Total Pageviews

Monday, April 27, 2020

ನೆನಪಿನ ಹುಲ್ಲು ಹಾಸಿ, ಬಾಲ್ಯದ ಹೊದಿಕೆ ಹೊದ್ದ ಸಂಭ್ರಮ!


ಜಿಟಿ ಜಿಟಿ ಮಳೆ ಬೀಳುತ್ತಲೇ ಮನವೂ ಒದ್ದೆಯಾಗಿ ,ಮಗ್ಗಲು ಬದಲಿಸಿ, ಬಾಲ್ಯಕ್ಕೆ ಮರಳಿದೆ! ಹೀಗೆ ನಿಶ್ಶಬ್ದದ ಬಾನಿನಲ್ಲಿ , ಮೋಡಗಳ ಮರೆಯಲ್ಲಿ ಅಡಗಿ ಕುಳಿತಿರುತ್ತಿದ್ದ ಸೂರ್ಯನ ದರ್ಶನವೇ ಇಲ್ಲದ ದಿನಗಳು,ವಾರಗಳು , ಅಜ್ಜನ  ಬೆಚ್ಚನೆಯ ತಬ್ಬುಗೆಯ ಘಮ , ಅಜ್ಜಿಯ ಬೆಳ್ಳುಳ್ಳಿ ಒಗ್ಗರಣೆಯ ಘಾಟು, ಅಪ್ಪನ ಪಂಚತಂತ್ರ ಕಥೆಗಳು, ಅಮ್ಮನ ಲಾಲಿಯ ಹಾಡುಗಳು, ಹಿತ್ತಲಿನ ಸಂಪಿಗೆಯ ರಾಶಿ , ಅಂಗಳದ ಮಲ್ಲಿಗೆಯ ನಗು, ಹೀಗೆ ಒಂದೇ ಎರಡೇ, ಬಾಲ್ಯದ ಅಣುಅಣುವು ವೈವಿಧ್ಯಮಯ.

ಒಂದು ರೂಪಾಯಿಯ ಐಸ್ ಕ್ಯಾಂಡಿ , ಅಜ್ಜಿಯ ಕೂದಲು ಎಂಬ ಮಿಠಾಯಿ, ಮರದ ತೊಗಟೆಯಿಂದ ಪೀಪಿ ಆಕಾರದಲ್ಲಿ  ಮಾಡಿದ ಆಟಿಕೆ, ಕುಂಟಾಬಿಲ್ಲೆ,ಮುಟ್ಟಾಟ, ಕಲರ್ ಕಲರ್ ವಾಟ್ ಕಲರ್, ಕಣ್ಣಾ ಮುಚ್ಚಾಲೆ, ಕೆರೆ ದಡ ,ಬೆಳಗಿನಾಟಗಳಾದರೆ ಸಂಜೆಗಾಗಿ ಕಾಯ್ದಿರುಸುತ್ತಿದ್ದ ವೃತ್ತಾಕಾರದಲ್ಲಿ ,ಸುತ್ತಲೂ ಕುಳಿತು  ಆಡುತ್ತಿದ್ದ ಅಂತ್ಯಾಕ್ಷರಿ, ಒಬ್ಬರ ಕಿವಿಯಿಂದ ಇನ್ನೊಬ್ಬರ ಕಿವಿಗೆ ಹೋಗುವಷ್ಟರಲ್ಲಿ ಬದಲಾಗಿಹೋಗುತ್ತಿದ್ದ "ಹೆಲೋ' ಎಂಬ ಮಜವಾದ ಆಟ, ರಾಜ ರಾಣಿ ಕಳ್ಳ ಪೊಲೀಸ್, ಜುಂಕ್ಷನ್ ಎಂಬ ಚೀಟಿಯ ಆಟಗಳು. ಯಾವಾಗಲೂ ಬ್ಯಾಕ್ಗ್ರೌಂಡ್ ನಲ್ಲಿ, ರಫಿ ಲತಾ ರ ಎವರ್ಗ್ರಿನ್ ಹಾಡುಗಳು, ನಮ್ಮ ಉತ್ತರ ಕರ್ನಾಟಕದಲ್ಲಿ ಒಂಚೂರು ಹಿಂದಿ ಹೇರಿಕೆ ಇತ್ತೇನೋ (ಕನ್ನಡ ಹಾಡುಗಳು ಕಡಿಮೆ ಪ್ರಚಲಿತದಲ್ಲಿದ್ದವು)!

ಬೆಂಗಳೂರಿನಲ್ಲಿ ಮೋಡ ಕವಿದಾಗಲೆಲ್ಲ ಮನಸ್ಸು ಧಾರವಾಡದ ಕಡೆ ಮುಖ ಮಾಡಿ ನಿಲ್ಲುತ್ತದೆ, ಗೊತ್ತಿಲ್ಲದೇ ಕಣ್ಣಾಲಿಗಳೆಲ್ಲ ಕಳೆದು ಹೋದ ಒಂದೊಂದು ಭಾವಾವನ್ನೂ ಕಲೆ ಹಾಕಿ ಕೂಡಿಡಲು ಪ್ರಯತ್ನಿಸುತ್ತದೆ! KCD ಎಂಬ ಸ್ವರ್ಗದ ಕಡೆ ಕೈ ಚಾಚಿ ಕರೆಯುತ್ತದೆ, ಕಿತ್ತೂರು ಚೆನ್ನಮ್ಮ ಪಾರ್ಕಿನ  ಮಕ್ಕಳಾಟದ ಮೈದಾನ ಖಾಲಿಯಾದ ನೋವನ್ನು ನೆನಪಿಸುತ್ತದೆ. ಕತ್ತಲಾದರೂ ಬಿಡದೇ ಸರದಿಸಾಲಿನಲ್ಲಿ ನಿಂತು ತಿನ್ನುತ್ತಿದ್ದ ಪ್ರಕಾಶ್ ಸೇವ್ ಪುರಿ ಸೆಂಟರ್, ಮಹಾರಾಷ್ಟ್ರ ಕ್ಯಾಂಟೀನ್ ನ ಶಾಬುದಾನಿ ವಡ, ದುರ್ಗದ್ ಬೈಲಿನ ಗಿರ್ಮಿಟ್ ಹಾಗೂ ಮಿರ್ಚಿ ಎಲ್ಲವನ್ನೂ ಒಂದೇ ದಿನಕ್ಕೆ ತಿಂದು ತೇಗುವ ಆವೇಗ!

ಎಲ್ಲರ ಬಾಲ್ಯವೂ  ಸುಂದರ, ಬಾಲ್ಯದ ಜೊತೆಗೇ  ಹೊಸೆದುಕೊಂಡ ನೆನಪೂ ಮಧುರ, ಎಷ್ಟೇ ವಯಸ್ಸ್ಸಾದರೂ ಹದಿನೆಂಟೇ ಎಂದು ಹೇಳಿಕೊಳ್ಳುಲು ಬಯಸುವ ಅವಿವೇಕಿ ಆಸೆಗೂ ಮೀರಿದ್ದು, ಸರಿ- ತಪ್ಪು, ನಿಜ-ಸುಳ್ಳು , ಎಂಬ ಜಡ್ಜ್ಮೆಂಟಗಳಿಲ್ಲದ, ಅಮಾಯಕ ಸ್ಥಿತಿ, ಮನೆ, ಕುಟುಂಬ, ಸ್ನೇಹಿತರು, ನೆರೆ ಹೊರೆಯವರು, ಇಷ್ಟೇ ಪ್ರಪಂಚ ಎಂಬಂತೆ ಇದ್ದು ಬಿಡುವ ಮನಸ್ಥಿತಿಯ ಅನಾವರಣವೇ ಸೋಜಿಗ. ಮುಲಾಜಿಗೆ ಬಿದ್ದು ಯಾರನ್ನೋ ಖುಷಿ ಪಡಿಸುವ ಇರಾದೆಯೇ ಇರದ ತಟಸ್ಥ ಭಾವನೆ.


ಕರ್ಮಭೂಮಿಯಲ್ಲಿ, ನೆನಪಿನ ಹುಲ್ಲು ಹಾಸಿ, ಬಾಲ್ಯದ ಹೊದಿಕೆ ಹೊದ್ದು ಸಂಭ್ರಮಿಸುವುದಷ್ಟೇ  ಸಧ್ಯಕ್ಕೆ ಪಡೆದ ಭಾಗ್ಯ,
ಆದರೆ ಒಂದಂತೂ ಸತ್ಯ , ಮಳೆಯಾದಾಗಲೆಲ್ಲ, ಮಾಯಾವೀ ನಗರ, ನಮ್ಮದಲ್ಲದ ವರ್ಚುಯಲ್  ಅಸ್ತಿತ್ವವನ್ನು ಅಣುಕಿಸಿ ಹೋದಂತಾಗುತ್ತದೆ!




No comments:

Post a Comment