Total Pageviews

Friday, July 20, 2018

ಯಾವುದು ಭಿನ್ನವಾಗಿರುತ್ತದೋ ಅದಕ್ಕೆ ತಾನೇ ಪ್ರಾಮುಖ್ಯತೆ ?!

                 





 " ಆಯ್ತಲ್ಲ ಮಗುವಿಗೆ ಎರೆಡು ವರ್ಷ ಯಾವ ಶಾಲೆಗೇ ಸೇರಿಸಿದ್ರಿ? ನಮ್ಮ ಮಗು ಅಂತೂ ಖುಷಿ ಇಂದ ಶಾಲೆಗೆ ಹೋಗಿ ಬರುತ್ತೆ, ರೈಮ್ಸ್, ವರ್ಡ್ಸ್ ಎಲ್ಲ ಕಲಿಸ್ತಾ ಇದಾರೆ ಒಳ್ಳೆ ಶಾಲೆ... ನೀವ್ಯಾವಾಗ ಸೇರ್ಸೋದು?" ಇದು ದಿನಕ್ಕೆ ಒಂದು ಬಾರಿಯಾದರೂ ನಾನು ಕೇಳಿಸಿಕೊಳ್ಳುವ ಸಾಮಾನ್ಯ ಪ್ರಶ್ನೆ ! ಹೀಗೆ ಎರೆಡು ಮೂರು ವರ್ಷದ ಹಿಂದೆ ಮದುವೆಯಾದ ನವ ದಂಪತಿಗಳೆಲ್ಲ ಸ್ವಂತ ಸೂರಿನ ಹುಡುಕಾಟದ ಹೋರಾಟ ಮಾಡಿ ಬೆಂಗಳೂರಿನ ದುಬಾರಿ ಬದುಕಿಗೆ ಅಪಾರ್ಟ್ಮೆಂಟ್ಗಳೇ ಯೋಗ್ಯ ಎಂಬ ನಿರ್ಧಾರ ಕೈಗೊಂಡು, ಮನೆ ಪ್ರವೇಶ ಮಾಡಿ ಬರೋಬ್ಬರಿ  ಎರಡು ಮೂರು ವರ್ಷದ ಒಳಗಾಗಿ ತಮ್ಮ ಪೀಳಿಗೆಯನ್ನು ಮುಂದು ವರಿಸಲು ಮನೆಗೊಬ್ಬ ಪುಟ್ಟ ನಾಯಕನನ್ನೋ/ನಾಯಕಿಯನ್ನೂ ಬರಮಾಡಿಕೊಂಡರು, ಆ ಪುಟ್ಟ ಹೆಜ್ಜೆ ಇತ್ತು ಬಂದ ಶಿಶು ಈಗ ಎರೆಡು ವರ್ಷ ತುಂಬಿದ ಅದಮ್ಯ ಚೈತನ್ಯದ ಚಿಲುಮೆ ! ಆ ಚೈತನ್ಯಕ್ಕೆ ಇನ್ನು ಹೆಚ್ಚಿನ ಸ್ಪೂರ್ತಿ ತುಂಬಿ ಅದನ್ನು ಶಾಲೆಗೆ ಕಳಿಸಿ ಸಂಭ್ರಮಿಸುತ್ತಿರುವ ಪಾಲಕರು.

                   ಪಾಲಕರೇಕೆ ತಮ್ಮ  ಮಕ್ಕಳನ್ನು ಬೇರೆಯವರ ಮಕ್ಕಳೊಂದಿಗೆ ಹೋಲಿಕೆ ಮಾಡುತ್ತಾರೆ ಅನ್ನುವುದು ಮಗು ಆಗುವ ವರೆಗೂ ಗೊತ್ತಾಗುವುದಿಲ್ಲ ! ಒಮ್ಮೆ ಮಗುವನ್ನು ಎತ್ತುಕೊಂಡು ಸುಮ್ಮನೆ ಹೀಗೆ ವಾಯು ವಿಹಾರಕ್ಕೆಂದು ಹೋಗಿ ನೋಡಿ... ಎಲ್ಲ ಹಲ್ಲು ಬಂತಾ ? ಮಾತು? ನಡಿತಾಳ ? ಕೂದಲು  ಸ್ವಲ್ಪ ಕಮ್ಮಿ ಅಲ್ವ? ಬಣ್ಣ ನಿಂದಲ್ಲ , ಮೂಗು ಸ್ವಲ್ಪ ಮೊಂಡು ಅನ್ಸುತ್ತೆ ಎಣ್ಣೆ ಹಾಕಿ ಸರಿ ಉಜ್ಜಬೇಕಿತ್ತು! ಒಂದು ಹೆಣ್ಣಾಯ್ತಲ್ಲ , ಹೂಂ ಗಂಡು ಮಗುವಿನ ತಯಾರಿ ಮಾಡಿ ! ಒಂದೇ ಎರಡೇ ನನ್ನದೇ ಮಗುವಿನ ಬಗ್ಗೆ ನಾನೂ ಯೋಚಿಸದಷ್ಟು ನಮ್ಮ ನೆರೆ ಹೊರೆಯವರು ಯೋಚಿಸುತ್ತಿರುತ್ತಾರೆ ! ಎಂಥ ಕಾಳಜಿ ಪ್ರೀತಿ !
ಇದೆಲ್ಲ ಏನು ಎಂದು ಅರ್ಥ ಮಾಡಿಕೊಳ್ಳುವಷ್ಟಿಗೆ ಮಗು ಶಾಲೆ ಎಂಬ ಬೆಂಗಳೂರಿನ ಬಿಸಿನೆಸ್ ಕೇಂದ್ರಕ್ಕೆ ನೊಂದಾಯಿಸಿಕೊಂಡಿರುತ್ತದೆ.

                "ಎಲ್ಲರೂ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದಾರೆ ನಾನೇದಾರೂ ಹೀಗೆ ಬಿಟ್ಟು ಬಿಟ್ಟರೆ ನನ್ನ ಮಗು ಉಳಿದೆಲ್ಲ ಮಕ್ಕಳಿಗಿಂತ ಹಿಂದೆ ಉಳಿದು ಹೋಗುತ್ತದೆ"! ಎಂಬಲ್ಲಿಗೆ ಪಾಲಕರ ಮೊದಲ ಭಯ ಮೊಳಕೆಯೊಡೆದಿರುತ್ತದೆ, ಅಲ್ಲಿನ್ಯಾರೋ ಅಯ್ಯೋ 'ಪ್ಲೇ ಹೊಂ'ಗೆ ಹೋಗದ ಮಕ್ಕಳನ್ನು ಒಳ್ಳೊಳ್ಳೆ ಶಾಲೆಗಳು L.K.G ಗೂ ಸೇರಿಸಲ್ವಂತೆ  ಅಂತ ಯಾರೋ ಉಧ್ಘರಿಸಿಬಿಟ್ಟರೆ ಮುಗಿತು ಎಲ್ಲರೂ ಜಿದ್ದಿಗೆ ಬಿದ್ದಂತೆ ಇನ್ನೂ ಪರಿಪೂರ್ಣವಾಗಿ ಮಾತೆ ಆಡದ ಮಗು ಇನ್ಯಾರದ್ದೋ ಭಯ ಹಾಗೂ ಪೈಪೋಟಿ ಎಂಬ ಕದ ತಟ್ಟಿ , ತನ್ನದಲ್ಲದ ಬಾಲ್ಯದ ಮನೆ ಪ್ರವೇಶ ಮಾಡಿರುತ್ತದೆ. ಅಂತೂ ಇಂತೂ ಎಲ್ಲ ಕೇಜಿಗಳನ್ನು ದಾಟಿ ಒಂದನೇ ಕ್ಲಾಸ್ ಸೇರಿಬಿಟ್ಟಮೇಲಂತೂ ಅಪ್ಪ ಅಮ್ಮ ಇಬ್ಬರೂ ಸೇರಿ ಪುನಹ ಒಂದನೇ ತರಗತಿಯಿಂದ ತಮ್ಮ ಎರಡನೇ ಆವೃತ್ತಿಯ ಅಭ್ಯಾಸ ಶುರು ಮಾಡುತ್ತಾರೆ !

                 ಇಂಥ ಅಭೂತಪೂರ್ವ ತಯಾರಿ ಹಾಗೂ ಓದಿದರೆ ಮಾತ್ರ ಜೀವನ ಅನ್ನುವ ಅಲಿಖಿತ ನಿಯಮ ನಾವು ಪಾಲಿಸಿದಷ್ಟು ಜಗತ್ತಿನ ಇನ್ಯಾವ ದೇಶದವರೂ ಪಾಲಿಸಲಿಕ್ಕಿಲ್ಲ ! ಸುಮ್ಮನೆ ಯೋಚನೆ ಮಾಡಿ ನೋಡಿ ಪ್ರತಿವರ್ಷ ಲಕ್ಷ ಲಕ್ಷ ಇಂಜಿನಿಯರ್ ಹಾಗೂ ಡಾಕ್ಟರ್ ಗಳು ಪದವೀಧರರಾಗುತ್ತಿದ್ದಾರೆ, ಅದೆಷ್ಟೋ ಲಕ್ಷಗಳಲ್ಲಿ ಕೆಲವು ಸಾವಿರಗಳಷ್ಟೇ ಕೆಲ್ಸಕ್ಕೆ ಯೋಗ್ಯರೆಂದು ಪರಿಗಣಿಸಲ್ಪಡುತ್ತಾರೆ, ಇನ್ನುಳಿದ ಅರ್ಧದಷ್ಟು ಜನ ತಾವು ಪಡೆದ ಪದವಿಗೂ ಮಾಡುವ ಕೆಲಸಕ್ಕೂ ಸಂಭಂದ ಇರದ ಇನ್ಯಾವುದೊ ಕೆಲಸ ಮಾಡುತ್ತಿರುತ್ತಾರೆ ! ಯಾಕೆ ಹೀಗೆ? ಬದುಕಲು ಹಣ ಬೇಕು ನಿಜ ಬರಿ ಹಣ ಗಳಿಕೆಯೇ ಜೀವನದ ಉದ್ದೇಶವೇ ? ಹೆಸರು ಮಾಡಿದವ್ರೆಲ್ಲ ಹಣವಂತರಾಗಿರುವುದಿಲ್ಲ, ಹಣವಿರುವರೆಲ್ಲ ಹೆಸರು ಮಾಡಿರುವುದಿಲ್ಲ ! ಒಟ್ಟಿನಲ್ಲಿ ಹೆಸರು ಹಣ ಮಾಡಲು ತನಗಿಷ್ಟವಿಲ್ಲದನ್ನು ಮಾಡಲೇ ಬೇಕಾದ ಅನಿವಾರ್ಯತೆ !

                 ಅತ್ಯುತ್ತಮ ಇಂಜಿನಿಯರ್ ,ಡಾಕ್ಟರ್ , ವಿಜ್ನ್ಯಾನಿ , ಕ್ರಿಕೆಟರ್ , ಗಾಯಕ , ಲೇಖಕ , ಕಲಾವಿದ , ಹೀಗೆ ಪ್ರತಿ ಕ್ಷೇತ್ರದಲ್ಲೂ ನಮ್ಮ ಅತ್ತ್ಯುತ್ತಮ ಕೊಡುಗೆ ಕೊಟ್ಟ ಶ್ರೇಯಸ್ಸು ಭಾರತಕ್ಕಿದೆ ! ಆದರೆ ಕಳೆದು ಇಪ್ಪತ್ತು ವರ್ಷದಲ್ಲಿ ಎಲ್ಲ ಪಾಲಕರು ಇಂಜಿನಿಯರ್ ಹಾಗೂ ಡಾಕ್ಟರ್ ಅನ್ನೋ ಮಷೀನ್ ಗಳನ್ನೇ ತಯಾರಿಸಲು ಹೊರಟು ವಿಫಲರಾದರು ! ಪಕ್ಕದ ಮನೆಯ ವಸ್ತುವನ್ನು ನೋಡಿ ಆಕರ್ಷಿತಗೊಂಡು ಅಂಥದ್ದೇ ನಮ್ಮನೆಯಲ್ಲೂ ಬರಲಿ ಎಂದು ಬಯಸುವದು ಮಾನವ ಸಹಜ ಗುಣ , ವಸ್ತುವಿನಿಂದ ಶುರುವಾದ ಬಯಕೆ ಮಕ್ಕಳ ಭವಿಷ್ಯದ ಕನಸಿಗೂ ತಾಗಿದರೆ ಇಂಥ ವಿಚಿತ್ರ ಅನಾಹುತಗಳಾಗುತ್ತವೆ . ೮೦ ಪ್ರತಿಶತ ಜನ ಇಂದು ತಾವು ಮಾಡುವ ಕೆಲಸದಲ್ಲಿ ಸಂತೋಷವಾಗಲಿ ಸಂತೃಪ್ತಿಯಾಗಲಿ ಕಾಣುವುದಿಲ್ಲ . ದುಡ್ಡು ಬರುತ್ತದೆ ದುಡೀಬೇಕು ದುಡೀತೀವಿ , ಇಷ್ಟಾನ ಕಷ್ಟ ನೊ ಯಾರಿಗೆ ಬೇಕು ?! 

              ನಮ್ಮ ಹಾಗೆ ಜೀವನ ನಡೆಸುತ್ತಿರುವ ಚೈನಾ, ಅಮೇರಿಕಾ, ಯೂರೋಪ್ ದೇಶಗಳು  ಹೇಗೆ ಎಲ್ಲ ಕ್ಷೇತ್ರದಲ್ಲೂ ನಮಗಿಂತ ಭಿನ್ನ ಹಾಗೂ ಶ್ರೇಷ್ಠ ?!  ಆ ದೇಶದಲ್ಲಿರುವ ಮುಂದಿನ ಪೀಳಿಗೆಯ ಭವಿಷ್ಯ ನಿರ್ಮಾಣದ ಯೋಜನೆ ಹಾಗೂ ಆಲೋಚನೆಗಳು ನಿಜಕ್ಕೊ ಶ್ಲಾಘನೀಯ ! ಇವತ್ತು ಕ್ರಿಕೆಟ್ ಒಂದನ್ನು ಬಿಟ್ಟು ಬೇರೆಲ್ಲ ಕ್ಷೇತ್ರದಲ್ಲೂ  ನಮ್ಮನ್ನು ನಾವು ತೊಡಗಿಸಿಕೊಳ್ಳುವಲ್ಲಿ ನಮ್ಮನ್ನು ನಾವು ಗುರುತಿಸುಕೊಳ್ಳುವಲ್ಲಿ ಸಫಲರಾಗುವ ಅನೇಕ ಅವಕಾಶಗಳಿವೆ ! ಆದರೆ ಅದರಷ್ಟು ದುಡ್ಡಿಲ್ಲ ! ಫುಟ್ಬಾಲ್ ಮ್ಯಾಚುಗಳನ್ನು ನೋಡಿ , ಭೂಪಟದಲ್ಲಿ ಇವೆಯೋ ಇಲ್ಲವೋ ಎನ್ನುವಂಥ ಪುಟ್ಟ ಪುಟ್ಟ ಹೆಸರೇ ಕೇಳದ ದೇಶಗಳು ಈಗ ವರ್ಲ್ಡ್ ಕಪ್ ಆಡಲು ಅವಕಾಶ ಗಿಟ್ಟಿಸಿಕೊಂಡಿದ್ದಲ್ಲದೇ ಘಟಾನು ಘಟಿಗಳಾದ ದೈತ್ಯ ತಂಡಗಳನ್ನು ಸೋಲಿಸಿದ್ದಾವೆ ! ನಮ್ಮಲ್ಲಿ ಇನ್ನು ಅನೇಕ ಜನರಿಗೆ ಫುಟ್ಬಾಲ್ ಆಟದಲ್ಲಿ ಎಷ್ಟು ಜನ ಆಡುತ್ತಾರೆ ಅನ್ನುವುದೇ ಗೊತ್ತಿಲ್ಲ . ನಮ್ಮಲ್ಲಿ ಮಗು ಫುಟ್ಬಾಲ್  ಆಡುತ್ತೆನೆ  ಎಂದು ಹೇಳಿದರೆ ನಮ್ಮ ಪಾಲಕರು ಮಗುವನ್ನು ಕೂರಿಸಿಕೊಂಡು ಬರೋಬ್ಬರಿ ಒಂದು ಗಂಟೆಯ ಉಪದೇಶ ಕೊಟ್ಟು ಮರಳಿ ಪುಸ್ತಕ ಹಿಡಿಯುವಂತೆ ನೋಡಿಕೊಳ್ಳುತ್ತಾರೆ ! 


                    ನಾನು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಾಠ ಮಾಡುವುದರಿಂದ ಅನೇಕ ಮಕ್ಕಳ ಪಾಲಕರ ಮನಸ್ಥಿತಿ ಅರ್ಥ ಮಾಡಿಕೊಳ್ಳುವಂತಾಗಿದೆ ! ನಮಗೆ ಇಂಜಿನಿಯರ್ ಆಗಲೂ ಮನಸ್ಸೇ ಇರ್ಲಿಲ್ಲ ಮೇಡಂ ಒತ್ತಾಯ ಮಾಡಿ ಇಲ್ಲಿ ಸೇರಿಸಿದ್ದಾರೆ ! ನನಗೆ ಸಿಂಗರ್ ಆಗೋಕೆ ಇಷ್ಟ ಡ್ಯಾನ್ಸರ್ ಆಗೋಕೆ ಇಷ್ಟ , ಪತ್ರಕರ್ತ ಆಗೋಕೆ ಇಷ್ಟ ಅಂತ ಅನೇಕ ಮಕ್ಕಳು ಹೇಳುವಾಗ ಪಾಲಕರನ್ನು ಕರೆಸಿ ಮಾತಡಿದಾಗ , ಏನ್ ಮೇಡಂ ಮಕ್ಕಳ ಮಾತು ಕೇಳಿಕೊಂಡು ನೀವು ಹೀಗೆ ಮಾತಾಡ್ತೀರಲ್ಲ, ಇಂಜಿನಿಯರಿಂಗ್ ಓದದೇ ಇರುವವರನ್ನು ಯಾರೂ ಮೂಸಿಯೂ ನೋಡಲ್ಲ, ಮದುವೆಯಂತು ದೂರದ ಕನಸು, ನಮ್ಮ ಫ್ಯಾಮಿಲಿಯಲ್ಲಿ ಎಲ್ಲ ಡಾಕ್ಟರ್ಸ್ ಇಂಜಿನಿಯರ್ ಗಾಲೆ ಇದಾರೆ ಇವನನ್ನ ಏನ ಅಂತ ಹೇಳಲಿ? ಎಲ್ಲರೂ ಸಾಫ್ಟ್ವೇರ್ ಇಂಜಿನಿಯರ್ ಆಗ್ತೀನಿ ಅಂದ್ರೆ ಇವನು ಪೈಂಟರ್ ಆಗ್ತಾನಂತೆ , ಸರಿ ಆಗ್ಲಿ ಎಷ್ಟು ದುಡಿಬಹುದು ಮೇಡಂ ಅಲ್ಲಿ? ಕಂಪನಿ ಕೊಡುವಷ್ಟು ದುಡ್ಡು ಸಿಗುತ್ತಾ? ಹೋಗ್ಲಿ ಒಂದು ಡೆಸಿಗ್ನೇಷನ್ ಆದ್ರೂ ಬೇಡ್ವಾ?! ದುಡ್ಡಿದ್ರೆ ಎಲ್ಲ ಮಾತಾಡ್ತಾರೆ ಅದಿಲ್ಲ ಅಂದ್ರೆ ಏನು ಇಲ್ಲ ನೀವೇ ಸ್ವಲ್ಪ ತಿಳಿಸಿ ಹೇಳಿ ಎಂದು ಎದ್ದು ಹೊರಡುತ್ತಾರೆ !
            
                   ಇವತ್ತಿನ ಕಾಲಮಾನದಲ್ಲಿ ಎಲ್ಲ ಕ್ಷೇತ್ರಕ್ಕೋ ಬೇಡಿಕೆ ಇದೆ ಎಲ್ಲ ಕ್ಷೇತ್ರದಲ್ಲೂ ವಿಪುಲ ಅವಕಾಶಗಳಿವೆ ! ನಮ್ಮ ಮನಸ್ಥಿತಿಗೆ ಹಿಡಿದ ಜಿಡ್ಡನ್ನು ತೊಳೆದು ನೋಡಿದರೆ ಎಲ್ಲವೂ ಸುಂದರ ಮತ್ತು ರಂಜನೀಯ ! ಸ್ವಲ್ಪ ಕಷ್ಟ ಪಡಬೇಕಾದ ಅನಿವಾರ್ಯತೆ ಎಲ್ಲ ಕ್ಷೇತ್ರದಲ್ಲೂ ಇದೆ , ಕೆಲವು ಕ್ಷೇತ್ರ ತುಸು ಜಾಸ್ತಿಯೇ  ಪ್ರಯತ್ನ ಬಯಸಿದರೂ ಅದು ನಾವೇ ಆರಿಸಿಕೊಂಡ ಕ್ಷೇತ್ರವಾಗಿರುವುದರಿಂದ ಅಂಥ ಕಷ್ಟ ಅನಿಸುವುದಿಲ್ಲ ! ಸುಲಭ ಪ್ರಯತ್ನವೇ ಆದರೂ ನಮ್ಮದಲ್ಲದ ಕ್ಷೇತ್ರ ನಮಗೆಂದಿಗೂ ಸಹ್ಯವಲ್ಲದ ಆದರೂ ಅದರೊಟ್ಟಿಗೆಯೇ ಇರುವ ವಿಚಿತ್ರ ಮಾನಸಿಕ ಹಿಂಸೆ ನೀಡುವ ತಾಣ ! ಇನ್ನು ಮುಂದಿನ ಹತ್ತು ವರ್ಷಗಳಲ್ಲಿ ಯಾರೂ ಇಂಜಿನಿಯರ್ ಗಳನ್ನಾಗಲಿ ಡಾಕ್ಟರ್ ಗಳನ್ನಾಗಲಿ ಮಾತನಾಡಿಸುವುದಿಲ್ಲ , ಗಲ್ಲಿ ಗಲ್ಲಿಗೆ ನೂರಾರು ಒಂದೇ ರೀತಿಯ ಜನ  ಇರುವಾಗ  ಯಾವುದು ಭಿನ್ನವಾಗಿರುತ್ತದೋ ಅದಕ್ಕೆ ತಾನೇ ಪ್ರಾಮುಖ್ಯತೆ ?!

                   ಯಾವುದೇ ಕ್ಷೇತ್ರ ಇರಲಿ , ಯಾವುದೇ ಕ್ಷೇತ್ರ ಅತ್ಯತ್ತಮವಾದ್ದನ್ನ ಮಾತ್ರವೇ ತನ್ನ ಮಡಿಲಿಗೆ  ಹಾಕಿಕೊಂಡು ಬೆಳೆಸುತ್ತದೆ ! ಹಾಗೆ ಬೆಳೆದ ಪ್ರತಿ ಅತ್ಯತ್ತಮವೂ ಶ್ರೇಷ್ಟವಾಗೇ ಇರುತ್ತದೆ ಮತ್ತು ಶ್ರೇಷ್ಟವಾದ ಎಲ್ಲದಕ್ಕೂ ಹೆಸರು, ಕೀರ್ತಿ ಹಾಗೂ ಹಣ ತಾನಾಗೇ ಹರಿದು ಬರುತ್ತದೆ ! ಹಾಗಾಗಿ ಪಾಲಕರಾಗಿ ನಮ್ಮೆಲ್ಲರ ದೊಡ್ಡ ಜವಾಬ್ದಾರಿ ಎಂದರೆ ನಮ್ಮ ಮಕ್ಕಳನ್ನು ನಾವು ಹೇಗೆ ಶ್ರೇಷ್ಟರಾಗುವಂತೆ ಬೆಳೆಸಬೇಕು ಎಂಬುದನ್ನು ಆಲೋಚಿಸಬೇಕು ! ಹಣವನ್ನು ಎಟಿಎಂ ಮಷೀನ್ ಕೂಡ ಕೊಡುತ್ತದೆ! ಯಾರೇ ಕಾರ್ಡ್ ಹಾಕಿದರೂ ಕೊಡುತ್ತದೆ ! ನಮ್ಮ ಮಕ್ಕಳು ದುಡ್ಡು ಮಾಡುವ ಮಷೀನ್ ಗಳಾಗುವುದು ಒಳ್ಳೆಯದೋ ಅಥವಾ ತಾನಾರಿಸಿಕೊಂಡ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿ ಕೀರ್ತಿ ಪತಾಕೆ ಹಾರಿಸುವುದೊಳಿತೊ?!

Friday, June 22, 2018

ಮೆಸ್ಸಿ ಎಂಬ ಮಾಯೆ !


ಇನ್ನೇನು ಫುಟ್ಬಾಲ್ ವರ್ಲ್ಡ್ ಕಪ್ ಜ್ವರ  ಶುರುವಾಗಿದೆ ಅನ್ನುವ ಖುಷಿ ಒಂದೆಡೆಯಾದರೆ  , ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಅಧ್ಭುತ   ಫಾರ್ವರ್ಡ್ ಆಟಗಾರ ಲಿಯೊನೆಲ್ ಮೆಸ್ಸಿ ಎಂಬ ಮಾಯಾವಿಯ ಕೊನೆಯ ವರ್ಲ್ಡ್ ಕಪ್  ಎಂಬ ನೋವು ಒಂದು   ಕಡೆ !


ಇಡೀ ವಿಶ್ವದಲ್ಲೇ , ಅತ್ಯಂತ  ಜನಪ್ರಿಯ ಹಾಗೂ ಅತೀ ಬಲಿಷ್ಠ ಆಟಗಾರ ಎಂದೆನಿಸಿಕೊಂಡಿರುವ ಅರ್ಜೆಂಟೀನಾ ತಂಡದ ಫಾರ್ವರ್ಡ್ ನಲ್ಲಿ  ಎದುರಾಳಿ ತಂಡದ ಗೋಲ್ ಕೀಪರ್ ಗಳಿಗೆ ಮೆಸ್ಸಿ, ದುಃಸ್ವಪ್ನವಾಗಿ ಕಾಡಿದ್ದು ಒಂದು ದೊಡ್ಡ ಇತಿಹಾಸ! ಹಲವು ಬಾರಿ ಪಂದ್ಯ ಶ್ರೇಷ್ಠ ಆಟಗಾರ ಎಂದೆನಿಸಿಕೊಂಡೂ , ಅತ್ಯುತ್ತಮ ಗೋಲ್ ಗಳನ್ನೂ ತನ್ನ ಮುಡಿಗೇರಿಸಿಕೊಂಡೂ ಅರ್ಜೆಂಟೀನಾ ಕಳೆದ ವಿಶ್ವ ಕಪ್ ನಿಂದ ವಂಚಿತವಾಗಿತ್ತು ,  ಅಭಿಮಾನಿಗಳಿಗೆ ೨೦೧೮ರ ಕಪ್ ಅನ್ನು ಮೆಸ್ಸಿ ಎತ್ತಿಕೊಂಡು ಮುತ್ತಿಡಲಿ ಎಂಬ ಹೆಬ್ಬಯಕೆ! 


ಫುಟ್ಬಾಲ್ ಇತಿಹಾಸದ ದಂತಕಥೆಗಳ ಸಾಲಿನಲ್ಲಿ ನಿಂತಿರುವ ಮೆಸ್ಸಿಯದು ಬಾಲ್ಯದಿಂದಲೂ ಹೋರಾಟದ ಬದುಕು ,ಅತೀ ಬಡತನ ಅಲ್ಲದಿದ್ದರೂ , ದೈಹಿಕ ಸಾಮರ್ಥ್ಯವೇ ಮಾನದಂಡವಾಗಿರುವ ಈ ಕ್ರೀಡೆಗೆ ಅಡ್ಡಿಯಾಗಿ  ಮೆಸ್ಸಿಯ ೧೩ ನೇ ವಯಸ್ಸಿಗೆ ಬೆಳವಣಿಗೆಯ ಹಾರ್ಮೋನ್ ಕುಂಠಿತಗೊಂಡು ಅದರ ಚಿಕಿತ್ಸೆಗೆ ಭರಿಸುವಷ್ಟು ಹಣ ಕಾಸಿನ ತೊಂದರೆಯಾಗಿ, ಸ್ಪೇನ್ ನ ಬಾರ್ಸಿಲೋನಾ ಎಂಬ ಕ್ಲಬ್ ನ  ಆಟಗಾರನಾಗಿ ಸೇರಿಕೊಂಡರೆ ಅವನ ಚಿಕಿತ್ಸೆಯನ್ನು ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಬಾರ್ಸಿಲೋನಾ ಯೂಥ್ ಅಕಾಡೆಮಿ , ಮೆಸ್ಸಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುತ್ತದೆ !  ಕುಂಠಿತ ಬೆಳವಣಿಗೆಯ ಕಾಯಿಲೆಯ ಮಧ್ಯೆಯೂ ತನ್ನ ೧೭ನೇ ವಯಸ್ಸಿಗೆ ೨೦೦೪ ರಲ್ಲಿ  ಚೊಚ್ಚಲ ಪಂದ್ಯದ ಆಟಗಾರನಾಗಿ ಪಾದಾರ್ಪಣೆ ಮಾಡುತ್ತಾನೆ ! ತದ ನಂತರ ಕೇವಲ ಮೂರ್ ಮೂರು ವರ್ಷಗಳಲ್ಲಿ ಅಂದರೆ ೨೦೦೭ ರ ಹೊತ್ತಿಗೆ ಇಡೀ ಪ್ರಪಂಚವೇ ಮೆಸ್ಸಿಯ ಆಟದ ಶೈಲಿ ಹಾಗೂ ಗೋಲ್ ಮಾಡುವ ವಿಧಾನವನ್ನು  ಹಾಡಿ ಹೊಗಳುವಂತೆ ಮಾಡಿದ್ದಲ್ಲದೆ , ತನ್ನ ೨೨ ನೇ ವಯಸ್ಸಿಗೆ  ಫಿಫಾ ನೀಡುವ ವಿಶ್ವದ ಅತ್ಯತ್ತಮ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಾನೆ !


ಚೈನಾ ದಲ್ಲಿ ನಡೆದ ೨೦೦೮ ರ ಒಲಿಂಪಿಕ್ಸ್ ನಲ್ಲಿ ತನ್ನ ತಂಡಕ್ಕೆ ಬಂಗಾರದ ಪದಕ ಸಿಗುವುದಕ್ಕೆ ಮುಖ್ಯ ಕಾರಣ ಮೆಸ್ಸಿ ! ಇಷ್ಟೆಲ್ಲಾ ಸಾಧನೆಯ ನಂತರ ೨೦೧೧ಕ್ಕೆ ಅರ್ಜೆಂಟೀನಾ ತಂಡದ ನಾಯಕನ ಪಟ್ಟವನ್ನು  ಹೊತ್ತ ಮೆಸ್ಸಿ ಸತತ ಮೂರು ಬಾರಿ ವಿಶ್ವ ಕಪ್ ಅಂತಿಮ ಪಂದ್ಯಕ್ಕೆ  ಕೊಂಡೊಯ್ಯುತ್ತಾನೆ ! ಅಂದರೆ ನಾಯಕನ್ನಾಗಿ ನೇಮಕಗೊಂಡ ವರ್ಷದಿಂದ ಸತತವಾಗಿ ಮೂರು ವರ್ಷ ತಂಡ ಫೈನಲ್ ತಲುಪುತ್ತದೆ , ಕೆಲವೊಮ್ಮೆ ಅದೃಷ್ಟವೂ ಬೇಕಾಗುತ್ತದೆ ಎನ್ನುವುದು ಇದಕ್ಕೆ , ಅಷ್ಟು ಕಠಿಣ ಹಣಾ ಹಣಿಯ ನಂತರ ಮೂರು ಬಾರಿ ಕಪ್ ಮುಡಿಗೇರಿಸುವಲ್ಲಿ ಅರ್ಜೆಂಟೀನಾ ವಿಫಲವಾಗುತ್ತದೆ ! ಕಪ್ ಗೆಲ್ಲದಿದ್ದರೇನು , ಈ ಅವಧಿಯಲ್ಲಿ ಜಗತ್ತಿನಾದ್ಯಂತ ಕೋಟಿ ಕೋಟಿ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿ ನಿಲ್ಲುತ್ತಾನೆ, ಇವತ್ತು ವಿಶ್ವದಲ್ಲಿ ತಮ್ಮ ದೇಶದ ಫುಟ್ಬಾಲ್ ಆಟಗಾರನನ್ನು ಬಿಟ್ಟು ಬೇರೆ ದೇಶದ ಆಟಗಾರನನ್ನು ಆರಾಧಿಸುವಂತೆ ಮಾಡಿದ್ದು ಮೆಸ್ಸಿ ಮಾತ್ರ! ಬ್ರೆಝಿಲ್ ತಂಡದಲ್ಲಿ  ರೊನಾಲ್ಡಿನೋ  ಎಂಬ  ಅತ್ಯತ್ತಮ ಆಟಗಾರನಿದ್ದೂ , ಹಲವು ಪ್ರದೇಶದ ಜನ ಮೆಸ್ಸಿ ಹಾಗೂ  ಅರ್ಜೆಂಟೀನಾ ದೇಶವನ್ನು ಬೆಂಬಲಿಸುತ್ತಾರೆ ಎಂದರೆ ಅದೆಷ್ಟು ಮೋಡಿ ಮಾಡಿರಬೇಕು ಈ ಮೆಸ್ಸಿ ಎಂಬ ಮಾಂತ್ರಿಕ ?!


ಫುಟ್ಬಾಲ್ ಆಟಗಾರರಿಗೆ ಹೆಸರು ಮತ್ತು ಹಣ ನೀರಿನಂತೆ ಹರಿದು ಬರುತ್ತದೆ , ಇಂಥ ಸುಖದ  ಸುಪತ್ತಿಗೆಯಲ್ಲಿರುವವರಿಗೆ ಹೆಣ್ಣಿನ ಸ್ನೇಹ ಸರಸ ಸರ್ವೇ ಸಾಮಾನ್ಯ ! ಈ ವಿಷಯದ್ಲಲೂ ಮೆಸ್ಸಿ ತಾನೇಕೆ ಉಳಿದ ತಾರೆಗಳಿಗಿಂತ ಭಿನ್ನ ಎಂದು ತೋರಿಸಿಕೊಟ್ಟಿದ್ದಾನೆ. ೨೦೦೯ ರಿಂದ ೨೦೧೪ರ ವರೆಗೆ ಮೆಸ್ಸಿ ಫಾಟ್ಬಾಲ್ ಕ್ಷೇತ್ರದ ಅತೀ ಹೆಚ್ಚು ಹಣ ಗಳಿಸಿದ ಆಟಗಾರ! ಯಾವುದೇ ಗಾಸಿಪ್ ಗಳಿಲ್ಲದ, ಕಪ್ಪು ಚಿಕ್ಕೆ ಇಲ್ಲದ   ವೈಯಕ್ತಿಕ ಜೀವನ ,ತ ನಡೆಸಿದ ಮೆಸ್ಸಿ, ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ಇದ್ದ ಗರ್ಲ್ ಫ್ರೆಂಡ್  ಆಂಟೀನೆಲ್ಲಾ ರೋಕಝ್ಯ ಎಂಬಾಕೆಯನ್ನು ಎರಡು ಮಕ್ಕಳ ನಂತ್ರ ೨೦೧೭ ರಲ್ಲಿ ವಿವಾಹವಾಗಿ  ಅನೇಕ ಹುಡುಗಿಯರ ಪಾಲಿನ ಮಿಸ್ಟರ್ ಪರ್ಫೆಕ್ಟ್ ಆಗಿ ಕಾಡುತ್ತಾನೆ !


ತಾನು ಅನುಭವಿಸಿದ ಬಾಲ್ಯದ ತೊಂದರೆ ಇನ್ಯಾರೂ  ಅನುಭವಿಸದಿರುವಂತೆ ನೋಡಿಕೊಳ್ಳಲು ಮೆಸ್ಸಿ ತನ್ನದೇ ಬಾರ್ಸಿಲೋನಾ ಕ್ಲಬ್ ನ ಜೊತೆಗೆ ಹೊಂದಾಣಿಕೆ ಮಾಡಿಕೊಂಡ ಯೂನಿಸೆಫ್ ಎಂಬ ಸಂಸ್ಥೆಗೆ ಧಾರಾಳ ಹಣ ಸಹಾಯ ಒದಗಿಸಿದ್ದಲ್ಲದೆ , ತಾನು ಹುಟ್ಟಿ ಬೆಳೆದ ರೊಸಾರಿಯೋ ಎಂಬ ಊರಿನ ಪ್ರತಿ ಫುಟ್ಬಾಲ್ ಪಟು ಮೆಸ್ಸಿಯ ದೇಣಿಗೆಯಿಂದ ಮುಂದೆ ಬರುತ್ತಿದ್ದಾರೆ ! 

ಆಟದಮೈದಾನದಲ್ಲಿ ಯಾವತ್ತೂ ಮೋಸದಾಟವಾಗಲಿ ಎದುರಾಳಿಯನ್ನು ತುಚ್ಛವಾಗಿ ಕಾಣುವುದಾಗಲೀ ಎಂದೂ ಮಾಡದ ಮೆಸ್ಸಿಯ  ಬೊಕ್ಕಸದಲ್ಲಿ ಅತೀ ಹೆಚ್ಚು ಗೋಲ್ ಮಾಡಿದ ಸಾಧನೆ  ಒಂದೆಡೆಯಾದರೆ, ಫುಟ್ಬಾಲ್ ದಂತಕಥೆ ಮೆರಡೋನ  ಮೆಸ್ಸಿ ಯನ್ನು   ಸರ್ವ ಶ್ರೇಷ್ಠ ಆಟಗಾರ ಎಂದು ರೊನಾಲ್ಡಿನೋ ಹಾಗೂ ರೊನಾಲ್ಡೊರನ್ನು ಮೆಸ್ಸಿಯ ನಂತ್ರ ಎಂಬಂತೆ ಬಿಂಬಿಸಲಾಗುತ್ತಿದೆ. 

ಒಂದು ಚೆಂಡಿನ ಹಿಂದೆ ೨೨ ಜನ ಓಡಾಡಿ ಬಡಿದಾಡುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ , ಅಂಥದರಲ್ಲಿ ಮೆಸ್ಸಿ ಎಂಬುದು  ಅಸಾಧಾರಣ ಹಾಗೂ ಅಪರೂಪ ವ್ಯಕ್ತಿತ್ವ!  ಸದಾ ವೃತ್ತಿಪರತೆ ತೋರುವ ಮೆಸ್ಸಿ  ಅಂಥ ಒಬ್ಬ ಕ್ಯಾಪ್ಟನ್ ಕೂಲ್ ನನ್ನು  ಮೈದಾನದಲ್ಲಿ ನೋಡುವುದು  ಒಂದು ಸಂಭ್ರಮ !  ಮೆಸ್ಸಿಯ ಹಲವು ರೆಕಾರ್ಡ್ ಗಳು ಇನ್ನು ಯಾರಿಂದಲೂ ಭೇದಿಸಲಾಗದೆ ಉಳಿದಿರುವ ಬೆನ್ನಲ್ಲೇ , ಈ ಸಲದ ವಿಶ್ವ ಕಪ್ ಮೆಸ್ಸಿಯ ಕೊನೆಯ ಆಟವಾಗಿರುವರಿಂದ , ಇಂಥ ಅಪರೂಪದ ನಾಯಕ ತನ್ನ ತಂಡದ  ಜಯಭೇರಿಗೆ  ಕಾರಣನಾಗಿ  ಕೊನೆಯ ಬಾರಿಯಾದರೂ ವಿಶ್ವ ಕಪ್ ಮೆಸ್ಸಿಯ ಪಾಲಾಗಲಿ  ಎಂಬುದು ಎಲ್ಲ ಅಭಿಮಾನಿಗಳ ಆಸೆ! 








Monday, May 7, 2018

ಜಪಾನ್ ಎಂಬ ಬೆರಗು !


             



   ಒಂದು ಸಲ   ನಮ್ಮ ದೇಶದವರಿಗೆ ತುರ್ತಾಗಿ  ಒಂದು ಸಬ್  ಮರಿನ್ ಅವಶ್ಯಕತೆ ಉಂಟಾಗಿ , ಖರೀದಿಸಲು ನಿರ್ಧರಿಸುತ್ತಾರಂತೆ, ಆಗ ಮೊದಲು ಅಮೆರಿಕಾದವರಿಂದ ಖರೀದಿಸಲು ಯೋಚಿಸಿ , ಅವರನ್ನು ಕೇಳಿದಾಗ ಅವರು ಒಂದು ೫೦೦ ಪುಟಗಳು ಟರ್ಮ್ಸ್   ಅಂಡ್ ಕಂಡೀಶನ್ ಬುಕ್ ಅನ್ನು ಕಳಿಸುತ್ತಾರಂತೆ , ಅದನ್ನು ಓದಿ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಮೂರು ತಿಂಗಳಾಗಿ ಕೆಲವು ಪುಟಗಳು ಕಳೆದು ಹೋದವಂತೆ! ಆಗ , ಇವರುಗಳು ರಷ್ಯಾ ದೇಶದವರನ್ನು ಸಂಪರ್ಕಿಸಿ ಕೇಳುತ್ತಾರಂತೆ ನಮಗೆ ಇನ್ನಾರು ತಿಂಗಳುಗಳಲ್ಲಿ ತುರ್ತಾಗಿ ಸಬ್ ಮರಿನ್ ನ ಅವಶ್ಯಕೆತೆ ಇದೆ ನೀವೇನಾದರೂ ಕೊಡಬಹುದೆ ಎಂದು ಅದಕ್ಕೆ ರಷ್ಯಾ ೨೫೦ ಪುಟಗಳ ಟರ್ಮ್ಸ್ ಅಂಡ್ ಕಂಡೀಶನ್ ಕಳಿಸಿ ೯ ತಿಂಗಳಲ್ಲಿ ಕಳಿಸಿಕೊಡುತ್ತೇವೆ ಎಂದರಂತೆ ! ಇನ್ನೇನು ಮಾಡುವುದು ಎಂದು ತಲೆ ಮೇಲೆ ಕೈ ಹೊತ್ತಿ ಕುಳಿತಾಗ ಯಾರೋ ಜಪಾನ್ ಬಗ್ಗೆ ಹೇಳಿದರಂತೆ ಹೆಚ್ಚಿನ ಕಾಲಾವಕಾಶ ಇರದಿದ್ದರಿಂದ ದೂರವಾಣಿ ಕರೆ ಮೂಲಕ ಡೀಲ್ ಮಾಡುವ ಉದ್ದೇಶದಿಂದ ಫೋನಾಯಿಸಿ ಹೇಗ್ ಹೀಗೆ ಅಂತ ಹೇಳಿದಾಗ ಆ ಕಡೆ ಇಂದ ಸರಿ ಬರೋಬ್ಬರಿ ೫ ತಿಂಗಳು ಹದಿನೈದು ದಿವಸದಲ್ಲಿ ಸಬ್ ಮರೀನ್ ನಿಮ್ಮ ದೇಶದಲ್ಲಿ ಇಂಥಿಂಥ ತಾರೀಖು ಇಂಥಿಂಥ ಸಮಯಕ್ಕೆ ಸರಿಯಾಗಿ ಇಂತಿಥ ಜಾಗಕ್ಕೆ ಬಂದಿರುತ್ತದೆ ಎಂದರಂತೆ , ಇದನ್ನು ಕೇಳಿ ನಮ್ಮ ಅಧಿಕಾರಿ ಮತ್ತೆ ಟರ್ಮ್ಸ್ ಅಂಡ್ ಕಂಡೀಶನ್ ಕಥೆ ಏನ್ ಸ್ವಾಮಿ ಯಾರೂ ಆಗಲ್ಲ ಅಂತ ಹೇಳಿದಾಗ ನೀವು ಕೊಡುತ್ತೇನೆ ಅಂದಿರಿ ಯಾವ ಆಧಾರದ ಮೇಲೆ ನಿಮ್ಮನ್ನು ನಂಬಲಿ ಎಂದು ಕೇಳಿದರಂತೆ ಅದಕ್ಕೆ ಜಪಾನೀ ಅಧಿಕಾರಿ " ನೀವು ನಮ್ಮ್ ಜೊತೆಗೆ  ಮೊದಲನೇ ಸಲ ವ್ಯವಹರಿಸುತ್ತಿದ್ದೀರಿ ಎಂದೆನಿಸುತ್ತದೆ ಅದಕ್ಕೆ ನಿಮಗೆ ನಮ್ಮ ಬಗ್ಗೆ ತಿಳಿದಿಲ್ಲ ನಾವೇನಾದರೂ ಹೇಳಿದ ದಿನಕ್ಕಿಂತ ಒಂದೇ ಒಂದು ದಿನ ಮೀರಿದರೆ ನಮ್ಮ ಸಬ್ ಮರಿನ್ ನಿಮಗೆ ಗಿಫ್ಟ್ ಆಗಿ ಕೊಡುತ್ತೇವೆ ಹಣ ತೆಗೆದುಕೊಳ್ಳುವುದಿಲ್ಲ"! ಎಂದರಂತೆ   ಇದು ಒಂದು ಕಾಲ್ಪನಿಕ ಕಥೆಯಾದರೂ ಜಪಾನ್ ನವರೆಲ್ಲರೂ ಒಪ್ಪುವಂಥ ಹಾಗೆಯೇ ನಡೆದುಕೊಳ್ಳುವಂಥ ಕಥೆ !ನಾವು ಶಾಲೆಯಲ್ಲಿರುವಾಗ ನಮ್ಮ ಮೇಷ್ಟ್ರು ಯಾವಾಗಲೂ ಜಪಾನ್ ಎಂಬ ಪುಟ್ಟ ದೇಶದ ಬಗ್ಗೆ ವಿಪರೀತ ಎನ್ನುವಷ್ಟು ಪ್ರೀತಿ ಹಾಗೂ ಬೆರಗು ಮೂಡುವಂಥ ಕಥೆಗಳನ್ನು ಹೇಳುತ್ತಿದ್ದರು , ಎಲ್ಲರಿಗೂ ಅಮೇರಿಕಾ ಮಾದರಿ ಆದರೆ ನಮ್ಮೆಲರಿಗೂ ಜಪಾನ್ ಎಂದರೆ ಅಚ್ಚರಿ !

ಇವತ್ತು ದೊಡ್ಡಣ್ಣ ಅಮೆರಿಕಾಗೆ ಸಾಟಿಯಾಗಿ ತಾಂತ್ರಿಕವಾಗಿ ಸವಾಲೆಸೆಯಬಲ್ಲ ದೇಶ ಎಂದರೆ ಅದು ಜಪಾನ್ ಮಾತ್ರ! ಜಗತ್ತಿನಲ್ಲಿ ಆ ದೇಶ ಅನುಭವಿಸದಷ್ಟು ಸಾವು ನೋವು ಇನ್ಯಾವ ದೇಶವೂ ಅನುಭವಿಸಿರಲಿಕ್ಕಿಲ್ಲ ಆ ದೇಶ ಕಂಡಷ್ಟು ಪ್ರಕೃತಿ ವಿಕೋಪವನ್ನು ಇನ್ಯಾವ ದೇಶವೂ ಎದುರಿಸರಲಿಕ್ಕಿಲ್ಲ ! ಎಷ್ಟೇ ಅಡೆ  ತಡೆಗಳಿದ್ದರೂ ಮತ್ತೆ ಒಂದು ಅಭೇದ್ಯ ಶಕ್ತಿಯಾಗಿ ಹೊರ ಹೊಮ್ಮುತ್ತದೆ ಪ್ರತಿಬಾರಿಯೂ ಇಡೀ ವಿಶ್ವವೇ ಬೆರಗಾಗಿ  ಅವರತ್ತ ನೋಡುವಂತೆ ಮಾಡುತ್ತದೆ ! ಹಿರೋಷಿಮಾ ನಾಗಸಾಕಿ ದುರಂತದ ನಂತರ ಅದು ಜಗತ್ತಿನ ಭೂಪುಟದಲ್ಲಿ ಉಳಿಯುವ ಯಾವ ಸೂಚನೆಯು ಇರಲಿಲ್ಲ , ಒಂದಾದ ಮೇಲೊಂದು ಭೂಕಂಪ , ಸುನಾಮಿಗಳು ಒಂದೇ ಎರಡೇ  ಪ್ರತಿ ಬಾರಿ ಹೊಸ ದುರಂತ ಹೊಸ ಸಮಸ್ಯೆ ಎಲ್ಲವನ್ನು ಮೆಟ್ಟಿ ನಿಂತುರುವ ಆ ದೇಶದ ಪ್ರತಿ ಪ್ರಜೆಯು ಸಾಹಸಿಯಂತೆ ಕಾಣುತ್ತಾನೆ !

ನಾವೆಲ್ಲಾ ಗಂಡ ಕಚೇರಿಯಿಂದ ಮನೆಗೆ ಬೇಗ ಬಂದರೆ ಖುಶಿ  ಪಟ್ಟು ತಬ್ಬಿ ಮುದ್ದಾಡಿದರೆ , ಜಪಾನ್ ದೇಶದ ಹೆಂಗಸರು ಗಂಡ ಬೇಗ ಮನೆಗೆ ಬರುವುದು ಒಂದು ಅಕ್ಷಮ್ಯ ಅಪರಾಧ ಹಾಗೂ ಅವಮಾನ ಎಂದು ಭಾವಿಸುತ್ತಾರೆ ! ಅಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೂ ಪ್ರತಿಯೊಬ್ಬರೂ ದೇಶ ಮೊದಲು ಹಾಗೂ ನಾವು ಕೆಲಸ ಮಾಡುವುದು  ದೇಶಕ್ಕಾಗಿ  ನಂತರ ನಮಗಾಗಿ ನಾವು ನಮ್ಮದು ಎಂಬ ಘೋಷಿತ ವಾಕ್ಯವನ್ನು ತಮ್ಮ ಜೀವನದ ಕೊನೆಯ ಕ್ಷಣದವರೆಗೂ ಪಾಲಿಸುತ್ತಾರೆ !

ಅವರಲ್ಲಿನ ವೃತ್ತಿಪರತೆ, ಶಿಸ್ತು , ಕೆಲಸ ಹಾಗೂ ಕೆಲಸ ಮಾಡುವ ಸಂಸ್ಥೆಯನ್ನು ಗೌರವಿಸುವ ಪರಿ ಎಲ್ಲವೂ ಪರಿಪೂರ್ಣ ! ಸಾಮಾನ್ಯವಾಗಿ ಎಲರೂ ಪಾಲಿಸುವಂತೆ ೮ ಗಂಟೆಗಳೇ ಅಲ್ಲಿನ ಕಚೇರಿ ಸಮಯವಾಗಿದ್ದರೂ ಅಲ್ಲಿನ ಪ್ರತಿ ಪ್ರಜೆಯೂ ೧೦ ರಿಂದ ೧೨ ಗಂಟೆ ಸಮಯವನ್ನು ಕಚೇರಿಗೆಂದೇ ಮೀಸಲಿಟ್ಟಿರುತ್ತಾರೆ ! ಕೇವಲ ೧೨೫ ಮಿಲಿಯನ್ ಜನಸಂಖ್ಯೆ ಹೊಂದಿರುವ  ದೇಶ ಇಂದು ಜಗತ್ತಿನಲ್ಲೇ ತಾಂತ್ರಿಕವಾಗಿ ಮುಂದುವರೆದ ಕೆಲವೇ ಕೆಲವು ದೇಶಗಳಲ್ಲಿ ಒಂದು ಮತ್ತು ವಿಶ್ವದಲ್ಲೇ ಎರಡನೇ ದೊಡ್ಡ ಜಿಡಿಪಿ ಹೊಂದಿರುವ ರಾಷ್ಟ್ರ !ಅಲ್ಲಿನ ನಿರುದ್ಯೋಗ ಕೇವಲ ೪. ೧%  ಹಾಗೂ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಕೇವಲ ೧೩. ೫ % , ಸ್ವಾತಂತ್ರ  ಬಂದು ೭೦ ಸಂವತ್ಸರ ದಾಟಿ ಅವರಷ್ಟು ದೊಡ್ಡ ಮಟ್ಟದ ಯುದ್ಧ ಅಥವಾ ಹಾನಿಯಾಗಲಿ ಆಗದೇ ಇದ್ದರೂ ನಮ್ಮಲ್ಲಿ ಧರ್ಮ ಮೊದಲು ನಂತ್ರ ದೇಶ! ನಮ್ಮಷ್ಟು ಧರ್ಮ ,ಜಾತಿ , ಭಾಷೆ ,ಗಡಿ ಸಮಸ್ಯೆ ಅವರಲ್ಲಿ ಇಲ್ಲದಿದ್ದರೂ ಅವರಷ್ಟು ಕಷ್ಟಗಳಿಗೆ ಎದೆ ಒಡ್ಡಿ ಇದನ್ನು ಮಾಡಿಯೇ ತೀರುತ್ತೇವೆ ಎಂಬ  ಎದೆಗಾರಿಕೆ ನಮಗಿಲ್ಲ !

ಒಂದು ದೇಶಕ್ಕೆ ದೇಶವೇ ಅಳಿವಿನಂಚಿನಲ್ಲಿರುವಾಗ ಅಲ್ಲಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಹೇಳುವುದೇ ಬೇಡ ! ಎರಡನೇ ಮಹಾ ಯುದ್ಧದ ನಂತ್ರ ಅಂದರೆ ೧೯೪೦-೪೬ ರ ವರೆಗೆ ಆರ್ಥಿಕವಾಗಿ ದಿವಾಳಿ  ಹೊಂದಿ ಅಮೆರಿಕಾಗೆ ಶರಣಾಗಿಯೂ ಹೇಚ್ಛೆನೂ ಲಾಭ ಸಿಗದೇ ಬಳಲಿ ಹೋಗಿದ್ದ ಜಪಾನಿಗರಿಗೆ ಅಮೆರಿಕನ್ನರೇ ಡಾಡ್ಜ್ ಎಂಬ ಬ್ಯಾಂಕರ್ ನನ್ನ ಕರೆಸಿ ಕೆಲವು ಸಹಾಯಕಾರಿ ಆರ್ಥಿಕ ಸಬಳೀಕರಣದ ಅದರಲ್ಲಿ ೧) ಹಣದುಬ್ಬರ ಇಳಿಕೆ  ೨) ಸಮತೋಲನ ಬಜೆಟ್  ೩) ಜಪಾನೀ ಸರಕಾರದ ಸಾಲ ವಾಪಸಾತಿ  ೪) ಮತ್ತು ಫಿಕ್ಸೆಡ್ ಎಕ್ಸ್ಚೇಂಜ್ ರೇಟ್  (೧ ಡಾಲರ್ =೩೬೦ ಯೆನ್ ) ಅಂತ ನಿಯಮಗಳನ್ನು ಜಪಾನಿಗರ ಮುಂದಿಡುತ್ತಾನೆ ! ಈ ನಿಯಮಗಳನ್ನು ಪಾಲಿಸದೆ ಅವರಿಗೆ ಬೇರೆ ದಾರಿಯೇ ಇರಲಿಲ್ಲ

ಇದರಿಂದ ೧೯೪೯ ರ ಹೊತ್ತಿಗೆ ಈ ನಿಯಮದಡಿ ಉದ್ಯಮದಾರರು ಹಾಗೂ ಕಾರ್ಮಿಕ ವರ್ಗ ತಮ್ಮ ಸರಕುಗಳಿಗೆ ಅಂತರಾಷ್ಟ್ರೀಯ ಬೆಲೆಗೆ ತಕ್ಕಂತೆ ಹೊಂದಾಣಿಕೆಯಾಗದೇ ಅತೀ ದುಬಾರಿ ಎನಿಸಿ ಎಲ್ಲರಿಂದ ತಿರಸ್ಕರಿಸಲ್ಪಟ್ಟವು ! ಇದರಿಂದ ಗ್ಲೋಬಲ್ ಮಾರುಕಟ್ಟೆ ಕಳೆದುಕೊಂಡರು ! ಇದರಿಂದ ಎದೆ ಗುಂದದ ಜಪಾನಿಗರಿಗೆ ಅಲ್ಲಿನ ಸ್ಟೇಟ್ ಬ್ಯಾಂಕ್ ಗಳು ಧಾರಾಳವಾಗಿ ಸಾಲ ಸಹಾಯ ಒದಗಿಸಿ ದಿವಾಳಿಯಾಗುದನ್ನು ತಡೆದವು ! ೧೯೫೦ ರ ಹೊತ್ತಿಗೆ ಒಂದು ಹೊಸ ಉದ್ದೇಶ ಹೊತ್ತ ಜಪಾನ್ ನ ಆರ್ಥಿಕ ಉದ್ದೇಶ ಕೇವಲ ರಫ್ತು  ಹೆಚ್ಚಿಸುವದಷ್ಟೇ ಆಗಿತ್ತು ಇದರಿಂದ ಸಹಜವಾಗಿಯೇ ತಲಾ ಸಂಗ್ರಹಣೆ ಕಡೆ ಗಮನ ಹೆಚ್ಚಿಸುವಂತೆ ಆಯಿತು ! ಇದಕ್ಕೆ ಸರಿಯಾಗಿ ಮಧ್ಯಮ ಗಾತ್ರದ  ಉದ್ಯಮಿದಾರರೆಲ್ಲ ಸೇರಿಕೊಂಡು ಟ್ಯಾಕ್ಸ್ ಏರಿಕೆ ಖಂಡಿಸಿ ಹೋರಾಟ ನಡೆಸಿದರು , ಈ ಎಲ್ಲ ಕಾಳಜಿಯನ್ನು ಮುಂದಿಟ್ಟುಕೊಂಡು ಜಪಾನಿಗರು ಹುಟ್ಟು ಹಾಕಿದ್ದು " ಮಾನವ ಕಲ್ಯಾಣ ಸಮಾಜ " ಈ ಮಾನವ ಕಲ್ಯಾಣ ಸಮಾಜಕ್ಕಾಗಿಯೇ ಸ್ವತಂತ್ರ ನಿಯಮ , ಮಾರ್ಪಾಡು ಹೊಂದಿದ ಕಾನೂನು ,ಹೊಸ ಸಾಲದ ನಿಯಮ ಅಷ್ಟೇ ಅಲ್ಲದೆ ಹೊಸದಾಗಿ ಶಾಸನ ಮಾನ್ಯತೆಯನ್ನು ಕೊಡಲಾಯಿತು ! ಕಲ್ಯಾಣ ರಾಷ್ಟ ಎಂದಾಗಿದ್ದರೆ ಟ್ಯಾಕ್ಸ್ ಹೆಚ್ಚಳವನ್ನು ಒಪ್ಪಲೇ ಬೇಕಾದ ಅನಿವಾರ್ಯತೆ ಇತ್ತು ಅದಕ್ಕಾಗಿ ಸಮಾಜದ ಹಿತ ಕಾಯ್ದುಕೊಂಡರೆ ದೇಶ ತಾನೇ ತಾನಾಗಿ ಅಭಿವೃದ್ಧಿ ಹೊಂದುತ್ತದೆ ಎಂಬ ನಿಯಮವನ್ನು ಅಷ್ಟೇ ಕಟ್ಟು ನಿಟ್ಟಾಗಿ ಪಾಲಿಸಿದರು !

ಈ ಸಮಾಜದ ಸ್ಥಾಪನೆಯಿಂದ ನಿವೃತ್ತಿ ಭತ್ತ್ಯೇ ಗಳನ್ನು ತಮ್ಮ ಸ್ವಂತ ಉಳಿತಾಯದಿಂದಲೇ ನಿರ್ವಹಿಸುವಂತಾಗಿ , ಪ್ರತಿ ಕಾರ್ಮಿಕನ ಹೊಣೆ ಆಯಾ ಉದ್ಯಮಗಳೇ ಹೊತ್ತು ಇನ್ಶೂರೆನ್ಸ್ ಇಂದ ಹಿಡಿದು ಮೆಡಿ ಕ್ಲೇಮ್ ಎಲ್ಲವನ್ನು ಸರಕಾರದ ಬೊಕ್ಕಸಕ್ಕೆ ಧಕ್ಕೆಯಾಗದಂತೆ ಎಲ್ಲ ಆಯಾ ಕಂಪನಿಗಳೇ ನಿರ್ವಹಿಸಿದವು ! ಸಹಜವಾಗಿ ಸರಕಾರೀ ಬೊಕ್ಕಸ ಭಾರಿ ಲಾಭ ಹೊಂದುತ್ತಲಿತ್ತು  , ಆ ಹಣದಲ್ಲಿ ತಾಂತ್ರಿಕ ಅಭಿವೃದ್ಧಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಅರ್ಹತೆಯ ಸ್ಪರ್ಧೆಗೆ  ತಯಾರಿ ನಡೆಸಲು ಮುಂದಾಯಿತು ಜಪಾನ್ !ಇದೆಲ್ಲ ನಡೆದಿದ್ದು ಕೇವಲ ೨೩ ವರ್ಷಗಳ ಅವಧಿಯಲ್ಲಿ ಅಂದರೆ ೧೯೫೦-೭೩ ರ ಅವಧಿ ಜಪಾನಿಗರಿಗೆ ಆರ್ಥಿಕ ಸಬಲೀಕರಣವನ್ನು ತಂದು ಕೊಟ್ಟಿತಲ್ಲದೆ , ೧೯೬೪ ರಲ್ಲೇ ಮೊದಲ ಬುಲೆಟ್ ಟ್ರೈನ್ ಪರಿಚಯಿಸಿ ಜಗತ್ತೇ ನಿಬ್ಬೆರಗಾಗುವಂತೆ ಮಾಡಿತು !ಇಂದು ಅಲ್ಲಿ ಉತ್ಪಾದನೆ ಹೊಂದುವ ಶೇಕಡಾ ೭೦ ಪ್ರತಿಶತ ಸರಕು ಇಡೀ ವಿಶ್ವದೆಲ್ಲೆಡೆ ರಫ್ತಾಗುತ್ತದೆ (ವಿಥ್ ದಿ ಬ್ರಾಂಡ್ ನೇಮ್ )

ಅಂತಿಮವಾಗಿ ಇದೆಲ್ಲಕ್ಕೂ ಮುಖ್ಯ  ಕಾರಣ ಜಪಾನೀ ಸಾಮಾನ್ಯ ಜನರು ! ಎರಡನೇ ಮಹಾ ಯುಧ್ಧದ ನಂತರ ಪ್ರತಿ ಜಪಾನೀ ಪ್ರಜೆಯು ದೇಶ ಮೊದಲು ಹಾಗೂ ದೇಶಕ್ಕಾಗಿ ಏನು ಬೇಕಾದರೂ   ಮಾಡಲು ಸಿದ್ಧ ಎಂಬ ಧ್ಯೇಯ ವಾಕ್ಯವನ್ನು ಕಾಯಾ  ವಾಚಾ ಹಾಗೂ ಮನಸಾ ಪಾಲಿಸಲು ಪ್ರಾರಂಭಿಸಿದರು !
"ಯಾವಾಗಲೂ ನಾವೆಲ್ಲರೂ ಒಂದೇ , ಮತ್ತು ನಾವೆಲ್ಲರೂ ಉಳಿದ ಏಶಿಯನ್ ಗಳಿಗಿಂತ ಉತ್ತಮರು  ಹಾಗೂ ಬಿಳಿಯರಿಗಿಂತ ಉನ್ನತರು " ಎಂಬ ಪ್ರತಿಜ್ಞೆ ತೆಗೆದುಕೊಂಡು ಹುಟ್ಟುವ ಪ್ರತಿ ಮಗುವಿನಲ್ಲೂ ಈ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಾರೆ ! ಮಹಾ ಯುದ್ಧದ ನಂತರ ತಮ್ಮ ದೇಶದ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರತಿ ಪ್ರಜೆಯು ತನ್ನ ವೈಯಕ್ತಿಕ ಸುಖಕ್ಕಾಗಿ ಹಂಬಲಿಸದೆ , ಅದಕ್ಕಾಗಿ ತಮ್ಮ ದೇಶದಲ್ಲಿ ತಮ್ಮದೇ ಸರಕಿನ ಬೆಲೆ ಎರಡರಷ್ಟು ದುಬಾರಿಯಾದರೂ ಚಿಂತಿಸದೇ ಅದನ್ನು ಮನಸಾ  ಸ್ವಾಗತಿಸಿ ಬೆಂಬಲಿಸಿದರು ! ಇದೇ ಮನಸ್ಥಿತಿ ಅವರನ್ನು ಇಂದಿಗೂ ಅವರ ಚಿಂತೆಗಳನ್ನಾಗಲಿ , ಅಥವಾ ಒತ್ತಡಗಳನ್ನಾಗಲಿ , ಧಾರ್ಮಿಕ / ಸಾಂಸ್ಕೃತಿಕ ಹೀಗೆ ಯಾವುದೇ ವ್ಯತ್ಯಾಸಗಳನ್ನ ಸಾರ್ವಜನಿಕವಾಗಿ  ವ್ಯಕ್ತವಾಗದಂತೆ ತಡೆಯುತ್ತ ಬಂದಿದ್ದಲ್ಲದೆ , ಜಗತ್ತಿನ ಅತೀ ಕಡಿಮೆ ಅವಧಿಯಲ್ಲಿ ಮುಂದುವರೆದ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿತು !

ನೋಟು ಬ್ಯಾನ್ನಿಂದಾಗಿ ಏಟಿಎಂ ಮಷೀನ್ ಮುಂದೆ ಕಾಯುವುದೇ ದೇಶದ ಅತ್ಯಂತ ಕರಾಳ ದಿನ ಎಂದು , GST  ಬರುವುದರಿಂದ ದೇಶವೇ ದಿವಾಳಿಯಾಗುತ್ತದೆ , ಕಾರ್ಪೊರೇಟ್ ಕಾರ್ಯನಿರ್ವಾಹಕರ  ಆಗಮನದಿಂದಾಗಿ ದೇಶದ ರೈತರೆಲ್ಲರೂ ಬೀದಿಗೆ ಬರುತ್ತಾರೆ ಎಂದು ಪ್ರತಿಯೊಂದಕ್ಕೂ ನಮ್ಮ ಹಾಗೆ ವಿರೋಧ ವ್ಯಕ್ತ ಪಡಿಸಿ  ಬಂದ್ ಮಾಡಿ ಅಡ್ಡಗಾಲು ಹಾಕಿ, ಉದ್ದುದ್ದ ಮಲಗಿದ್ದರೆ ಇವತ್ತು ಜಪಾನ್ ಕೂಡ ಮಿನಿ ಭಾರತವಾಗಿರುತ್ತಿತ್ತು !

Tuesday, May 1, 2018

ಮೋದಿ ಎಂಬ ಮಾಯೆ ಮತ್ತು ನಾವು !


ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು, ಕಾಲೇಜುಗಳಲ್ಲಿ  ಪಾಠ ಮಾಡುವ ಉಪನ್ಯಾಸಕರು, ಪ್ರಾಧ್ಯಾಪಕರು  ಹಾಗೂ ಸಮಾಜದಲ್ಲಿ ಮುಖಂಡ ಎನಿಸಿಕೊಂಡವ ಮತ್ತು ರಾಜಕೀಯ ನಾಯಕ , ಇವರೆಲ್ಲರಿಗೂ ವಕ್ಚಾತುರ್ಯ ಮತ್ತು ಜನರನ್ನು ಆಕರ್ಷಣೆ ಮಾಡುವ ಕಲೆ ಗೊತ್ತಿಲ್ಲದಿದ್ದರೆ ಇವರುಗಳ ಸರ್ವೈವಲ್ ತುಂಬಾ ಕಷ್ಟ !

ನಾನು ಮೋದಿ ಅಭಿಮಾನಿ ಹಾಗೂ ಇತ್ತೀಚಿಗೆ ಈ ಆಗದವರು ಅಂತೆ ಇರುವ ಕೆಲವರು ಹೆಸರಿಸಿರುವ ಹಾಗೆ ಭಕ್ತಳೂ ಹೌದು !
 ಇದಕ್ಕೆ ಕಾರಣ ಇದೆ.. ಎಲ್ಲರೂ ಹೇಳಿರಬಹುದು ಆದರೂ ನಮ್ಮ ಕರ್ನಾಟಕದ ಚುನಾವಣೆಯ ಸಂಧರ್ಭ ಆಗಿದ್ದರಿಂದ ಇದು ನನ್ನ ಅಭಿಯಾನದ ಲೇಖನ ಎಂದುಕೊಳ್ಳಬಹುದು ! ನಮ್ಮೆಲ್ಲರಿಗೂ ರಾಜಕೀಯ ಎಂದರೆ ಬರಿ ಮೋಸ , ದಗಾ , ವಂಚನೆ ಹಾಗೂ  ಹಗರಣಗಳ ಕ್ಷೇತ್ರ , ಇಲ್ಲಿ ಒಳ್ಳೆಯವರು ಮತ್ತು ಓದಿಕೊಂಡವರು ಬರುವಂತಿಲ್ಲ ಎಂಬ ಅಲಿಖಿತ ನಿಯಮ ವನ್ನು ಎಲ್ಲರೂ ಶಿರಸಾ ಪಾಲಿಸುತ್ತಿದ್ದ ದಿನಗಳಲ್ಲಿ ದಿಢೀರನೆ ಒಂದು ಚೈತನ್ಯ ಕಾಣಲು ಸಿಕ್ಕ್ಕಿತು ! ಒಂದೇನೋ ಹೊಸ ಅಲೆ , ಹೊಸ ಯೋಚನೆ,ಹೊಸ ಕನಸು ಹೊತ್ತು ಬಂದ  ಫಕೀರನಂತೆ ಕಂಡದ್ದು  ನಮ್ಮ ಮೋದಿ .

ಮೋದಿ ಎಂಬ ದೈತ್ಯ ವ್ಯಕ್ತಿತ್ವ ಎಂಥೆಂಥವರನ್ನೋ ಮಾರುಳಾಗುವಂತೆ ಮಾಡಿತು, ಏಕೆಂದರೆ ಆ ವ್ಯಕ್ತಿತ್ವ ಕೇವಲ ತನಗಾಗಿ ಮಾಡಲ್ಪಟ್ಟಿದ್ದಲ್ಲ ಬದಲಾಗಿ ಒಂದು ಹೊಸ ಅಲೆಯ ಆಗಮನಕ್ಕಾಗಿ ಇರುವಂಥದ್ದು ಅಂತ ಮನದಟ್ಟು ಮಾಡಲು ಆಯ್ದು ಕೊಂಡ ಮೊದಲ ಅಸ್ತ್ರ ಜನರನ್ನು ತಲುಪುವುದು ಮತ್ತು ತುಂಬಾ ಸರಳ ಹಾಗೂ ಮನಸಿಗೆ ನಾಟುವ ಪದಗಳಿಂದ ಜನರನ್ನ ತಲುಪುವುದು ! ಈರುಳ್ಳಿ ಬೆಲೆ ಇಂದ ಹಿಡಿದು ಬಾಹ್ಯಾಕಾಶದಲ್ಲಿ  ಹಾರಾಡುವ ರಾಕೆಟ್ ವಿಷಯ ಇರಬಹುದು ಅಥವಾ ಡಿಜಿಟಲ್ ಸಂವಹನದಿಂದ ಹಿಡಿದು ಹಲವು ಯೋಜನೆ ಗಳು , ಕಾರ್ಯಕ್ರಮಗಳು  ಕಡೆಗೆ GST ವರೆಗೂ ಪ್ರತಿ ವಿಷಯವನ್ನು ಕೂಲಂಕುಷವಾಗಿ ಅಳೆದು ತೂಗಿ ವಾಹ್ ಮಾತಾಡಿದ್ರೆ ಹೀಗೆ ಮಾತಾಡ್ಬೇಕು ಅಂತ ವಾಜಪೇಯಿ ನಂತರ ಭಾರತದಲ್ಲಿ ಜನ ಯಾರನ್ನಾದರೂ ನೋಡಿ ಪುಳಕಿತರಾಗಿದ್ದರೆ ಅದು ಮೋದಿ ಮಾತ್ರ !

ಒಂದು ಕ್ಷಣ ಯೋಚಿಸಿ ವಾಜಪೇಯಿ ನಂತರದ  ಕಾಲಮಾನದಲ್ಲಿ , ಬರೋಬ್ಬರಿ ಹತ್ತು ವರ್ಷ ನಮ್ಮ ದೇಶ ನಿಚ್ಚಳ ಮೌನದಲ್ಲಿದ್ದಂತೆ ಭಾಸವಾಗುತ್ತಿತ್ತು . ನಮಗ್ಯಾರಿಗೂ ಫೀಲ್ ಗುಡ್ ಫ್ಯಾಕ್ಟರ್ಸ್ ಗಳೇ ಇರಲಿಲ್ಲ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾ ಬಾಯಿಗೆ ಸಿಕ್ಕಲ್ಲಿ ಗುಟ್ಕಾ ಪಾನ್ ಜಗಿದು ಗೋಡೆಗಳನೆಲ್ಲ ರಂಗೇರಿಸುತ್ತಿದ್ದ ಜನ ಇವತ್ತು , ಸ್ವಚ್ಚ ಭಾರತ ಅಭಿಯಾನ್ ಕಣ್ರೀ ಹಿಂಗೆಲ್ಲ ಎಸಿಬಾರ್ದು ಅನ್ನೋ ಘಟ್ಟ ತಲುಪಿದ್ದಾರೆ. ಕಚೇರಿ ಇಂದ ಎದ್ದು ಹೊರಡುವಾಗ ಸಿಸ್ಟೆಮ ಆಗ್ಲಿ ಲೈಟ್ ಆಗ್ಲಿ ಆರಿಸುವಾಗ ನಂದಲ್ಲ ಕಂಪನಿ ತಾನೇ ನೋಡ್ಕೊಳ್ತಾರೆ ಬಿಡು ಅನ್ನುವ ಜನ ದೇಶದ ಸಂಪನ್ಮೂಲ ಹಾಳು  ಮಾಡಬಾರದು ಅನ್ನುತ್ತಿದ್ದಾರೆ !   ಹಳ್ಳಿಗಳಲ್ಲಿ ಲಕ್ಷ ಲಕ್ಷ ಜನ ಬಹಿರ್ದೆಸೆಯಿಂದ ಮುಕ್ತಿ ಹೊಂದಿ ಶೌಚಾಲಯದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ! ಇಲ್ಲಿ ನಾನು ಎಲ್ಲ ಬದಲಾವಣೆ ಆಗಿಯೇ ಹೋಯಿತು ಎಲ್ಲ ಅಂದು ಕೊಂಡಂತೆ ನಡೆದೇ ಹೋಯಿತು ಅಂತ ಹೇಳುತ್ತಿಲ್ಲ , ಒಂದು ಬದಲಾವಣೆಯ ಗಾಳಿಯಂತೂ ಬೀಸುತ್ತಿದೆ ( Let's not get into numerical facts and counter attacks!) ನಾ ಕಂಡಂತೆ ನನ್ನ ಪರಿಧಿಯೊಳಗೆ ನಾ ಕಂಡಷ್ಟು ಮಾತ್ರ ಇಲ್ಲಿ ಹೇಳಿದ್ದೇನೆ . ಯಾವುದೇ ವಿಷಯವನ್ನು ಜನರು  ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದಂತೂ ಇತಿಹಾಸದ ಯಾವ ಪುಟಗಳಲ್ಲೂ  ಕಾಣ ಸಿಗುವುದಿಲ್ಲ !

ಚುನಾವಣಾ ಪೂರ್ವ ಹಲವು ಭರವಸೆಗಳನ್ನು ಮಂಡಿಸಿದ್ದಿರಬಹುದು ಹಾಗೂ ಅದ್ರಲ್ಲಿ ಕೆಲವು ಈಡೇರದೇ ಇರಲುಬಹುದು, ಇಲ್ಯಾರೂ ೧೦೦ ಪ್ರತಿಶತ efficiency  ಕೊಡುವ ಮಶಿನ್ ಗಳಿಲ್ಲ , ಮಲ್ಯ ಓಡಿ  ಹೋಗಿದ್ದಕ್ಕೆ ಮೋದಿ ರಾಜೀನಾಮೆ ಕೊಡಲಿ ಎಂದು ಬೊಬ್ಬೆ ಇಡುವವರು ಅದೇ ಮಲ್ಯನ RCB ಟೀಮ್ನ ಪರ ವಹಿಸಿಕೊಂಡು ಮಲ್ಯ ತೆಂಗಿನಕಾಯಿ ಚಿಪ್ಪು ಕೊಟ್ಟರೂ ಪರ್ವಾಗಿಲ್ಲ ಕಪ್ ನಮ್ದೇ ಎಂದು ಎದೆ ಬಡಿದುಕೊಂಡು ಮ್ಯಾಚ್ ನೋಡಲು ಹೋಗುತ್ತಾರೆ !   ನಮ್ಮ ಸೋಶಿಯಲ್ ಮೀಡಿಯಾ ಪ್ರಭಾವ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದರೆ , ಒಬ್ಬ ಮನುಷ್ಯ ತನ್ನ ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುತ್ತಿದ್ದು ಅವನನ್ನು ಯಾರೂ ಗಮನಿಸುತ್ತಿಲ್ಲ ಅವನ ಮಾತು ಯಾರೂ ಕೇಳುತ್ತಿಲ್ಲ ಎಂದೆನಿಸಿ ರಾತ್ರೋ ರಾತ್ರಿ ಮೋದಿ ಬಗ್ಗೆ ಒಂದೆರಡು ಇಲ್ಲ ಸಲ್ಲದ ಹೇಳಿಕೆ ಅಸಲಿಗೆ ಮೋದಿಗೂ ಆ ವಿಷಯಕ್ಕೂ ಸಂಭಂದ ಇರದೇ ಇರುವ ಕೆಲವು ಪ್ರಹಸನಗಳನ್ನು ಮುಂದೆ ಇಟ್ಟುಕೊಂಡು ಮೋದಿ ತಲೆ ಕೆಟ್ಟವ, ರಾಕ್ಷಸ , ರಾಜೀನಾಮೆ ಕೊಡ್ಲಿ ಎಂದು ಹೇಳಿ  ಬಿಟ್ಟರೆ ಆಯ್ತು , ಬೆಳಿಗ್ಗೆ ಆಗುವಷ್ಟಿಗೆ ಎಲ್ಲೋ ಮೂಲೆ ಯಲ್ಲಿ ಅಡಗಿ ಕುಳಿತ ಒಂದು ವಿಲಕ್ಷಣ ವಿಚಾರಧಾರೆಗೆ ಎಲ್ಲರೂ ಬಿಟ್ಟು ಬಿಡದೆ ನೀರೆರದು ಅದನ್ನೊಂದು ದೊಡ್ಡದಾದ ಬರಡು ಮರವನ್ನಾಗಿಸುವಲ್ಲಿ ನಾವು ನೀವೆಲ್ಲರೂ ಕಾರಣಿಕರ್ತರು ! ಬರಗೆಟ್ಟ ಟಿವಿ ಮಾಧ್ಯಮಕ್ಕಂತೂ ಒಂದು ವಾರಕ್ಕಾಗುವಷ್ಟು ಆಹಾರ !


ಅಲ್ಲೆಲ್ಲೋ ದೂರದ ಊರಿನಲ್ಲಿ ಕುಳಿತು ದೇಶದ ಹಿತಕ್ಕಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದು ನಮ್ಮೆಲ್ಲ ಕನಸುಗಳನ್ನು ಈಡೇರಿಸುವತ್ತ ನಿರತರಾಗಿರುವ ಒಬ್ಬ ಪ್ರಾಮಾಣಿಕ ಹಾಗು ದಕ್ಷ ಪ್ರಧಾನ ಮಂತ್ರಿ , ಇಲ್ಯಾರೋ ಕುಡಿದ ಮತ್ತಿನ್ನಲ್ಲಿ ಅನ್ನ  ಯಾವುದು ಹೇಸಿಗೆ ಯಾವುದು ಅಂತಲೂ ಗೊತ್ತಾಗದೆ ತಿನ್ನುತ್ತಾ ಕೂತಿರುವ  ನಿರ್ಗತಿಕ ಕ್ರಿಮಿ ಕೀಟಗಳೆಲ್ಲವೂ ಸೇರಿಕೊಂಡು ತಮ್ಮದೇ ಒಂದು ಗುಂಪು ಮಾಡಿಕೊಂಡು, ಮನೆಯಲ್ಲಿ ಹೆಗ್ಗಣ ಸತ್ತರೂ ಮೋದಿ ಕಾರಣ , ಹೆಂಡತಿ ಹೊಡೆದರೂ ಮೋದಿ ಕಾರಣ ಎಂದು ಬಳೆ ಒಡೆದುಕೊಂಡು ಅಳುವುದನ್ನು ನೋಡುವುದೇ ಒಂದು ತಮಾಷೆ ! ಯಾರೋ ದೊಂಬಿ ಎಬ್ಬಿಸಿ ಗಲಾಟೆ ಮಾಡಿದರೆ, ಅಲ್ಯಾರೋ ರೇಪ್ ಮಾಡಿ ಕೊಲೆ ಮಾಡಿದರೆ ಇನ್ಯಾವನೋ ದೇಶ ಬಿಟ್ಟು ಓಡಿ  ಹೋದರೆ ಎಲ್ಲದಕ್ಕೂ ಪ್ರಧಾನಿ ನೇ ಕಾರಣ ಅಂತಾದರೆ ನಮ್ಮ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬ ಪಟ್ಟದ ಅವಶ್ಯಕತೆ ಇದೆಯೆ ? ಅಸಲಿಗೆ ನಮ್ಮ ರಾಜ್ಯದ ಹೊರೆ ಮೊದಲು ಹೊರಬೇಕಾದ್ದು  ಪ್ರಧಾನಿ ಅಂತ ನನಗೆ ಇತ್ತೀಚಿಗಷ್ಟೇ ಮನವರಿಕೆಯಾದ ವಿಷಯ !


ಮೋದಿಯನ್ನು ನಂಬಿ ಇದುವರೆಗೂ ಹಾಳಾಗಿದ್ದಂತೂ ನಂಗೇನೂ ಕಾಣುತ್ತಿಲ್ಲ , ನಾನು ಭಕ್ತಳೆಂಬ ಕಾರಣವೂ ಇರಬಹುದು ! ಆದರೆ ಇದುವರೆಗೂ ದೇವಸ್ಥಾನ , ಮಠ,  ಮಂದಿರಗಳಿಗೆ ಸೀಮಿತವಾದ ಭಕ್ತ ಎಂಬ ವರ್ಗವೊಂದು ದೇಶ ಕಂಡ ಮಹಾನ್ ನಾಯಕನಿಗೂ ಅನ್ವಯವಾಗುತ್ತಿರುವುದು ಸಂತಸದ ವಿಷಯವೇ ಸರಿ ! ಕೇವಲ ಒಂದು ಜಿಲ್ಲೆಯ ಅಧಿಕಾರಿಯಾಗಿ ನೇಮಕಗೊಂಡವರನ್ನ ಕೇಳಿ ನೋಡಿ ಎಲ್ಲವೂ ಪಾರದರ್ಶಕವಾಗಿ ಒಂದಿಷ್ಟೂ ಹಗರಣಗಳಿಲ್ಲದೆ ನಿಷ್ಠೆಯಿಂದ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು! ಇಂತಹ ನೂರಾರು  ಜಿಲ್ಲೆಗಳನ್ನೊಳಗೊಂಡ ೨೨ ರಾಜ್ಯಗಳನ್ನು ಅದ್ಹೇಗೆ ನಿಭಾಯಿಸುತ್ತಿರಯುವ ಆ ಶಕ್ತಿ ಅದೆಂಥದ್ದಿರಬಹುದು ?!

ಗಡಿಯಲ್ಲಿ ನಮಗಾಗಿ ಬಡಿದಾಡಿ ವೀರ ಮರಣ ಹೊತ್ತ ಒಬ್ಬೇ ಒಬ್ಬ ಸೈನಿಕನ ಹೆಸರನ್ನು ಹೇಳಲಾಗದ ನಮ್ಮೆಲ್ಲರ ದೇಶಭಕ್ತಿಗೆ ಹಾಗೂ ಒಂದು ದೇಶದ ಆಡಳಿತದ ಚುಕ್ಕಾಣಿ ಹಿಡಿಯುವುದು ಎಂದರೆ ಕೋತಂಬ್ರಿ ಸೊಪ್ಪನ್ನು ಮಾರುವಷ್ಟೇ ಸುಲಭ ಎಂದು ತಿಳಿದು ಹಗಲಿರುಳು ಬಾಯಿ ಬಡೆದುಕೊಳ್ಳುವ ಜನರನ್ನು ವಿಶ್ವ ವಿಖ್ಯಾತರನ್ನಾಗಿ ಮಾಡುವ ನಮ್ಮ ಅವಿರತ ಪ್ರಯತ್ನಕ್ಕೊಂದು ದೊಡ್ಡ ಸಲಾಂ !






Monday, April 23, 2018

ಆದರೆ ನಮ್ಮ ನಿರ್ಗಮನದ ನಂತರ ಮಾತಾಡುವುದು ನಮ್ಮ ಮೌಲ್ಯ ಮಾತ್ರ !




   
           ಬರೋಬ್ಬರಿ ಮೂರು ವರ್ಷಗಳಾದವಲ್ಲ!! ಬರೆಯುವದನ್ನು ಮರೆತೇ ಹೋದ ಭಯ ಹಾಗು ನಡುಕ! ನನ್ನ ಹಳೆಯ ಪೋಸ್ಟ್ ಗಳನ್ನೆಲ್ಲ ಓದಿ ನಾನೇ ಬರೆದಿದ್ನ ಅನ್ನೋ ಅನುಮಾನ ಕಾಡುವಷ್ಟು ಶೈಲಿ ಹಾಗು ಸರಕಿನ ಕೊರತೆ ಎದ್ದು ಕಾಣುತ್ತಿದೆ.  ಬರೆಯಲೇ ಬೇಕು!  ನನ್ನ ಅಭಿವ್ಯಕ್ತಿ ಎಂಬ ಸೊರಗಿ ಹೋದ ಮಗುವನ್ನು ಪುನ:ಶ್ಚೇತನಗೊಳಿಸುವ ಸಣ್ಣ ಪ್ರಯತ್ನ.....


                     ಏನೆಲ್ಲಾ ಆಯಾಮಗಳನ್ನೊಳಗೊಂಡು, ನಾವು  ಬಯಸಿದ ಬದುಕು , ತೃಪ್ತಿ ಸಿಗುವ ದಿಗಂತದತ್ತ ನಿರಂತರ ನಮ್ಮನ್ನು ಕೈ ಜಗ್ಗಿ ಕರೆದುಕೊಂಡು ಹೋಗುವ ಹಲವು ವಿಫಲ ಯತ್ನಗಳನ್ನು ನಡೆಸುತ್ತಲೇ ಇರುತ್ತದೆ! ಮೂರು ವರ್ಷದ ಬಿಡುವು ನನ್ನನ್ನ mature ಮಾಡಿಸಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಮಗುವಂತೆ ಎಲ್ಲವನ್ನು ಸಂಭ್ರಮಿಸಿ ಅಮಾಯಕ ಕಣ್ಣುಗಳಿಂದ ಎಲ್ಲವನ್ನು ತಿಳಿದುಕೋ ಅನ್ನೋ ಪಾಠವನ್ನಂತು ಕಲಿಸಿದೆ. ನನಗೆಲ್ಲವೂ ತಿಳಿದಿದೆ ಅನ್ನುವುದೇ ಅಧ:ಪತನದ ಮೊದಲ ಮೈಲಿಗಲ್ಲು ! ಹೆಚ್ಚು ವಿಷಯಾಂತರ  ಮಾಡದೆ ನೇರ ವಿಷಯಕ್ಕೆ ಬರೋಣ.


                   ನಮಗೆಲ್ಲ ಒಂದು ನಿರಂತರ ಸ್ಪೂರ್ತಿ ನೀಡುವ ಮಷೀನ್ ನ ಅವಶ್ಯಕತೆ ಇದೆ ಅನಿಸುತ್ತದೆ , ಸರಿಯಾಗಿ ಓದಿ ತಿಳಿದು, ಅಧ್ಯಯನ ಮಾಡಿದರೆ ನಮ್ಮ ಕನ್ನಡ ಸಾಹಿತ್ಯಕ್ಕಿಂತ ಸ್ಪೂರ್ತಿ ನೀಡುವ ಇನ್ನೊಂದು ಮಾಧ್ಯಮ ನನಗಂತೂ ಕಾಣುವುದಿಲ್ಲ! ನಾನು ಅಪ್ಪನಿಗೆ ಯಾವಾಗಲೂ ನಾವೇಕೆ ಸಾಹಿತ್ಯ ಓದಬೇಕು ಎಂದು ಕೇಳುತ್ತಿದೆ , ಅದಕ್ಕೆ ಅಪ್ಪನ ಉತ್ತರ      " ನಮ್ಮ ಬದುಕು ನಾವಂದುಕೊಂಡಷ್ಟು ದೊಡ್ಡದು ಹಾಗೂ ಮಹಾನ್ ಶಕ್ತಿಯುತವಾದುದ್ದಲ್ಲ , ಅಸಲಿಗೆ ಅದರ ಆಯಸ್ಸು ನಮಗೆ ತಿಳಿದಿಲ್ಲ ಇಂತಿಪ್ಪ ಈ ಚಿಕ್ಕ ಬದುಕಿನಲ್ಲಿ ನಿನಗೇನೂ ಬೇಕೋ ಎಲ್ಲವನ್ನೂ ಮಾಡಿ ಬದುಕಿನ ಕೊನೆ ಹಂತದ ಕ್ಷಣವನ್ನೂ ಅನುಭವಿಸಿಯೂ ಇನ್ನೇನೋ ತಿಳಿದುಕೊಳ್ಳುವುದು ಇನ್ನೇನೋ ಕಲಿಯುವುದು ಉಳಿದು ಹೋಯಿತಲ್ಲ ಅಂತ ಅನ್ನಿಸದೆ ಇರಬೇಕು ಅಂದರೆ ನೀನು ಸಾಹಿತ್ಯವನ್ನ ಓದಲೇ ಬೇಕು!"  ಬದುಕಿನ ಪಾಠವನ್ನು ಯಾವ ಗುರುವೂ ಹೇಳಿಕೊಡಲಾರ ! ಒಂದು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳುವಲ್ಲಿ ನಮ್ಮ ಕನ್ನಡ ಸಾಹಿತ್ಯದ ಪಾತ್ರ ತುಂಬಾ ಮುಖ್ಯವಾಗಿದೆ ! ಅದು ಮಂಕು ತಿಮ್ಮನ ಕಗ್ಗ ಗಳಾಗಿರಬಹುದು , ಬೇಂದ್ರೆ ಅಜ್ಜನ ಕವನ ಗಳಿರಬಹುದು , ಕಾರಂತರ ಕೃತಿಗಳಿರಬಹುದು , ಕುವೆಂಪು ಅವರ ಗ್ರಂಥಗಳಿರಬಹುದು ಹಾಗೂ ಭೈರಪ್ಪನವರ ಕಾದಂಬರಿಗಳಾಗಿರಬಹುದು.


    ನಮ್ಮ ಮನುಷ್ಯ ಸಹಜ ಪ್ರತಿಕ್ರಿಯೆ ಅದು ಯಾವುದೇ ವಿಷಯಕ್ಕೆ ಸಂಭಂದಿಸಿದ ತೊಂದರೆಯಾಗಿದ್ದರೂ , "ನನಗೆ ಯಾಕೆ" ಅಥವಾ "ನಾನೇ ಯಾಕೆ" ಅದು ಕಾಯಿಲೆ ಆಗಿರಬಹುದು, ಅಪಘಾತವಾಗಿರಬಹುದು ಹಣ ಕಾಸಿನ ತೊಂದರೆಯಾಗಿರಬಹುದು , ಸಾವು ನೋವುಗಳಿರಬಹುದು ಅಥವಾ ದೊಡ್ಡ  ಸೋಲುಗಳಿರಬಹುದು, ನಾವುಗಳೆಲ್ಲ ಅವುಗಳ್ಯಾವವೂ ನಮ್ಮ ಹತ್ತಿರ ಸುಳಿಯದಿರಲಿ ಅಂತ ಪ್ರಾರ್ಥಿಸೋಣ ಆದರೆ ಅಕಸ್ಮಾತಾಗಿ ಬಯಸದೆಯೂ ಇವುಗಳೇನಾದರೂ ನಮ್ಮ ಹತ್ತಿರ ಸುಳಿದರೆ ಇವುಗಳನ್ನು ಎದುರಿಸಲು ನಾವು ಸಿದ್ಧರೆ ?! ಎಂದು ಪ್ರಶ್ನಿಸಿಕೊಂಡರೆ ದಿಗಿಲಾಗುವಷ್ಟು ಭಯ ! ಇಲ್ಲ ಖಂಡಿತ ಇದಕ್ಕೆಲ್ಲ ಪ್ರೆಪರಶನ್ ನ ಅಗತ್ಯ ಇರುವುದಿಲ್ಲ ಬದುಕು ಬಂದಂತೆ ಎದುರಿಸುವುದಷ್ಟೇ , ನಮ್ಮ ಸಿದ್ಧತೆ ದೇಹಕ್ಕೆ ಸಂಭಂದಿಸಿರುವುದಿಲ್ಲ ಸಿದ್ಧತೆ ಮನಸ್ಸಿಗೆ ಸಂಭದಿಸಿದ್ದು , ಮಾನಸಿಕವಾಗಿ ನಾನು ಎದುರಿಸಲು ಶಕ್ತಳಾದಮೇಲೆ ತಾನೇ ದೈಹಿಕವಾಗಿ ನಮ್ಮ ದೇಹವೂ ಸಹಕರಿಸಲು ಸ್ಸಾಧ್ಯ ?

ಇಂಥ ಮಾನಸಿಕ ಸಿದ್ಧತೆ ನಮಗೆ , ಪ್ರಭುದ್ಧತೆ , ಅನುಭವ ಹಾಗೂ ಸಾಹಿತ್ಯ ಮಾತ್ರವೇ ಕೊಡಬಲ್ಲುದು! ನಮ್ಮ ಪೀಳಿಗೆಯ ಬಹು ದೊಡ್ಡ ಲಾಸ್ ಎಂದರೆ ನಮ್ಮಲ್ಲಿ ಹೆಚ್ಚಿನವರಿಗೆ ಕಷ್ಟ ಅಥವಾ ತೊಂದೆರೆ ಎಂಬ ಪದಗಳ ಡೆಫಿನಿಷನ್ ಗೊತ್ತೇ ಹೊರತು ಅದರ ಅನುಭವ ಇಲ್ಲ ! ನಮ್ಮ ಅಪ್ಪ ಅಮ್ಮ  ಕಷ್ಟ ಪಟ್ಟು ಬೆಳೆದರು ನಮ್ಮನ್ನು ಕಷ್ಟ ಪಟ್ಟು ಬೆಳೆಸಿದರು ನಾವುಗಳು ಕಷ್ಟವನ್ನು ಒಂದು ಹಂತದ ವರೆಗೆ ನೋಡುತ್ತಾ ಬೆಳೆದೆವೆ ಹೊರತು  ಅವುಗಳನ್ನು ಅನುಭವಿಸಿಲ್ಲ ! ನಮ್ಮ ಮುಂದಿನ ಪೀಳಿಗೆಯವರಿಗಂತೂ ಅನುಭವಿಸುವದಿರಲಿ  ಕಷ್ಟವನ್ನು ನೋಡುವುದು  ಸಹ ದುರ್ಲಭ ! ನಾವೆಲ್ಲ ಎಷ್ಟೊಂದು ಕಂಫರ್ಟ್ ಜೋನ್ ನಲ್ಲಿ   ಬದುಕುತ್ತಿದ್ದೇವೆ ಎಂದರೆ ಒಂಚೂರೇ ಚೂರು ನಮ್ಮ ಪರಿಧಿಯನ್ನು ವಿಸ್ತರಿಸಿಕೊಳ್ಳಲೋ ಅಥವಾ ಪರಿಧಿಯೊಳಗೆ ಇನ್ನೇನೋ ಇನ್ಯಾರನ್ನೋ ಸೇರಿಸಲೂ ಸಿದ್ಧರಿಲ್ಲ !


ತಂತ್ರಜ್ನ್ಯಾನದ ನಮ್ಮ ವಿದ್ಯಾರ್ಥಿಗಳಿಗೆ ಚೇತನ್ ಭಗತ್ ಹಾಗೂ ರವಿಂದ್ರ್ ಸಿಂಗ್ ಥರದ ಲೇಖಕರು ಅಚ್ಚು ಮೆಚ್ಚು ! ಆಫ್  ಕೋರ್ಸ್ ವಿದ್ಯಾರ್ಥಿ ಜೀವನದ ಮಧುರ ಕ್ಷಣಗಳನ್ನು , ಪ್ರೀತಿ ಪ್ರೇಮದ ಕಲ್ಪನೆಯಲ್ಲಿರುವ ಹರೆಯದ ಮನಸ್ಸುಗಳಿಗೆ ಆಪ್ತವಾಗುವಂಥ, ಒಂದಿಡೀ ತಲೆಮಾರನ್ನೇ ತಮ್ಮ ಕೃತಿಗಳೆಡೆಗೆ ಆಕರ್ಷಣೆಗೊಳಗಾಗುವಂತೆ ಮಾಡಿದವರಿವರು . ಆದರೆ ಇವರುಗಳದ್ದು ಕೇವಲ ಮನರಂಜನೆ! ಓದಿದ ನಂತರ ಒಂದು ಸಂದೇಶವೋ ಅಥವಾ ತೃಪ್ತಿ ನೀಡುವ ಬರಹಗಳಲ್ಲ ಅವು .

ಈಗಿನ ಮಕ್ಕಳು ಎಷ್ಟು ಬಿಂದಾಸ್ ಆಗಿ ತಮ್ಮ ವಿದ್ಯಾರ್ಥಿ ಜೀವನ ಸಾಗಿಸುತ್ತಾರೋ ಅದರ ತದ್ವಿರುದ್ಧವಾಗಿ ವಿಪರೀತ ಸ್ಟ್ರೆಸ್ ನಲ್ಲಿ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನ ಸಾಗಿಸುತ್ತಾರೆ . ನಾವೆಲ್ಲರೂ  ನಾವು ಅನುಭವಿಸುವ ಕಷ್ಟವೇ ಜಗತ್ತಿನೆಲ್ಲ ಕಷ್ಟಗಳಿಗಿಂತ ದೊಡ್ಡದು , ನಾವು ಪಟ್ಟಿರುವ ದುಃಖವೇ ಎಲ್ಲರ ದುಃಖಕ್ಕಿಂತ ಮಿಗಿಲಾದದ್ದು ಅನ್ನುವ ಮನುಷ್ಯ ಸಹಜ ಸೈಕಾಲಾಜಿ ಹೊಂದಿರುತ್ತೇವೆ ! ಯಾಕೆಂದರೆ ನಮಗಿಂತ ಅಥವಾ ನಮ್ಮ ತೊಂದರೆಗಳಿಗೆ ಅಲ್ಪ ಮಟ್ಟದಲ್ಲೂ ಹೋಲಿಕೆ ಇರದಂಥ ಅನೇಕ ಕಷ್ಟಗಳನ್ನು ಹೀಗೂ ಎದುರಿಸಿ ಬದುಕನ್ನು ಹೀಗೂ ಸುಂದರವಾಗಿಸಿಕೊಳ್ಳಬಹುದಾ  ಎಂದೆನಿಸುವ ಯಾವುದೇ ವ್ಯಕ್ತಿತ್ವವದ  ಪರಿಚಯವಿಲ್ಲ ! ಅಂಥ  ವ್ಯಕ್ತಿತ್ವಗಳನ್ನು ನಮ್ಮ ಕನ್ನಡ ಸಾಹಿತ್ಯ ಅನೇಕ ಕೃತಿಗಳಲ್ಲಿ ಎತ್ತಿ ಹಿಡಿದಿದೆ .

ಹೀಗೆ ನಿಜಜೀವನದಲ್ಲಂತೂ ಕಾಣ ಸಿಗದ ಇಂಥ ಅಪರೂಪ ಎನಿಸುವ ವ್ಯಕ್ತಿತ್ವವನ್ನು ಮತ್ತು ಆ ವ್ಯಕ್ತಿತ್ವದ ಸುತ್ತ ನಡೆಯುವ ಅನೇಕಾನೇಕ ವಿಚಿತ್ರ, ವಿಲಕ್ಷಣ ಸನ್ನಿವೇಶಗಳು  ಹಾಗೂ ಆ ಸನ್ನಿವೇಶಗಳನ್ನು ಎದುರಿಸುವ ಪರಿ ಎಲ್ಲವೂ ನಮ್ಮ ಜೀವನಕ್ಕೆ ಅತ್ಯುತ್ತಮ ಪ್ರೇರಣೆ! ಇಲಿ ಹೋದರೆ ಹುಲಿ ಹೋಯಿತೆಂದು ಬೊಬ್ಬೆ ಇಡುವ ನಾವುಗಳಿಗೆ " ಇಂಥವೆಲ್ಲ ನಡೆದು ಹೋಗಿರುವಾಗ ನಂದೇನು ಮಹಾ " ಎನ್ನುವ ಪ್ರಭುದ್ಧತೆ ಹಾಗೂ  ಜೀವನ ಪಾಠವನ್ನು  ನಮ್ಮ ಸುಪ್ತ ಮನಸ್ಸಿನಲ್ಲಿ ಬೇರೂರುವಂತೆ ಮಾಡಬಹುದಾದ ಏಕೈಕ ಮಾರ್ಗದರ್ಶಕ  ನಮ್ಮ ಸಾಹಿತ್ಯ ಕ್ಷೇತ್ರ !

ಎಲ್ಲರೂ ಎಲ್ಲದೂ ಒಂದು ದಿನ ನಶಿಸಿ ಹೋಗುವಂಥದೆ . ಹೇಗ್ ಹೇಗೋ ಬದುಕಿಯೂ ನಶಿಸಲೇ ಬೇಕು ! ಮೌಲ್ಯಯುತವಾದ ತತ್ವಗಳನ್ನು ಪಾಲಿಸಿಯೂ ನಶಿಸಲೇಬೇಕು ! ಆದರೆ ನಮ್ಮ ನಿರ್ಗಮನದ ನಂತರ ಮಾತಾಡುವುದು ನಮ್ಮ ಮೌಲ್ಯ ಮಾತ್ರ ! ಅಷ್ಟೇ ವ್ಯತ್ಯಾಸ .      

                     

Tuesday, April 17, 2018

ತಾಯಿಯಾಗುವುದೆಂದರೆ ತ್ಯಾಗವಲ್ಲ ಜವಾಬ್ದಾರಿ !



ಹೋಟೆಲ್ ಒಂದರಲ್ಲಿ ಸಹೋದ್ಯೋಗಿಯೊಬ್ಬರ ಔತಣ ಕೂಟವನ್ನು ಏರ್ಪಡಿಸಲಾಗಿತ್ತು ! ಆರ್ಡರ್ ಮಾಡಲಾಗಿ ಒಂದೊಂದೆ ಪದಾರ್ಥ ಬರುವಾಗ ಪುರುಷರೆಲ್ಲರೂ  ನಾಳೆ ಇಲ್ಲವೇನೋ ಎಂಬಂತೆ ತಿನ್ನುವುದರಲ್ಲೇ ಮಗ್ನರಾಗಿದ್ದರು ! ನನ್ನ ಸ್ನೇಹಿತೆ ಮಾತ್ರ ಅಯ್ಯೋ ಮಗಳನ್ನು ಡೇ ಕೇರ್ ನಲ್ಲಿ ಬಿಟ್ಟು ನಾನು ಮಾತ್ರ ಇದನ್ನೆಲ್ಲಾ ಅನುಭವಿಸ್ತಾ ಇದೀನಿ ಛೆ! ಅಂತ ಕೊರಗುತ್ತಿದ್ದಳು. ತಕ್ಷಣ ನನ್ನ ಪಿತ್ತ ನೆತ್ತಿಗೇರಿ ಕಣ್ಣು ಕೆಕ್ಕರಿಸಿ ನೋಡಿ , ಸಾಕು ವಿಶಾಲ ಹೃದಯ ತಾಯೆ ಸುಮ್ನೆ ಈ ಕ್ಷಣವನ್ನು ಹಾಳು  ಮಾಡದೇ ತಿಂದು ನಡಿ ಅಂದೆ !

ನಾ  ಹೇಳಿದ ಮಾತು ಅವಳಿಗಿಷ್ಟವಾಗಿರಲಿಲ್ಲ , ಅಸಲಿಗೆ ಅರಗಿಸಕೊಳ್ಳಲೂ ಆಗಿರಲಿಲ್ಲ , ನೀನು ಒಬ್ಬ ತಾಯಿಯಾಗಿ ಹೀಗೆ ಹೇಳಬಹುದಾ ಅಂತ ಕೇಳಿದಳು.. ನಾನು ತಾಯಿಯಾಗಿ ಹೇಳುತ್ತಿಲ್ಲ ಒಬ್ಬ ಸ್ನೇಹಿತೆಯಾಗಿ ಹೇಳುತ್ತೀನಿ ಕೇಳು.. ನಿನ್ನ ಕಳಕಳಿ ಕಾಳಜಿ ಒಪ್ಪತಕ್ಕುವಂಥದ್ದೇ ಆದ್ರೆ ಅತೀಯಾದ ಭಾವೋದ್ವೇಗ ಹಾಗು ಪ್ರತಿ ಹಂತ ಪ್ರತಿ ಕ್ಷಣದಲ್ಲೂ ನಾನು ತಾಯಿ ನಾನು ಹೀಗೇ ಇರಬೇಕು ಎಂದು ಬೇಲಿ ಹಾಕಿಕೊಂಡು ಬದುಕುವುದಿದೆಯಲ್ಲ ಅದು ತಪ್ಪು ! ನಿನ್ನ ತ್ಯಾಗ, ಕಾಳಜಿ ತಾಯ್ತನದ ಭಾಗವಾಗಿರಬೇಕೇ  ಹೊರತು ನಿನ್ನ  ಸ್ವಾತಂತ್ರ್ಯ ಹಾಗೂ  ಹೆಣ್ತನ ಕಸಿದುಕೊಳ್ಳುವ ಅಸ್ತ್ರವಾಗಬಾರದು!

ಒಂದು ಪ್ರಶ್ನೆ  ಕೇಳ್ತೀನಿ   ಬೇಜಾರಾಗಬೇಡ ಎಂದು ಪೀಠಿಕೆಯಿಟ್ಟು,  ಮರಗಿದ  ಕ್ಷಣವನ್ನು ಖಂಡಿತ ನಾನು ಗೌರವಿಸುತ್ತೇನೆ   ನಿಮ್ಮಿಂದ ದೂರದಲ್ಲಿ ಇರುವ ಮೊದಲಿನ ಲವಲವಿಕೆ   ಕಳೆದುಕೊಂಡು ಅಶಕ್ತರಾಗಿದ್ದರೂ ಯಾರ ಮೇಲು ಭಾರವಾಗದೆ ಇವತ್ತಿಗೂ ಸ್ವತಂತ್ರ ಜೀವನ ಮಾಡುತ್ತಿರವ ಅಮ್ಮನ ನೆನಪಾಯಿತೆ  ನಿಂಗೆ? ಎಂದು ಕೇಳಿದ್ದಕ್ಕೆ "ಇಲ್ಲ ಅಮ್ಮನ ನೆನಪು ಆಗಲೇ ಇಲ್ಲ!" ಎಂದಳು. ಹೀಗೆ ಇನ್ನು ಹತ್ತು ವರ್ಷಗಳ ಬಳಿಕ ನಿನ್ನ ಮಗಳು ಹೀಗೆ ಪಾರ್ಟಿ ಅಂತ ಹೊರಗಡೆ ಬಂದಾಗ ಅವಳು ನಿನ್ನ ಹಾಗೆಯೇ ಅಮ್ಮನನ್ನು ನೆನೆಸಿಕೊಳ್ಳುತ್ತಲೇ ಎಂದುಕೊಂಡೆಯ ? ನಾನು cynical ಆಗಿ ಹೇಳುತ್ತಿಲ್ಲ . ಇದು ವಸ್ತುಸ್ಥಿತಿ . ನಾವೆಲ್ಲಾ ಮಕ್ಕಳಾದ ಕೂಡಲೇ ಒಂದು ರೀತಿಯ learned ಮಷೀನ್ ಗಳಾಗಿಬಿಡುತ್ತೇವೆ.

ಮಕ್ಕಳಾಗಿದ್ದಾಗ ಪೋಷಕರಿಗಾಗಿ ಹಾಗು ನಾವು ಪೋಷಕರಾದಾಗ ಮಕ್ಕಳಿಗಾಗಿ ನಮ್ಮ  ಬದುಕನ್ನ  ಮೀಸಲಿಟ್ಟುಬಿಡುತ್ತೇವೆ . ಹಾಗಿದ್ದರೆ ನಮಗಾಗಿ ನಮ್ಮ ಬದುಕನ್ನು ಬದುಕುವುದು ಯಾವಾಗ? ನಮ್ಮ  ಪೋಷಕರ ತಲೆಮಾರಿನ ಎಲ್ಲ ಅಪ್ಪ ಅಮ್ಮಂದಿರು ನಮ್ಮ ಸಂಸ್ಕೃತಿ ಹಾಗು ಸಮಾಜದ ದೃಷ್ಟಿಕೋನದಿಂದಲೇ ಮಕ್ಕಳನ್ನು ಬೆಳೆಸಿದರು . ಅದು ಆ ಕಾಲಮಾನದ ಹಿತಾಸಕ್ತಿಯಿಂದ ಅನಿವಾರ್ಯವೂ ಹೌದಾಗಿತ್ತು! ನಾವೆಲ್ಲಾ ಯಾವುದೇ ಜಾತಿ ಧರ್ಮ  ಹಾಗೂ ಪಂಥದವರಾಗಿದ್ದರೂ  ನಮ್ಮ ಸಾಮಾಜಿಕ ಜೀವನ ಒಂದೇ ರೀತಿಯಲ್ಲಿ ನಡೆಯುತ್ತಿತ್ತು.

ಒಂಭತ್ತು ತಿಂಗಳು ಹೊತ್ತು, ಹೆತ್ತು ಮಗುವಾದ ನಂತ್ರ ಮಗುವಿನ ಉತ್ತಮ ಭವಿಷ್ಯಕ್ಕಾಗಿ ತಮ್ಮ ಭವಿಷ್ಯವನ್ನೇ ತ್ಯಾಗ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಅನೇಕ ತಾಯಂದಿರು ನನ್ನ ಸ್ನೇಹಿತರ ಪಟ್ಟಿಯಲ್ಲಿದ್ದಾರೆ . ಅದು ಅವರವರ ವೈಯಕ್ತಿಕ ನಿರ್ಧಾರ ! ಆದರೆ ನನಗೆ ಈ ತ್ಯಾಗ ಎನ್ನುವ ಪದವೇ ಒಂದು ಹೊರೆಯಂತೆ ಗೋಚರಿಸುತ್ತದೆ. ಈ ತ್ಯಾಗ ಎನ್ನುವುದು ಯಾವಾಗ ನಿರೀಕ್ಷೆಯಾಗಿ  ಪರಿವರ್ತನೆ ಹೊಂದುತ್ತದಯೆಯೋ ಆವಾಗ ಅದು ಮನುಷ್ಯನ ಯೋಚನಾ ಲಹರಿಯನ್ನು ಅಲ್ಲೋಲ್ಲ   ಕಲ್ಲೋಲ ಮಾಡಿಬಿಡುತ್ತದೆ .. ನೀವು ನಿಮ್ಮ ಮಕ್ಕಳಿಗಾಗಿ ತ್ಯಾಗ ಮಾಡಿದಿದಿರಾ ಮನಸಾರೆ  ಮಾಡಿದಿರಾ?ಫೈನ್ ಯು deserve  applause ! ನೀವು ನಿಮ್ಮ ಮಗು ನೀವು ಹೇಳಿದಂತೆ ಕೇಳಬೇಕು ನಿಮ್ಮ ಈಡೇರದ ಆಸೆ ಆಕಾಂಕ್ಷೆಗಳನ್ನು ಮುಂದೊಂದು ದಿನ ನೆರವೇರಿಸಬೇಕೆಂದು ಆಸೆ ಇಟ್ಟುಕೊಂಡು ತ್ಯಾಗ ಮಾಡಿದಿರಾ ? ಹಾಗಿದ್ದರೆ ನಿಮ್ಮ ತ್ಯಾಗ ಹಾಗೂ ಕಷ್ಟಗಳಿಗೆ ಬೆಲೆಯಿಲ್ಲ ! ಇದು ಪ್ರಕೃತಿ ನಿಯಮ !

ಈ ಅತಿಯಾದ ತ್ಯಾಗ ಎನ್ನುವ ಪದವನ್ನು ಬಳಸುವದು ನಾವು ಭಾರತೀಯರು ಮಾತ್ರ ! ಹಾಗೂ ಮಕ್ಕಳು ನಮ್ಮ ಈ ತ್ಯಾಗಗಳನ್ನು ನಿರಂತರ ಸ್ಮರಿಸುತ್ತ ನಮ್ಮನ್ನು ಕಡೆಗಣಿಸಬಾರದು ಎಂಬ ಅಲಿಖಿತ ನಿಯಮವನ್ನು ಹೊಂದಿರುವವರು ಕೂಡ ನಾವುಗಳು ಮಾತ್ರ !

ಪಾಶ್ಯಾತರಲ್ಲಿ ನಮ್ಮಷ್ಟು ಗೊಂದಲಗಳಿಲ್ಲ, ಅವರ ಬದುಕು ನೀರಿನಂತೆ  ತಿಳಿ ಹಾಗೂ ಸರಳ.... ! ಮಗು ಆದ ಕೂಡಲೇ ಅದಕ್ಕೊಂದು ಪ್ರತ್ಯೇಕ ತೊಟ್ಟಿಲು, ಸ್ವಲ್ಪ ನಡೆದಾಡುವಂತಾದ ಕೂಡಲೇ ಪ್ರತ್ಯೇಕ ಕೋಣೆಯಲ್ಲಿ ಮಲಗಲು ಅಭ್ಯಾಸಿಸುತ್ತಾರೆ . ಮಗುವಿಗಾಗಿ ಅವರೆಂದು ತಮ್ಮ ವೈಯಕ್ತಿಕ ಜೀವನ ಹಾಗೂ ಬದುಕನ್ನು ಬದಲಾಯಿಸಿಕೊಳ್ಳುವುದಿಲ್ಲ  ಬದಲಾಗಿ ಮಗುವನ್ನೇ ತಮ್ಮ ಅಗತ್ಯಕ್ಕೆ ತಕ್ಕನಾಗಿ ಹೊಂದಿಕೊಳ್ಳುವಂತೆ ಬೆಳೆಸುತ್ತಾರೆ !

ನಮ್ಮಲ್ಲಿ ಮಗು ಆದ ಕೂಡಲೇ ಅದು ಅಪ್ಪ-ಅಮ್ಮನ ಮಧ್ಯೆ ಬಂದು ಮಲಗುವದೂ ಒಂದು ಪೋಷಕರ ಅಲಿಖಿತ ನಿಯಮದಲ್ಲೊಂದು ! ಅಲ್ಲಿಗೆ ಗಂಡ ಹೆಂಡತಿಯ ಮಿಲನದ ತ್ಯಾಗ ! ಯಾವಾಗ ಮಗುವಿಗೆ ಸ್ವಲ್ಪ ತಿಳುವಳಿಕೆ ಬಂದು ಓಡಾಡಲು ಶುರು ಮಾಡುತ್ತದೆಯೋ ಆಗ ಗಂಡ ಹೆಂಡತಿ ಮಗುವಿನ ಮುಂದೆ ತಬ್ಬುವುದಾಗಲಿ ಮುತ್ತಿಡುವುದಾಗಲಿ ನಿಷೇಧ . ಅಲ್ಲಿಗೆ ರಸಿಕತೆಯ ತ್ಯಾಗ !
ಮಗು ಶಾಲೆಗೆ ಹೋಗುವಂತಾದಾಗ ಅದರ ಆಗು ಹೋಗು ಹೋಂ ವರ್ಕ್ ಮಾಡಿಸಲು ತಾಯಿ ತನ್ನ ಕೆಲಸಕ್ಕೆ ರಾಜೀನಾಮೆ ಕೊಡುವ ತ್ಯಾಗ ! ಮಗುವಿನ ರಜೆಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತು ಇನ್ನೊಂದುಸಲ ಮೊದಲನೇ ತರಗತಿಯಿಂದ ೧೦ನೇ ತರಗತಿಯವರೆಗೆ ಅಭ್ಯಾಸ ಮಾಡಲು ತನ್ನ ಹವ್ಯಾಸಗಳನ್ನು ಬದಿಗಿಡುವ ತ್ಯಾಗ! ಗಂಡ ಹೆಂಡತಿ ಮಗುವನ್ನು ಬಿಟ್ಟು  ಪ್ರತ್ಯೇಕವಾಗಿ ಸುತ್ತಾಡುವುದು ಪ್ರವಾಸ ಮಾಡುವುದು ಅಲಿಖಿತ ಅಪರಾಧ ಪಟ್ಟಿಗಳಲ್ಲೊಂದು !

ಇಷ್ಟೆಲ್ಲಾ ತ್ಯಾಗಗಳ ಮಧ್ಯೆ ಮಗು ೧೬ ತುಂಬಿ ಕಾಲೇಜು ಮೆಟ್ಟಿಲೇರಲು ತಯಾರಿ ನಡೆಸುವಾಗ " ಅಯ್ಯೋ ಹದಿನೈದು ವರ್ಷ ಕಳೆದು ಹೋಯಿತು ನನಗಾಗಿ ನಾನೇನೂ ಮಾದ್ಲಿಲ ಎಂದು ಕನ್ನಡಿ ಮುಂದೆ ನಿಂತು ತನ್ನ ಸ್ಥೂಲ ಕಾಯ ಹಾಗೂ ನೆರೆತ ಕೂದಲು, ನೆರಿಗೆ ಬಿದ್ದ ಮುಖ ನೋಡಿ ತಾಯಿ ಅನ್ನಿಸಿಕೊಂಡ ಅಮ್ಮನಿಗೆ  ಮಗಳಿಂದ " ಅಮ್ಮ ನೀನು ಸರಿಯಾಗಿ ಮೇಂಟೈನ್  ಮಾಡಿಲ್ಲಕೊಂಡಿಲ್ಲ, ನೋಡು ಎಷ್ಟು ವಯಸ್ಸಾದಂತೆ ಕಾಣುತ್ತಿ  " ಎಂಬ ಹಿತವಚನ ! ಇಷ್ಟು ವರ್ಷ ಯಾರಿಗಾಗಿ ಎಲ್ಲವನ್ನು ತ್ಯಾಗ ಎಂದುಕೊಂಡು ನಿಮ್ಮತನವನ್ನು ಮರೆತುಬಿಟ್ಟಿರೋ ಅವರೇ ನಿಮ್ಮನ್ನು ಪ್ರಶ್ನಿಸಲು ಹಾಗೂ ಉಪದೇಶ ಕೊಡಲು   ಶುರು ಮಾಡಿದಾಗ , ಒಂದೊಂದೇ ತ್ಯಾಗ ಬಂದು  ಅಣಕಿಸಲು ಶುರು ಮಾಡುತ್ತದೆ !

ಹೌದು ಇದನ್ನೆಲ್ಲಾ ನಮ್ಮ ಅಮ್ಮನ ತಲೆಮಾರಿನವರು ಮಾಡಿರಬಹುದು , ನಮ್ಮ ಜನರೇಶನ್ ತುಂಬಾ ಪ್ರಾಕ್ಟಿಕಲ್  ಎಲ್ಲವನ್ನು ಅಳೆದು ತೂಗಿ ಮಾಡುತ್ತೇವೆ  ಎಂದು ಹೇಳುವ ನಾವುಗಳು ನಮ್ಮ ಅಮ್ಮನ , ಅಜ್ಜಿಯ  ಯೋಚನಾ ಲಹರಿ ಹಾಗೂ ನಡವಳಿಕೆಯನ್ನು ನಮಗೆ ಗೊತ್ತಿಲ್ಲದೇ ನಮ್ಮ ಕ್ರೋಮೋಸೋಮ್ ಗಳಲ್ಲಿ ಹೊತ್ತು ತಂದಿರುತ್ತೇವೆ, ಅಮ್ಮನಂತಲ್ಲದಿದ್ದರೂ ಅಮ್ಮನ ಕೆಲವು ಅಂಶಗಳನ್ನು ನಾವು ಹೊಂದಿರಲೇ ಬೇಕಲ್ಲವೇ ?!

ನಾವೆಂದು ಮಕ್ಕಳಿರುವಾಗ ಅಮ್ಮನಿಗೆ ಹೀಗೆಲ್ಲ ತ್ಯಾಗ ಮಾಡಿ ನಮ್ಮನ್ನು ಬೆಳೆಸು ಎಂದು ಹೇಳಿರಲಿಲ್ಲ , ಈಗ ಮುಂದೆ ನಮ್ಮ ಮಕ್ಕಳು ನಮ್ಮಿಂದ ಅದನ್ನು ನಿರೀಕ್ಷಿಸುವುದೂ ಇಲ್ಲ! ಇಷ್ಟೆಲ್ಲಾ ಮಾಡಿದ ಅಮ್ಮ ಈಗ ಇಳಿಸಂಜೆಯ ವಯಸ್ಸಿನಲ್ಲಿದ್ದರೂ ಅವಳೆಂದಿಗೂ ಕ್ರಿಯಾಶೀಲ ವ್ಯಕ್ತಿ ! ಅವಳನ್ನು ಪ್ರೀತಿಸಿಯೂ ನಾವೆಂದೂ ಅವಳನ್ನು ಅವಳ ತ್ಯಾಗಕ್ಕಾಗಲೀ , ನಿಸ್ವಾರ್ಥ ಪ್ರೀತಿಗಾಗಲಿ ಧನ್ಯತೆಯಿಂದ ನೆನೆಸುವದಿಲ್ಲ! ತಾಯಿಯಾಗಿರುವ ನಮಗೆಲ್ಲರಿಗೂ ನಮ್ಮ ತಾಯಿಗಿಂತ ಮಗಳೇ ಹೆಚ್ಚಿನ ಪ್ರಿಯೋರಿಟಿ . ಅಲ್ಲೆಲ್ಲೋ ದೂರ ನಿಂತು ಮೂಕ ಪ್ರೇಕ್ಷಕಿಯಾಗಿರುವ ಅಮ್ಮ ನಸುನಕ್ಕು ಹೇಳುತ್ತಾಳೆ , ತಾಯಿಯಾಗುವುದೆಂದರೆ ತ್ಯಾಗವಲ್ಲ ಜವಾಬ್ದಾರಿ !

ನಮ್ಮ ತ್ಯಾಗಗಳು ನಮಗೆ ಫಲ ಕೊಡದೆ ಇರಬಹುದು ಆದರೆ ಜವಾಬ್ದಾರಿಗಳು ನಮಗೆ ಬದ್ಧತೆಯನ್ನು ಕಲಿಸುತ್ತವೆ . ಎಲ್ಲರೂ ಎಲ್ಲವೂ ಶೇಷ್ಠವಾಗಬೇಕಿಲ್ಲ ಹಾಗೂ ಅಸಾಧಾರಣ ಎನಿಸಿಕೊಳ್ಳಬೇಕಿಲ್ಲ . ಸಾಧಾರಣವಾಗಿದ್ದುಕೊಂಡೇ ವಿಶೇಷರಾಗಿರೋಣ ! ಶ್ರೇಷ್ಠತೆಗೆ ಎಲ್ಲರನ್ನೂ ಮೆಚ್ಚಿಸುವ ಹಂಬಲವಿದೆ ವಿಶೇಷತೆಗೆ ಆ ಕಟ್ಟುಪಾಡುಗಳಿಲ್ಲ ನಮಗೆಲ್ಲ ಜವಾಬ್ದಾರಿಯುತ ಪೋಷಕರಾಗುವ ಅಗತ್ಯತೆ ಇದೆಯೇ ಹೊರತು ತ್ಯಾಗದ ಅನಿವಾರ್ಯತೆ ಇಲ್ಲ !

ಚಿಕ್ಕ ಪುಟ್ಟ ತ್ಯಾಗ ಹಾಗೂ ಹೊಂದಾಣಿಕೆ ಜೀವರಾಶಿಯ ಪ್ರತಿ ಜೀವಿಯಲ್ಲಿಯೂ ಇದೆ . ಅದು ನಮ್ಮ ಬದುಕಿನ ಒಂದು ಸಣ್ಣ ಭಾಗವೇ ಹೊರತು ಅದೇ ಜೀವನವಲ್ಲ! , ನಮ್ಮನ್ನು ನಾವು ಪ್ರೀತಿಸುವಂತಾಗೋಣ , ಜೀವನ್ಮುಖಿಗಳಾಗೋಣ !