Total Pageviews

Friday, February 10, 2012

ಮಾತನಾಡದೇ ಎಲ್ಲ ಹೇಳುವ ಗೋಡೆಗಳು!

                ನಮ್ಮ ಡಿಗ್ರಿ ಕಾಲೇಜ್ ನ, ಹಾಸ್ಟೆಲ್ ಗೋಡೆಗಳು ಬಿಟ್ಟು ಬಿಡದೆ ನೆನಪಾಗಿ ಕಾಡುತ್ತಿವೆ ! ಗೋಡೆಗಳು ಇಟ್ಟಿಗೆ ಸಿಮೆಂಟು ಮಿಶ್ರಣದ, ನಿರ್ಜೀವ್ ವಸ್ತು ಎಂದೂ ನಮಗೆಂದೂ ಕಂಡೆ ಇರಲಿಲ್ಲ, ಪ್ರತಿ ಹುಡುಗಿಯ ವ್ಯಕ್ತಿತ್ವ  ಬಿಂಬಿಸುವ, ಹಾಗೂ ನಮ್ಮೆಲ್ಲರ ಹಸ್ತಾಕ್ಷರದ ಮುತ್ತಿಡಿಸುಕೊಳ್ಳುವ ಹುಡುಗನಂತೆ ಗೋಚರಿಸುತ್ತಿದ್ದವು. ನಮ್ಮ ಹುಚ್ಚು ತಾಣದ ಪರಮಾವಧಿ ಅದ್ಯಾವ್ ಪರಿ ಇತ್ತೆಂದರೆ, ನಾಲ್ಕು ಗೋಡೆಗಳೇ ನಮ್ಮ ಸರ್ವಸ್ವವೂ ಆಗಿ ಹೋಗಿದ್ದವು.

                   ಏನೆಲ್ಲಾ ಬರೆಯುತ್ತಿದ್ದೆವು? ಪ್ರತಿ ಸಂಭ್ರಮಗಳ  ದಿನಾಂಕ, ಚಿಕ್ಕ ಚಿಕ್ಕ ಗೆಲುವುಗಳ ನೆನಪು, ಜಗಳವಾದ ದಿನ, ಮತ್ತೆ ಕೂಡಿದ ಬಿಸಿ ಅಪ್ಪುಗೆ, ಸ್ನೇಹಿತೆಯ ಮದುವೆಯ ವಾರ, ತುಂಬಾ ಇಷ್ಟವಾಗುವ ಗೀತೆ, ಕವನ,ಕನಸಲ್ಲಿ ಕಾಡುವ ಹುಡುಗನ ತಲೆಯೇ  ಇರದ ಚಿತ್ರ, ನಮ್ಮನ್ನು ಸದಾ ಜಗೃತೆಯಿಂದ  ಇರುವಂತೆ ಮಾಡುವ ಸ್ವಾಮಿ ವಿವೇಕಾನಂದರ ಧ್ಯೇಯ ವಾಕ್ಯ, ಕಾಡಿಸುವ ಅಡ್ಡಡ್ಡ ಹೆಸರುಗಳು, ನಮ್ಮ ನೆಚ್ಚಿನ ನಾಯಕರ ಪಟಗಳು, ಗೋಡೆಗೆ ನೋವಾಗುವಂತೆ ಚುಚ್ಚಿದ ಮೊಳೆಗಳಿಂದ ನೇತಾಡುವ ಕ್ಯಾಲೆಂಡರ್, ನಮ್ಮ ಎತ್ತರ ನೋಡಿಕೊಳ್ಳಲು ಎಳೆದ ಉದ್ದ ರೇಖೆ ಇನ್ನು ಅದೆಷ್ಟು ಹೊಸ ಬ್ಯಾಚ್ಗಳಿಗೆ ಅದು ಸಹಕಾರಿಯಾಗಬಲ್ಲುದೋ?! ಒಂದೇ ಎರಡೇ ಪಟ್ಟಿ ಮಾಡುತ್ತಾ ಕುಳಿತರೆ, ದಿನ ಪೂರ್ತಿ ಸಾಲದು.

                   ಅಪ್ಪ-ಅಮ್ಮನ ನೆನಪಾದಾಗ ಸುಮ್ಮನೆ ಗೋಡೆಗೆ ವರಗಿಕೊಂಡು ಅತ್ತಾಗ ಅದೆಂಥ ಆಪ್ತ ಸಮಾಧಾನ! ಗೊತ್ತಿಲ್ಲದೇಯೋ, ಗೊತ್ತಿದ್ದೋ ಸಂಭ್ರಮದ ಕ್ಷಣಗಳಲ್ಲಿ ಗೋಡೆಯನ್ನು ಅಪ್ಪಿ ಮುದ್ದಾಡಿದಂಥ ಮಧುರ ನೆನಪು, ಬೆಳ ಬೆಳಗ್ಗೆ ಓದಲು ಎದ್ದು ಕುಳಿತು ಕಣ್ಣು ಜಗ್ಗಿ ಜಗ್ಗಿ ಓದಲಾಗದ ಸಂದರ್ಭದಲ್ಲಿ ಗೋಡೆಯನ್ನೇ ತಲೆ ದಿಂಬ್ಎಂದು ತಿಳಿದು ಹಾಗೆ ಕಣ್ಮುಚ್ಚಿ ಅನುಭವಿಸುವ ನಿದ್ದೆಯ ಸವಿ, ಒಂಟಿತನಕ್ಕೂ ಏಕಾಂತಕ್ಕೋ ಇರುವ ವ್ಯತ್ಯಾಸವನ್ನ ಅರೆಯುವಂತೆ ಮಾಡುವುದೇ ಈ ಗೋಡೆಗಳು.

                  ಹಾಗಾಗಿಯೇ ಈಗಲೂ ನನಗೆ ಮನೆಗಳಿಗಿಂತ ಗೋಡೆಗಳೇ ತುಂಬಾ ಆಪ್ತವೆನಿಸುತ್ತವೆ, ಇದು ಕೊಂಚ ವಿಪರೀತ ಅನ್ನಿಸಿದರೂ, ಗೋಡೆಗಳು ಮನೆಗೆ ಹೇಗೆ ಆಧಾರ ಸ್ಥಂಭ ಗಳಾಗಿರುತ್ತವೆಯೋ, ಹಾಗೆಯೇ ನಮಗೆ ಗೊತ್ತಿಲ್ಲದೇ ನಮ್ಮದೇ ಒಂಟಿತನದ ಗೆಳೆಯನಂತಾಗಿ ಬಿಡುತ್ತವೆ. ಕೇವಲ ಮನೆ, ಹಾಸ್ಟೆಲ್, ಹಾಗೂ ರೂಮ್ಗಳ ಮಾತಲ್ಲ, ನಿಮ್ಮ ನಿಮ್ಮ ಕಛೇರಿಗಳ ಗೋಡೆಗಳನ್ನು ಒಮ್ಮೆ ಮಗ್ಗುಲು ಬದಲಿಸಿ ನೋಡಿ, ನಿಮಗೆ ಗೊತ್ತಿಲ್ಲದೇ ಅದೆಷ್ಟು ಸಲ ಅವಗುಳ ಅಪ್ಪುಗೆ ಇಂದ ನಿರಾಳ ಗೊಂಡಿದ್ದಿರಿ ಎಂಬುದು ಜ್ಞಾಪಿಸಿಕೊಳ್ಳಿ. ಮನೆಯ ಗೋಡೆಗಳು , ತುಂಬಾ ಶಾಂತ  ಸ್ವಭಾವದ, ಗಂಭೀರ ಗೆಳೆಯನಂತೆ  ಕಂಡು ಬಂದರೂ, ಆ ಘನಘೋರ ಗಾಂಭೀರ್ಯದ ನಡುವೆಯೂ, ವಯಸ್ಕರಿಗೆ ಆಧಾರ ವಸ್ತುವಿನಂತೆ, ಚಿಕ್ಕ ಮಕ್ಕಳಿಗೆ ತಮ್ಮ ಮನದಾಳದ ರೇಖೆಗಳನ್ನು ಗೀಚುವ ಹಾಳೆಗಳಂತೆ ಕಾಣಿಸುತ್ತವೆ.

                   ನಾವೆಲ್ಲರೂ ಒಂದಿಲ್ಲೊಂದು ನಿರ್ಜೀವ ವಸ್ತುವಿನೋಟ್ಟಿಗೆ ಭಾವನಾತ್ಮಕವಾಗಿ ಬೆಸೆದು ಕೊಂಡಿರುತ್ತೇವೆ, ಅದು ಅಜ್ಜ ಕೊಡಿಸಿದ ಮೊದಲ ಕೈ ಗಡಿಯಾರ, ಮೊದಲ ದ್ವಿಚಕ್ರ ವಾಹನ,  ಶಾಲೆ, ಕಾಲೇಜ್ ಗಳಲ್ಲಿ ನಾವು ನಾವಷ್ಟೇ ಕುಳಿತುಕೊಳ್ಳುವ ನಿರ್ದಿಷ್ಟ ಜಾಗ,  ಅಮ್ಮ ಮೊದಲು ಕೊಡಿಸಿದ ಉಂಗುರ, ಅಕ್ಕ ಕೊಡಿಸಿದ ಕಾದಂಬರಿ, ತಮ್ಮನ ಅಲಾರ್ಮ್, ಇಂಥ ಅನೆಕವೂ ನಮ್ಮದೇ ಎಂಬ ವಿಪರೀತ ಪೋಸ್ಸೇಸ್ಸಿವ್ನೆಸ್ಸ್  ಬೆಳೆಸಿಕೊಂಡಿರುತ್ತೇವೆ, ಅದ್ಯಾಕೆ ಹೀಗೆ ಈ ನಿರ್ಜೀವ ವಸ್ತುಗಳ ಮೇಲೆ ನಮಗೆ ಅಷ್ಟೊಂದು ಪ್ರೇಮ?? ವ್ಯಕ್ತಿಗಳಾದರೆ ಬದುಕಿನ ತಿರುವುಗಳಿಗೆ  ಒಳಗಾಗಿ ನಮ್ಮನ್ನು ಬಿಟ್ಟು ಹೋಗಬಹುದು, ಆದರೆ ಇವುಗಳು ನಾವೇ ಬಿಡುವ ವರೆಗೂ ನಮ್ಮನ್ನು ಬಿಡದೆ ಇರುವ ಕಾರಣಕ್ಕೋ?? ಅಥವಾ ನಮ್ಮನ್ನು ಎಂದೂ ಒಂಟಿತನ ಕಾಡದಿರಲಿ ಎಂದು ನಾವೇ ನಿರ್ಮಿಸಿಕೊಳ್ಳುವ pseudo  ಮುದ ನಿಡುವ ನಮ್ಮವೇ ಅಂದು ಕೊನೆವರೆಗೂ ಗುರುತಿಸುಕೊಳ್ಳುವ ಐಡೆಂಟಿಟಿ ಗಳು ಆಗಿರಬಹುದು.


                     ನಮ್ಮದೇ ಅನ್ನಿಸಿಬಿಟ್ಟ ಗೋಡೆಗಳು ಈಗ ಅದ್ಯಾವ ಹುಡುಗಿಯರ ಸ್ವತ್ತಾಗಿವೆಯೋ ಯಾಂವ ಬಲ್ಲ?  ಕೊನೆವರೆಗೂ ನಮ್ಮದೇ ಗೋಡೆಗಳಾಗಿ ಉಳಿಯಬೇಕೆಂದು ಬಯಸುವುದು, ಹತ್ತಿದ ಬಸ್ಸು ಇಷ್ಟವಾಯಿತೆಂದು ನಮ್ಮ ನಿಲ್ದಾಣ ಬಂದರೂ ಇಳಿಯದೇ ಅಲ್ಲೇ ಕುಳಿತುಕೊಳ್ಳುವ ಪ್ಯಾಲಿತನ ಅಲ್ಲವೇ?? ಹಾಗಂತ ನಾವಿದ್ದ ಹಳೆ ಮನೆ, ನಾವ್ ಆಡಿದ ಶಾಲೆ ಮೈದಾನ, ಕಾಲೇಜ್ ಮುಂದಿನ ವಿಶಾಲ ಆಲದ ಮರ, ನಾವು ನಡೆದಾಡಿದ ರಸ್ತೆ, ಓಡಾಡಿದ ಬೀದಿ, ಪಕ್ಕದ್ಮನೆ ಹುಡುಗ, ದೂರದಲ್ಲೆಲ್ಲೋ ಕುಳಿತು ಬಿಕ್ಷೆ ಬೇಡುತ್ತಿದ್ದ ಅಶಕ್ತ ಅಜ್ಜಿ, ಪಾರ್ಕ್ನಲ್ಲಿ ಕಂಡ ಅದ್ಯಾವುದೋ ಮುದ್ದು ಮಗುವಿನ ಮುದ್ದು ನಗು, ಇದ್ಯಾವುದನ್ನು ನಾವು ವಿಪರೀತ ಹಚ್ಚಿಕೊಳ್ಳಲಾಗುವದಿಲ್ಲ,ಇವುಗಳನ್ನೆಲ್ಲ ಫಾರ್ ಟೈಮ್ ಬಿಇಂಗ್ ಅಷ್ಟೇ ಅನುಭವಿಸಿ ಸುಮ್ಮನಾಗಬೇಕು, ಯಾಕೆಂದರೆ ಇವುಗಳನ್ಯಾವುದನ್ನೂ ನಾವು ಕೊನೆವರೆಗೂ carry  ಮಾಡಲಾಗುವುದಿಲ್ಲ, ನಮ್ಮ ನೆನಪಿನ ಅಂಗಳದಲ್ಲಿ ಇವುಗಳದ್ದೆಲ್ಲ ಮಧುರ ಅಧ್ಯಾಯಗಳಷ್ಟೇ ಹೊರತು, ಇವುಗಳೇ ನಮ್ಮ ಅಸ್ತಿತ್ವಗಳು ಎಂದಾಗಲು ಸಾಧ್ಯವಿಲ್ಲ, ಹಾಗಂತ ಅಂದುಕೊಂಡೆ ಸಮಾಧಾನ ಪಡಬೇಕು.

                     ಬೇಜಾರಾದಾಗ ತಿರುಗುವ ಸೀಲಿಂಗ್ ಫ್ಯಾನ್ ನೋಡಿ ನಮ್ಮ ನೆನಪಿನ DVD  player  ಸ್ವಿಚ್ ಆನ್ ಮಾಡಿದಾಗ, ಪ್ಲೇ ಮಾಡಲು ಯಾವ ಮಧುರ ನೆನಪೇ ಇಲ್ಲದಿದ್ದರೆ ಹೇಗೆ? ಕೆಲುವು ಕ್ಷಣಗಳು ನೆನಪಾಗಿರುವುದೇ ಸಂಭ್ರಮ, ಆ ನೆನಪುಗಳನ್ನು ಕೊನೆ ವರೆಗೂ rewind  ಮಾಡಿ ನೋಡುವ ಆನಂದಕ್ಕಿಂತ, ಇನ್ನೊಂದು ಖುಷಿ ಕೊಡುವ ಸಂಗತಿ ಇದೆಯೇ??








11 comments:

  1. ಬರಹ ಚೆನ್ನಾಗಿದೆ,(ಕೆಲವು ಕಾಗುಣಿತ ದೋಷಗಳಿದೆ)

    ......ಇದ್ಯಾವುದನ್ನು ನಾವು ವಿಪರೀತ ಹಚ್ಚಿಕೊಳ್ಳಲಾಗುವದಿಲ್ಲ,ಇವುಗಳನ್ನೆಲ್ಲ ಫಾರ್ ಟೈಮ್ ಬಿಇಂಗ್ ಅಷ್ಟೇ ಅನುಭವಿಸಿ ಸುಮ್ಮನಾಗಬೇಕು .. ನಿಜವಾದ ಮಾತು .

    ReplyDelete
    Replies
    1. ಕೆಲವು ಕಾಗುಣಿತ ದೋಷಗಳಿದೆ (ವ್ಯಾಕರಣ ದೋಷ) ---> ಕೆಲವು ಕಾಗುಣಿತ ದೋಷಗಳಿವೆ

      it is always good not to act like a smartass- especially when you know that you are certainly NOT one!

      regs
      -R

      Delete
  2. ಉತ್ತಮ ಬರಹ. ಧನ್ಯವಾದಗಳು

    ReplyDelete
  3. What do u mean by ಪ್ಯಾಲಿತನ??????

    ReplyDelete
  4. HRUDAYADA GODEGALU... chikkavaniddaga 'jeeva vignyana' subject nalli hrudayada godegala bagge oodida nenepu. bavantmaka vagi helidre aaga gode ellada manassu, adre ega MATURED MANASSU,,, esto bele kattalagada novu nalivu galannu anubavisi yako nalku gode gala madde bandita vagide eno anno anubava, adru sunna banna hachhi sundaravagi kano COSTLY HEART, ISN'T IT???

    ReplyDelete
  5. ನಿರ್ಜೀವ ವಸ್ತುಗಳಲ್ಲಿಯೂ ಜೀವವನ್ನು ಗುರ್ತಿಸಿ ಅಪ್ಯಾಯಮಾನತೆ ಹುಡುಕುವ ಮನಸ್ಸಿನ ಮುಗ್ಧ ಭಾವಗಳನ್ನು ಸುಂದರವಾಗಿ ಹರಡಿದ್ದೀರಿ.. ಮಾನವನಿಗೆ ಹಚ್ಚಿಕೊಂಡರೆ ಗೋಡೆಗಳಷ್ಟೆ ಅಲ್ಲಾ, ನಾವು ನಮ್ಮ ನೆನಪುಗಳನ್ನು ಉಳಿಸಿಕೊಳ್ಳಲು ಅಪ್ಪ ಕೊಟ್ಟ ಮೊದಲ ಮುರಿದ ಆಟಿಕೆಯ ಕಾರಿನ ಚಕ್ರವೂ ಸಾಕು, ಅದರೊಂದಿಗೆ ಬೆಸೆದುಕೊಂಡ ನೆನಪುಗಳು ಮುಖ್ಯವಾಗುತ್ತವೆಯೇ ವಿನಃ ಅವುಗಳಿಗೆ ಜೀವವಿದೆಯೇ ಇಲ್ಲವೊ ಎಂಬುದು ಮುಖ್ಯವಾಗುವುದಿಲ್ಲ.. ಎಷ್ಟೇ ಭಾವನಾತ್ಮಕವಾದ ಬಂಧಗಳಿದ್ದರೂ ನೀವು ಹೇಳಿದಂತೆಯೆ ಕೇವಲ ಟೈಮ್ ಬೀಯಿಂಗ್ ಗಷ್ಟೆ, ಜೀವವಿರುವ ಆತ್ಮೀಯರು ತೊರೆದಾಗಲೇ ಉಸಿರಾಡುತ್ತೀವಂತೆ, ಇವುಗಳಿಲ್ಲದೆ ಇರಲಾಗದೆ.. ಕಡೆಯಲ್ಲಿನ ಪಂಚ್ ಲೈನ್ ಗಳು ಲೈಫು ಇಷ್ಟೇನೆ ಸಿನೆಮಾದ ಅಂತ್ಯವನ್ನು ನೆನಪಿಸಿತು..
    ಬಾಳ ಪಯಣ,
    ಉಳಿಸಿಕೊಂಡ ಕೆಲವು
    ನೆನಪುಗಳೊಂದಿಗೆ,
    ಕೂಡಿಟ್ಟ ಕನಸುಗಳೊಂದಿಗೆ..:)

    ReplyDelete
  6. ಮನಸ್ಸಿನ ಗೋಡೆಗಳಲ್ಲಿ ಬರೆದ ಕೆಲವು ಬರಹಗಳು ಮತ್ತೆ ಮತ್ತೆ ಒತ್ತರಿಸಿ ಬರುತ್ತವೆ ನಿಮ್ಮ ಬರಹ ಓದಿದಾಗ.ಯಾರೂ ಅಳಿಸಲಾಗದು ಮನಸ್ಸಿನ ಹಲಗೆಯಲ್ಲಿ ಬರೆದ ಕೆಲವು ಅಳಿಸಲಾಗದ ನುಡಿಚಿತ್ರಗಳು. ಚೆನ್ನಾಗಿದೆ ನಿಮ್ಮ ಬರಹ.

    ReplyDelete
  7. ಕೆಲುವು ಕ್ಷಣಗಳು ನೆನಪಾಗಿರುವುದೇ ಸಂಭ್ರಮ, ಆ ನೆನಪುಗಳನ್ನು ಕೊನೆ ವರೆಗೂ rewind ಮಾಡಿ ನೋಡುವ ಆನಂದಕ್ಕಿಂತ, ಇನ್ನೊಂದು ಖುಷಿ ಕೊಡುವ ಸಂಗತಿ ಇದೆಯೇ??

    ಮನಸನರಳಿಸುವ ಮನದ ಗೋಡೆಯ ಮೇಲಿನ ಮಧುರ ನೆನಪುಗಳ ಬರಹ ಇಷ್ಟವಾಯಿತು...

    ReplyDelete
  8. ತುಂಬಾ ಚೆನ್ನಾಗಿ ಬರೆದಿದ್ದೀರಿ... ಜೀವವಿರುವವರಿಗಿಂತ ನಿರ್ಜೀವ ಗೋಡೆಗಳು ಕೆಲವೊಮ್ಮೆ ಆಪ್ತವಾಗಿ ಬಿಡುತ್ತವೆ

    ReplyDelete
  9. ಇಷ್ಟವಾಯಿತು.. ಬರಹ ಶೈಲಿ ಎರಡೂ

    ReplyDelete