Total Pageviews

Sunday, September 10, 2023

ಐರ್ಲೆಂಡ್ ಡೈರಿ!!ಈ ಏರ್ಪೋರ್ಟ್ ಅಲ್ಲಿ ಕೂತು ಕಾಯೋ ಕೆಲಸ ಇದಿಯಲ್ಲ ಇದರಷ್ಟು, ಮಹಾ ಬೋರಿಂಗ್ ಕೆಲಸ ಮತ್ತ ಯವುದೂ ಇರಲಿಕಿಲ್ಲ!! ಆ ಕಡೆ ನೆಮ್ಮದಿಯಿಂದ ಮಲಗೋ ಹಾಗಿಲ್ಲ, ಈ ಕಡೆ ಎಚ್ಚರ ಕೂರುವಷ್ಟು ಎನರ್ಜಿ ಇರೋದಿಲ್ಲ. ಎಲ್ಲ ಹಾರಾಟ ಅಲೆದಾಟ ತಿರುಗಾಟಗಳ ನಡುವೆ ಸಿಗುವ ತಂಗುದಾಣಗಳು ಯಾಕೋ ನನ್ನ ತಾಳ್ಮೆಗೆ ಸರಿ ಹೊಂದುವುದಿಲ್ಲ. ಇರಲಿ ವಿಷಯ ಅದಲ್ಲ, ಹೆಂಗೂ ಕೂತು ಬೋರ್ ಹೊಡಿತಿದೆ.. ಒಂದಷ್ಟು ಐರ್ಲೆಂಡ್ ಎಂಬ ದೇಶ, ಜನ, ಭಾಷೆ ಬಗ್ಗೆ ಬರೆಯೋಣ ಅಂತ....

ಇತಿಹಾಸ ನೋಡೋದಾದ್ರೆ.. ಇವರುಗಳು ನಮ್ಮಂತೆ ಬ್ರಿಟಿಷರ ಮುಷ್ಟಿಯಲ್ಲಿ ನರಳಿ, ನಮ್ಮ ಸ್ವಾತಂತ್ರ್ಯದ ನಂತರದ ವರ್ಷದಲ್ಲಿ ಇಂಡಿಪೆಂಡೆಂಟ್ ಆದ್ರೂ ಕೂಡ ಅರ್ಧದಷ್ಟು ಐರ್ಲೆಂಡ್ ಇತ್ತಿಚಿನವರೆಗೆ ಯುನೈಟೆಡ್ ಕಿಂಗ್ಡಮ್ ಭಾಗವಾಗಿಯೇ ಗುರುತಿಸಿಕೊಳ್ಳುತ್ತಿದ್ದರು. ಯುರೋಪ್ ನ ಭಾಗವಾಗಿದ್ದರೂ, ಶೆಂಗನ್ ರಾಷ್ಟ್ರಗಳಲ್ಲಿ ಗುರುತಿಸೊಕೊಳ್ಳದೇ, ತನ್ನದೇ ವಿಶಿಷ್ಟ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಡಿದಾಡಿ, ಯಶಸ್ವಿಯಾಗಿ ರಿಪಬ್ಲಿಕ್ ಆಫ್ ಐರಲೆಂಡ್ ಎಂದು ಅಂಗ್ಲೋ ಐರಿಶ್ ಟ್ರಿಟಿ ಸಹಿ ಮಾಡಿಕೊಂಡಿದ್ದು, ಬರೊಬ್ಬರಿ ಎಳುನೂರು ವರ್ಷಗಳ‌ ನಂತರ!! ಇವರದ್ದೇ ಆದ ಐರಿಶ್ ಭಾಷೆಯನ್ನು ಕೇವಲ ಐದರಿಂದ ಹತ್ತು ಪರ್ಸೆಂಟ್ ಜನ ಮಾತ್ರ ಮಾತನಾಡುತ್ತಾರೆ. ಬ್ರಿಟಿಷರ ಹಾವಳಿಯಿಂದ ಭಾಷೆಯನ್ನೆ ಮರೆತ ಜನರಿದ್ದಾರೆ ಇಲ್ಲಿ.

ಇಲ್ಲಿನ ಇವರ ಇಂಗ್ಲಿಷ್ ಆಕ್ಸೆಂಟ್ ನ ವಿಶ್ವದ ಸುಂದರ ಆಕ್ಸೆಂಟ್ ಅಂತಾನೆ ಹೇಳಬಹದು. ಅವರದೇ ಐರಿಶ್ ಭಾಷೆಯನ್ನ ಬಳಸುವರು ಅತೀ ವಿರಳ. ಇವರ ಇಂಗ್ಲಿಷ್ ನ ಕೇಳುವುದೇ  ಹಿತ... ಆದರೆ ನಮ್ಮ ಇಂಡಿಯನ್  ಇಂಗ್ಲೀಷ್  ಆಕ್ಸೆಂಟ್  ಇವರಿಗೆ ಅರ್ಥ ಅಗೂದೇ ಇಲ್ಲ.. ಅವರಂತೆ ರಾಗವಾಗಿ ಮಾತಾಡಿದರೆ ಮಾತ್ರ ಅರ್ಥ ಮಾಡ್ಕೊಂತಾರೆ. ಸುಂದರ ದ್ವೀಪದಲ್ಲಿನ ಈ ದೇಶದ ಜನ ಭಯಂಕರ ಸ್ವಾಭಿಮಾನಿ ಹಾಗೂ ಇಂಡಿಪೆಂಡೆಂಟ್‌ ಮನಸ್ಥಿತಿಯನ್ನು ಹೊಂದಿರುವವರು. 

ತುಂಬ ರಿಸರ್ವಡ್ ಆಗಿ ತಾವಾಯ್ತು ತಮ್ಮ ಕೆಲಸವಾಯ್ತು ಅನ್ನೋ ಗಂಟು ಮೂತಿಯ ಜನರ ಮಧ್ಯ ತುಂಬ ಫ್ರೆಂಡ್ಲಿಯಾಗಿ ಮಾತಾಡುವ ಹಲವು ಜನರು ಒಮ್ಮೆಲೆ ಭಯ ಬೀಳಿಸುತ್ತಾರೆ. ಬೀದಿಯಲ್ಲಿ ಸುಮ್ಮನೆ ನಡೆದು ಹೋಗುವಾಗ if your eyes catch their eyes, they make sure that they greet you. "Hey beautiful", "Hi lovely", "Have Lovely day.." ಅನ್ನೋ‌ದು ತೀರ casual greetings. ಮೊದಲ‌ಬಾರಿ ಹೋದವರಿಗೆ ಇವರ್ಯಾಕೆ‌ ಹಿಂಗ್ ಆಡ್ತಾರೋ ಯಪ್ಪಾ.. ಲವ್ಲಿ ನಾ? ನಾನಾ?? ಅಂತ ನಾವ್ ತಲಿ ತಲಿ‌ ಕೆಡಸ್ಕೊಳುವಷ್ಟರಲ್ಲಿ ಅವರು ನಮ್ಮನ್ನು ದಾಟಿ‌ ಇನ್ಯಾರನ್ಮೋ ಗ್ರೀಟ್ ಮಾಡಿಕೊಂಡು ಮುಂದೆ ಸಾಗಿರುತ್ತಾರೆ. 
ಸುಂದರ ಹುಡುಗಿಯರು, ವಾಲ್ ಪೇಪರಗಿಂತಲೂ ಚೆಂದದ ಜಾಗಗಳು, ಐರ್ಲೆಂಡ್ ಪ್ರವಾಸಿಗರ ಆಕರ್ಷಣೆಯ ತಾಣ.

ಮಕ್ಕಳಿಗಿಂತ ಜಾಸ್ತಿ ಬೀದಿಗಳಲ್ಲಿ ನಾಯಿಗಳದ್ದೇ ದರ್ಬಾರು! ಅವು ಮಾಡುವ ಹೊಲಸನ್ನು ಚೂರೂ ಬೇಜಾರಿಲ್ಲದೇ ಚೀಲದಲ್ಲಿ ಎತ್ತಿ ಎತ್ತಿ ಹಾಕುವ ನಾಯಿಗಳ ಓನರ್ಸ್, ಯಾರಿಗೂ ತೊಂದರೆ ಆಗದಂತೆ ತೀರ ಜಾಗೂರಕರಾಗಿ ನಡೆಯುವ ಜನ,‌ ನಾವು‌  ಫೋಟೋ ವಿಡಿಯೋ ತೆಗೆದುಕೊಳ್ಳುವಾಗ ಭಾರಿ ತಾಳ್ಮೆಯಿಂದ‌  ಕಾಯ್ದು ಕೂಡ, ವಾಪಸ್ ನಮಗೆ‌ ಸಾರಿ ಹೇಳಿ ಹೋಗುತ್ತಿದ್ದರು!! ಈ ಬ್ಯಾಗ್ ಪ್ಯಾಕ್ ಹಿಂದೆ ಹಾಕಿಕೊಂಡರೆ ಓಡಾಡುವಾಗ ಯಾರಿಗಾದರೂ ತಾಗೀತೂ ಅಂತ ಅದನ್ನು ಮುಂದೆ ನೇತು ಹಾಕಿಕೊಂಡು ಓಡಾಡುವಷ್ಟು ಒಳ್ಳೆ ಜನ!

ವೈಪರೀತ್ಯಗಳಿಂದ ಕೂಡಿದ ಹವಾಮಾನ, ಆಲುಗಡ್ಡೆ ಬಿಟ್ಟರೆ ಇನ್ನೆನೂ ಬೆಳೆಯದ ಪರಿಸ್ಥಿತಿ. ಅಲ್ಲೊಂದು ಇಲ್ಲೊಂದು ಆಪಲ್ ಗಿಡ ಕಂಡಿದ್ದು ಬಿಟ್ಟರೆ ಇವರ ಕೃಷಿ ಮಾರುಕಟ್ಟೆ ಬೇರೆ ದೇಶಗಳ ಮೇಲೆಯೇ ಅವಲಂಬಿತವಾಗಿದೆ. ಐರಿಶ್ ಹಸು ಹಾಗೂ ಕುರಿಗಳು ತುಂಬ ಫೇಮಸ್. ಇಲ್ಲಿನ‌ ಫುಲ್‌ಫ್ಯಾಟ್ ಮಿಲ್ಕ್ ಹಾಗೂ ಗೋಟ್ ಚೀಸ್ ಒಮ್ಮೆ ಸವಿಯಲೇಬೇಕು!!

ಆದರೆ ವೆಜಿಟೆರಿಯನ್ನ್ ಗೇ ಮಾತ್ರ ಭಾರೀ ನಿರಾಸೆ ತರಿಸುವ ರೆಸ್ಟೊರೆಂಟ್ ಗಳು. ಅಲ್ಲಲ್ಲಿ ಸಿಗುವ ಇಂಡಿಯನ್‌ ರೆಸ್ಟೊರೆಂಟ್ ಕೂಡ ಉಪ್ಪು ಖಾರ ಕಮ್ಮಿ ಹಾಕಿನೇ‌ ಅಡುಗೆ ಮಾಡ್ತಾರೆ.

ಜೆಟ್ ಸ್ಪ್ರೆ ಇಲ್ಲದ ಬಾತರೂಮ್, ಬಿಸಿಲಲ್ಲೂ ಕೋಟ್ ಧರಿಸಿ ಹೊರಹೋಗುವ ಪಧ್ದತಿ, ಎಷ್ಟೇ ಉಪ್ಪು ಹಾಕಿಕೊಂಡರೂ ಉಪ್ಪೇ ಇಲ್ಲ ಎನಿಸೋದು, ಸಿಹಿಯೇ ಇಲ್ಲದ ಸಕ್ಕರೆ, ಒಂದು ಕಪ್ಪು ಕಾಫಿಗೆ ಅಥವಾ ಚಹಾಕ್ಕೆ ಹನಿಯಷ್ಟು ಹಾಲು ಹಾಕಿಕೊಂಡು ಕುಡಿಯುವ ಪಧ್ದತಿ, ರಾತ್ರಿ ಒಂಭತ್ತು ಗಂಟೆಯವರೆಗೂ ಇರುವ ಬೆಳಕಿಗೆ ಅಡ್ಜಸ್ಟ್ ಆಗೋದು ಸ್ವಲ್ಲ ಕಷ್ಟ. ಆದರೂ ಕುಡಿಯುವವರ ಸ್ವರ್ಗವೆಂದೇ ಹೇಳಬಹುದು, ಬೆಳಿಗ್ಗೆ ಎದ್ದಾಗಿಂದ ಸಂಜೆವರೆಗೂ ಎಲ್ಲ ರೆಸ್ಟೋರೆಂಟ್ ಗಳಲ್ಲಿ ನಮ್ಮಲ್ಲಿ‌ ನೀರು ಕೊಡುವಂತೆ ಅಲ್ಲಿ ಲೀಕರ್ ಕೊಟ್ಟೇ ಮೆನು ಕೊಡುತ್ತಾರೆ.  ಹಣ್ಣು ಹಣ್ಣು ಮುದುಕರಾದರೂ ನಮಗಿಂತ ಗಟ್ಟಿ ಅಲ್ಲಿನ ವಯೋವೃಧ್ದ ಜನ. ಇಲ್ಲಿನ ಕ್ಲಿಫ್ ವಾಕಿಂಗ್ ಹೋದರೆ ನಿಮಗೆ ಸರಾಸರಿ ಅರವತ್ತರ ನಂತರದ ವಯಸ್ಸಿನ‌ ಜನರೇ ಸಿಗುತ್ತಾರೆ ಮತ್ತೆ ನಾವುಗಳು ಎದೆಯುಸಿರು ಬಿಡುತ್ತ ಇನ್ನಾಗಲ್ಲ ಎನ್ನುವಾಗ ಅವರಾಗಲೇ ಬೆಟ್ಟದ ತುದಿ ಮುಟ್ಟಿ ವಾಪಾಸ್ ಬಂದಿರುತ್ತಾರೆ. ಫಿಟ್ನೆಸ್ ಹ್ಯಾಸ್ ನೋ ಎಜ್ ಲಿಮಿಟ್ ಅನ್ನೋವಷ್ಟು ಗಟ್ಟಿ ಜನ!!

ಆ ವಯಸ್ಸಲ್ಲೂ ಚೆಂದನೆ ರೆಡಿಯಾಗಿ, ಲೂಸ್ ಹೇರ್ ಬಿಟ್ಟು, ಮುತ್ತಿನ ಕ್ಲಿಪ್ ಹಾಕಿಕೊಂಡು, ಶಾರ್ಟ್ ಫ್ರಾಕ್ ಹಾಕಿ, ಕೆಂಪು ಲಿಪಸ್ಟಿಕ್, ಕೆಂಪು ನೇಲ್ ಕಲರ್,ಮ್ಯಾಚಿಂಗ್ ಸ್ಯಾಂಡಲ್ಸ್ ಹಾಕಿಕೊಂಡು ಬಸ್ ಹತ್ತು ಅಜ್ಜಿಯರನ್ನು ನೋಡುವುದೇ ಒಂದು ಸಂಭ್ರಮ. Honey... Careful ಅಂತ ಅಜ್ಜಿಯ ಕಾಳಜಿ ಮಾಡುವ ಹ್ಯಾಂಡ್ಸಮ್ ಅಜ್ಕಂದಿರೂ ಏನೂ ಕಮ್ಮಿಯಿಲ್ಲ.  ಆ ವಯಸ್ಸಲ್ಲೂ ಟೀನೇಜ್ ನವರಂತೆ ಆದರೆ ಎಲ್ಲೇ ಮೀರದಂತೆ ಅವರಾಡುವ ಮಾತು, ಹಾಸ್ಯ, ರೊಮ್ಯಾನ್ಸ್ ಎಲ್ಲದೂ ಚೆಂದ 😍🤗

ಭಾರತೀಯರಿಗೆ ಅಲ್ಲಿನ ಎಂಬೆಸಿ ಒಂದು ವಿಶಿಷ್ಟ ಸವಲತ್ತು ಕೊಟ್ಟಿದೆ ನೀವು ಟೂರಿಸ್ಟ್ ಅಥವಾ ಆಫಿಸ್ ಕೆಲಸದ ಮೇಲೆ ಶಾರ್ಟ್ ಸ್ಟೇ ವಿಸಾ ಅಪ್ಲೈ ಮಾಡಿದ್ದಿರಾದರೆ, ನಿಮಗೆ ಬ್ರಿಟಿಷ್ ಐರಿಶ್ ವೀಸಾ ಎಂಡೋರ್ಸ ಮಾಡಿಕೊಳ್ಳುವ ಆಪ್ಷನ್ ಇದೆ. ಸೆಪೆರೇಟ್ ಆಗಿ ಯುಕೆ ವೀಸಾ ಅಗತ್ಯವಿಲ್ಲ. ಕಾಮನ್ ಟ್ರಾವೆಲ್‌ ಎರಿಯಾದಲ್ಲಿ ಎಷ್ಟು ಸಲ ಬೇಕಾದರೂ ಓಡಾಡಬಹುದು. ಮತ್ತು ಕೇವಲ ಒಂದು ಗಂಟೆಯ ಫ್ಲೈಟ್ ನಿಮ್ಮನ್ನು ಡಬ್ಲಿನ್ ಇಂದ‌ ಲಂಡನ್ ಗೆ ಕರೆದೊಯ್ಯುತ್ತದೆ!!

#dublindiaries


No comments:

Post a Comment