ಹೋಟೆಲ್ ಒಂದರಲ್ಲಿ ಸಹೋದ್ಯೋಗಿಯೊಬ್ಬರ ಔತಣ ಕೂಟವನ್ನು ಏರ್ಪಡಿಸಲಾಗಿತ್ತು ! ಆರ್ಡರ್ ಮಾಡಲಾಗಿ ಒಂದೊಂದೆ ಪದಾರ್ಥ ಬರುವಾಗ ಪುರುಷರೆಲ್ಲರೂ ನಾಳೆ ಇಲ್ಲವೇನೋ ಎಂಬಂತೆ ತಿನ್ನುವುದರಲ್ಲೇ ಮಗ್ನರಾಗಿದ್ದರು ! ನನ್ನ ಸ್ನೇಹಿತೆ ಮಾತ್ರ ಅಯ್ಯೋ ಮಗಳನ್ನು ಡೇ ಕೇರ್ ನಲ್ಲಿ ಬಿಟ್ಟು ನಾನು ಮಾತ್ರ ಇದನ್ನೆಲ್ಲಾ ಅನುಭವಿಸ್ತಾ ಇದೀನಿ ಛೆ! ಅಂತ ಕೊರಗುತ್ತಿದ್ದಳು. ತಕ್ಷಣ ನನ್ನ ಪಿತ್ತ ನೆತ್ತಿಗೇರಿ ಕಣ್ಣು ಕೆಕ್ಕರಿಸಿ ನೋಡಿ , ಸಾಕು ವಿಶಾಲ ಹೃದಯ ತಾಯೆ ಸುಮ್ನೆ ಈ ಕ್ಷಣವನ್ನು ಹಾಳು ಮಾಡದೇ ತಿಂದು ನಡಿ ಅಂದೆ !
ನಾ ಹೇಳಿದ ಮಾತು ಅವಳಿಗಿಷ್ಟವಾಗಿರಲಿಲ್ಲ , ಅಸಲಿಗೆ ಅರಗಿಸಕೊಳ್ಳಲೂ ಆಗಿರಲಿಲ್ಲ , ನೀನು ಒಬ್ಬ ತಾಯಿಯಾಗಿ ಹೀಗೆ ಹೇಳಬಹುದಾ ಅಂತ ಕೇಳಿದಳು.. ನಾನು ತಾಯಿಯಾಗಿ ಹೇಳುತ್ತಿಲ್ಲ ಒಬ್ಬ ಸ್ನೇಹಿತೆಯಾಗಿ ಹೇಳುತ್ತೀನಿ ಕೇಳು.. ನಿನ್ನ ಕಳಕಳಿ ಕಾಳಜಿ ಒಪ್ಪತಕ್ಕುವಂಥದ್ದೇ ಆದ್ರೆ ಅತೀಯಾದ ಭಾವೋದ್ವೇಗ ಹಾಗು ಪ್ರತಿ ಹಂತ ಪ್ರತಿ ಕ್ಷಣದಲ್ಲೂ ನಾನು ತಾಯಿ ನಾನು ಹೀಗೇ ಇರಬೇಕು ಎಂದು ಬೇಲಿ ಹಾಕಿಕೊಂಡು ಬದುಕುವುದಿದೆಯಲ್ಲ ಅದು ತಪ್ಪು ! ನಿನ್ನ ತ್ಯಾಗ, ಕಾಳಜಿ ತಾಯ್ತನದ ಭಾಗವಾಗಿರಬೇಕೇ ಹೊರತು ನಿನ್ನ ಸ್ವಾತಂತ್ರ್ಯ ಹಾಗೂ ಹೆಣ್ತನ ಕಸಿದುಕೊಳ್ಳುವ ಅಸ್ತ್ರವಾಗಬಾರದು!
ಒಂದು ಪ್ರಶ್ನೆ ಕೇಳ್ತೀನಿ ಬೇಜಾರಾಗಬೇಡ ಎಂದು ಪೀಠಿಕೆಯಿಟ್ಟು, ಮರಗಿದ ಕ್ಷಣವನ್ನು ಖಂಡಿತ ನಾನು ಗೌರವಿಸುತ್ತೇನೆ ನಿಮ್ಮಿಂದ ದೂರದಲ್ಲಿ ಇರುವ ಮೊದಲಿನ ಲವಲವಿಕೆ ಕಳೆದುಕೊಂಡು ಅಶಕ್ತರಾಗಿದ್ದರೂ ಯಾರ ಮೇಲು ಭಾರವಾಗದೆ ಇವತ್ತಿಗೂ ಸ್ವತಂತ್ರ ಜೀವನ ಮಾಡುತ್ತಿರವ ಅಮ್ಮನ ನೆನಪಾಯಿತೆ ನಿಂಗೆ? ಎಂದು ಕೇಳಿದ್ದಕ್ಕೆ "ಇಲ್ಲ ಅಮ್ಮನ ನೆನಪು ಆಗಲೇ ಇಲ್ಲ!" ಎಂದಳು. ಹೀಗೆ ಇನ್ನು ಹತ್ತು ವರ್ಷಗಳ ಬಳಿಕ ನಿನ್ನ ಮಗಳು ಹೀಗೆ ಪಾರ್ಟಿ ಅಂತ ಹೊರಗಡೆ ಬಂದಾಗ ಅವಳು ನಿನ್ನ ಹಾಗೆಯೇ ಅಮ್ಮನನ್ನು ನೆನೆಸಿಕೊಳ್ಳುತ್ತಲೇ ಎಂದುಕೊಂಡೆಯ ? ನಾನು cynical ಆಗಿ ಹೇಳುತ್ತಿಲ್ಲ . ಇದು ವಸ್ತುಸ್ಥಿತಿ . ನಾವೆಲ್ಲಾ ಮಕ್ಕಳಾದ ಕೂಡಲೇ ಒಂದು ರೀತಿಯ learned ಮಷೀನ್ ಗಳಾಗಿಬಿಡುತ್ತೇವೆ.
ಮಕ್ಕಳಾಗಿದ್ದಾಗ ಪೋಷಕರಿಗಾಗಿ ಹಾಗು ನಾವು ಪೋಷಕರಾದಾಗ ಮಕ್ಕಳಿಗಾಗಿ ನಮ್ಮ ಬದುಕನ್ನ ಮೀಸಲಿಟ್ಟುಬಿಡುತ್ತೇವೆ . ಹಾಗಿದ್ದರೆ ನಮಗಾಗಿ ನಮ್ಮ ಬದುಕನ್ನು ಬದುಕುವುದು ಯಾವಾಗ? ನಮ್ಮ ಪೋಷಕರ ತಲೆಮಾರಿನ ಎಲ್ಲ ಅಪ್ಪ ಅಮ್ಮಂದಿರು ನಮ್ಮ ಸಂಸ್ಕೃತಿ ಹಾಗು ಸಮಾಜದ ದೃಷ್ಟಿಕೋನದಿಂದಲೇ ಮಕ್ಕಳನ್ನು ಬೆಳೆಸಿದರು . ಅದು ಆ ಕಾಲಮಾನದ ಹಿತಾಸಕ್ತಿಯಿಂದ ಅನಿವಾರ್ಯವೂ ಹೌದಾಗಿತ್ತು! ನಾವೆಲ್ಲಾ ಯಾವುದೇ ಜಾತಿ ಧರ್ಮ ಹಾಗೂ ಪಂಥದವರಾಗಿದ್ದರೂ ನಮ್ಮ ಸಾಮಾಜಿಕ ಜೀವನ ಒಂದೇ ರೀತಿಯಲ್ಲಿ ನಡೆಯುತ್ತಿತ್ತು.
ಒಂಭತ್ತು ತಿಂಗಳು ಹೊತ್ತು, ಹೆತ್ತು ಮಗುವಾದ ನಂತ್ರ ಮಗುವಿನ ಉತ್ತಮ ಭವಿಷ್ಯಕ್ಕಾಗಿ ತಮ್ಮ ಭವಿಷ್ಯವನ್ನೇ ತ್ಯಾಗ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಅನೇಕ ತಾಯಂದಿರು ನನ್ನ ಸ್ನೇಹಿತರ ಪಟ್ಟಿಯಲ್ಲಿದ್ದಾರೆ . ಅದು ಅವರವರ ವೈಯಕ್ತಿಕ ನಿರ್ಧಾರ ! ಆದರೆ ನನಗೆ ಈ ತ್ಯಾಗ ಎನ್ನುವ ಪದವೇ ಒಂದು ಹೊರೆಯಂತೆ ಗೋಚರಿಸುತ್ತದೆ. ಈ ತ್ಯಾಗ ಎನ್ನುವುದು ಯಾವಾಗ ನಿರೀಕ್ಷೆಯಾಗಿ ಪರಿವರ್ತನೆ ಹೊಂದುತ್ತದಯೆಯೋ ಆವಾಗ ಅದು ಮನುಷ್ಯನ ಯೋಚನಾ ಲಹರಿಯನ್ನು ಅಲ್ಲೋಲ್ಲ ಕಲ್ಲೋಲ ಮಾಡಿಬಿಡುತ್ತದೆ .. ನೀವು ನಿಮ್ಮ ಮಕ್ಕಳಿಗಾಗಿ ತ್ಯಾಗ ಮಾಡಿದಿದಿರಾ ಮನಸಾರೆ ಮಾಡಿದಿರಾ?ಫೈನ್ ಯು deserve applause ! ನೀವು ನಿಮ್ಮ ಮಗು ನೀವು ಹೇಳಿದಂತೆ ಕೇಳಬೇಕು ನಿಮ್ಮ ಈಡೇರದ ಆಸೆ ಆಕಾಂಕ್ಷೆಗಳನ್ನು ಮುಂದೊಂದು ದಿನ ನೆರವೇರಿಸಬೇಕೆಂದು ಆಸೆ ಇಟ್ಟುಕೊಂಡು ತ್ಯಾಗ ಮಾಡಿದಿರಾ ? ಹಾಗಿದ್ದರೆ ನಿಮ್ಮ ತ್ಯಾಗ ಹಾಗೂ ಕಷ್ಟಗಳಿಗೆ ಬೆಲೆಯಿಲ್ಲ ! ಇದು ಪ್ರಕೃತಿ ನಿಯಮ !
ಈ ಅತಿಯಾದ ತ್ಯಾಗ ಎನ್ನುವ ಪದವನ್ನು ಬಳಸುವದು ನಾವು ಭಾರತೀಯರು ಮಾತ್ರ ! ಹಾಗೂ ಮಕ್ಕಳು ನಮ್ಮ ಈ ತ್ಯಾಗಗಳನ್ನು ನಿರಂತರ ಸ್ಮರಿಸುತ್ತ ನಮ್ಮನ್ನು ಕಡೆಗಣಿಸಬಾರದು ಎಂಬ ಅಲಿಖಿತ ನಿಯಮವನ್ನು ಹೊಂದಿರುವವರು ಕೂಡ ನಾವುಗಳು ಮಾತ್ರ !
ಪಾಶ್ಯಾತರಲ್ಲಿ ನಮ್ಮಷ್ಟು ಗೊಂದಲಗಳಿಲ್ಲ, ಅವರ ಬದುಕು ನೀರಿನಂತೆ ತಿಳಿ ಹಾಗೂ ಸರಳ.... ! ಮಗು ಆದ ಕೂಡಲೇ ಅದಕ್ಕೊಂದು ಪ್ರತ್ಯೇಕ ತೊಟ್ಟಿಲು, ಸ್ವಲ್ಪ ನಡೆದಾಡುವಂತಾದ ಕೂಡಲೇ ಪ್ರತ್ಯೇಕ ಕೋಣೆಯಲ್ಲಿ ಮಲಗಲು ಅಭ್ಯಾಸಿಸುತ್ತಾರೆ . ಮಗುವಿಗಾಗಿ ಅವರೆಂದು ತಮ್ಮ ವೈಯಕ್ತಿಕ ಜೀವನ ಹಾಗೂ ಬದುಕನ್ನು ಬದಲಾಯಿಸಿಕೊಳ್ಳುವುದಿಲ್ಲ ಬದಲಾಗಿ ಮಗುವನ್ನೇ ತಮ್ಮ ಅಗತ್ಯಕ್ಕೆ ತಕ್ಕನಾಗಿ ಹೊಂದಿಕೊಳ್ಳುವಂತೆ ಬೆಳೆಸುತ್ತಾರೆ !
ನಮ್ಮಲ್ಲಿ ಮಗು ಆದ ಕೂಡಲೇ ಅದು ಅಪ್ಪ-ಅಮ್ಮನ ಮಧ್ಯೆ ಬಂದು ಮಲಗುವದೂ ಒಂದು ಪೋಷಕರ ಅಲಿಖಿತ ನಿಯಮದಲ್ಲೊಂದು ! ಅಲ್ಲಿಗೆ ಗಂಡ ಹೆಂಡತಿಯ ಮಿಲನದ ತ್ಯಾಗ ! ಯಾವಾಗ ಮಗುವಿಗೆ ಸ್ವಲ್ಪ ತಿಳುವಳಿಕೆ ಬಂದು ಓಡಾಡಲು ಶುರು ಮಾಡುತ್ತದೆಯೋ ಆಗ ಗಂಡ ಹೆಂಡತಿ ಮಗುವಿನ ಮುಂದೆ ತಬ್ಬುವುದಾಗಲಿ ಮುತ್ತಿಡುವುದಾಗಲಿ ನಿಷೇಧ . ಅಲ್ಲಿಗೆ ರಸಿಕತೆಯ ತ್ಯಾಗ !
ಮಗು ಶಾಲೆಗೆ ಹೋಗುವಂತಾದಾಗ ಅದರ ಆಗು ಹೋಗು ಹೋಂ ವರ್ಕ್ ಮಾಡಿಸಲು ತಾಯಿ ತನ್ನ ಕೆಲಸಕ್ಕೆ ರಾಜೀನಾಮೆ ಕೊಡುವ ತ್ಯಾಗ ! ಮಗುವಿನ ರಜೆಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತು ಇನ್ನೊಂದುಸಲ ಮೊದಲನೇ ತರಗತಿಯಿಂದ ೧೦ನೇ ತರಗತಿಯವರೆಗೆ ಅಭ್ಯಾಸ ಮಾಡಲು ತನ್ನ ಹವ್ಯಾಸಗಳನ್ನು ಬದಿಗಿಡುವ ತ್ಯಾಗ! ಗಂಡ ಹೆಂಡತಿ ಮಗುವನ್ನು ಬಿಟ್ಟು ಪ್ರತ್ಯೇಕವಾಗಿ ಸುತ್ತಾಡುವುದು ಪ್ರವಾಸ ಮಾಡುವುದು ಅಲಿಖಿತ ಅಪರಾಧ ಪಟ್ಟಿಗಳಲ್ಲೊಂದು !
ಇಷ್ಟೆಲ್ಲಾ ತ್ಯಾಗಗಳ ಮಧ್ಯೆ ಮಗು ೧೬ ತುಂಬಿ ಕಾಲೇಜು ಮೆಟ್ಟಿಲೇರಲು ತಯಾರಿ ನಡೆಸುವಾಗ " ಅಯ್ಯೋ ಹದಿನೈದು ವರ್ಷ ಕಳೆದು ಹೋಯಿತು ನನಗಾಗಿ ನಾನೇನೂ ಮಾದ್ಲಿಲ ಎಂದು ಕನ್ನಡಿ ಮುಂದೆ ನಿಂತು ತನ್ನ ಸ್ಥೂಲ ಕಾಯ ಹಾಗೂ ನೆರೆತ ಕೂದಲು, ನೆರಿಗೆ ಬಿದ್ದ ಮುಖ ನೋಡಿ ತಾಯಿ ಅನ್ನಿಸಿಕೊಂಡ ಅಮ್ಮನಿಗೆ ಮಗಳಿಂದ " ಅಮ್ಮ ನೀನು ಸರಿಯಾಗಿ ಮೇಂಟೈನ್ ಮಾಡಿಲ್ಲಕೊಂಡಿಲ್ಲ, ನೋಡು ಎಷ್ಟು ವಯಸ್ಸಾದಂತೆ ಕಾಣುತ್ತಿ " ಎಂಬ ಹಿತವಚನ ! ಇಷ್ಟು ವರ್ಷ ಯಾರಿಗಾಗಿ ಎಲ್ಲವನ್ನು ತ್ಯಾಗ ಎಂದುಕೊಂಡು ನಿಮ್ಮತನವನ್ನು ಮರೆತುಬಿಟ್ಟಿರೋ ಅವರೇ ನಿಮ್ಮನ್ನು ಪ್ರಶ್ನಿಸಲು ಹಾಗೂ ಉಪದೇಶ ಕೊಡಲು ಶುರು ಮಾಡಿದಾಗ , ಒಂದೊಂದೇ ತ್ಯಾಗ ಬಂದು ಅಣಕಿಸಲು ಶುರು ಮಾಡುತ್ತದೆ !
ಹೌದು ಇದನ್ನೆಲ್ಲಾ ನಮ್ಮ ಅಮ್ಮನ ತಲೆಮಾರಿನವರು ಮಾಡಿರಬಹುದು , ನಮ್ಮ ಜನರೇಶನ್ ತುಂಬಾ ಪ್ರಾಕ್ಟಿಕಲ್ ಎಲ್ಲವನ್ನು ಅಳೆದು ತೂಗಿ ಮಾಡುತ್ತೇವೆ ಎಂದು ಹೇಳುವ ನಾವುಗಳು ನಮ್ಮ ಅಮ್ಮನ , ಅಜ್ಜಿಯ ಯೋಚನಾ ಲಹರಿ ಹಾಗೂ ನಡವಳಿಕೆಯನ್ನು ನಮಗೆ ಗೊತ್ತಿಲ್ಲದೇ ನಮ್ಮ ಕ್ರೋಮೋಸೋಮ್ ಗಳಲ್ಲಿ ಹೊತ್ತು ತಂದಿರುತ್ತೇವೆ, ಅಮ್ಮನಂತಲ್ಲದಿದ್ದರೂ ಅಮ್ಮನ ಕೆಲವು ಅಂಶಗಳನ್ನು ನಾವು ಹೊಂದಿರಲೇ ಬೇಕಲ್ಲವೇ ?!
ನಾವೆಂದು ಮಕ್ಕಳಿರುವಾಗ ಅಮ್ಮನಿಗೆ ಹೀಗೆಲ್ಲ ತ್ಯಾಗ ಮಾಡಿ ನಮ್ಮನ್ನು ಬೆಳೆಸು ಎಂದು ಹೇಳಿರಲಿಲ್ಲ , ಈಗ ಮುಂದೆ ನಮ್ಮ ಮಕ್ಕಳು ನಮ್ಮಿಂದ ಅದನ್ನು ನಿರೀಕ್ಷಿಸುವುದೂ ಇಲ್ಲ! ಇಷ್ಟೆಲ್ಲಾ ಮಾಡಿದ ಅಮ್ಮ ಈಗ ಇಳಿಸಂಜೆಯ ವಯಸ್ಸಿನಲ್ಲಿದ್ದರೂ ಅವಳೆಂದಿಗೂ ಕ್ರಿಯಾಶೀಲ ವ್ಯಕ್ತಿ ! ಅವಳನ್ನು ಪ್ರೀತಿಸಿಯೂ ನಾವೆಂದೂ ಅವಳನ್ನು ಅವಳ ತ್ಯಾಗಕ್ಕಾಗಲೀ , ನಿಸ್ವಾರ್ಥ ಪ್ರೀತಿಗಾಗಲಿ ಧನ್ಯತೆಯಿಂದ ನೆನೆಸುವದಿಲ್ಲ! ತಾಯಿಯಾಗಿರುವ ನಮಗೆಲ್ಲರಿಗೂ ನಮ್ಮ ತಾಯಿಗಿಂತ ಮಗಳೇ ಹೆಚ್ಚಿನ ಪ್ರಿಯೋರಿಟಿ . ಅಲ್ಲೆಲ್ಲೋ ದೂರ ನಿಂತು ಮೂಕ ಪ್ರೇಕ್ಷಕಿಯಾಗಿರುವ ಅಮ್ಮ ನಸುನಕ್ಕು ಹೇಳುತ್ತಾಳೆ , ತಾಯಿಯಾಗುವುದೆಂದರೆ ತ್ಯಾಗವಲ್ಲ ಜವಾಬ್ದಾರಿ !
ನಮ್ಮ ತ್ಯಾಗಗಳು ನಮಗೆ ಫಲ ಕೊಡದೆ ಇರಬಹುದು ಆದರೆ ಜವಾಬ್ದಾರಿಗಳು ನಮಗೆ ಬದ್ಧತೆಯನ್ನು ಕಲಿಸುತ್ತವೆ . ಎಲ್ಲರೂ ಎಲ್ಲವೂ ಶೇಷ್ಠವಾಗಬೇಕಿಲ್ಲ ಹಾಗೂ ಅಸಾಧಾರಣ ಎನಿಸಿಕೊಳ್ಳಬೇಕಿಲ್ಲ . ಸಾಧಾರಣವಾಗಿದ್ದುಕೊಂಡೇ ವಿಶೇಷರಾಗಿರೋಣ ! ಶ್ರೇಷ್ಠತೆಗೆ ಎಲ್ಲರನ್ನೂ ಮೆಚ್ಚಿಸುವ ಹಂಬಲವಿದೆ ವಿಶೇಷತೆಗೆ ಆ ಕಟ್ಟುಪಾಡುಗಳಿಲ್ಲ ನಮಗೆಲ್ಲ ಜವಾಬ್ದಾರಿಯುತ ಪೋಷಕರಾಗುವ ಅಗತ್ಯತೆ ಇದೆಯೇ ಹೊರತು ತ್ಯಾಗದ ಅನಿವಾರ್ಯತೆ ಇಲ್ಲ !
ಚಿಕ್ಕ ಪುಟ್ಟ ತ್ಯಾಗ ಹಾಗೂ ಹೊಂದಾಣಿಕೆ ಜೀವರಾಶಿಯ ಪ್ರತಿ ಜೀವಿಯಲ್ಲಿಯೂ ಇದೆ . ಅದು ನಮ್ಮ ಬದುಕಿನ ಒಂದು ಸಣ್ಣ ಭಾಗವೇ ಹೊರತು ಅದೇ ಜೀವನವಲ್ಲ! , ನಮ್ಮನ್ನು ನಾವು ಪ್ರೀತಿಸುವಂತಾಗೋಣ , ಜೀವನ್ಮುಖಿಗಳಾಗೋಣ !
ತುಂಬ ಚೆನ್ನಾಗಿದೆ
ReplyDeleteನಿಮ್ಮಭಿಪ್ರಾಯ ನಿಜ. ತಂದೆತಾಯಿ ಮಕ್ಕಳಿಗೋಸ್ಕರ ಬಾಳುತ್ತಲೇ ನಮಗೋಸ್ಕರವೂ ಬದುಕು ಇರಬೇಕು. ಭಾರತೀಯ ಸಮಾಜಕ್ಕೆ ಇದು ಸ್ವಾರ್ಥ ಎನಿಸಬಹುದು. ಆದರೆ ಇದನ್ನು ತ್ಯಾಗವೆಂದುಕೊಳ್ಳದೇ ಜವಾಬ್ದಾರಿಯಾಗಿ ನಿರ್ವಹಿಸಿದರೆ ಒಳ್ಳೆಯದು.
ReplyDelete