಣವಾಗಿದ್ದ ಮುಂಬೈ ಎಂಬ ನಗರಿಯನ್ನು ಕೇಂದ್ರ ಸರ್ಕಾರವೂ ಪ್ರಶ್ನಿಸದಂತೆ ಕೇವಲ, ಭಾಷೆಯ ಹಾಗೂ ಒಂದು ಸಮುದಾಯದ ಜನರ ಪಲ್ಸ್ ಅನ್ನು ಆಳವಾಗಿ ಅರ್ಥೈಸಿಕೊಂಡು ಬೆಳೆದ ಪರಿ ರೋಚಕವೇ. ಇಂದಿರಾ ಗಾಂಧಿ ಖುದ್ದು ಅವರನ್ನು ಕರೆದು ರಾಜಿಗಾಗಿ ಬೇಡಿಕೆಯಿಡುತ್ತಿದ್ದರೆಂದರೆ ಸುಮ್ಮನೆ ಮಾತೆ??!
ಇಂತಿಪ್ಪ ಸಾಮ್ರಾಜ್ಯಕ್ಕೆ ಗ್ರೌಂಡ್ ರಿಯಾಲಿಟಿ ಗೊತ್ತಿಲ್ಲದ ಮಕ್ಕಳು, ಮೊಮ್ಮಕ್ಕಳು, ಕೆಲವು ಹುಂಬ ಮನಸ್ಥಿತಿಯ ಜನರ ಸೇರ್ಪಡೆಯಿಂದ, ಶಿವ ಸೇನೆ ಪುಂಡಾಟಕೀಯ ಪಕ್ಶವೆಂದೇ ಕುಖ್ಯಾತಿ ಪಡೆಯಲು ಶುರುಮಾಡಿತು. ಯಾರೋ ಎಲ್ಲೋ ಮಾಡುವ ಧಾಂದಲೆಗಳನ್ನು ಈ ಪಕ್ಷದ ಕಾರ್ಯಕರ್ತರೆಂಬ ಸಮರ್ಥನೆಯಲ್ಲಿ ಮುಗಿದು ಹೋಗುತ್ತಿದ್ದವು.
ಇಡೀ ದೇಶದಲ್ಲಿ ಭಾಷೆಯ ಹಾಗೂ ಗಡಿಯ ವಿಷಯಕ್ಕೆ ಬಂದರೆ ಮಹಾರಾಷ್ಟ್ರ ಮುಂಚೂಣಿಯಲ್ಲಿ ನಿಲ್ಲುತ್ತದೆ, ಕನ್ನಡಿಗರಾಗಿ ನಮಗೆ ಕೋಪ ತಾಪ ಬಂದರೂ ಬೆಳಗಾವಿಯಲ್ಲಿ ಬಂದು ಧಾಂದಲೆ ನಡೆಸಿ ತಮ್ಮ ಬಾವುಟ ಹಾರಿಸುವಷ್ಟು ಉಡಾಫೆ ತೋರಿಸಲು ಮೂಲ ಕಾರಣ ಮತ್ತದೇ ನಾವೆಲ್ಲ ಒಂದೇ ಎಂದು ಸಾರುವ ಮರಾಠೀ ಭಾಷೆ!
ಕೇವಲ ಭಾಷೆಯ ಮಾನದಂಡ ತೆಗೆದುಕೊಂಡರೆ ತಮಿಳು ನಾಡು ಹಾಗೂ ಕೇರಳ ಕೂಡ ಅಷ್ಟೇ ಜತನದಿಂದ ಭಾಷಾ ಪ್ರೇಮ ಹಾಗೂ ಪ್ರಾದೇಶಿಕ ಬೆಳವಣಿಗೆಗೆ ಒತ್ತು ಕೊಡುವ ರಾಜ್ಯಗಳು. ಆ ಕಾರಣಗಳಿಂದಲೇ ಅಲ್ಲಿನ ಜನ ಹಾಗೂ ಸರ್ಕಾರಗಳೂ ಕೇಂದ್ರದ ಮೇಲೆ ಅವಲಂಬಿತರಾಗದೇ ಆರಾಮಾಗಿ ಉಸಿರಾಡುತ್ತಿವೆ.
ಇಂತಹ ಇತಿಹಾಸ ಹಾಗೂ ಅಪಾರ ಜನಮನ್ನಣೆ ಪಡೆದ ಪಕ್ಷವೊಂದು ಕೇವಲ ಒಬ್ಬ ಚಿತ್ರನಟಿಯ ಮೇಲೆ ವೈಯಕ್ತಿಕ ದ್ವೇಷ ಸಾಧಿಸಲು ಹೋಗಿ ನಗೆಪಾಟಲಿಗೀಡಾಗಿ ಯುವ ಜನರ ಪಾಲಿನ ಖಳನಟ ಎಂಬಂತೆ ಚಿತ್ರಿಸಲ್ಪಟ್ಟಿದ್ದು ಮಾತ್ರ ದುರಂತ. ಇನ್ನು ಕಾಂಟ್ರೊವರ್ಸಿಗಳ ಜೀವಿತಾವಧಿ ನೋಡಲು ಹೊರಟರೆ ಅವು ನಮ್ಮ ಒಂದು ದಿನದ ಸ್ಟೇಟಸ್ ಸ್ಟೋರಿಗಳಷ್ಟೆಯೇ ಪ್ರಸ್ತುತ. ಇದರಿಂದ ಮುಖ ಭಂಗವಾಗಿದ್ದರೂ ಇದು ತೀರಾ ರಾಜಕೀಯವಾಗಿ ಪರಿಣಾಮ ಬೀಳಬಹುದೇ ಎಂದು ಕಾಡು ನೋಡಬೇಕಷ್ಟೆ!
ಎಲ್ಲ ವಿದ್ಯಾಮಾನಗಳೂ ಹೀಗೆ ನಡೆದೂ ಮೈತ್ರಿ ಸರ್ಕಾರ ಮಾತ್ರ ಬಿಜೆಪಿ ಹಾಗು ಶಿವ ಸೇನೆ ಇದ್ದಿದ್ದರೇ, ಇವತ್ತು #ಮನೆಮಗಳು #ಜೈ_ಕಂಗನಾ ಹಾಗೂ #love _you _kangana ಗಳು ಇಷ್ಟೇ ಪ್ರಬಲವಾಗಿ ಕೆಲಸ ಮಾಡುತ್ತಿದ್ದವೇ ಎಂದು ಯೋಚಿಸುವ ಸಮಯ!