Total Pageviews

Monday, November 3, 2025

ಮೂರ್ತಿ ಪೂಜೆ, ದೇವರು , ಮತ್ತು ತರ್ಕಕ್ಕೆ ಮೀರಿದ ನಂಬಿಕೆ!!!



ಎವೊಲ್ಯೂಷನ್ ಕೇವಲ ಜೀವರಾಶಿಗಳಲಿಲ್ಲ, ಅದೊಂದು ನೀರಿನಂತರ ಪ್ರಕ್ರಿಯೆ. ನಾವು ದಿನ ನಿತ್ಯ ನಮ್ಮ ಸುತ್ತಲೂ ನಡೆಯುವ ಘಟನೆಗಳ ಆಧಾರದ ಮೇಲೆ, ಮತ್ತು ಆ ಘಟನೆಗಳು ನಮ್ಮ ಮೇಲೆ ಬೀರುವ ಪರಿಣಾಮಗಳ  ಆಧಾರದ ಮೇಲೆ, ಮಾನಸಿಕವಾಗಿ, ಸೈಧಾಂತಿಕವಾಗಿ ಹಾಗೂ ದೈವಿಕವಾಗಿ ಬದಲುಗುತ್ತಾ ಹೋಗ್ತೇವೆ, ಈ ಬದಲಾವಣೆ ಪಾಸಿಟಿವ್ ರೀತಿಯ ಇಂಪ್ಯಾಕ್ಟ್ ಮಾಡಿದರೆ ಅದು ಕೂಡ ಎವೊಲ್ವಿಂಗ್ ಪ್ರಕ್ರಿಯೆ ನೇ !!  

ಒಂದಷ್ಟು ವರ್ಷದ ಹಿಂದೆ, ಇದೇ ಸರಿ ಇದೆ ತಪ್ಪು ಅನಿಸುತ್ತೆ, ಕೆಲವು ವರ್ಷಗಳ ನಂತರ ತಪ್ಪು ಅನ್ಕೊಂಡಿದ್ದು ಸರಿ, ಸರಿ ಅನ್ಕೊಂಡಿದ್ದು ತಪ್ಪು ಅನ್ಸುತ್ತೆ, ಕೊನೆ ಕೊನೆಗೆ ಎಲ್ಲದೂ ಸರಿ ನನ್ನ ಅನಿಸಿಕೆ ತಪ್ಪು ಅನಿಸಲಿಕ್ಕೆ ಶುರುವಾಗುತ್ತೆ!! ಇಷ್ಟೆಲ್ಲಾ ಪೀಠಿಕೆ ಯಾಕೆ ಅಂದ್ರ ? ತುಂಬಾ ಮುಖ್ಯವಾದ ವಿಷಯ ಇದೆ, ಈಗ ಈ ಮೂರ್ತಿ ಪೂಜೆ ನಿಷೇಧಿಸಿ, ವೈದಿಕ ಆಚರಣೆ ನಿಷೇಧಿಸಿ, ಅದು ನಮ್ಮ ಆಚರಣೆ ಅಲ್ಲ ಅಂತ ಒಂದು ಬಣ ಎದ್ದಿರೋದು ಅವರದ್ದು ತಪ್ಪು ಅಂತ ಇನ್ನೊಂದು ಬಣ ಹೇಳ್ತಿರೋದು ವಾದ ವಿವಾದ ಪ್ರತಿವಾದ ಎಂತದೆಲ್ಲ ನಡೀತಾ ಇತ್ತಲ, ಈ ರಾಜಕೀಯ ನಮಗೆ ಬೇಡ ಆದರೆ ಯಾವುದು ನಿರುಪದ್ರವಿ ಆಚರಣೆ ಹಾಗೂ ನಂಬಿಕೆ ಆಗಿರಿತ್ತೋ ಅದನ್ನ ಟಚ್ ಮಾಡಕ್ ಹೋಗ್ಬಾರ್ದು ಅನ್ನೋದು ಕಾಮನ್ ಸೆನ್ಸ್ , ಬಟ್ that  ಈಸ್  ನಾಟ್ ಕಾಮನ್!

ಇಂಥದ್ದೇ ಅಪಭ್ರಂಶ ನಂಬಿಕೆಗಳು ಮತ್ತು ನಾ  ಅನ್ಕೊಂಡಿರೋದು ಮಾತ್ರ ಸತ್ಯ ಅಂತ ನನ್ನ ನಾನೇ ಹಲವು ಬಾರಿ ಸಂತೈಸಿಕೊಂಡು  ಅಹಂಕಾರ ಪಟ್ಟುಕೊಂಡಿದ್ದಿದೆ. But  ಯೂನಿವರ್ಸ್ ಹ್ಯಾಸ್ ಇಟ್ಸ್ ಓನ್ ವೆ of  ಟೀಚಿಂಗ್ ಯು ಲೆಸೆನ್ಸ್ . 

ಎರಡು ವರ್ಷದ ಹಿಂದೆ ಇಂಗ್ಲೆಂಡ್ ನ ಬರ್ಹ್ಮಿಂಗ್ಹ್ಯಾಮ್ ನ ದೇವಸ್ಥಾನದ ಪಟವನ್ನು, ನನ್ನ ಫೋನ್ ಮೆಮೊರಿ ಜ್ಞಾಪಿಸಿತು!!  ಮನಸ್ಸು ಮತ್ತೆ ಯುರೊಪ್ ಸುತ್ತಿ ಬಂತು. ಐರ್ಲೆಂಡ್ ನಲ್ಲಿ ಕಾನ್ಫರೆನ್ಸ್ ಭಾಗದ ನಿಮಿತ್ತವಾಗಿ ಹೋಗಿ, ಹೇಂಗೂ  ಬ್ರಿಟಿಷ್ಐರಿಶ್ ವೀಸಾ ಇರೋ ಕಾರಣಕ್ಕೆ  ಯುಕೆ  ಪ್ರವಾಸ ಕೂಡ ಮಾಡಬಹುದು ಸೊ , ನಿಮ್ಮ ಕಾನ್ಫರೆನ್ಸ್  ಮುಗಿಯೋ ಅಷ್ಟ್ರಲ್ಲಿ ನಾನು ಯುಕೆ ಐಟರ್ನರಿ ಸಿದ್ಧ ಮಾಡ್ತೇನೆ ಅಂತ ನನ್ನ ಹೋಸ್ಟ್ ಮಾಡಿದ ಗೆಳತೀ ಹೇಳಿದಳು. ಹೇಂಗೂ ಇಷ್ಟು ದೂರ  ಬಂದಿದ್ದಾಗಿದೆ ಅದು ನೋಡೇ ಬಿಡೋಣ ಅಂತ ಅರ್ಧ ಮನಸ್ಸು ಹೇಳಿದ್ರೆ ಇನ್ನ ಅರ್ಧ ಮನಸ್ಸು ಸಾಕಪ್ಪ ಯುರೋಪ್  ಸಾವಾಸ, ಮನೆ ಊಟ ಇಲ್ದೆ ಹದಿನೈದು ದಿವಸಕ್ಕೆ ಬರೋಬ್ಬರಿ ೫ ಕೆಜಿ ತೂಕ ಕಮ್ಮಿ ಆಗಿ ಹೋಗಿತ್ತು, ಕಾನ್ಫರೆನ್ಸ್ ಊಟವೋ ದೇವರಿಗೆ ಪ್ರೀತಿ, ಗೆಳತೀ ಕರ್ನಾಟಕದವಳೇ ಅಲ್ಲಿ ಹೋಗಿ ೧೦ ವರ್ಷದ ಮೇಲಾಗಿರೋದಕ್ಕೆ ಈಗ ಅವಳ ಪೂರ್ತಿ ದಿನಚರಿ ಐರಿಶ್ ಲೈಫ್ಸ್ಟೈಲ್ ಥರವೇ!! ಬೆಳಿಗ್ಗೆದ್ದು ದಿನ ಏನ್ ತಿಂಡಿ ಅಂತ ತಲೆ ಕೆಡಸ್ಕೊಳಲ್ಲ ಓಟ್ಸ್ ಇರುತ್ತೆ ಫ್ರಿಡ್ಜ್ ಅಲ್ಲಿ ಹಾಲಿರುತ್ತೆ, ಅವನ್ ಅಲ್ಲಿ ಬಿಸಿ ಮಾಡ್ಕೊಂಡು ಮೇಲೆ  ಬ್ಲೂ ಬೆರಿ ಹಾಕೊಂಡು ತಿನ್ನು ಅಂತ ಹೇಳಿ ಆಫೀಸ್ ಹೋಗ್ತಿದ್ಲು ಒಂದಿನ ಸರಿ ಎರಡ್ ದಿನ ಸರಿ, ಮೂರನೇ ದಿನ ಅಮ್ಮ ಮಾಡ್ತಿದ್ದ ತರಕಾರಿ ಉಪ್ಪಿಟ್ಟು, ಅವಲಕ್ಕಿ, ಶಾವಿಗೆ ಉಪ್ಪಿಟ್ಟು ಎಲ್ಲ ನೆನಪಾಗಾಕ್ ಶುರವಾಯ್ತು. ಹೇಗೆ ಜೊತೆಲಿರುವಾಗ ಒಬ್ಬರ ವ್ಯಾಲ್ಯೂ ಗೊತ್ತಾಗಲ್ವೋ ಹಂಗೆ, ದಿನ ತಿನ್ನೋ ನಮ್ಮ ಆಹಾರ ಏನ್ ಮಹಾ ಅನ್ಸಿರುತ್ತೆ, ಮೂರ್ ದಿನಕ್ಕೆ ಅದಿಲ್ದೆ ಎಂಥ ನರಕ ಜೀವನ ಅನ್ನೋದು ಗೊತ್ತಾಗುತ್ತೆ !  

ಒಂದು ವಾರಕ್ಕೆ  ದೋಸೆ  ಇಡ್ಲಿ  ನೆನಪಾಗಿ ಡಬ್ಲಿನ್ ನಗರದ ದೋಸೆ ವ್ಯಾನ್ ಹುಡ್ಕೊಂಡು ಹೋದೆ, ನಮ್ಮ ವೆನ್ಯೂ ಇಂದ ಎರಡು ಕಿಲೋಮೀಟರು ಕಾಲ್ನಡಿಗೆ, ಅಯ್ಯೋ  ಸ್ವರ್ಗ ಸಿಕ್ಕ ಅನುಭವ ತಿಂದು ಮುಗಿಸುವ ಹೊತ್ತಿಗೆ ದೋಸೆ ಪ್ಲಸ್ ನೀರು ಸೇರ್ಸಿ  ೧೫ ಯುರೋ ಅಂತಾಯ್ತು ದೋಸೆ ತಿಂದ  ಖುಷಿಗೆ ೧೫೦೦ ಏನ್ ದೊಡ್ಡ ವಿಷಯ ಅಲ್ಲ ಬಿಡು ಅನ್ಕೊಂಡು ಸುಮ್ಮನಾದೆ, ಅಷ್ಟೊತ್ತಿಗಾಗಲೇ ೧೫೦೦ ರೊಪಾಯಿಗೆ ಒಂದು ತಿಂಗಳಿಗೆ ಆಗೋವಷ್ಟು ದೋಸೆ ತಿನ್ಬೋದಿತ್ತು ಯಾ ಸೀಮೆ ಜನ ಇವ್ರೆಲ್ಲ ಅಂತ ಮನಸ್ಸು ಬೈಕೊಂಡಿತ್ತು ಅದು ಬೇರೆ ವಿಷಯ.  ಅಷ್ಟರಲ್ಲೇ ಬಿಸಿ  ಊಟ ತಿನ್ನದೇ ವರ್ಷಗಳೇ ಕಳೆದಹಾಗೆ , ಜನಕ್ಕೆ ಗೊತ್ತಾಗದ ಹಾಗೆ ಮನಸ್ಸು ರೋಧಿಸಲು ಶುರುಮಾಡಿತ್ತು!  ವಾಪಾಸ್ ಊರಿಗೆ ಬಂದು ಬಿಡೋಣ ಅಂದ್ರೆ ಇನ್ನು ಒಂದು ವಾರ ಇಲ್ಲೇ ಠಿಕಾಣಿ ಅದರ ಮಧ್ಯೆ ಐರ್ಲೆಂಡ್ ಹಸಿ ಹಸಿ ತಣ್ಣಗಿನ ವಿಚಿತ್ರ ಊಟ ತಿಂದಿದ್ದಲ್ಲದೆ ಈಗ ಯುಕೆ ಗೆ ಬೇರೆ ಪ್ಲಾನ್ ಮಾಡ್ಕೊಂಡ್ ಕೂತಿದಾಳೆ ಊರಿಗ್ ಹೋಗೋವಶ್ಟರಲ್ಲಿ ಹೆಣ ಬಿದ್ದಿರುತ್ತೆ ನಂದು ಅನ್ಕೊಂಡೆ ಹೊರಡಲು ತೈಯಾರಿ ಮಾಡ್ಕೊಂಡಿದ್ದಾಯ್ತು!!

Stanstad ಏರ್ಪೋರ್ಟ್ ತಲುಪುವಾಗ ರಾತ್ರಿ ಒಂದು ಗಂಟೆ, ಅಲ್ಲೇ ಏರ್ಪೋರ್ಟ್ನಲ್ಲಿ ಫ್ರಿಡ್ಜ್ ನಲ್ಲಿ ಇಟ್ಟಿರೋ sandwich  ಕೊಕೊನಟ್ ವಾಟರ್ ತಗೊಂಡು ರಾತ್ರಿ ಜೈ ಅಂದ್ರು ನನ್ನ ಯೂರೋಪ್ ಸ್ನೇಹಿತೆಯರು. ನನ್ ಜೇವಮಾನದಲ್ಲೇ  ಅಷ್ಟು ಕೆಟ್ಟದಾಗಿರೋ ಸ್ಯಾಂಡ್ವಿಚ್  ತಿಂದಿರಲಿಲ್ಲ ನಾನು "atleast ಅವನ್ ಅಲ್ಲಿ ಬಿಸಿ ಮಾಡ್ಕೊಂಡು ಆದರು ತಿಂತೀನಿ ಎಲ್ಲಾದ್ರೂ ಬಿಸಿ ಮಾಡಿ ಕೊಡ್ಸರೆ" ಅಂದ್ರೆ ಗೊಳ್ ಅಂತ ನಕ್ಕು "ಅಕ್ಕ, ಇಲ್ಲೆಲ್ಲಾ ನಿಂಗೆ ಇಂಡಿಯಾ ಥರ ಬಿಸಿ ಬಿಸಿ ಊಟ ಸಿಗಲ್ಲ ಸುಮ್ನೆ ತಿನ್ನು " ಅಂತ ಆಡಿಕೊಂಡಿದ್ರು. ಆವತ್ತು ರಾತ್ರಿ ಪ್ಯಾಕ್ಡ್ ಕೊಕೊನಟ್ ಜ್ಯೂಸು ನನ್ನ ರಾತ್ರಿ ಊಟವಾಗಿತ್ತು ಅಷ್ಟೇ, ತುಂಬಾ ಬೇಜಾರಲ್ಲೇ ಅಮ್ಮನಿಗೆ ಕಾಲ್ ಮಾಡಿ ಅಮ್ಮ ಇಲ್ಲೇನು ಊಟ ಸರಿ ಹೋಗ್ತಿಲ್ಲ ನಂಗೆ ಅಂತ ಬೇಜಾರಲ್ಲೇ  ಹೇಳಿ ಮಲಗಿದೆ. ರಾತ್ರಿಯೆಲ್ಲ , ಹಸಿವೆ ಇಂದ ನಿದ್ದೆ ಇಲ್ಲ !! ತಿನ್ನಣ  ಅಂದ್ರೆ ಮತ್ತದೇ ಸ್ಯಾಂಡ್ವಿಚ್ ಅಯ್ಯೋ ಬೇಡ ಅಂತ ನೀರ್ ಕೂಡದು ಮಲ್ಕೊಂಡೆ. 

 ಬೆಳಿಗ್ಗೆ ನನ್ನ ಗೆಳತೀ ಹೋಗಬೇಕಾದ ಪ್ಲಾನ್ ಚೇಂಜ್ ಮಾಡಿ ಮೊದಲು Barmingham ಹೋಗಿ ಆಮೇಲೆ ಉಳಿದ ಕಡೆ ಹೋಗಣ ಅಂದ್ಲು , ಮೊದಲೇ ಸರಿ ಊಟ ಇಲ್ದೆ ಬೆಂದು ಹೋಗಿರೋ ಜೀವಕ್ಕೆ ಪ್ಲಾನ್ ಯಾಕೆ ಚೇಂಜ್ ಅಂತ ಕೇಳಿದ್ರೆ ದೇವಸ್ಥಾನ ಇದೆ ಅಲ್ಲಿ ಅದಕ್ಕೆ ಅಲ್ಲಿ ಅಂತ ಹೇಳಿದ್ಲು, ಅಲ್ಲ ನಾನು ಈ ಟ್ರಿಪ್ ಮಾಡ್ತಿರೋದು ಇಂಗ್ಲೆಂಡ್ ನೋಡಕ್ಕೆ ತೀರ್ಥ ಯಾತ್ರೆ ಅಲ್ಲ ಕಣಕ್ಕ...  ಮೊದಲೇ ನಾನು ಇಂಥದನ್ನೆಲ್ಲ ಇಷ್ಟ ಪಡಲ್ಲ ಇಲ್ಲಿ ಬಂದು ಗುಡಿ ಗುಂಡಾಂತರ ಅಂತ ಓಡಾಡಿಸ್ತೀಯಾ ನ ಒಲ್ಲೇ ಅಂತ ಜಗಳ ಶುರು ಮಾಡಿದೆ. ನನ್ನ ಬಿಟ್ಟು ಇನ್ನು ಮೂರು ಜನ ಹುಡುಗಿಯರು ದೈವ ಭಕ್ತರು ಹೋಗ್ಲೇ ಬೇಕು ಅಂತ ಹಠ ಹಿಡಿದರು, ಥೋ ಯುರೋಪ್  ಬಂದ್ರು ಇವ್ರೆಲ್ಲ ಇಷ್ಟೇನೆ ಅಂತ ಬೈಕೊಂಡು, ಇನ್ನೇನು ವಾಪಾಸ್ ಹೋಗಕ್ಕೆ ಅದೇನು ಬೆಂಗಳೂರ, ಒಲ್ಲದ ಮನಸ್ಸಿನಿಂದ ಹೋದೆ!

ಅದೋ ಪಕ್ಕ ಭಾರತದ ವೆಂಕಟರಮಣನ ತದ್ರೂಪ ದೇವಸ್ಥಾನ!! ಇದೇನ್ ವಿಶೇಷ ಅಂತ ಬಂದಿದಿರೇ ಇವೆಲ್ಲ ಗಲ್ಲಿಗೊಂದು  ಇಲ್ವಾ ನಮ್ಮೂರಲ್ಲಿ, ಸರಿ ನೀವು ಕ್ಯೂನಲ್ಲಿ ನಿಂತ್ಕೊಂಡು ಮಂಗಳಾರತಿ, ಪ್ರದಕ್ಷಿಣೆ ಎಲ್ಲ ಮುಗಸ್ಕೊಂಡ್ ಬನ್ನಿ  ನಾನು ಇಲ್ಲೇ ಕೂತಿರ್ತೀನಿ ಅಂತ ಅವರನ್ನು ಒಳಗೆ ಕಳ್ಸಿ  ದೇವಸ್ಥಾನದ ಅಂಗಳದಲ್ಲಿ  ಕೂತೆ. ಅಷ್ಟೊಂದು  ಜನರ  ಮಧ್ಯೆ  ನಾವು ಇಂಗ್ಲೆಂಡ್ ನಲ್ಲಿ ಇದೀವ ಭಾರತ ದಲ್ಲಿದೀವ ಅನ್ನೋ ಕನ್ಫ್ಯೂಷನ್. ಥರಾವರಿ ಭಾರತದ ಅದರಲ್ಲೂ ತಮಿಳು ತೆಲುಗು ಕನ್ನಡ ಮಾತಾಡೋ ಅಮ್ಮಂದಿರು ಮಕ್ಕಳನ್ನು ತಮ್ಮ ಭಾಷೆಯಲ್ಲೇ ಕರೆದು ಎಂತದ್ದೋ ಹೇಳ್ತ ಇದ್ರು, ಪರವಾಗಿಲ್ವೇ ಎಲ್ಲ ಅವರವರ ಭಾಷೆ ಚೆನ್ನಾಗೆ ಮಾತಾಡ್ತಾರೆ ಅನ್ಕೊಂಡು ದೇವಸ್ಥಾನ ಎಷ್ಟು ಕ್ಲೀನ್ ಇದೆಯಲ್ಲ, ಅಲ್ಲ ಈ ಜನ ಇಂಡಿಯಾ ಬಿಟ್ಟ ಬರೋದಂತೆ ಇಲ್ಲಿ ಬಂದು ದೇವಸ್ಥಾನ ಕಟ್ಸಿ ಸಂಭ್ರಮಿಸೋದಂತೆ, ಅಷ್ಟು ದೈವ ಭಕ್ತಿ ಇರೋವ್ರು ಇಲ್ಯಾಕ್ ಬರ್ಬೇಕು ಅಂತ ಲಾಜಿಕ್ ಇಲ್ಲದ ಪ್ರಶ್ನೆಗಳನ್ನು ಕೇಳ್ಕೊಂಡು ಕೂರಲು ನನ್ನ ಬಿಟ್ಟು, ದೇವರ ಹತ್ತಿರ ದರ್ಶನ ಪಡ್ಕೊಂಡು ಬರಕ್ಕೆ ಹೋದವ್ರು, ವಾಪಾಸ್ ಬಂದು, ಬಾ ಈವಾಗ ನಿಂಗೊಂದ್ ಸರ್ಪ್ರೈಸ್ ಇದೆ ಅಂದ್ರು!! ಅಲ್ಲ ಕಣ್ರೆ ಲಂಡನ್ ಬ್ರಿಜ್ ತೋರ್ಸಿ ಅಂದ್ರೆ ಯಾಕೆ ಹಿಂಗ್ ಜೀವ್ ತಿನ್ಕೊಂಡು ಈ ದೇವ್ರು ದೇವಸ್ಥಾನ ಅಂತ ಟೈಮ್ ವೇಸ್ಟ್ ಮಾಡ್ತಿದಿರೆ ನಂಗ್ ನಿಜ ಇಷ್ಟ ಆಗ್ತಿಲ್ಲ ನಡೀರಿ ಮೊದಲು ಇಲ್ಲಿಂದ ಅಂದೇ!! 


"ಇವತ್ತು ಇಲ್ಲೇ ಪ್ರಸಾದ ಇದೆ ಇಲ್ಲೇ ಊಟ ಮಾಡ್ಕೊಂಡು ಹೋಗಣ, ಎರಡು ವಾರದಿಂದ ಬಿಸಿ ಬಿಸಿ ತಿನ್ಬೇಕು ಅಂತಿದ್ಯಲ ಅದ್ಕೆ ಇಲ್ಲಿ ಕರ್ಕೊಂಡ್ ಬಂದೆ, ನೋಡು ಈವಾಗ  ಪಕ್ಕ ಸೌತ್ ಇಂಡಿಯನ್ ಫುಡ್ ಸಿಗುತ್ತೆ" ಅಂದ್ಲು, ದೇವರು ಪ್ರತ್ಯಕ್ಷ ಆಗಿದ್ರೆ ಅಷ್ಟು ಖುಷಿ ಆಗ್ತಿತ್ತೋ ಇಲ್ವೋ ಗೊತ್ತಿಲ್ಲ, ಫುಲ್ಲು ಖುಷಿ ಆಗಿ "ಹೌದಾ!! ಸಂಜೆ ಆದ್ರೂ ಪರವಾಗಿಲ್ಲ ಪ್ರಸಾದ ತಿಂದುಕೊಂಡೆ  ಹೋಗಣ"?! ಅಂದೇ !! ಅಷ್ಟರಲ್ಲೇ ಪ್ರಸಾದ sponsor  ಮಾಡಿದ ತೆಲುಗು ಮಾತಾಡೋ ಜನ ಬಂದು ಬನ್ನಿ ಅಂತ  ಊಟದ ಹಾಲಿಗೆ ಕರ್ಕೊಂಡು ಹೋದ್ರೆ ಘಮ್ಮೆನೂ ಸಾಂಬಾರ್ ಪರಿಮಳ, ಆಹಾ  ಈ ಜನುಮವೇ ಅನ್ಕೊಂಡು ಓಡೋಡಿ ಹೋಗಿ ತಟ್ಟೆ ತಗೊಂಡು ಎಲ್ಲರಿಗಿಂತ  ಮೊದಲು ನಿಂತ್ಕೊಂಡೆ, ಅನ್ನ -ಸಾಂಬಾರ್, ಪಾಯಸ , ಕೋಸಂಬ್ರಿ ಮತ್ತು ಮೆಣಸಿನ ಬಜ್ಜಿ ಇಷ್ಟೇ ಊಟ ಇದ್ದದ್ದು, ಆ ದಿನದ ಮಟ್ಟಿಗೆ ಅದು ಮೃಷ್ಟಾನ್ನ ಭೋಜನ!! ಅಷ್ಟೇ ಏಕೆ ಈವತ್ತಿಗೂ ಪ್ರತಿ ತುತ್ತು ನೆನಪಿಸ್ಕೊಳ್ಳುವಂತ ಅನುಭವ ಅದು!! ಬಿಸಿ ಬಿಸಿ ಅನ್ನ ಸಾಂಬಾರ್ ಕಲಸಿಕೊಂಡು ಬಾಯಿಗಿಡುವಾಗ literally ಕಣ್ಣಲ್ಲಿ ನೀರಿತ್ತು!! ಹತ್ತು ದಿನ ನಮ್ಮ್ ಊಟ ಸಿಗದೇ ಇರೋದಕ್ಕೆ ಹಿಂಗಾಡ್ತೀವಿ, ಒಂದು ಹೊತ್ತಿಗೂ ಒಳ್ಳೆ ಊಟ ಇಲ್ಲದೆ ಒದ್ದಾಡೋ ಜನರ ಪರಿಸ್ಥಿತಿ ಹೇಗೆ? ಓಡಿ  ಹೋಗಿ ಪ್ಲಾನ್ ಚೇಂಜ್ ಮಾಡಿದ ಗೆಳತಿನ ತಬ್ಬಿಕೊಂಡು "ಥ್ಯಾಂಕ್ಸ್, ಸಾರೀ ಕಣೆ ಜಗಳ ಮಾಡಿದ್ದಕ್ಕೆ "ಅಂತ ಹೇಳ್ದೆ . ನಿನ್ನೆ ನೀನು ಒದ್ದಾಡಿದ್ದು ನೋಡೀನೇ ನಾವು ಮೂರೂ  ಜನ ಡಿಸೈಡ್ ಮಾಡಿ ಇಲ್ಲಿ ಬಂದ್ವಿ, ಸಧ್ಯ ನಿಂಗೆ ಈ ಜಾಗ ಬಿಟ್ರೆ ಬೇರೆಲ್ಲೋ ಇಂಡಿಯನ್ ಫುಡ್ ಸಿಗಲ್ಲ ಅಂತ, ನೀನು ನೋಡಿದ್ರೆ ನಮ್ಮನ್ನೇ  ಬೈಕೊಂಡು ಕೂತಿದ್ದೆ , ಅದೆಷ್ಟು ಖುಷಿಯಲ್ಲಿ ಊಟ ಮಾಡಿದೆ ಅಂದ್ರೆ ನಾವು ಊಟ ಮಾಡೋದನ್ನ  ಬಿಟ್ಟು ನಿನ್ನೆ ನೋಡ್ತಾ ಕೂತಿದೀವಿ ಅಂತ ಅಂದ್ರು! 

 ಇಷ್ಟೊಂದು ಪ್ರಿವಿಲೇಜ್ ಗಳ  ಮಧ್ಯೆ ನಮ್ಮ ಗೊಣಗಾಟ ಇರುತ್ತಲ್ಲ ಇಂಥದರ ಮಧ್ಯೆ ಈ ದೇವರು ಯಾಕೆ ಈ ದೇವಸ್ಥಾನ ಯಾಕೆ ಅಂತ ಸೊಕ್ಕು ಬೇರೆ ನಂದು, ಈ ದೇವಸ್ಥಾನ ಇರ್ಲಿಲ್ಲ ಅಂದ್ರೆ ತಿಂಗಳ ಗೆಸ್ಟ್ ಆಗಿ ಬಂದ  ನನ್ನಂಥವರಿಗೇನು ತೊಂದ್ರೆ ಇಲ್ಲ, ಭಾರತ ಬಿಟ್ಟು ಬರುವ ಅನೇಕ ಸ್ಟೂಡೆಂಟ್ಸ್ ವೀಸಾ ಮಕ್ಕಳಿಗೆ ಎಷ್ಟೊಂದು ಉಪಯೋಗಕರ ಅನ್ನ  ದಾಸೋಹ ಅಲ್ವ  ಇದು? ಎಲ್ಲದರಲ್ಲೂ ಲಾಜಿಕ್ ಹೊಡ್ಕೋ ನನ್ನ ಕೆಟ್ಟ ಬುದ್ಧಿಗೆ ಅಂತ ನನ್ನ ನಾನೇ ಬೈಕೊಂಡೆ!!   ಅದೇಕೆ ಇದೇಕೆ ಅಂತ ಪ್ರಶ್ನೆ ಮಾಡೋ ಯಾರೆಲ್ಲ ಈ ರೀತಿ ಅನ್ನ ದಾಸೋಹ ಮಾಡ್ತಾರೋ ನಂಗೆ ಗೊತ್ತಿಲ್ಲ, ಆದರೆ ದೇವರ ದೇವಸ್ಥಾನದ ಹೆಸರಲ್ಲಿ ನಡೆಯೋ ಇಂಥ ದಾನ ಧರ್ಮದ ಕಾರ್ಯಗಳು ಎಷ್ಟೋ ಜನರಿಗೆ ಸಹಾಯವಾಗುತ್ತೆ, ಆ ಹೊತ್ತಿಗಿನ  ಹಸಿವೆಯನ್ನು ತಣಿಸಿರುತ್ತೆ, ಅಲ್ಲೋ ಲಾಜಿಕ್ ಹುಡ್ಕಿ , ಅವ ದಾನ ಮಾಡಿದವ ಎಂಥ ವ್ಯಕ್ತಿ ಆವಾ ಸಂಪಾದನೆ ಮಾಡಿದ ರೀತಿ ಎಂತದು? ಅನ್ನೋ ಒಣ ಚರ್ಚೆಗೆ ಅರ್ಥವಿಲ್ಲ, ಹಸಿದವನ ಹೊಟ್ಟೆ ತುಂಬಿಸಿದವ ಆ ಹೊತ್ತಿನ ದೇವರು ಅಷ್ಟೇ!! ಇನ್ನೆಲ್ಲ ಕೆಲ್ಸಕ್ಕೆ ಬಾರದ ತರ್ಕ dustbin ಸೇರಲಿ ಅಷ್ಟೇ!! 











Saturday, March 15, 2025

ಹುಚ್ಚು ಜೀವನ ಪ್ರೀತಿಯ ಕನವರಿಕೆಗಳು.....


ಈ ವರ್ಷದ ರೆಸೊಲ್ಯೂಷನ್ ತಿಂಗಳಿಂಗೊಂದಾದ್ರು ತೋಚಿದ್ದನ್ನು ಗೀಚಬೇಕು ಅನ್ನೋದು, ಹೋದ ತಿಂಗಳು ಉಸಿರಾಡಲು ಕಷ್ಟ ಅನಿಸೋಕೆ ಶುರುವಾಯ್ತು, ಕೂತ್ರೆ ನಿಂತ್ರೆ ಅಂಕ್ಸೈಟಿ, ವಿಪರೀತ ಒತ್ತಡ, ಹೇಳಿಕೊಳ್ಳಲಾಗದ ಸಂಕಟ, ಕಾರ್ಪೊರೇಟ್ ನ ವೈಭವೀಕರಣದ ಜೀವನ, ತೋರಿಸಿಕೊಳ್ಳಲಾಗದ ಅಸಲಿಗೆ ಹೇಳಿಕೊಳ್ಳಲೂ ಆಗದ ಒಂದು ರೀತಿಯ ಉಭಯ ಸಂಕಟ! I am no exception, ನಮ್ಮನೆ ದೋಸೆ ಕೂಡ....ಇರಲಿ,  ಜೀವನ ಇಂಥ ಬಡಿದಾಟಗಳನ್ನು ದಾಟಿಕೊಂಡು ಹೋಗೋದೇ ಅಲ್ವೇ ಅಂತ ಸಮಾಧಾನ ಮಾಡಿಕೊಂಡು ಮೀ ಟೈಮ್ ಗೆ ರೆಡಿ ಆದೆ! 

ಇಷ್ಟೆಲ್ಲ ಜಂಜಾಟಗಳ ಮಧ್ಯೆ ನೆಮ್ಮದಿಯ ತಾಣಗಳು ಅಂದ್ರೆ ನಾವು ಯಾವಾಗಲೂ ಇಷ್ಟ ಪಟ್ಟು ಮಾಡೋ ಹವ್ಯಾಸಗಳು! ಈ ಬಡಿದಾಟ ಇದ್ದಿದ್ದೇ ಅನ್ಕೊಂಡು ಸಂಜೆ ಲಾಗ್ಔಟ್ ಮಾಡಿ ಥಟ್ ಅಂತ ಒಂದು ರೀಲ್ ಮಾಡಿ ಶೇರ್ ಮಾಡಿದೆ, ಹಾಗೆ ಫೇಸ್ಬುಕ್ ಸ್ಕ್ರಾಲ್ ಮಾಡ್ತಾ ಇರುವಾಗ ಸ್ನೇಹಿತೆಯೊಬ್ಬರು ಎರಡು ಸುಂದರವಾದ ಬಾಗಿಲಿನ ಚಿತ್ರ ಹಾಕಿದ್ದರು ಎಷ್ಟು ಚೆನ್ನಾಗಿದೆಯಲ್ಲ ಅಂತ ಲೈಕ್ ಒತ್ತಿದೆ ಆಮೇಲೆ ಗೊತ್ತಾಗಿದ್ದು ಅದಕ್ಕಂಟಿಸಿದ ಒಂದು ಪ್ರಶ್ನೆ ಕೂಡ ಇತ್ತು ಅಂತ, that was interesting!! ಅದಕ್ಕೆ ಪ್ರತಿಕ್ರಿಯಸಿದ ಮೇಲೆ ಬ್ಲಾಗ್ ಅಪ್ಡೇಟ್ ಮಾಡ್ಬೇಕು ಅನ್ಸಿದ್ದು ಸುಳ್ಳಲ್ಲ ... So , here I  am... 
 
ಬಾಗಿಲುಗಳ ಚಿತ್ರ ಹೀಗೆ ಮೇಲೆ ಅಂಟಿಸಿರುವ ಪಟದ ಹಾಗೆ ಸುಂದ್ರವಾಗಿತ್ತು, (ದಿಸ್ ಈಸ್ ಜೆನೆರೇಟೆಡ್ ಫ್ರಮ್ AI )  ಪ್ರಶ್ನೆ ಏನಪಾ ಅಂದ್ರೆ , ಇಲ್ಲಿರುವ ಕೆಂಪು ಮತ್ತು ಹಸಿರು ಬಾಗಿಲುಗಳ ಹಿಂದೆ ಜಿನೀ ವಿಶ್ ಥರ ಎರಡು ವರಗಳಿವೆ, ೧. ಕೆಂಪು ಬಾಗಿಲ ಹಿಂದೆ ಒಂದು ೧೦ ಕೋಟಿ ಇಮ್ಮಿಡಿಯೇಟ ಕ್ಯಾಶ್ ಸಿಗುತ್ತೆ, ೨. ಹಸಿರು ಬಾಗಿಲಿನ ಹಿಂದೆ ಟೈಮ್ ಟ್ರಾವೆಲ್ ಮಷೀನ್ ಇದೆ ನೀವು ಹಿಂದಕ್ಕೆ ಹೋಗಿ ನಿಮ್ಮಗಳ ಜೀವನದಲ್ಲಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ನಿಮ್ಮ ತಪ್ಪುಗಳನ್ನ/ ರಿಗ್ರೆಟ್ಗಳನ್ನ ಸರಿಮಾಡಿಕೊಳ್ಳೋ ಒಪ್ಶನ್ ಇದೆ, ಎರಡರಲ್ಲಿ ನಿಮ್ಮ ಆಯ್ಕೆ ಏನು ಅನ್ನೋದು ಪ್ರಶ್ನೆ.... ಹೆಚ್ಚಿನವರು ಗ್ರೀನ್ ಆಯ್ಕೆ ಮಾಡಿದ್ರು , ಸ್ವಲ್ಪ ಜನ ಈವಾಗ ನಂಗೆ ಅವಶ್ಯಕತೆ ಇರೋದು ದುಡ್ಡು ಸೊ ನಾನು ಕೆಂಪು ಬಾಗಿಲು ಆಯ್ಕೆ ಮಾಡ್ತೇನೆ ಅಂತ... incase ಅಲ್ಲಿ ದುಡ್ಡಿರದೇ uncertain ಫ್ಯೂಚರ್ ಇದ್ದಿದ್ರೆ obviously ಯಾರೂ ಕೆಂಪು ಬಾಗಿಲಿನ ಸಾವಾಸಕ್ಕೆ ಹೋಗ್ತಿರ್ಲಿಲ್ಲ ಅನ್ಸುತ್ತೆ... ನಿಮ್ಮ ಆಯ್ಕೆ ಯಾವ್ದು ಅಂತ ಕಾಮೆಂಟ್ ಮಾಡಿ :) 

ಇನ್ನು ನನ್ನ ಉತ್ತರ ಅಷ್ಟೊಂದು ಸಮಂಜಸವೋ ಅಲ್ವೋ ಗೊತ್ತಿಲ್ಲ ಇಲ್ಲಿ ನಾನು ತೀರಾ ಮಾದರಿ ವ್ಯಕ್ತಿತ್ವ ಅದಕ್ಕೋಸ್ಕರ  ನಾನು ಹಿಂಗೇ ಹಂಗೆ ಅನ್ನೋ ಬಿಲ್ಡ್ ಅಪ್ ಗಳಿಲ್ಲ, ಸೀದಾ ಸೀದಾ ಕೆಂಪು ಅಂತ ಹೇಳಿ, ಅದಕ್ಕೆ ವಿವರಣೆ ಏನು ಕೊಟ್ಟೆ ಅಂದ್ರೆ, ಹತ್ತು ಕೋಟಿ  ಸಿಗುತ್ತೋ ಇಲ್ವೋ ಗೊತ್ತಿಲ್ಲ ಸಿಗೋ ಹಾಗಿದ್ರೆ ಸಿಗ್ಲಿ  ದುಡ್ಡು ಯಾರಿಗೆ ಬೇಡ ?  ಆದರೆ ದುಡ್ಡು ಕೊಡ್ತೀನಿ ಅಂದ್ರು ನಾನು ಮರಳಿ ಹಿಂದಕ್ಕೆ ಹೋಗುವುದಿಲ್ಲ!! ಯಾಕೆ ? ಒಹ್ ಜೀವನದಲ್ಲಿ ರಿಗ್ರೆಟ್ಸ್ ಗಳೇ ಇಲ್ವಾ ? ಹಳೇದ್ಯಾವ್ದೋ ಒಂದು ಘಟನೆ , ವ್ಯಕ್ತಿ , ಸಮಯ ಮರುಳಿ ಬೇಕು ಅನ್ಸಿ ಅಲ್ಲಿಗೆ ಹೋಗಲ್ವಾ?  ಅಂದ್ರೆ ಮೈ ಆನ್ಸರ್  ಈಸ್ ನೋ ! 

ನಮಗೆ ಚಿಕ್ಕ ವಯಸ್ಸಿನಿಂದನೂ ಲೈಫ್ ಶುಡ್ ಬಿ ಹ್ಯಾಪಿ ಅಂತ ಬೋಧಿಸಲಾಗಿದೆ !  ಅದನ್ನು ಖುಷಿಯಾಗಿರಸಲು ತಾನೇ ಇಷ್ಟೆಲ್ಲಾ ಬಡಿದಾಟ ಒದ್ದಾಟ ?! ತಪ್ಪಲ್ಲ, ನಮ್ಮೆಲ್ಲರ ದೊಡ್ಡ ಸಮಸ್ಯೆ ಏನಂದರೆ ಗತಿಸಿ ಹೋದದ್ದನ್ನು ವೈಭವೀಕರಿಸುವುದು ಮತ್ತು ಈಗಿರುವದನ್ನು ಸದಾ ಶಪಿಸುತ್ತಿರುವುದು!! ನಮ್ಮ ಬಾಲ್ಯ ಎಷ್ಟು ಸುಂದರ, ನಮ್ಮ ಕಾಲೇಜು ದಿನಗಳು ಎಷ್ಟು ಅಧ್ಭುತ , ನಮ್ಮ ಟ್ರಿಪ್ಗಳು ವೆಕೇಷನ್ಗಳು ವಾಹ್ ಎಲ್ಲ ಮಸ್ತ್ ಆದ್ರೆ ಈ ಲ್ಯಾಪ್ಟಾಪ್ ಕುಟ್ಟೋ ಕೆಲಸ ಮಾತ್ರ ಪರಮ  ಹಿಂಸೆ!! ನಿಜ..  ತೀರಾ ಯಾಂತ್ರಿಕವಾಗಿ ಬದುಕುತ್ತಿರುವ ಜೀವನಕ್ಕೆ ಲವಲವಿಕೆಯ ಜೀವನ ಬೇಕೆನಿಸುವುದು ಸಾಮಾನ್ಯ, ಆದರೆ ಅದ್ನ್ಯಾರು ನಾವು ನಮ್ ಭವಿಷ್ಯದಲ್ಲಿ ಹುಡುಕಲು, ಹೊಂದಲು ಬಯಸದೇ ಮತ್ತೆ ಭೂತಕಾಲಕ್ಕೆ ಹೋಗಬಯಸುವುದು ಯಾಕೆ? ಅಲ್ಲಿ ಎಲ್ಲ ನಮ್ಮ ಹತೋಟಿಯಲ್ಲಿ ಇತ್ತು, ಮತ್ತೆ ಗತಿಸಿ ಹೋದ ಕಾಲದಲ್ಲಿ ನನ್ನ ತಪ್ಪುಗಳನ್ನು ಎಲ್ಲಿ ಸರಿ ಮಾಡಿದ್ದರೆ ಚೆಂದಿತ್ತು ಅನ್ನೋ ಕ್ಲಾರಿಟಿಯನ್ನ  ಬದುಕು ನಮಗೆ ಈಗ ಕಲಿಸಿದೆ, ಹಾಂಗಾಗಿ ಗೊತ್ತಿಲ್ಲದ ಭವಿಷ್ಯದ ಬಾಯಿಗೆ ಬೀಳೋದಕ್ಕಿಂತ, familiar ಅನಿಸೋ ಭೂತ ಕಾಲ ನಮ್ಮ ಫೇವರಿಟ್ ಪ್ಲೇಸ್!!  

ಬದುಕು ಎಲ್ಲರಿಗೂ ಒಂದೇ ರೀತಿಯಲ್ಲ , ಇಲ್ಲಿ ನಡೆಯುವ ಅನಾಹುತಗಳು , ಸಾವು ನೋವುಗಳು , ಅಪಮಾನಗಳು, ಹಾರ್ಟ್ ಬ್ರೇಕ್ಗಳು,  ದುಃಖ ದುಮ್ಮಾನಗಳು ಎಲ್ಲದರದ್ದು ಒಂದು ದೊಡ್ಡ ತೂಕ ಅಂತಾದ್ರೆ , ಸುಮ್ನೆ ತೀರ್ಥ ಪ್ರೋಕ್ಷಣೆ ಮಾಡಿದ ಹಾಗೆ ಅಲ್ಲೊಂದು ಇಲ್ಲೊಂದು ಖುಷಿಯ ಹನಿ ಸಿಕ್ಕಿರುತ್ತೆ, ಏನ್ ಭಾರಿ ಫಿಲಾಸಫಿ ಮಾತಾಡ್ತೀರಾ ಅಂತ ನೀವು ಪ್ರಶ್ನೆ ಮಾಡಬಹುದು.  ಅದು ಹೆಚ್ಚಿನ ಸಲ ನಿಜವೂ ಇರ್ಬಹುದು,  ಅಲ್ಲಗೆಳೆಯೊ ಹಾಗಿಲ್ಲ.  ಈವಾಗ ಇದನ್ನ ಸ್ವಲ್ಪ ಉಲ್ಟಾ ಮಾಡಿ ಹನಿಯಷ್ಟು ಕಷ್ಟ ಸಾಗರದಷ್ಟು ಸುಖ ಅಂತೇನಾದ್ರೂ ಇದ್ದಿದ್ರೆ ನಾವೆಲ್ಲಾ ಸುಖ ಸಂತೋಷಕ್ಕಾಗಿ ಹಾಗೂ ನೆಮ್ಮದಿಗಾಗಿ ಇಷ್ಟೆಲ್ಲಾ ಬಡಿದಾಡುವ ಪ್ರಮೇಯ ಇರ್ತಿತ್ತ ? ಅಸಲಿಗೆ ಸುಖದ ಬೆಲೆಯಾದ್ರೂ ಗೊತ್ತಾಗ್ತಿತ್ತ?! 

ಬದುಕು ಅದೆಷ್ಟೋ  ವಿಸ್ಮಯ, ಅನುಭವಗಳ ಆಗರ ಅಲ್ವ?  ಪ್ರತಿ ಅನುಭವ ಹೊಸ ಪಾಠ, ತೀವ್ರ ಸಂಕಟ, ಹತಾಶೆ, ನೋವು ಇದೆಲ್ಲವನ್ನು ಪರಿ ಪರಿಯಾಗಿ ಅನುಭವಿಸಿದ ಮೇಲೆ ಪಕ್ವವಾಗುವ ಮನಸ್ಥಿತಿ.  ಇದೆಲ್ಲವನ್ನು ಇಲ್ಲದೇ ಬದುಕು ಸುಂದವಾಗೇ ಕಾಣಬಹುದೇನೋ ಈ ಅನುಭವಗಳಿಂದ ವಂಚಿತ ವಾದ ಮನಸ್ಸು ಪಕ್ವವಾಗಿರುವುದಿಲ್ಲ. ಜಗತ್ತನ್ನು ನೋಡುವ ದೃಷ್ಟಿ ಪರಿಣಾಮಕಾರಿಯಾಗಿರುವದಿಲ್ಲ! ಒಹ್ ಬದುಕೇ ಇಷ್ಟೆಲ್ಲ ಅನುಭವ ಕೊಟ್ಟ ನಿನಗೆ ನಾನು ಸದಾ ಋಣಿ ಅಂತ ನಾವು ಯಾವತ್ತೂ ಹೇಳೋದಿಲ್ಲ, ಯಾಕಂದ್ರೆ ಬದುಕಿನಲ್ಲಿ ಯಾವಾಗಲೂ ಸಂತೋಷ ಇರಬೇಕು ಅಂತ ನಮಗೆ ಫೀಡ್ ಮಾಡಲಾಗಿದೆ. 

ಹಿಂದೆ ಹೋಗಿ ಆಗಿದ್ದನ್ನ ಸರಿ ಮಾಡೋದೇ ಆದ್ರೆ ಬದುಕು ಕಲಿಸಿದ ಎಲ್ಲ ಅನುಭವಗಳನ್ನು ಪಾಠಗಳನ್ನು ನಾವು ಅವಮಾನಿಸಿದಂತೇ ಸರಿ. ಅಸಲಿಗೆ ಹಿಂದೆ ಹೋಗುವ ಅವಶ್ಯಕತೆ ಏನಿದೆ ? ಅದು ಒಂದು ಫ್ಯಾಂಟಸಿ ಆಗಬಹುದಷ್ಟೆ, ಮುಂದಿರುವ ಗಮ್ಯತಾಣಗಳೆಷ್ಟೋ ? we never know what is in store for us ! ಈ uncertainty ಎಷ್ಟು ಚೆಂದ ಅಲ್ವ? ಓಶೋ ಹೇಳುವಹಾಗೆ ಯಾವ ಮನುಷ್ಯ ತನ್ನ ಜೀವನವನ್ನು ಪರಿಪೂರ್ಣತೆಯಿಂದ ಕಳೆದಿರುವುದಿಲ್ಲವೋ ಅವನಿಗೆ ಸದಾ ಭೂತದ ಚಿಂತೆ ನಿಜವಾದ ಪರಿಪೂರ್ಣ  ಮನುಷ್ಯ ಅಂತಾದ್ರೆ ಅವನು ತನಗೆ ಖುಷಿ ಕೊಡದೆ ಇರದ ಕೆಲಸಗಳನ್ನು ಮಾಡಿರುವುದೇ ಇಲ್ಲ ಹಾಂಗಾಗಿ ಸದಾ ಸುಖಿ ಅವನಿಗೆ ಭವಿಷ್ಯದ ಬಗ್ಗೆ ಒಂದು ಅಚ್ಚರಿ ಇರುತ್ತೆ ಅಂತ. ಇದು ತೀರಾ ಫಿಲಾಸಫಿಕಲ್ ಅನ್ಸಿದ್ರು ಇಲ್ಲೊಂದು ಮೆಸೇಜ್ ಇದೆ, ನೀವು ಖುಷಿಯಾಗಿರಲು ನಿಮಗೆ ಇಷ್ಟವಿಲ್ಲದನ್ನು ಮಾಡಬೇಡಿ, ಮಾಡುವ ಅನಿವಾರ್ಯತೆ ಇದೆ ಅಂದಾದರೆ own it do it for the sake of it, but never ರಿಗ್ರೆಟ್ it !! 


ಇಲ್ಲಿ ಇಷ್ಟವಿಲ್ಲದನ್ನು ಮಾಡುತ್ತಾ ಹೋಗುವುದು ಮತ್ತು ಮುಂದೆ ಹೋಗ್ತಾ ಹೋಗ್ತಾ ನಾನು ಅದನ್ನ ಸರಿ ಮಾಡಬಹುದಿತ್ತೇನೋ ಅಂತ ತಿರುಗಿ ಅದೇ ಪುಟಕ್ಕೆ ಬಂದು ನಿಲ್ಲೋದು, ಒಂದು ರೀತಿಯ vicious ಸೈಕಲ್.  ಖುಷಿ , ಸಂತೋಷ ನೆಮ್ಮದಿ ಹನಿಗಳಾಗಿ ಸಿಗುತ್ತಲೇ ಇರಬೇಕು ಅವಗಳನ್ನು ಪಡೆಯಲು ನಿರಂತರವಾಗಿ ನಾವು ಸೈಕಲ್ ತುಳಿಯುತ್ತಲೇ ಇರಬೇಕು, ಸಂಕಟಗಳನ್ನು ದಿವ್ಯ ಅನುಭಾವದಂತೆ ಮಿಂದೇಳಬೇಕು ಆಗ ತಾನೇ ಬಿಸಿಲಬೇಗೆಯಲ್ಲಿ ಬೀಳುವ ಹನಿಗಳಿಗೆ ನಿಜವಾದ ಬೆಲೆ?! ಬದುಕು ಎಲ್ಲರಿಗೂ ಒಂದೇ ರೀತಿಯಲ್ಲ ನಿಜ , ಬದುಕನ್ನು ಇಡೀಯಾಗಿ ಇದ್ದಂತೆ ಸ್ವೀಕರಿಸೋದನ್ನ ಬಿಟ್ಟು ಬೇರೆ ಆಯ್ಕೆಗಳೇ ಇಲ್ಲದಿರುವಾಗ ಲವ್ ಯು ಜಿಂದಗಿ ಹೇಳಿ ಮುನ್ನಡೆಯುತ್ತಿರಬೇಕಷ್ಟೆ!! 


Wednesday, February 12, 2025

ಕಸದ ಬುಟ್ಟಿಗೆ ಹೋಗಬೇಕಾದ ವಿಷಯವೊಂದು ಪ್ರೈಮ್ ಟೈಮ್ ನ್ಯೂಸ್ ಆದಾಗ...🙆

 


ಆಫೀಸ್ನಲ್ಲಿ ಮ್ಯಾನೇಜರ್ ಬರೋಬ್ಬರಿ ೧೨ ಗಂಟೆಗ್ ಆಗೋವಷ್ಟ್ ಕೆಲಸ ಕೊಡ್ಟ್ಟಿರ್ತಾರೆ , ಅಪ್ರೈಸಲ್ ಹತ್ರ ಬರುವಾಗ ಯಾಕ್ ಗುರು ಸುಮ್ನೆ  ರಗಳೇ ಅನ್ಕೊಂಡು ಎಷ್ಟೇ ತ್ರಾಸ್ ಆದ್ರೂ ಒಳಗೆ ನುಂಗಿಕೊಂಡ, ನಮ್ಮ  ಕಾರ್ಪೊರೇಟ್ ಮಜದೂರ್ಗಳು, ಧರ್ಮ , ಹಾಗೂ ಸೆಕ್ಸ್ ವಿಷಯ ಕಂಡ ಕೂಡ್ಲೇ, ಅವರ ಮ್ಯಾನೇಜರ್ ಹಾಗೂ ತಮ್ಮ ಕೆಲ್ಸದ ಎಲ್ಲ ಸಿಟ್ಟೂ ಬಡ್ಡಿಸಮೇತ ಇಂತಹ ಇಶ್ಯೂ ಗಳನ್ನು ಬ್ಲೋಯಿಂಗ್ ಔಟ್ ಆಫ್  proportion ಮಾಡಿ ತಮ್ಮ ಅವ್ಯಕ್ತ ಆಕ್ರೋಶವನ್ನು ಈ ರೀತಿ ತಣ್ಣಗೆ ಮಾಡಿಕೊಳ್ಳುತ್ತಾರೆ!! ಇದು ಕೇವಲ outrage ಅಲ್ಲ, ಇದಕ್ಕೆ ಸಮಾಜದ ಕಟ್ಟು ಪಾಡುಗಳಿಗೆ ನಾನೆಷ್ಟು ಸಭ್ಯ ಅಂತ ಎಲ್ಲರಿಗೂ ಸಾರಿ ಸಾರಿ ಇನ್ನೊಬ್ಬ ದುಷ್ಟ ನೋಡಿ ಅದನ್ನು ಖಂಡಿಸಿ  ನಾನು ಸಭ್ಯ ಅಂತ ತೋರಿಸಿಕೊಳ್ಳೋ ಹಪಾಹಪಿ !!  

ಎರಡು ದಿನದಿಂದ ಏಯ್  ಹಾಳಾಗ್ ಹೋಗ್ಲಿ ಬಿಡ್ರಪ್ಪ ಸುಮ್ನೆ ಯಾಕೆ ನಂದೇ ನಂದು ಹಾಸಿ ಹೊದ್ಕೊಳೋವಷ್ಟಿದೆ  ಅನ್ಕೊಂಡು ಸುಮ್ನಿದ್ದೆ , ಆದ್ರೆ ಇತ್ತೀಚಿಗೆ ಕಾಂಟ್ರಾವೆರ್ಸಿಗಿಂತ ಹ್ಯೂಮನ್ ಸೈಕಾಲಜಿ ಹಾಗೂ ಬಿಹೇವಿಯರ್ strategies ಬಗ್ಗೆ ಒಂದು ರಿಸರ್ಚ್ ಪೇಪರ್ ಓದುವಾಗ ಅನ್ಸಿದ್ದು ಇದನ್ನ ಬರೀಬೇಕು ಅಂತ, ಬಟ್ ರಾಂಗ್ ಟೈಮ್ ಎನಿವೇ ರೈಟ್ ಕಂಟೆಂಟ್!! ಎಷ್ಟೇ ಪ್ರಯತ್ನ ಪಟ್ರು ದಿ suppressed writer ಇನ್ ಮಿ  ಬರಿ ಬರಿ ಅಂತ ಕಾಟ ಕೊಡ್ತಾನೆ ಇರ್ತಾನೆ!! ಸರಿ ವಿಷ್ಯಕ್ಕೆ ಬರಣ... 

ನಮ್ಮ ದೇಶದ ಜನರಿಗೆ ನೋಡಕ್ಕೆ ಬೆಳ್ಳಗೆ ಹಾಗೂ ತಕ್ಕಮಟ್ಟಿಗೆ ಚೆನ್ನಾಗಿ ಕಾಣಿಸುವ ಜನರನ್ನು ನಾರ್ಮಲ್ ಜನರಿಗಿಂತ ತುಸು ಜಾಸ್ತಿ ಇಷ್ಟ ಪಟ್ಟು ನೋಡುವ ಚಾಳಿ ಅದು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಇರ್ಬೋದು ಅಥವಾ ಕಂಟೆಂಟ್ ಹೆಸರಲ್ಲಿ ಸಗಣಿ ಸಾರಿಸುತ್ತ ಇರೋ influencers ಕೂಡ ಇರ್ಬೋದು, ಏಯ್ ನೋಡಕ್ ಮಸ್ತ್ ಇದಾಳ್/ ಇದಾನ್ ಅಲ ಅನ್ನೋದು!! ಹಾಂಗಾಗಿ ಅವರು ಏನು ಮಾಡ್ತಾ ಇದಾರೆ ದೇಶಕ್ಕಾಗಿ ಎಂತಹಾ ಸಾಹಸ,ಕರ್ತವ್ಯ ಮಾಡ್ತಿದ್ದಾರೆ ಅನ್ನೋದನ್ನ ಅವರ followers ಹಾಗೂ subscribers ನಿರ್ಧರಿಸುತ್ತಿರುವುದು ಇಂದಿನ ಕಾಲಮಾನದ ದೊಡ್ಡ ದುರಂತವೇ ಸರಿ!! ಅಗೈನ್ ಸಮೂಹ ಸನ್ನಿ. ರೋಸ್ಟ್ ಮಾಡೋ ಚಾನೆಲ್ಗಳಿಗೂ ಮಿಲಿಯನ್ ಗಟ್ಲೆ  followers!! ಯಾರನ್ನೋ ರೋಸ್ಟ್ ಮಾಡೋ ವಿಕೃತವನ್ನ normalise ಮಾಡಲಾಗಿದೆ. ಇನ್ನು ಮಾತು ಮಾತಿಗೆ ಬೈಯೋದು ಸ್ಟಾಂಡ್ ಅಪ್ ಕಾಮಿಡಿಯ ಅಲಿಖಿತ ನಿಯಮವಾಗಿದೆ! ಇನ್ನು ಬಿಕಿನಿ ಹಾಕೊಂಡು ಮಾಲ್ಡೀವ್ಸ್ ನಲ್ಲಿ ಫೋಟೋಶೂಟ್ ಮಾಡ್ಲಿಲ್ಲ ಅಂದ್ರೆ influencer ಆಗಿ ಬದುಕಿರಬೇಕಾ ಅನ್ನೋ ರೇಂಜಿಗೆ ಬಿಲ್ಡ್ ಅಪ್ ಗಳು!! 

ಕೇವಲ ಐದು ವರ್ಷದ tiktok ಬ್ಯಾನ್ ಹಾಗೂ ಇನ್ಸ್ಟ್ಗ್ರಾಮ್ ರೀಲ್ಸ್ ಒಂದು ಸಭ್ಯ ನಾಗರಿಕತೆಯ ಮುಖವಾಡ ಹೊತ್ತ ಅನೇಕರ ಅಸಲಿ ಚಹರೆಯನ್ನು ಹಂತ ಹಂತವಾಗಿ ಬಯಲು ಮಾಡುತ್ತಲೇ ಬಂದಿದೆ, ನಾಗರಿಕತೆಯ ಹಿತ್ತಲ ಕತ್ತಲನ್ನು ಎಳೆ ಎಳೆಯಾಗಿ ಬಿಚ್ಚುತ್ತಲೇ ಇದೆ. ಇದಕ್ಕೆ ಸಮಾಜ ಒಂದು ಎಂಟಿಟಿಯಾಗಿ ನೇರ ನೇರ ಜವಾಬ್ದಾರಿ.  ಸಮಾಜದ  ಭಾಗವಾದ ನಾವುಗಳು ಕೂಡ  ಪ್ರತ್ಯಕ್ಷ /ಪರೋಕ್ಷವಾಗಿ  ಕಾರಣೀಭೂತರೇ !! ಆದರೆ ಇದನ್ನು ಪಬ್ಲಿಕ್ಕಲ್ಲಿ ಒಪ್ಪಿಕೊಂಡು ಬದುಕೋಕೆ ಆಗುತ್ತೆ ? ಅದಕ್ಕೆ ಯಾವುದೋ ಚಾಲ್ತಿಯಲ್ಲಿರುವ ಧರ್ಮ, ಅಧ್ಯಾತ್ಮ , ಮುಕ್ತಿ ಅನ್ನೋ ದೊಡ್ಡ ದೊಡ್ಡ ಪದ ಬಳಸಿ ಜನರನ್ನು ಮಂಗ್ಯಾ ಮಾಡಿ ತನ್ನತ ಸೆಳೆಯುವ ಕಲೆ ಗೊತ್ತಿರುವ ಮನುಷ್ಯನಿಗೆ ನಮ್ಮ ದೇಶ ತುಂಬಾ ದೊಡ್ಡ ಮಾರ್ಕೆಟ್. ಅದನ್ನ ಸದುಪಯೋಗ ಪಡಿಸಿಕೊಂಡವ ಕೇವಲ ದುಡ್ಡಷ್ಟೇ ಅಲ್ಲ ಹೆಸರೂ? ಮಾಡಿ ಅಸಂಖ್ಯ ಹಿಂಬಾಲಕರನ್ನು ಪಡೆಯುತ್ತಾನೆ!! 

ಹಿಂದೆ ಯಾವುದೇ ದೊಡ್ಡ ಅವಾರ್ಡ್ ಕೊಡುವಾಗ ಅಂದರೆ ಸಾಧನೆಯ ಮಾನದಂಡವಾಗಿ  ಕೊಡುವ ಅವಾರ್ಡ್ ಕನಿಷ್ಠ ೫೦ ವರ್ಶವಾದ್ಮೇಲೆ ಕೊಡುತ್ತಿದ್ದರು, ಅಂದರೆ ಮನುಷ್ಯ ೫೦ ಆಗುವ ಹೊತ್ತಿಗೆ ಮಾಗಿರುತ್ತಾನೆ ಜೀವನದ ಹಲವು ಆಯಾಮ ಅನುಭವಿಸಿ ಪಕ್ವವಾಗಿರುತ್ತಾನೆ ಮಾಗಿರುವ ವ್ಯಕ್ತಿತ್ವಕ್ಕೆ ಅವಾರ್ಡ್ ಅನ್ನೋ ರೀತಿ ಅದೊಂದು ಒಳ್ಳೆಯ ಉದ್ದೇಶದಿಂದ ಕೂಡಿದ್ದ ರೆಕಗ್ನಿಷನ್ ಆಗಿತ್ತು. ಕಾಲ ಕ್ರಮೇಣ ಅವಾರ್ಡ್ಗಳಿಗೂ ರಾಜಕೀಯ ಬಣ್ಣ ಬಳಿದು ಕೇವಲ ಜನರನ್ನು ಕರೆಸಿ ಪಾಡ್ಕ್ಯಾಸ್ಟ್ ಮಾಡಿ ಫೇಮಸ್ ಆದವರದ್ದು ಸಾಧನೆ, ಜನರನ್ನು ನಗೆಸುವುದು ಸಾಧನೆ, ಫ್ಯಾಷನ್ ಸೆನ್ಸ್ ಇರೋದು ಸಾಧನೆ, ಅಡುಗೆ ಮಾಡೋದು ಸಾಧನೆ ಹೀಗೆ ದಿನ ನಿತ್ಯ ಮಾಡೋ ಕ್ರಿಯೆಗಳೂ ಸಾಧನೆಗಳಾಗಿ ಆ ಸಾಧನೆಗಳಿಗೆ ದೇಶದ ಅತ್ಯುನ್ಯತ ಪದವಿಯಲ್ಲಿರುವವವರು ಕರೆಸಿ ಸನ್ಮಾನಿಸಲು ಶುರುವಾದಮೇಲೆ, ಕಷ್ಟಪಟ್ಟು ಮಾಡುವ ಕೆಲ್ಸಕ್ಕೆ ಹಾಗೂ ಸಾಧನೆಗೆ ಬೆಲೆಯೇ ಇಲ್ಲದಂತಾಯ್ತು! ಅಗ್ಗವಾಗಿ ಬಿಕಾರಿಯಾದ ಮೊಬೈಲ್ ಡೇಟಾ ಅಗ್ಗವಾದ ಜನರನ್ನೇ ಸಮಾಜದ ಮುಖ್ಯಪರದೆಗೆ ತಂದು ನಿಲ್ಲಿಸಿದೆ!!  ಈಗ ಇದು ಸರಿ ತಪ್ಪಿನ ಚರ್ಚೆಯೇ ಅಪ್ರಸ್ತುತ, ನಿಯತ್ತಾಗಿ ೮ ರಿಂದ ಹತ್ತು ಗಂಟೆ ಕೆಲಸ ಮಾಡುವರು ಇವರಷ್ಟು ಹೆಸರು ಹಾಗೂ ಹಣ ಎಂದೂ ಮಾಡಲಾರರು! a ಹಾರ್ಡ್ pill ಟು swallow!!  

ಅವರುಗಳನ್ನ ಫಾಲೋ ಮಾಡುತ್ತಲೇ .. ಅಲ್ಲ ಗುರು, ನಾನು ಇಷ್ಟ ಕಷ್ಟ ಪಟ್ಟು ಇದ್ನೇಲ್ಲ ಮಾಡ್ತಿದ್ರೆ ನಂಗೆ ಕರೆಕ್ಟ್ ಟೈಮ್ ಅಪ್ರೈಸಲ್ ಅಥವಾ ಪ್ರೋಮೋಷನ್ ಆಗ್ತಿಲ್ಲ, ಇವ ವಿಡಿಯೋ ಮಾಡ್ಕೊಂಡು ಪಿ ಎಂ  ಹತ್ರ ಅವಾರ್ಡ್ ತಗೊಂಡ್ ಬಂದ್ನಲ್ಲ ಗುರು ಅನ್ನೋ ತಣ್ಣನೆಯ ಉರಿ ಉಡುಗಿರುತ್ತೆ! ಅದು ಕೇವಲ ಒಂದು  ಫ್ಯುಯೆಲ್ ಗ ಕಾಯ್ತಾ ಹೊಂಚು ಹಾಕ್ತಾ ಇರುತ್ತೆ, ಎಲ್ಲೋ ಸಿಕ್ಕೀತಾ ಅಲ್ಲಿಗೆ ದೊಡ್ಡ ಪ್ರಮಾಣಾದ ಬೆಂಕಿ ಹೊತ್ತಿಬಿಡುತ್ತೆ !! ಇಲ್ಲಿ ಯಾರನ್ನೋ ಬೆಂಬಲಿಸುವ ಅಥವಾ justify ಮಾಡುವ ಜರೂರತ್ತು ಖಂಡಿತ ಇಲ್ಲ. ಒಂದು ಕೀಳುಮಟ್ಟದ ಮಾನಸಿಕ ಅಸ್ವಸ್ಥೆಯ ಕಂಟೆಂಟ್ ಹಾಗೂ ಶೋ ಗೆ ಇಷ್ಟೊಂದು outrage ತೋರಿಸುತ್ತಿರುವ ಜನ ತಮ್ಮ ದಿನ ಬೆಳಗಾದರೆ ಬರುವ ಸಮಸ್ಯೆಗಳಿಗೆ, ಮೂಲ ಸೌಕರ್ಯಗಳಿಗೆ ಹಾಗೂ ಸಮಾಜದಲ್ಲಿ ಕಣ್ಣೆದುರಿಗೆ ನಡೆಯುವ ಅನ್ಯಾಯಗಳಿಗೆ ಜಾಣ ಕುರುಡು ಕಿವುಡು ತೋರಿಸಿ ಮತ್ತದೇ ರೀಲ್ಸ್ ಗಳಲ್ಲಿ ಮುಳಗಿಹೋಗುತ್ತಾರೆ! 

ಕಾರಣ ಸೆಕ್ಸ್ ಇಸ್ ಆ taboo, ತನ್ನ ಬ್ರೌಸಿಂಗ್ ಹಿಸ್ಟೋರಿಯಲ್ಲಿ ಎಂತದ್ದೇ ಕೆಟ್ಟ ಕೊಳಕ ಮನಸ್ಥಿತಿಯ ಕಂಟೆಂಟ್ ನೋಡಿದ್ದರೂ, ಸಮಾಜದ ಕಣ್ಣಿಗೆ ತಾನೊಬ್ಬ ಸಭ್ಯ ಮನುಷ್ಯ ಅನ್ನೂದನ್ನ ಬೇರೆಯವರ ಲೈಂಗಿಕತೆಯ ವೈಕಲ್ಯವನ್ನ, ಯೋಚನಾ ಲಹರಿಯನ್ನ ಬಹಿರಂಗವಾಗಿ ಖಂಡಿಸಿ, ನೋಡ್ರಿ ಹೆಂಗ್ ಮಾತಾಡ್ತಾನೆ, ಮಾನ ಮರಿಯಾದೆ ಇದೆಯೇನ್ರಿ ಇವನಿಗೆ ಥೂ! ಅಂತ ಉಗಿದಾಗ , ನೋಡು..  ನಾನೆಷ್ಟು ಒಳ್ಳೆಯವ ಅನ್ನೋ ಮುಖಾವಾಡ ಬಂದು ಅಣುಕಿಸುರುತ್ತದೆ!!  ಬಟ್ that ಈಸ್ ಹೌ ಸಮಾಜ ಎನ್ನುವ ಎಂಟಿಟಿ ಗುರುತಿಸಿಕೊಳ್ಳೋದು! 

ಹಂದಿ ಹೊಲಸಲ್ಲೆ ಇರೋದು ಅನ್ನೋದು ಗೊತ್ತಿರುವ ವಿಷಯ, ಹಂದಿ ಹೊಲಸಲ್ಲೆ ಇದೆ ಅಂತ ಬೊಬ್ಬೆ ಇಡುವವರಿಗೆ ಶಾಣ್ಯಾತನದ ಪಟ್ಟದ ಅವಶ್ಯಕತೆ ಇದೆ.   Dustbin ಗೆ ಹೋಗಬೇಕಾದ ಕಂಟೆಂಟ್ ಅನ್ನು prime-time ನ್ಯೂಸ್ ಮಾಡಿಕೊಂಡು ಬದುಕುವ ದುರ್ಗತಿ ನಮ್ಮ ದೇಶದ ಮಾಧ್ಯಮಕ್ಕೆ  ಬಂದಿರುವುದು ದುರಂತ :( 

ಇಲ್ಲಿಗೆ ಬಂದು ತಮ್ಮ ಅಮೂಲ್ಯ ಸಮಯವನ್ನು ವಿನಯೋಗಿಸಿದಕ್ಕೆ  ಧನ್ಯವಾದಗಳು !! ಮತ್ತೆ ಸಿಗುವೆ :)





Sunday, January 12, 2025

90's Kids ನ ಅವ್ಯಕ್ತ ಕನವರಿಕೆಗಳು !!





ವಿಪರೀತ!!! ಇತಿಹಾಸದಲ್ಲಿ ಹಿಂದೆಂದೂ ಕೇಳದ ಹಾಗೂ ನೋಡದ ರೀತಿಯಲ್ಲಿ ನಮ್ಮ್ ಮಿದುಳಿಗೆ ಟೆಕ್ನಾಲಜಿ ಹೆಸರಲ್ಲಿ ಎಲ್ಲದರ ಬಗ್ಗೆಯೂ ಸದಾ ಅಪ್ಡೇಟ್ ಆಗಿರ್ಬೇಕು ಅನ್ನೋ ಹುಚ್ಚು ಭ್ರಮೆ ತುಂಬಿಸಿ, ಅದರ ಕೆಪ್ಯಾಸಿಟಿ ಗೂ ಮೀರಿದ್ದನ್ನ ಉಣಬಡಿಸಲಾಗುತ್ತಿದೆ! ಕಾರ್ಪೊರೇಟ್ ಜಗತ್ತಿನಲ್ಲಿ ಮಾತೊಂದಿದೆ, "ಇಫ್ ಸಂಥಿಂಗ್ ಈಸ್ ಫ್ರೀ ದೆನ್ ಯು ಆರ್ ದಿ ಪ್ರಾಡಕ್ಟ್" !! ನಮಗೆ ಗೊತ್ತಿಲ್ಲದೇ ನಮ್ಮ ಖಾಸಗೀತನ ಮಾರಿಕೊಂಡು ನಮ್ಮ ಸಮಯ, ನಮ್ಮ ಆರೋಗ್ಯ, ಎಲ್ಲವನ್ನೂ ಈ ಟೆಕ್ನಾಲಜಿ ಹಾಳುಗೆಡುವುತ್ತಿದೆ. ಮನುಷ್ಯನ ಹಲವು ಮುಖ್ಯಗುಣಗಳ ಪೈಕಿ ತಾಳ್ಮೆ ಕೂಡ ಒಂದು! ಅದನ್ನು ನಮ್ಮಲ್ಲಂತೂ ಯಾವುದೇ  ಕಾರಣಕ್ಕೂ ಹುಡುಕುವ ಹಾಗೆ ಇಲ್ಲ ಬಿಡಿ. . ನಮ್ಮ patience ಅನ್ನು ನಮ್ಮಿಂದ ಹೇಳ ಹೆಸರಿಲ್ಲದೆ ೧೫ ರಿಂದ ಮೂವತ್ತು ಸೆಕೆಂಡ್ reels ಹೆಸರಿನಲ್ಲಿ ಸಮಾಧಿ ಮಾಡಲಾಗಿದೆ. ಅಟೆಂಶನ್ ಸ್ಪ್ಯಾನ್ ಕೂಡ ೪೫ ನಿಮಿಷದಿಂದ ೫ ನಿಮಿಷಕ್ಕೆ ಇಳಿಸಲಾಗಿದೆ. ಥ್ಯಾಂಕ್ಸ್ ಟು ಇಂಟರ್ನೆಟ್ ಅಂಡ್ ಥ್ಯಾಂಕ್ಸ್ ಟು ಸೋಶಿಯಲ್ ಮೀಡಿಯಾ!!


ಇದೆಲ್ಲದರ ಮಧ್ಯೆ  ಚೆರ್ರಿ ಆನ್ ಟಾಪ್ ಥರ  ವಾರಕ್ಕೆ ೭೦ ಅಥವಾ ೯೦ ಗಂಟೆಯ ಕೆಲಸ ಎಂಬೋ ಡಿಬೇಟ ಬೇರೆ!!  ಎಲ್ಲದೂ ವಿಪರೀತ ಅನಿಸುವ ಕಾಲಘಟ್ಟದಲ್ಲಿ ಇರುವ  ಈ ninteys ಕಿಡ್ಸ್  ಅಂತ ನಾವೇ ಕರ್ಕೊಂಡು, ವೀ know the ವರ್ಲ್ಡ್ ಬಿಫೋರ್ ಆಂಡ್ ಆಫ್ಟರ್ ಇಂಟರ್ನೆಟ್ ಅಂತ  ಏನೋ ಒಂದು ರೀತಿ ಖುಷಿ ಪಡೋ ನಾವುಗಳು , ನಮಗೆ ಗೊತ್ತಲ್ಲದೆ ಸದಾ ಒಂದು ಧಾವಂತದ ನೂಕು ನುಗಲ್ಲನ್ನು ದಿನ ಬೆಳಗಾದರೆ ಅನುಭವಿಸುತ್ತಲೇ ಇರುತ್ತೇವೆ . of course ನಮ್ಮ ಪಾಲಕರ ಜೆನೆರೇಷನ್ ವೀ Know ದಿ ವರ್ಲ್ಡ್ ಬಿಫೋರ್ ಅಂಡ್ ಆಫ್ಟರ್ ಎಲೆಕ್ಟ್ರಿಸಿಟಿ ಅಂತ ಹೇಳ್ಕೊತಾರೆ ಅವರಕ್ಕಿಂತ ಮುಂಚೆ ಇರೋವ್ರು ಇನ್ನೊಂದೇನೋ ಹೇಳ್ತಾರೆ ಆಂಡ್ ದಿ saga continues!!  ಬಟ್ ನಮ್ಮ ಪಾಲಕರ ಜನರೇಶನ್ at least ನಮಗಿಂತ ಸಂತೋಷದಲ್ಲಿ ಜೀವನ ನಡೆಸ್ತಾ ಇದ್ರೂ ಅನ್ನೋದನ್ನ ಅಲ್ಲಗೆಳೆಯೊಹಾಗಿಲ್ಲ! 


ಸಂಜೆ ಆರು ಏಳುಗಂಟೆಗೆ ಮನೆಗೆ ಬರುತ್ತಿದ್ದ ಅಪ್ಪ, ಮತ್ತೆ ಬೆಳಗೆದ್ದು ೯ ಅಥವಾ ಹತ್ತುಗಂಟೆಯವರೆಗೆ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಕೇವಲ ಕುಟುಂಬದ ಸ್ವತ್ತಾಗಿಯೇ ಉಳಿಯುತ್ತಿದ್ದರು , ನೋ ಪೀರ್ ಪ್ರೆಷರ್, ನೋ ಡೆಡ್ಲೈನ್ , ನೋ ಇಮೇಲ್, ನೋ ಕಾಲ್ ನೋ ಲ್ಯಾಪ್ಟಾಪ್ more importantly ನೋ ಕನೆಕ್ಷನ್ ಟು ಆಫೀಸ್ ಆಫ್ಟರ್ ಆಫೀಸ್ hours. ವರ್ಕ್ ಲೈಫ್ ಬ್ಯಾಲೆನ್ಸ್ ಫಿಲಾಸಫಿ ನ ತುಂಬಾ ಚೆನ್ನಾಗಿ ನಿಭಾಯಿಸಿದ್ರೂ, ತಮ್ಮದೇ ಸ್ವಂತ ಸೂರು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಇದಷ್ಟೇ ಅವರುಗಳ ಕನಸಾಗಿತ್ತು.  ಅಮ್ಮ ಮಾಡಿದ ಅಡುಗೆಯಲ್ಲಿ ಪ್ರೀತಿ ವಾತ್ಸಲ್ಯ ಇರ್ತ ಇತ್ತು, ನಾನು ಮಾಡುವುದು ನಮ್ಮ ಮನೆಯವರಿಗೆ, ಮಕ್ಕಳಿಗೆ ಎನ್ನುವ vibes ಇತ್ತು, ಉಪ್ಪಿಟ್ಟೇ ಇದ್ರೂ ಅಮ್ಮನ ಕೈರುಚಿ ಇತ್ತು, ಹಣಕ್ಕಾಗಿ ಹೊಟ್ಟೆಪಾಡಿನ ಸಾಧನ ಮಾಡಿಕೊಂಡಿರುವ ಕುಕ್ ಗಳು ಅಮ್ಮನಂತೆ ಬಡಿಸಬಲ್ಲರೇ ? ಥರಾವರಿ ತಿಂಡಿ ತಿನಿಸು ಇದ್ರೂ ಅದ್ಯಾಕೆ ಮನೆಯ ಊಟದ ರುಚಿ ಕೊಡುವುದಿಲ್ಲ? ನಾವು ತಿನ್ನುವ ಆಹಾರದ ಮೂಲಕ ನಮ್ಮ ಕುಕ್ಗಳ ಸುಪ್ತ ಮನಸ್ಸಿನ ಎನೆರ್ಜಿಯನ್ನು ನಮಗರಿವಿಲ್ಲದೆ ಸೇವಿಸುತ್ತಿದ್ದೇವೆ!! 


ದೈಹಿಕವಾಗಿ ಮನೆಯಲ್ಲಿದ್ದು ಮನೆಯವರ ಜೊತೆ ಸಮಯ ಕೊಡಲಾಗದೇ, ಸದಾ ಒಂದು ರೀತಿಯ ಒತ್ತಡದಲ್ಲಿ ಬದುಕುತ್ತಿರುವ ನಾವುಗಳು ನಮಗೆ ಗೊತ್ತಿಲ್ಲದೇ ನಮ್ಮ ಸುಪ್ತ ಮನಸ್ಸ್ಸನ್ನು ಎಷ್ಟು ಹಾಳು  ಮಾಡಿಕೊಂಡಿದ್ದೇವೆ ಎಂದರೆ, ಅಲ್ಲಿ ಮುಕ್ಕಾಲು ಭಾಗ ಬೇಡದೆ ಇರುವ ವಿಷಯ, ಚರ್ಚೆ ಹಾಗೂ ನಮ್ಮ ಡೆತ್ ಬೆಡ್ನಲ್ಲಿ ನೆನಪಿಸಿಕೊಳ್ಳೋ  ಯಾವುದೇ ಅಂಶಗಳೇ ಇಲ್ಲ!! ಆಗಿನ ಕಾಲದ ಜನರು ಆರಾಮಾಗಿ ಇದ್ರೂ ಅವರುಗಳು ಅಷ್ಟೊಂದು ದುಡ್ಡು ಮಾಡಲಿಲ್ಲ, ದುಡ್ಡು ಮಾಡಲು ಹೊರಟ ಈಗಿನವರೆಲ್ಲ ಹೆಲ್ತ್ ಇನ್ಶೂರೆನ್ಸ್ ಮಾಡಿಸಲೇ ಬೇಕಾದ ಅನಿವಾರ್ಯತೆ ಇದೆ, ದುಡಿದ ಅರ್ಧ ಅಂತೂ ಆಸ್ಪತ್ರೆಗೆ ಹಾಕಲೇ ಬೇಕಾದ ಪರಿಸ್ಥಿತಿಯಲ್ಲಿ ಹಲವಾರು ಇದ್ದಾರೆ!!


ದಿ ಹ್ಯೂಮನ್ ಅನೋಟೋಮಿ ಈಸ್ ನೋ ಡಿಫರೆಂಟ್ than ಯೂನಿವರ್ಸ್, ನಮ್ಮ ದೇಹದಲ್ಲಿ ಪ್ರಕೃತಿಯ ಏರುಪೇರಿನ ಅನುಭವ, ಕಂಪನ, ಎನರ್ಜಿ ಹಾಗೂ ಕಾಸ್ಮಿಕ್ rays ಪರಿಣಾಮ ಬೀರುತ್ತಲೇ ಇರುತ್ತೆ!! ಹೇಗೆ ನಿಯಮಿತವಾಗಿ ಊಟ, ನಿದ್ದೆ ಹಾಗೂ ಮೈಥುನ ಅವಶ್ಯಕವೋ ಹಾಗೆ  ಕಚೇರಿ ಹಾಗೂ ಮನೆ ಎಂಬ ಎರಡು ಭಿನ್ನ ಎಂಟಿಟಿಗಳಿಗೂ ಅದರದ್ದೇ ಜಾಗ ಹಾಗೂ ಅದರದ್ದೇ  ಪ್ರಾಮುಖ್ಯತೆ ಕೊಡುವುದೂ ಕೂಡ ಮನುಷ್ಯ ಮೂಲಭೂತ ಅವಶ್ಯಕತೆಗಳಲ್ಲೊಂದಾಗಿದೆ.  ಇದು ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾವುದೊ ಮುಗಿಯದ ಧಾವಂತಕ್ಕೆ ಸಿಕ್ಕು ಹಾಕಿಕೊಂಡು, ಇಷ್ಟ ಪಟ್ಟೋ ಕಷ್ಟ ಪಟ್ಟೋ ಎದೆ ಉಸಿರು ಬಿಟ್ಟುಕೊಂಡು ಕೊನೆಗೊಂದಿನ ಈ ಸ್ಪರ್ಧೆಯಲ್ಲಿ ಗೆದ್ದೂ ಕೂಡ , " The trouble with being in the rat race is that even if you win, you're still a rat. JUST A RAT.!!  ತುಂಬ cynical ಫಿಲಾಸಫಿಕಲ್ ಅನ್ಸಿದ್ರು ದಿನದ ಕೊನೆಗೆ ನಮಗೆ ಬೆಕಾಗೋದು ಹಿಡಿ ಪ್ರೀತಿ, ಮಮತೆ ಹಾಗೂ  ನಂಗ್ಯಾರೋ ಇದಾರೆ ಅನ್ನೋ  ಭದ್ರತೆ . ಮನುಷ್ಯ ಜೀವಿಗೆ ಇದಕ್ಕಿಂತ ಹೆಚ್ಚಿನದ್ದೇನೆ ಸಿಕ್ಕರೂ ಅದು luxury ಮಾತ್ರ!! luxury ಯಾವತ್ತಿಗೂ ಮೂಲಭೂತ ಅವಶ್ಯಕತೆಗಳನ್ನು ರಿಪ್ಲೇಸ್ ಮಾಡಲಾಗದು!! 

ಸುಮಾರು ತಿಂಗಳು ನಂತರ ಬರೆದು ಇಷ್ಟೆಲ್ಲಾ ಕೊರೆಯೋದು ಬೇಕಿತ್ತಾ? ಅಂದ್ರೆ ತಡಿರಿ ನಮ್ಮ ಸಿಇಓ ನ ಕೇಳಿ ಹೇಳ್ತೀನಿ 😛😛



Sunday, October 20, 2024

Humans are Naturally Polygamous!! True or False?!!

ಬರೆದು ಏನು ಬದಲಾಗೋದಿದೆ ಗುರೂ ಒನ್ ಲೆಸ್ ಒಪೀನಿಯನ್ ವಿಲ್ ಮೇಕ್ ನೋ ಡಿಫರೆನ್ಸ್ ಅನ್ಸಿ , ಬರೆಯೋದನ್ನ  ಮರ್ತು ಸುಮಾರ್ ತಿಂಗಳುಗಳೇ ಕಳೆದು ಹೋದ್ವು! ಅಂಥದ್ರಲ್ಲಿ ಈ ಫೇಸ್ಬುಕ್ ಅನ್ನೋ ಬ್ಯುಸಿನೆಸ್ ಆಪ್ ಇರೋ ಬರೋ ಗೂಗಲ್ ಸರ್ಚ್ ಆಡ್  ಗಳನ್ನೇ ತುಂಬಿ ಸ್ನೇಹಿತರ ಪಟ್ಟಿಯಲ್ಲಿ ಇರೋವ್ರ ಸುಮಾರ್ ಅಪ್ಡೇಟ್ಸ್ ಕಾಣದಂಗೆ ಮಾಡಿ ಇದನ್ನು ಹಳ್ಳ ಹಿಡಿಸಿಯಾಗಿದೆ. ಅಳಿಯ ಅಲ್ಲ ಮಗಳ ಗಂಡ ಅನ್ನೋ ಹಾಗೆ ಇನ್ಸ್ಟಾಗ್ರಾಮ್ ಕಡೆ ಮುಖ ಮಾಡಿ ಕುಳಿತಾಗಿದೆ. ಹಾಂಗಾಗಿ ಒಂದಷ್ಟು ಕಷ್ಟ ಪಟ್ಟು ಉಳಿಸಿಕೊಂಡಿರೋ ಸ್ಕಿಲ್ಸ್ ಕೂಡ ಹೇಳ ಹೆಸರಿಲ್ಲದೇ ನಶಿಸುತ್ತಿವೆ.  

ಎನಿವೇಸ್ ವಿಷಯಕ್ಕೆ ಬರೋಣ... ರಾಜಕೀಯ ಬ್ಯಾಡ ಬುಡಿ, ಹೆಂಗೂ ಇನ್ನೆರಡು ದಿನಕ್ಕೆ ವಿಷಯ ಗೊತ್ತಾಗೇ ಆಗುತ್ತೆ, ಸುಮ್ನೆ ನಾವು ನೀವು ಯಾಕೆ ತಲೆ ಬಿಸಿ ಮಾಡ್ಕೊಳನ ಅಲ್ವುರ?! 😝😝😝 




ಈಗ ನಾ ಬರೀತೀರೋ ವಿಷಯ ಮಡಿವಂತರಿಗಂತೂ ಅಲ್ವೇ ಅಲ್ಲ, ಅಯ್ಯ ಅಂತ ಮುಖ ಮಾಡಿಕೊಂಡು ಕೊನೆಗೆ  ಹೋಗೋ ಮೊದಲು ಈಗಲೇ ಹೋಗಿ ಬಿಡೋದು ಒಳ್ಳೇದು!!  ಈ ವಿಶ್ವ ಸುಂದರಿ ಐಶ್ವರ್ಯ ರಾಯ್  ಬಗ್ಗೆ ಹಲವು ತಿಂಗಳಿಂದ ಏನೋ ಏನೋ ಗುಸು ಅಂತ ಜನ ಮಾತಾಡ್ತಿದ್ದಾರೋ  ಇಲ್ವೋ ನಮ್ಮ ಮೀಡಿಯಾ ದವರಂತೂ ದಿನಕ್ಕೊಂದು ಇಪ್ಪತ್ತು ಅಪ್ಡೇಟ್ಸ್ ಕೊಡ್ತಾನೆ ಇದಾರೆ ಹಂಗಂತೆ  ಹಿಂಗಂತೆ ಅನ್ಕೊಂಡು ಥರಾವರಿ ಸುದ್ದಿ ಸೋಶಿಯಲ್ ಮೀಡಿಯಾ ಸ್ಕ್ರಾಲ್ ಮಾಡುವಾಗ ಬೇಡ ಅಂದ್ರು ಆ ನ್ಯೂಸ್ ಕಂಡೆ ಕಾಣುತ್ತೆ. ಜಸ್ಟ್ ಲೈಕ್ ಬಿಗ್ ಬಾಸ್ ಐ ಸೇ ನೀವು ಫಾಲೋ ಮಾಡ್ತಿರೋ ಇಲ್ವೋ ಹೊರಗಡೆ ಯಾರು ಹೋದ್ರು ಅನ್ನೋದಂತೂ ಗೊತ್ತು ಆಗೇ ಆಗುತ್ತೆ!!  

ಐಶ್ವರ್ಯ ದು ಭಾರತಕ್ಕೆ ಸೀಮಿತವಾದ ವಿಷಯ ಬಿಡಿ, ಇದಕ್ಕಿಂತ ಮೊದಲು ಶಕೀರಾ ಅನ್ನೋ ಇನ್ನೊಬ್ಬ ಪಾಪ್ ಗಾಯಕಿ ಕಮ್ ಅಪೂರ್ವ ಸುಂದರಿದು ಈಗ್ಗೆ  ಕೆಲ ವರ್ಷಗಳ ಕೆಳಗೆ ಇಂಥದ್ದೇ ಒಂದು ಸುದ್ದಿ ವಿಶ್ವವನ್ನೇ(?!) ದಂಗು ಬಡಿಸಿತ್ತು.  ನಮ್ಮ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾಗಳಿಗೆ ಕಂಡವರ ಮನೆ ಸುದ್ದಿ ಅಂದ್ರೆ ಎಲ್ಲಿಲ್ಲಿದ ಆಸಕ್ತಿ. ಅದು  ಕೊಲೆ  ಆರೋಪಿಯಿಂದ ಹಿಡಿದು ಸೆಲ್ಫ್ ಡಿಕ್ಲೇರ್ಡ್ ಲಾಯರ್ ನ ವರೆಗೂ ಎಲ್ಲರನ್ನ ಬ್ರೇಕಿಂಗ್ ನ್ಯೂಸ್ ಅಡಿ ಹಾಕಿ ಮಕ್ಕಳಿಗೂ ಬಾಯಿ ಪಾಠ ಮಾಡ್ಸಿ  ಬಿಡೋದೆಯಾ!! 

ಫೆಮಿನಿಸಂ ನ ಸ್ವಲ್ಪ ಹೊತ್ತು ಒಂದು ಮೂಟೆ ಲಿ ಕಟ್ಟಿ ಯೋಚನೆ ಮಾಡೋಣ!!  ಮನುಷ್ಯ ಅನ್ನುವ ಒಂದು ಪ್ರಾಣಿ, ಪಾಲಿಗಾಮಿ (ಅಂದ್ರೆ ಒಂದಕ್ಕಿಂತ ಹೆಚ್ಚು ಸಂಗಾತಿಯನ್ನು ಬಯಸುವ ಅಥವಾ ಹೊಂದುವ) ಪ್ರಭೇದಗಳಲ್ಲಿ  ಎಂಟನೆದೋ ಹತ್ತನೇದೋ ಸ್ಥಾನ ಕೊಟ್ಟಿದಾರೆ ಎವೊಲ್ಯೂಷನ್ ಚಾರ್ಟ್ ನಲ್ಲಿ ಅಂದ್ರೆ ಬೈಯೋಲೋಜಿಕಲೀ ಮನುಷ್ಯನಾದ ಮಾತ್ರಕ್ಕೆ ಉಳಿದ ಪ್ರಾಣಿಗಳಿಗಿಂತ ಲೈಂಗಿಕವಾಗಿ ಮನುಷ್ಯ ಪ್ರಾಣಿ ಬಹಳ ಭಿನ್ನವೇನಲ್ಲ, ಕಾಲ ಕ್ರಮೇಣ ನಾಗರಿಕತೆ, ಸಮಾಜ ಹಾಗೂ ಮದುವೆ ಎಂಬ ವ್ಯವಸ್ಥೆಯ ಭಾಗವಾಗಿ ಮೊನೊಗಾಮಿ ಯನ್ನು ಪಾಲಿಸಲು ಶುರುಮಾಡಲಾಯಿತು!! ಇದು ಆರೋಗ್ಯದ ದೃಷ್ಟಿಯಿಂದ ಹಾಗೂ ಕುಟುಂಬ ಎಂಬ ಕಲ್ಪನೆಗೆ ಒಂದು ದೊಡ್ಡ ಬಲ ಕೊಟ್ಟ ಸಂಗತಿ. ಆದರೆ ಅಗೈನ್ bilogically ಹೆಣ್ಣು ಮತ್ತು ಗಂಡು ತುಂಬ ವಿಭಿನ್ನವಾದ ಜೀವಿಗಳೇ!! ಯೋಚನಾ ಲಹರಿ ಹಾಗೂ ಫಿಸಿಕಲ್ ಅಟ್ರಿಬ್ಯೂಟ್ಸ್ ಹೊರತು ಪಡಿಸಿ ವಾಟ್ ಒನ್ ಫೀಲ್ಸ್ ಭಾವನಾತ್ಮಕವಾಗಿ ಹಾರ್ಮೋನುಗಳ ಸೆಕ್ರೆಷನ್ ಇಂದ ಅಥವಾ ಪ್ರತಿ ತಿಂಗಳು ನಡೆಯುವ ದೇಹದ ಬದಲಾವಣೆಗಳಲ್ಲಿಯೂ !   ಹೀಗಿರುವಾಗ ಇಬ್ಬರನ್ನು ಒಂದೇ ತಕ್ಕಡಿಯಲ್ಲಿ ತೂಗಿ ಸರಿ ತಪ್ಪು judgement ಕೊಡುವಲ್ಲಿ ಸೋಶಿಯಲ್ ಮೀಡಿಯಾ ಯಾವಾಗಲೂ ಒಂದು ಕೈ ಮುಂದೆಯೇ ಅನ್ನಿ!! 

ಪ್ರತೀ ಮನುಷ್ಯನೂ ಯುನಿಕ್ ಪ್ಯಾಟರ್ನ್ ಹೊಂದಿರುವ ಜೀವಿ.  ಹೆಣ್ಣು ಗಂಡು ಜೆಂಡರ್ ರಿಲೇಟೆಡ್ ವ್ಯತ್ಯಾಸಗಳನ್ನು ಹೊರತು ಪಡಿಸಿ ಕೂಡ ತನ್ನದೇ ಆದ ಯುನಿಕ್ ಒಪೀನಿಯನ್ ಹೊಂದಿರುವ ಬುದ್ಧೀ ಜೀವಿ! ಮೊನ್ನೆ ಜಂಟಲ್ಮನ್ ಟ್ರೈಟ್ ಗಳಲ್ಲಿ ಒಂದಾದ, ಫೆಮಿನೈನ್ encouragement ಹಾಗೂ ಹೊಗಳಿಕೆ ಬಯಸುವದು ಗಂಡಿನ ಸಹಜ ಪ್ರಕ್ರಿಯೆ ಅನ್ನೋ ಥರದ್ದೊಂದು ರೀಲ್ ವೈರಲ್ ಆಗಿದ್ನ ನಾನು ಶೇರ್ ಮಾಡಿದ್ದೆ. ಅದರಲ್ಲಿ ಒಬ್ಬ ಸ್ನೇಹಿತ ಎಲ್ಲ ಸರಿ ಆದರೆ ಹೆಣ್ಣು ಅಂದರೆ  nurturer ಅಂದರೆ ಆರೈಕೆ ಮಾಡುವವಳು, ಬೆಳೆಸುವವಳು ಅಂತಾನೆ ಸ್ಟೀರಿಯೋಟೈಪಿಕಲ್ ಆಗಿ ಯಾಕೆ ಯಾವಾಗ್ಲೂ ಯೋಚನೆ ಮಾಡ್ಬೇಕು?  ಅಂತ ಕೇಳಿದ, ಫೆಮಿನಿಸಂ ಒಳ ಹೊಕ್ಕ ಮನಸ್ಸು ಹೌದಲ್ವಾ ಅಂತ ಅನ್ಸಿದ್ರು,  bilogically ಅಮ್ಮನಾಗುವ, ಕುಟುಂಬ ಮುನ್ನಡೆಸುವ ಜವಾಬ್ದಾರಿಯನ್ನ ಪ್ರಕೃತಿ ಹೆಣ್ಣಿಗೆ ಅಲ್ವ ಕೊಟ್ಟಿದ್ದು, ಅದನ್ನ ಪ್ರಶ್ನೆ ಮಾಡದೆ ಒಪ್ಪಿಕೊಂಡಿರುವಾಗ ಇದು ಅಷ್ಟೇ ಗಂಡು ಯಾವಾಗ್ಲೂ ವ್ಯಾಲಿಡೇಷನ್ ಬಯಸ್ತಾನೆ ಇರ್ತಾನೆ , ಅದು ಅಮ್ಮ ,ತಂಗಿ,ಗೆಳತೀ, ಪ್ರೇಯಸಿ ಅಥವಾ ಸಂಗಾತಿ ಎಲ್ಲರಲ್ಲೂ ವರ್ಡ್ of  affirmation ಬೇಕು ಅಂತ ಇದ್ದೆ ಇರುತ್ತೆ!! ಹಲವು  ಸಲ ಗಂಡಿನ ಸಕ್ಸಸ್ ಕೂಡ ಯಾವುದೊ ಕಳೆದು ಕೊಂಡ ಪ್ರೇಮದ ನೋವನ್ನು ಮರೆಯುವ ಅಸ್ತ್ರವಾಗಿ ಹೊರ ಹೊಮ್ಮಿರುತ್ತೆ. ಹoಗಾಗಿ ಯಾವ ಗಂಡಸು ತನ್ನ ಸಂಗಾತಿಗೆ ಸೇಫ್ ಸ್ಪೇಸ್ ಕೊಡಬಲ್ಲನೋ ಆತ  ಮಾತ್ರ ಅಷ್ಟೇ ರೀತಿಯ ಆರೈಕೆ ಹಾಗೂ ಸೆಕ್ಯೂರಿಟಿ ಕೂಡ ಆ ಸಂಗಾತಿಯಿಂದ ಪಡೆಯಬಹುದು ಮತ್ತು ಅದರಿಂದ ಸಿಗುವ ಶಾಂತಿ ನೆಮ್ಮದಿಯಿಂದ ಏಳಿಗೆ ಹೊಂದಬಹುದು ಅಂತ ಪ್ರತಿ  ವಾದ ಹಾಕಿದೆ. ಒಪ್ಪಿಗೆ ಆಯ್ತೋ ಇಲ್ವೋ ಸರಿ ಬಿಡವ್ವಾ  ನಿನ್ ಜೊತೆ ಏನ್ ವಾದ ಅಂತ ಸುಮ್ನೆ ಆದ್ರೇನೋ ಪ ಗೊತ್ತಿಲ್ಲ 😝

ಇಷ್ಟೆಲ್ಲಾ ಪೀಠಿಕೆ ಆದ್ಮೇಲೆ ನಮ್ಮ actual ಟಾಪಿಕ್, ಜಗತ್ತಿನ ಅತೀ ಸುಂದರಿ ಪಟ್ಟ ಹೊಂದಿಯೂ ಕೂಡ ಹೆಣ್ಣು ತನ್ನ ಸಂಗಾತಿಯಿಂದ ಮೊಸಗೊಳಗಾಗಬಲ್ಲಳೇ?!! ಹೌದು ಖಂಡಿತ!! ಅದನ್ನು ಕ್ಷಮಿಸೋದು ಖಂಡಿಸೋದು ಅಥವಾ ಅದಕ್ಕೆ ತಕ್ಕ ಶಿಕ್ಷೆ ಕೊಡೋದು ಪ್ರತಿ ಹೆಣ್ಣಿನ ವಯಕ್ತಿಕ ಆಯ್ಕೆ ಅದನ್ನು ಅಷ್ಟೇ ಗೌರವದಿಂದ ಸಮಾಜ ಸ್ವೀಕರಿಸಬೇಕು ಬಟ್ unfortunately ಅದು ನಮ್ಮ ಸಮಾಜಕ್ಕೆ ನಾಗರೀಕತೆಗೆ ಅಂಟಿರುವ ಖಾಯಿಲೆ  ಇಂದ ಸರಿ ಹೋಗುವಂಥದಲ್ಲ!! ಎಲ್ಲ ಸರಿ ಇರುವಾಗಲೂ(?!)  ಕಾರಣಗಳೇ ಇಲ್ಲದೆ ಗಂಡು ಬೇರೆ ಕಡೆ ಮುಖ ಮಾಡುವುದು ಎಷ್ಟು ಸರಿ ಎಷ್ಟು ತಪ್ಪು ಅನ್ನೋದು ಅಗೈನ್ ಸಬ್ಜೆಕ್ಟಿವ್ ಕಲ್ಪನೆ ಮನುಷ್ಯ ಯಾಕೆ ಹಾಗೆ ಯೋಚಿಸುತ್ತಾನೆ ಅನ್ನೋ ಲಹರಿಯೇ ತೀರಾ ಕಾಂಪ್ಲಿಕೇಟೆಡ್, ಇಷ್ಟೆಲ್ಲಾ ಆದರೂ ಒಂದು ಹೆಣ್ಣು ಯಾಕೆ ಸಹಿಸಿಕೊಳ್ಳುತ್ತಾಳೆ ಅನ್ನೊಂದು ಇನ್ನೊಂದು ಎಕ್ಸ್ಟ್ರೀಮ್ ಕಾಂಪ್ಲಿಕೇಷನ್. ಇದರ ಮಧ್ಯೆ  ಬೇಲಿ ಹಾರಿದ ಪ್ರತಿ ಗಂಡಸಿನದ್ದೇ ತಪ್ಪು ಅನ್ನೋಕ್ಕೆ ನಾವ್ಯಾರು ಅವರ ಮನೆಯನ್ನು ಸಹ ನೋಡಿರುವುದಿಲ್ಲ ಇನ್ನು ಆವರ  ಒಳ ಜಗಳ ಮನಸ್ತಾಪ ನಮಗೆ ಗೊತ್ತೂ ಇರುವುದಿಲ್ಲ! ಕೆಲವೊಮ್ಮೆ ಗಂಡು ಸೌಂದರ್ಯ ಮೀರಿದ್ದೇನೋ ಬಯಸುತ್ತಾನಾ ಅನಿಸುತ್ತೆ. ಇರಬಹುದು ಗೊತ್ತಿಲ್ಲ! 

ಇದರ ಮಧ್ಯೆ ಅವರ್ನೆಲ್ಲ ಆಡಿಕೊಂಡು ಮಾನಸಿಕವಾಗಿ ಇನ್ನೊಬ್ಬ ಹೆಂಗಸನ್ನು ಬಯಸುವ ಗಂಡು, ದೈಹಿಕವಾಗಿ  ಎಂತದ್ದು ಮಾಡಲಿಲ್ಲವಲ್ಲ ಹಾಂಗಾಗಿ ನಾನು ಸತಿ ಸಾವಿತ್ರಿಯ ಗಂಡು ರೂಪ ಅಂತ ಒಳಗೊಳಗೇ ಖುಷಿ ಪಡಬಹುದಷ್ಟೆ!! ಇನ್ನು ಎಲ್ಲ ಕಷ್ಟ , ನೋವು, ತಾಪತ್ರೆಯ ಮೋಸ ಹೆಣ್ಣಿಗೆ ಆಗುತ್ತೇನೋ ಅಂದರೆ ,ಹೂo! ಹೆಚ್ಚಿನ ಸಲ ಕೌಟುಂಬಿಕ ಕಟ್ಟಳೆಯೊಳಗೆ  ಬಂದ ಹೆಂಗಸೂ, ಮಾನಸಿಕವಾಗಿ ಇನ್ನೊಂದು ಕಡೆ ಮುಖಮಾಡಿಯೂ ಗಂಡಿನಷ್ಟು ಧೈರ್ಯವಾಗಿ ಬೇಲಿ ಹಾರಲು ಯತ್ನಿಸದೆ ಇರಬಹುದು ಆದರೆ ಎರಡೂ ಕಡೆ exceptions  ಇದ್ದೆ ಇವೆ! ಮನುಷ್ಯ ಸಹಜ ಕಾಮ ಮೀರಿ ಬೆಳೆದ ಯೋಗಿಗಳಿದ್ದಾರೆ ಹಾಗೆ ಅದೇ ಕಾಮಕ್ಕೆ  ಬಲಿಯಾದ ಗಂಡು ಹೆಣ್ಣು ಇಬ್ಬರೂ ಸಮ ಪ್ರಮಾಣದಲ್ಲೇ ಇದ್ದಾರೆ!! ಆದರೆ ಹೆಣ್ಣು ಮಾಡುವ ಪ್ರಮಾದ ಒಂದಿಡೀ ಕುಟುಂಬ ಛಿದ್ರ ಗೊಳಿಸುವ ಸಂಭವ ಅತೀ ಹೆಚ್ಚು, ಗಂಡು ಬೇಲಿ ಹಾರಿ ವಾಪಸ್ಸು ಬಂದು ಏನೂ  ಆಗಿಯೇ ಇಲ್ವೇನೋ ಎಂಬಂತೆ ಇದ್ದು ಬಿಡಬಹುದು ಹೆಚ್ಚಿನ ಸಲ ಅದು ಮಕ್ಕಳ ವರೆಗೆ ದಾಟಿಯೇ ಇರುವುದಿಲ್ಲ!! ಇದು ಕೇವಲ ಮನರಂಜನೆ, ಕಾಲಹರಣ, ಹಾಗೂ ಆಡಿಕೊಳ್ಳುವ ವಿಷಯವಲ್ಲ ಇದಕ್ಕೆ ಸಾಮಾಜಿಕ ,ವೈಯಕ್ತಿಕ ಹಾಗೂ ಜೈವಿಕ ಕಟ್ಟುಪಾಡುಗಳೂ ಕಾರಣವಾಗಿರುತ್ತವೆ. 

ಸೊ ಕಂಡವರ ಮನೆಯ ವಿಷಯ ನಂಗ್ಯಾಕೆ ಸಾಮೆ ಅನ್ಕೊಂಡು ಊರ್ ಉಸಾಬರಿ ಮುಗಿಸುವ ಸಮಯ, ಸುಮಾರು ತಿಂಗಳುಗಳ ನಂತ್ರ ಏನೋ ಬರೆದ ಖುಷಿ . ನಕಾರಾತ್ಮಕ ತಂತ್ರಗಳಿಗೆ ಅವಕಾಶವಿಲ್ಲ ವೈಚಾರಿಕ ಭಿನ್ನಾಭಿಪ್ರಾಯಗಳನ್ನು  ಸದಾ ಗೌರವಿಸಲಾಗುವುದು!! 😊


Friday, March 8, 2024

ದುಡ್ಡಿರೋರೆಲ್ಲ ದಾನ ಮಾಡ್ಬೇಕು ಅನ್ನೋದನ್ನ ಅಡ್ವೊಕೇಟ್ ಮಾಡ್ಕೊಂಡು ಇರೋರು.....

 



ಇದಾಗಿ ಒಂದೂ ಒಂದೂವರೆ ವರ್ಷ ಆಗಿರ್ಬೇಕು, ಅವತ್ತು ನಮ್ಮ ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆಗೆ ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಬರೋವ್ರಿದ್ರು, ಅದೊಂದು ಹಬ್ಬದ ಸಂಭ್ರಮವಿತ್ತು. ನಮ್ಮ ಆಗಿನ ಸೆನೆಟ್ ನ ಚೇರ್ ಪರ್ಸನ್ ಆಗಿದ್ದ ಸುಧಾಮೂರ್ತಿ ಕೂಡ ಬೆಳಿಗ್ಗೆ ಎಂಟು ಗಂಟೆಗೆ, ಎಲ್ಲ ಸರಿಯಾಗಿದೀಯಾ ಅಂತ ನೋಡೋಕೆ ಬಂದಿದ್ರು. ರಾಷ್ಟ್ರಪತಿಗಳ ರೂಮ್ ಉಸ್ತುವಾರಿ ನನ್ನ ಮೇಲಿತ್ತು, ಸುಧಾ ಮೂರ್ತಿಯವರ ಜೊತೆ ಮೊದಲ ಭೇಟಿ ಅದಾಗಿತ್ತು, ಅವರು ಬಂದಾಗ ಇಲ್ಲಿ ಯಾರು ಇರ್ತಾರೆ ಅಂತ ಕೇಳಿದ್ರು, ಅಲ್ಲಿರುವವರು ಯಾರೋ ನನ್ನ ಹೆಸರು ಹೇಳಿದ್ರು, ನನ್ನ ಜೊತೆ ಏನ್ ಮಾತಿರುತ್ತೆ ಇವರಿಗೆ ಅಂತ ಅಲ್ಲೇ ಸೈಡ್ ಅಲ್ಲಿ ಸುಮ್ನೆ ನಿಂತು ನಾನೇ ಅಂತ ಹೇಳಿದೆ. ಕೂಡಲೇ ಅಶ್ವಿನಿ ಬಾರಮ್ಮ ಹೋಗಿ ರೂಮ್ ಚೆಕ್ ಮಾಡಿ ಬರುಣು, ಕನ್ನಡ ಬರ್ತದ ಅಲ ನಿಂಗ ಅಂದ್ರು. ಹ್ಞೂ ಅಂತ ತಲೆ ಅಲ್ಲಾಡಿಸಿದೆ. ನೋಡು ಎಲ್ಲ ಚೆನ್ನಾಗಿ ನೋಡ್ಕೊಬೇಕಮ್ಮ ಅವರಿಗೆ ಗಿಫ್ಟ್ ಆಗಿ ಒಂದು ಸಾರಿ ತಂದೀದಿನಿ ಅದನ್ನು ಇಲ್ಲೇ ಇಟ್ಟಿರು, ಆಮೇಲೆ ತೊಗೊಂಡು ಹೋಗ್ತೀನಿ, ರಾಷ್ಟ್ರಪತಿ ಅನ್ನೋದು ನೆನಪಿರಲಿ ಏನೂ ಲೋಪ ಆಗ್ದೇ ಇರೋಹಂಗೆ ನೋಡ್ಕೊಳಿ ಅಂತ ಹೆಗಲ ಮೇಲೆ ಕೈ ಹಾಕಿ ಥೇಟ್ ಮನೆಯವರ್ಯಾರೋ ಮಾತಡ್ತಿದಾರೇನೋ ಅನ್ನೋ ಅನುಭವ. ನಂಗಿನ್ನೂ ನೆನಪಿದೆ ಇನ್ಫೋಸಿಸ್ ಆಗಲಿ, ಚೇರ್ ಪರ್ಸನ್ ಅನ್ನೋ ಯಾವ ದರ್ಪ ಇಲ್ಲದೇನೆ ಹೌಸ್  ಕೀಪಿಂಗ್ ಸ್ಟಾಫ್ ನವರ ಜೊತೆಯೂ ಅಷ್ಟೇ ವಿನಮ್ರವಾಗಿ ನಡೆದುಕೊಂಡಿದ್ದರು!!  ಮಧ್ಯಾನದ ವೇಳೆಗೆ ರಾಷ್ಟ್ರಪತಿಗಳ ಆಗಮನ ಇದ್ದಿದ್ದು... 

ರಾಷ್ಟ್ರಪತಿಯವರು ನಿಮ್ಮ ಸಂಸ್ಥೆಗೆ ಬಂದಿದ್ದರು ಅವರನ್ನು ಭೇಟಿ ಆಗಲು prior ಅಪ್ಪೋಯಿಂಟ್ಮೆಂಟ್ ಬೇಕಾಗುತ್ತೆ, ಮುಂಚೆ ನಿಮ್ ಷೆಡ್ಯೂಲ್ ಫಿಕ್ಸ್ ಮಾಡಿರಬೇಕಾಗಿರುತ್ತೆ. ಅವರ ಸುತ್ತಲಿರುವ ಸೆಕ್ಯೂರಿಟಿ ಮುಲಾಜಿಲ್ಲದೇ ಭೇಟಿ ಆಗ ಬಂದವರನ್ನು ಆಚೆ ಕಳಿಸುತ್ತಾರೆ. ಕೋಣೆಯ ಉಸ್ತುವಾರಿ ನನ್ನ ಮೇಲಿದ್ದರಿಂದ ಒಂದು ಬಾರಿ ಮಾತ್ರ  ನಂಗೆ ಒಳ ಹೋಗಲು ಅವಕಾಶ ಕೊಟ್ಟಿದ್ದರು ಅದು ನನ್ನ ಹತ್ರ ಪ್ರಾಕ್ಸಿಮಿಟಿ ಪಾಸ್ ಇದ್ದ ಕಾರಣ. ಊಟದ ಸಮಯಕ್ಕೆ ಸುಧಾ ಮೂರ್ತಿಯವರು, ನಾನು ಒಂದ್ಸಲ ಊಟದ ವಿಷಯವಾಗಿ ರಾಷ್ಟ್ರಪತಿಗಳ ಹತ್ತಿರ ಮಾತಾಡಬಹುದೇ ಅಂತ ನಮ್ಮ ರೂಮ್ ಬಳಿ ಬಂದರು, ಅವ್ರನ್ನ ಕಂಡು ಡಿಸಿ ಮತ್ತು ಎಸ್ .ಪಿ ಕೂಡ ಅವರು ಒಬ್ಬರೇ ಹೋಗೋದು ತಪ್ಪಾಗುತ್ತೇನೋ ಅಂತ ಅವರ ಜೊತೆಯಾಗಿ ಎಂಟ್ರನ್ಸ್ ವರೆಗೂ ಹೋದ್ರು, ಆದರೆ ಸೆಕ್ಯೂರಿಟಿ ಮಾತ್ರ ಅವರನ್ನು ಒಳಗಡೆ ಬಿಡಲಿಲ್ಲ!!! ಏಯ್ ಏನ್ ನಡೀತಿದೆ ಇಲ್ಲಿ ಗುರೂ ಅವರು ನಮ ಚೇರ್ ಪರ್ಸನ್ ಅವರನ್ನೇ ಬಿಡಲ್ವ ? ಏನ್ ಕಥೆ ಇವ್ರದ್ದು ಅನ್ಕೊಂಡು ನಂಗೆ ನಾನು ಸಮಾಧಾನ ಮಾಡ್ಕೊಂಡು ಅಲ್ಲೇ ಇದ್ದ ಧಡೂತಿ ಸೆಕ್ಯೂರಿಟಿ ಯವರನ್ನ ಗುರಾಯಿಸಿದೆ. ಆಪ್ ಕೋ ಪತಾ ಹಾಯ್ ಕೀ ವೋ ಕೌನ್ ಹೈ ? ಅಂದೆ ಸಿಂಡರಿಸಿಕೊಂಡಿದ್ದ ಮುಖದಿಂದಲೇ ನನ್ನ ಐಡಿ  ನೋಡಿ ಅದರ ಮೇಲೆ ಪ್ರಾಕ್ಸಿಮಿಟಿ ಪಾಸ್ ಅಂತ ಇರೋದಕ್ಕೆ ಮೋಸ್ಟ್ಲಿ ರಿಪ್ಲೈ ಮಾಡಿದ್ರು ಅನ್ಸುತ್ತೆ, "ಕೊಯಿ ಭೀ ಹೊ ಹಮೆ  ಕ್ಯಾ , ಉಧರ್ ದೇಖ್  ರಹೇ ಹೊ ನಾ ಚೀಫ್ ಮಿನಿಸ್ಟರ್ , ಔರ್ ಗವರ್ನರ್ ಕೋಭಿ ದುಸರೇ ರೂಮ್ ಮೇ ಬಿಠಾಯಾ ಹೈ."  ನಾವು ಪ್ರೋಟೋಕಾಲ್ ಫಾಲೋ ಮಾಡ್ತೇವೆ ಅಪ್ಪೋಯಿಂಟ್ಮೆಂಟ್ ಇದ್ರೆ ಮಾತ್ರ ಒಳಗಡೆ ಅಂದ್ರು. ಇನ್ಫೋಸಿಸ್ ಗೊತ್ತಿಲ್ವ ನಿಮಗೆ ಅದರ ಮಾಲೀಕರು ಕಣ್ರೀ ಅಂತ ಏನೋ ಹೇಳೋಕೆ ಹೋದೆ ಆ ಮನುಷ್ಯ ಕ್ಯಾರೇ ಅನ್ಲಿಲ್ಲ!! 

ನಮ್ಮೆಲ್ಲರ ಮುಂದೆ ಅವರನ್ನು ಒಳ ಹೋಗಲು ಬಿಡದೆ ಇದ್ದ ಸ್ಟಾಫ್ ಮೇಲೆ ರೇಗಿಯೋ , ಅಲ್ಲೇ ಇದ್ದ ಎಂಪಿ ಹಾಗೂ ಎಂ ಎಲ್ ಎ ಗಳ  ಸಹಾಯ ಪಡೆದು ಒಳ ಹೋಗೋದೇನೋ ದೊಡ್ಡ ವಿಷಯ ವಾಗಿರಲಿಲ್ಲ but she  chose not to go !!  ಇದನ್ನ ಸಿಂಪ್ಲಿಸಿಟಿ ಅನ್ನದೆ ಇನ್ನೇನು ಅಂತಾರೆ, ಒಳಗಡೆ ಬಿಟ್ಟು ಕೊಡದೆ ಇದ್ದಿದ್ದಕ್ಕೆ ಬೇಜಾರಾಯ್ತೆನೋ ಗೊತ್ತಿಲ್ಲ ಹೊರಗಡೆ ತೋರಿಸಿಕೊಡಲಿಲ್ಲ. ರಾಷ್ಟ್ರಪತಿ ಅಲ್ವ ಏನೋ ರೂಲ್ಸ್ ಇರುತ್ತೆ ತೊಂದರೆ ಇಲ್ಲ ಬಿಡಿ ಅಂತ ನಗು ಮುಖದಿಂದಲೇ ವಾಪಾಸ್ ಹೋದ್ರು. ಐರನಿ ಅಂದ್ರೆ ಸ್ಟೇಜ್ ಮೇಲೆ ರಾಷ್ಟ್ರಪತಿಯವರನ್ನು ಬರಮಾಡಿಕೊಳ್ಳಬೇಕಾಗಿದ್ದು ಸುಧಾ ಮೂರ್ತಿ ನೇ !! ಭಾಷಣ ಉಡುಗೊರೆ ಎಲ್ಲದೂ ಚೆನ್ನಾಗೆ ನಡೀತು ಅದು ದೊಡ್ಡ ನ್ಯೂಸ್ ಕೂಡ ಆಗಿತ್ತು, ನಮ್ಮ  ಕಡೆಯ ಕೌದಿಯನ್ನು ಸಹ ಉಡುಗೊರೆಯಾಗಿ ಕೊಟ್ಟಿದ್ದಕ್ಕೆ!! 

ವೈಚಾರಿಕ ಭಿನ್ನಾಭಿಪ್ರಾಯಗಳ ಮಧ್ಯೆ , ಹಾಗೂ ವಯೋಸಹಜವಾಗಿ ಏನೋ ಹೇಳಲು ಹೋಗಿ , ಇನ್ನೇನೋ ಅರ್ಥೈಸಿಕೊಳ್ಳೋ  ಈ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಎಲ್ಲದೂ ಕಾಂಟ್ರವರ್ಸಿ ಆಗುವ ಸಾಧ್ಯತೆ ತುಸು ಹೆಚ್ಛೆ!! ನಾವು ಎಲ್ಲದನ್ನು ಸಿನಿಕರಾಗಿ ನೋಡಲು ಶುರುಮಾಡಿದರೇ, ಪ್ರತಿಯೊಬ್ಬರಲ್ಲೂ ತಪ್ಪೇ ಹುಡುಕೊಂಡು ಕೂರೋದಾದ್ರೆ ವೆನ್ ಟು embrace positive  side of  humanity ?! ರಾಜಕೀಯ ಹಾಗೂ ಬಿಸಿನೆಸ್ ಕಾರಣಗಳೇನೇ ಇರಲಿ, this lady truly deserves it !! ದುಡ್ಡಿರೋರೆಲ್ಲ ದಾನ ಮಾಡ್ಬೇಕು ಅನ್ನೋದನ್ನ ಅಡ್ವೊಕೇಟ್ ಮಾಡ್ಕೊಂಡು ಇರೋರು , ಅಂಬಾನಿ ಮದುವೇನೂ ಆಡ್ಕೋತಾರೆ ಇವರ simplicity ಕೂಡ ಆಡ್ಕೋತಾರೆ!! ಮದುವೆ, ದಾನ ಎಲ್ಲ ವೈಯಕ್ತಿಕ ಆಯ್ಕೆ!!  ಆಡಿಕೊಳ್ಳುವವವರು ಫೇಸ್ಬುಕ್ ವಾಲ್ ಗಳಿಗೆ ಸೀಮಿತ, ನಮ್ಮ ವ್ಯಂಗ್ಯ ಅವರಿಗೆ ತಾಕೋದೂ ಇಲ್ಲ, ಅದರಿಂದ ಪ್ರಯೋಜನವೂ ಇಲ್ಲ!! stereotypical mindset ಹಾಗೂ ಸಮಾಜದ ಕಟ್ಟುಪಾಡುಗಳನ್ನು ೫ ದಶಕಗಳ ಹಿಂದೇನೆ ಮುರಿದ ಇವರು ವಿಮೆನ್ಸ್  ಡೇ ದಿನ, ಅದೇ ರಾಷ್ಟ್ರಪತಿಗಳಿಂದ ಆಯ್ಕೆ ಆಗಿದ್ದು ಖುಷಿ ಕೊಟ್ಟಿದೆ  !!  #ಬದುಕಿನ_ಕಲಿಕೆ 



Sunday, September 10, 2023

ಐರ್ಲೆಂಡ್ ಡೈರಿ!!



ಈ ಏರ್ಪೋರ್ಟ್ ಅಲ್ಲಿ ಕೂತು ಕಾಯೋ ಕೆಲಸ ಇದಿಯಲ್ಲ ಇದರಷ್ಟು, ಮಹಾ ಬೋರಿಂಗ್ ಕೆಲಸ ಮತ್ತ ಯವುದೂ ಇರಲಿಕಿಲ್ಲ!! ಆ ಕಡೆ ನೆಮ್ಮದಿಯಿಂದ ಮಲಗೋ ಹಾಗಿಲ್ಲ, ಈ ಕಡೆ ಎಚ್ಚರ ಕೂರುವಷ್ಟು ಎನರ್ಜಿ ಇರೋದಿಲ್ಲ. ಎಲ್ಲ ಹಾರಾಟ ಅಲೆದಾಟ ತಿರುಗಾಟಗಳ ನಡುವೆ ಸಿಗುವ ತಂಗುದಾಣಗಳು ಯಾಕೋ ನನ್ನ ತಾಳ್ಮೆಗೆ ಸರಿ ಹೊಂದುವುದಿಲ್ಲ. ಇರಲಿ ವಿಷಯ ಅದಲ್ಲ, ಹೆಂಗೂ ಕೂತು ಬೋರ್ ಹೊಡಿತಿದೆ.. ಒಂದಷ್ಟು ಐರ್ಲೆಂಡ್ ಎಂಬ ದೇಶ, ಜನ, ಭಾಷೆ ಬಗ್ಗೆ ಬರೆಯೋಣ ಅಂತ....

ಇತಿಹಾಸ ನೋಡೋದಾದ್ರೆ.. ಇವರುಗಳು ನಮ್ಮಂತೆ ಬ್ರಿಟಿಷರ ಮುಷ್ಟಿಯಲ್ಲಿ ನರಳಿ, ನಮ್ಮ ಸ್ವಾತಂತ್ರ್ಯದ ನಂತರದ ವರ್ಷದಲ್ಲಿ ಇಂಡಿಪೆಂಡೆಂಟ್ ಆದ್ರೂ ಕೂಡ ಅರ್ಧದಷ್ಟು ಐರ್ಲೆಂಡ್ ಇತ್ತಿಚಿನವರೆಗೆ ಯುನೈಟೆಡ್ ಕಿಂಗ್ಡಮ್ ಭಾಗವಾಗಿಯೇ ಗುರುತಿಸಿಕೊಳ್ಳುತ್ತಿದ್ದರು. ಯುರೋಪ್ ನ ಭಾಗವಾಗಿದ್ದರೂ, ಶೆಂಗನ್ ರಾಷ್ಟ್ರಗಳಲ್ಲಿ ಗುರುತಿಸೊಕೊಳ್ಳದೇ, ತನ್ನದೇ ವಿಶಿಷ್ಟ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಡಿದಾಡಿ, ಯಶಸ್ವಿಯಾಗಿ ರಿಪಬ್ಲಿಕ್ ಆಫ್ ಐರಲೆಂಡ್ ಎಂದು ಅಂಗ್ಲೋ ಐರಿಶ್ ಟ್ರಿಟಿ ಸಹಿ ಮಾಡಿಕೊಂಡಿದ್ದು, ಬರೊಬ್ಬರಿ ಎಳುನೂರು ವರ್ಷಗಳ‌ ನಂತರ!! ಇವರದ್ದೇ ಆದ ಐರಿಶ್ ಭಾಷೆಯನ್ನು ಕೇವಲ ಐದರಿಂದ ಹತ್ತು ಪರ್ಸೆಂಟ್ ಜನ ಮಾತ್ರ ಮಾತನಾಡುತ್ತಾರೆ. ಬ್ರಿಟಿಷರ ಹಾವಳಿಯಿಂದ ಭಾಷೆಯನ್ನೆ ಮರೆತ ಜನರಿದ್ದಾರೆ ಇಲ್ಲಿ.

ಇಲ್ಲಿನ ಇವರ ಇಂಗ್ಲಿಷ್ ಆಕ್ಸೆಂಟ್ ನ ವಿಶ್ವದ ಸುಂದರ ಆಕ್ಸೆಂಟ್ ಅಂತಾನೆ ಹೇಳಬಹದು. ಅವರದೇ ಐರಿಶ್ ಭಾಷೆಯನ್ನ ಬಳಸುವರು ಅತೀ ವಿರಳ. ಇವರ ಇಂಗ್ಲಿಷ್ ನ ಕೇಳುವುದೇ  ಹಿತ... ಆದರೆ ನಮ್ಮ ಇಂಡಿಯನ್  ಇಂಗ್ಲೀಷ್  ಆಕ್ಸೆಂಟ್  ಇವರಿಗೆ ಅರ್ಥ ಅಗೂದೇ ಇಲ್ಲ.. ಅವರಂತೆ ರಾಗವಾಗಿ ಮಾತಾಡಿದರೆ ಮಾತ್ರ ಅರ್ಥ ಮಾಡ್ಕೊಂತಾರೆ. ಸುಂದರ ದ್ವೀಪದಲ್ಲಿನ ಈ ದೇಶದ ಜನ ಭಯಂಕರ ಸ್ವಾಭಿಮಾನಿ ಹಾಗೂ ಇಂಡಿಪೆಂಡೆಂಟ್‌ ಮನಸ್ಥಿತಿಯನ್ನು ಹೊಂದಿರುವವರು. 

ತುಂಬ ರಿಸರ್ವಡ್ ಆಗಿ ತಾವಾಯ್ತು ತಮ್ಮ ಕೆಲಸವಾಯ್ತು ಅನ್ನೋ ಗಂಟು ಮೂತಿಯ ಜನರ ಮಧ್ಯ ತುಂಬ ಫ್ರೆಂಡ್ಲಿಯಾಗಿ ಮಾತಾಡುವ ಹಲವು ಜನರು ಒಮ್ಮೆಲೆ ಭಯ ಬೀಳಿಸುತ್ತಾರೆ. ಬೀದಿಯಲ್ಲಿ ಸುಮ್ಮನೆ ನಡೆದು ಹೋಗುವಾಗ if your eyes catch their eyes, they make sure that they greet you. "Hey beautiful", "Hi lovely", "Have Lovely day.." ಅನ್ನೋ‌ದು ತೀರ casual greetings. ಮೊದಲ‌ಬಾರಿ ಹೋದವರಿಗೆ ಇವರ್ಯಾಕೆ‌ ಹಿಂಗ್ ಆಡ್ತಾರೋ ಯಪ್ಪಾ.. ಲವ್ಲಿ ನಾ? ನಾನಾ?? ಅಂತ ನಾವ್ ತಲಿ ತಲಿ‌ ಕೆಡಸ್ಕೊಳುವಷ್ಟರಲ್ಲಿ ಅವರು ನಮ್ಮನ್ನು ದಾಟಿ‌ ಇನ್ಯಾರನ್ಮೋ ಗ್ರೀಟ್ ಮಾಡಿಕೊಂಡು ಮುಂದೆ ಸಾಗಿರುತ್ತಾರೆ. 
ಸುಂದರ ಹುಡುಗಿಯರು, ವಾಲ್ ಪೇಪರಗಿಂತಲೂ ಚೆಂದದ ಜಾಗಗಳು, ಐರ್ಲೆಂಡ್ ಪ್ರವಾಸಿಗರ ಆಕರ್ಷಣೆಯ ತಾಣ.

ಮಕ್ಕಳಿಗಿಂತ ಜಾಸ್ತಿ ಬೀದಿಗಳಲ್ಲಿ ನಾಯಿಗಳದ್ದೇ ದರ್ಬಾರು! ಅವು ಮಾಡುವ ಹೊಲಸನ್ನು ಚೂರೂ ಬೇಜಾರಿಲ್ಲದೇ ಚೀಲದಲ್ಲಿ ಎತ್ತಿ ಎತ್ತಿ ಹಾಕುವ ನಾಯಿಗಳ ಓನರ್ಸ್, ಯಾರಿಗೂ ತೊಂದರೆ ಆಗದಂತೆ ತೀರ ಜಾಗೂರಕರಾಗಿ ನಡೆಯುವ ಜನ,‌ ನಾವು‌  ಫೋಟೋ ವಿಡಿಯೋ ತೆಗೆದುಕೊಳ್ಳುವಾಗ ಭಾರಿ ತಾಳ್ಮೆಯಿಂದ‌  ಕಾಯ್ದು ಕೂಡ, ವಾಪಸ್ ನಮಗೆ‌ ಸಾರಿ ಹೇಳಿ ಹೋಗುತ್ತಿದ್ದರು!! ಈ ಬ್ಯಾಗ್ ಪ್ಯಾಕ್ ಹಿಂದೆ ಹಾಕಿಕೊಂಡರೆ ಓಡಾಡುವಾಗ ಯಾರಿಗಾದರೂ ತಾಗೀತೂ ಅಂತ ಅದನ್ನು ಮುಂದೆ ನೇತು ಹಾಕಿಕೊಂಡು ಓಡಾಡುವಷ್ಟು ಒಳ್ಳೆ ಜನ!

ವೈಪರೀತ್ಯಗಳಿಂದ ಕೂಡಿದ ಹವಾಮಾನ, ಆಲುಗಡ್ಡೆ ಬಿಟ್ಟರೆ ಇನ್ನೆನೂ ಬೆಳೆಯದ ಪರಿಸ್ಥಿತಿ. ಅಲ್ಲೊಂದು ಇಲ್ಲೊಂದು ಆಪಲ್ ಗಿಡ ಕಂಡಿದ್ದು ಬಿಟ್ಟರೆ ಇವರ ಕೃಷಿ ಮಾರುಕಟ್ಟೆ ಬೇರೆ ದೇಶಗಳ ಮೇಲೆಯೇ ಅವಲಂಬಿತವಾಗಿದೆ. ಐರಿಶ್ ಹಸು ಹಾಗೂ ಕುರಿಗಳು ತುಂಬ ಫೇಮಸ್. ಇಲ್ಲಿನ‌ ಫುಲ್‌ಫ್ಯಾಟ್ ಮಿಲ್ಕ್ ಹಾಗೂ ಗೋಟ್ ಚೀಸ್ ಒಮ್ಮೆ ಸವಿಯಲೇಬೇಕು!!

ಆದರೆ ವೆಜಿಟೆರಿಯನ್ನ್ ಗೇ ಮಾತ್ರ ಭಾರೀ ನಿರಾಸೆ ತರಿಸುವ ರೆಸ್ಟೊರೆಂಟ್ ಗಳು. ಅಲ್ಲಲ್ಲಿ ಸಿಗುವ ಇಂಡಿಯನ್‌ ರೆಸ್ಟೊರೆಂಟ್ ಕೂಡ ಉಪ್ಪು ಖಾರ ಕಮ್ಮಿ ಹಾಕಿನೇ‌ ಅಡುಗೆ ಮಾಡ್ತಾರೆ.

ಜೆಟ್ ಸ್ಪ್ರೆ ಇಲ್ಲದ ಬಾತರೂಮ್, ಬಿಸಿಲಲ್ಲೂ ಕೋಟ್ ಧರಿಸಿ ಹೊರಹೋಗುವ ಪಧ್ದತಿ, ಎಷ್ಟೇ ಉಪ್ಪು ಹಾಕಿಕೊಂಡರೂ ಉಪ್ಪೇ ಇಲ್ಲ ಎನಿಸೋದು, ಸಿಹಿಯೇ ಇಲ್ಲದ ಸಕ್ಕರೆ, ಒಂದು ಕಪ್ಪು ಕಾಫಿಗೆ ಅಥವಾ ಚಹಾಕ್ಕೆ ಹನಿಯಷ್ಟು ಹಾಲು ಹಾಕಿಕೊಂಡು ಕುಡಿಯುವ ಪಧ್ದತಿ, ರಾತ್ರಿ ಒಂಭತ್ತು ಗಂಟೆಯವರೆಗೂ ಇರುವ ಬೆಳಕಿಗೆ ಅಡ್ಜಸ್ಟ್ ಆಗೋದು ಸ್ವಲ್ಲ ಕಷ್ಟ. ಆದರೂ ಕುಡಿಯುವವರ ಸ್ವರ್ಗವೆಂದೇ ಹೇಳಬಹುದು, ಬೆಳಿಗ್ಗೆ ಎದ್ದಾಗಿಂದ ಸಂಜೆವರೆಗೂ ಎಲ್ಲ ರೆಸ್ಟೋರೆಂಟ್ ಗಳಲ್ಲಿ ನಮ್ಮಲ್ಲಿ‌ ನೀರು ಕೊಡುವಂತೆ ಅಲ್ಲಿ ಲೀಕರ್ ಕೊಟ್ಟೇ ಮೆನು ಕೊಡುತ್ತಾರೆ.  ಹಣ್ಣು ಹಣ್ಣು ಮುದುಕರಾದರೂ ನಮಗಿಂತ ಗಟ್ಟಿ ಅಲ್ಲಿನ ವಯೋವೃಧ್ದ ಜನ. ಇಲ್ಲಿನ ಕ್ಲಿಫ್ ವಾಕಿಂಗ್ ಹೋದರೆ ನಿಮಗೆ ಸರಾಸರಿ ಅರವತ್ತರ ನಂತರದ ವಯಸ್ಸಿನ‌ ಜನರೇ ಸಿಗುತ್ತಾರೆ ಮತ್ತೆ ನಾವುಗಳು ಎದೆಯುಸಿರು ಬಿಡುತ್ತ ಇನ್ನಾಗಲ್ಲ ಎನ್ನುವಾಗ ಅವರಾಗಲೇ ಬೆಟ್ಟದ ತುದಿ ಮುಟ್ಟಿ ವಾಪಾಸ್ ಬಂದಿರುತ್ತಾರೆ. ಫಿಟ್ನೆಸ್ ಹ್ಯಾಸ್ ನೋ ಎಜ್ ಲಿಮಿಟ್ ಅನ್ನೋವಷ್ಟು ಗಟ್ಟಿ ಜನ!!

ಆ ವಯಸ್ಸಲ್ಲೂ ಚೆಂದನೆ ರೆಡಿಯಾಗಿ, ಲೂಸ್ ಹೇರ್ ಬಿಟ್ಟು, ಮುತ್ತಿನ ಕ್ಲಿಪ್ ಹಾಕಿಕೊಂಡು, ಶಾರ್ಟ್ ಫ್ರಾಕ್ ಹಾಕಿ, ಕೆಂಪು ಲಿಪಸ್ಟಿಕ್, ಕೆಂಪು ನೇಲ್ ಕಲರ್,ಮ್ಯಾಚಿಂಗ್ ಸ್ಯಾಂಡಲ್ಸ್ ಹಾಕಿಕೊಂಡು ಬಸ್ ಹತ್ತು ಅಜ್ಜಿಯರನ್ನು ನೋಡುವುದೇ ಒಂದು ಸಂಭ್ರಮ. Honey... Careful ಅಂತ ಅಜ್ಜಿಯ ಕಾಳಜಿ ಮಾಡುವ ಹ್ಯಾಂಡ್ಸಮ್ ಅಜ್ಕಂದಿರೂ ಏನೂ ಕಮ್ಮಿಯಿಲ್ಲ.  ಆ ವಯಸ್ಸಲ್ಲೂ ಟೀನೇಜ್ ನವರಂತೆ ಆದರೆ ಎಲ್ಲೇ ಮೀರದಂತೆ ಅವರಾಡುವ ಮಾತು, ಹಾಸ್ಯ, ರೊಮ್ಯಾನ್ಸ್ ಎಲ್ಲದೂ ಚೆಂದ 😍🤗

ಭಾರತೀಯರಿಗೆ ಅಲ್ಲಿನ ಎಂಬೆಸಿ ಒಂದು ವಿಶಿಷ್ಟ ಸವಲತ್ತು ಕೊಟ್ಟಿದೆ ನೀವು ಟೂರಿಸ್ಟ್ ಅಥವಾ ಆಫಿಸ್ ಕೆಲಸದ ಮೇಲೆ ಶಾರ್ಟ್ ಸ್ಟೇ ವಿಸಾ ಅಪ್ಲೈ ಮಾಡಿದ್ದಿರಾದರೆ, ನಿಮಗೆ ಬ್ರಿಟಿಷ್ ಐರಿಶ್ ವೀಸಾ ಎಂಡೋರ್ಸ ಮಾಡಿಕೊಳ್ಳುವ ಆಪ್ಷನ್ ಇದೆ. ಸೆಪೆರೇಟ್ ಆಗಿ ಯುಕೆ ವೀಸಾ ಅಗತ್ಯವಿಲ್ಲ. ಕಾಮನ್ ಟ್ರಾವೆಲ್‌ ಎರಿಯಾದಲ್ಲಿ ಎಷ್ಟು ಸಲ ಬೇಕಾದರೂ ಓಡಾಡಬಹುದು. ಮತ್ತು ಕೇವಲ ಒಂದು ಗಂಟೆಯ ಫ್ಲೈಟ್ ನಿಮ್ಮನ್ನು ಡಬ್ಲಿನ್ ಇಂದ‌ ಲಂಡನ್ ಗೆ ಕರೆದೊಯ್ಯುತ್ತದೆ!!

#dublindiaries