Total Pageviews

Thursday, June 18, 2020

ದೂರ ತೀರ ಯಾನ....

  ಬೆಳಗ್ಗೆ ಏಳು , ಹಲ್ಲುಜ್ಜು , ಸ್ನಾನ ಮಾಡು , ತಿಂಡಿ ತಿನ್ನು ಕರೆಕ್ಟ್ ಸಮಯಕ್ಕೆ  ಕ್ಲಾಸಿಗೆ ಹೋಗು... ಇದು ಪ್ರತಿನಿತ್ಯದ ದಿನಚರಿ. ಇದರಲ್ಲಿ ಬದಲಾವಣೆಗಳು ಸಾಧ್ಯವೇ ಇಲ್ಲ. ಬದಲಾವಣೆ ಮಾಡಹೊರಟರೂ  ಅದು ಒಂದೋ ಎರೆಡೋ  ದಿನಕ್ಕಾಗುವ ಬದಲಾವಣೆಯೋ ವಿನಃ ದಿನಚರಿ ಆಗಲೊಲ್ಲದು.

ಹೀಗೆ ದಿನ ಪೂರ್ತಿ ಮಾಡಿದ್ದನ್ನೇ  ಮಾಡುತ್ತ , ಕೇಳಿದ್ದನ್ನೇ ಕೇಳುತ್ತ, ಅದೇ ಮನೆ, ಅದೇ ಕಾಲೇಜು ,ಅದೇ ಕಚೇರಿ  ಅದೇ ಜನ, ಅದೇ ಸಮಾಜ ಎಂಬ ನಿಯಮಿತ ಪರೀಧಿಯೊಳಗೆ ಸಾಗುತ್ತಿರುತ್ತದೆ ನಮ್ಮ ಜೀವನ ಗುಟ್ಟುಗಳಲ್ಲಿ ಹಾಗೂ ವಿಫಲ ರಟ್ಟುಗಳಲ್ಲಿ !

 ನಾವೇ ನಮ್ಮ ಅನುಕೂಲಕ್ಕಾಗಿ ನಿರ್ಮಿಸಿಕೊಂಡ ಸಮಾಜ, ಅದರ ಕಟ್ಟುಪಾಡುಗಳು ಏನೋ ಇದೆಲ್ಲ ಗೋಪಿ , ನನಗೊಬ್ಬನಿಗೆ ಹೀಗೆ ಅನ್ಸೋದ ಅಥವಾ ನಿಂಗೂ ಹಿಂಗ ಆಗುತ್ತ ?! ಸಾಕು  ಸುಮ್ನಿರಪಾ  ನಿನ್ನ ನಂಬಿಕೊಂಡು ಒಂದ್ಸಲ ನಿನ್ ಜೊತೆ ನಾನು ಅವನಲ್ಲ ಅವಳು ಫಿಲಂ ನೋಡಿದ್ದಕ್ಕೆ ಅಮ್ಮ ನಂಗೆ ಬಾಸುಂಡೆ ಬಾರೋ ಹಾಗೆ ಬಾರ್ಸಿದ್ಲು ಗೊತ್ತಲ್ವ ?! ದುಡ್ಡಿರೋರು ನೀವೆಲ್ಲ ಏನಂದ್ರು ನಡೆಯುತ್ತೆ ಏನ್ ಮಾಡಿದ್ರು ನಡೆಯುತ್ತೆ ಅಸಲಿಗೆ ಯಾಕೆ ಅಂತ ಕೇಳುವ ತಾಕತ್ತೇ ಯಾರ್ಗೂ ಇಲ್ಲ, ಯಾರ್ಗೂ ಗೊತ್ತಾಗದ ಹಾಗೆ ನ್ಯೂಮೆರೊಲೊಜಿ ಮಣ್ಣು ಮಸಿ ಅಂತ ದೀಪಕ್ ಅನ್ನೋ ಹೆಸರನ್ನೇ ದೀಪ್ ಮಾಡಿಕೊಂಡ ನೀನು ,ಸಮಾಜ ,ಶಾಸ್ತ್ರ ಅಂತ ಮಾತಾಡ್ತೀಯಾ? ಬಿಡು ಇಲ್ಲಿಗೆ ಇದನ್ನೆಲ್ಲ ಕೆಲಸಕ್ಕ್ ಬರೋದನ್ನ ಮಾಡು , ಮಾಡ್ಲಿಲ್ಲ ಅಂದ್ರೂ ತೊಂದ್ರೆ ಇಲ್ಲ ಬಿಡು ನಂಗೆ ಮಾತ್ರ ಬದುಕಲು ಬಿಟ್ಟಬಿಡು ! ಇದೆಲ್ಲ ನಂಗಾಗೋ ಕೆಲಸ ಅಲ್ಲ...ಎಂದು ರಾತ್ರಿ ಕಂಬೈನ್ ಸ್ಟಡಿ ಮಾಡಲು ಹೋಗಿದ್ದು, ಓದೋದನ್ನ ಬಿಟ್ಟು ಇನ್ನೆಲ್ಲ ಮಾಡಿದ್ದಾಯ್ತು, "ಹಿಂಗೇ ಆದ್ರೆ ನಾನು ಇಂಜಿನಿಯರ ಆದ ಹಾಗೆ!ನಾ ಮನೆಗ್ ಹೋಗ್ಬೇಕು ಇನ್ಯಾವತ್ತೂ ಬರಲ್ಲ ಇಲ್ಲಿ" ಎಂದು ಹೊರಡಲು ಅಣಿಯಾದ ಗೋಪಿ

ಲೋ ದಡ್ದ ಅದು ಹಂಗಲ್ಲ ಒಂದು ಸಿಗಾರ್ ಹೊಡೆಯಣ ಬಾ ಇಲ್ಲಿ , ನೋಡು ನಮಗೇನು ಅನ್ಸುತ್ತೋ ಅದನ್ನೇ ಮಾಡಿ ನಿಮಗ್ ಖುಷಿ ಕೊಡದನ್ನೇ ಹಿಂಬಾಲಿಸಿ ಅಂತ ಕನ್ನಡ ಮಾಷ್ಟ್ರು ಲೆಕ್ಚರ್ ಕೊಟ್ರ ಇಲ್ವಾ? ದೀಪಕ್ , ಗೋಪಿಯ ಹೆಗಲ ಮೇಲೆ ಕೈ ಹಾಕಿ ಸಮಾಧಾನ ಹೇಳಲು ಹೋಗಿದ್ದು ಫಲ ಕೊಡಲಿಲ್ಲ.  "ಅದಕ್ಕೂ ಇದಕ್ಕೂ ಸಂಭಂದ ಇಲ್ಲ" ಗೋಪಿ ಸಿಟ್ಟಲ್ಲಿ ಹೇಳಿದ ... "ಇದೆ ಕಣೋ ನಮ್ಮ ದೇಶ ನಮ್ಮ ಸಮಾಜ ಹೆಂಗೆ ನಿರ್ಮಿಸಲ್ಪಟ್ಟಿದೆ ಅಂದ್ರೆ ಯಾವನೋ ಏನೋ ರೂಲ್ಸು ಮಾಡಿ ಗೊಟಕ್ ಅನ್ನೋದು ನೇಣ್ ಹಾಕೋ ಪರಿಸ್ಥಿತಿ ಬಂದ್ರೂ ಅದನ್ನು ಚಾಚೂ ತಪ್ಪದೆ ಪಾಲ್ಸಿ ನೇಣ್ ಹಾಕೊಳ್ಳೋ ನಮ್ಮ ಜನರು , ಅವರು ಮಾಡಿದ್ದು ಸರಿ , ಅವರ ಸಂಪ್ರದಾಯ ಸರಿ, ಅವರ ಲೈಂಗಿಕತೆನೇ ಸರಿ ಅಂತ ವಾದ ಮಾಡಿ ಸಾಯ್ತಾವೆ ! ಅಮೇರಿಕಾ ಇಂಗ್ಲೆಂಡ್ ನಲ್ಲಿ ಗೇ ಮ್ಯಾರೇಜ್ ಎಲ್ಲ ಕಾಮನ್ ಮಗಾ ! ನಮ್ಮುವುಕ್ಕೆ ಅದೊಂದು ಅಪರಾಧ. ಸರಿ ತಪ್ಪು ಅವರವರ ಮನಸಿನ ಭಾವನೆ ಮತ್ತು ಆ ಭಾವನೆ ಮೂಡಿಸಿದ ಸಮಾಜದ ಮೇಲೆ ನಿರ್ಧರಿತವಾಗಿರುತ್ತದೆ ! ಇವತ್ತಿಗೂ ನಿಂಗೆ ಇಷ್ಟ ಇಲ್ಲ ಅಂದ್ರೆ ನಾನು , ನಿನ್ನ ಒತ್ತಾಯ ಪೂರ್ವಕವಾಗಿ ಇಟ್ಕೊಳ್ಳೋಕೆ ಆಗೋದಿಲ್ಲ, ನೀನು ಸಮಾಜ ಅಂತ ಅಂಜಿಕೊಂಡು ನಿನ್ನ ಆಸೆಗಳನ್ನು , ಮನದ ಬೇಡಿಕೆಗಳನ್ನು ಕೊಲ್ಲಬೇಕು ಅಂತ ನಿರ್ಧರಿಸಿದ್ದರೆ ಕೊಂದುಕೊ ಅದಕ್ಕಾಗಿ ಇನ್ನೊಬ್ಬ ಹುಡುಗಿಯ ಜೀವನ ಹಾಳು...... " ಎನ್ನುವಷ್ಟರಲ್ಲಿಯೇ ಸಿಟ್ಟಿನಲ್ಲಿ ಬಾಗಿಲನ್ನು, ರಪ್ ಅಂತ ಎಳೆದುಕೊಂಡು ಹೊರನಡೆದ ಗೋಪಿ.

ದಾರಿಯಲ್ಲಿ ನಡೆದು ಹೋಗುವಾಗ ,ಮನೆಯಲ್ಲಿ ಕಾಯಿಲೆ ಬಿದ್ದಿರುವ ಅಜ್ಜಿ, ಅಪ್ಪನಿಗಾಗಿ ಒಂದು ಕಿಡ್ನಿ ದಾನ ಮಾಡಿ, ಕೊನೆಗೂ ಅಪ್ಪನನ್ನು ಉಳಿಸಿಕೊಳ್ಳಲಾಗದೆ ಹೋದ ನತದೃಷ್ಟ ಹೆಂಡತಿ ನಾನು, ಎಂದು ದಿನಾ  ಶಪಿಸಿಕೊಂಡು ಅಡುಗೆ ಮಾಡುವ ಅಮ್ಮನನ್ನು ನೋಡಿ ಒಂದು ಸಲ ಪಾಪ ಪ್ರಜ್ಞೆ ಬಂದು ,ಕೆನ್ನೆ ತಟ್ಟಿ  ಹೋದ ಹಾಗೆ ಆಯ್ತು! ನಾನು ಓದಿ ಒಳ್ಳೆಯ ಕೆಲಸ ಸೇರಿ ಮನೆ ಸಾಲ ತೀರ್ಸಿ, ಅಮ್ಮನಿಗೊಂದು ಒಳ್ಳೆಯ ಜೀವನ ಕೊಡಬಹುದು ಅಂತ ಅಪ್ಪ ಇರುವಾಗಲೂ ಬಯಸಿದ್ದಳು ಅಮ್ಮ ! "ನಾನೀಗ ಓದುವುದನ್ನು ಬಿಟ್ಟು ಇನ್ನೇನೋ ಮಾಡಿಕೊಂಡು ಓಡಾಡ್ತಾ ಇದೀನಿ ಅಸಹ್ಯ" ಎಂದು ತನ್ನನ್ನು ತಾನೇ ಹಳಿದುಕೊಂಡು, ಮನೆ ತಲುಪಿ  ಮತ್ತೆ ಓದಲು ಕುಳಿತುಕೊಳ್ಳುತ್ತಾನೆ ಗೋಪಿ !

ಬಿಟ್ಟರೂ ಬಿಡದೀ ಮಾಯೆ ಅನ್ನುವ ಹಾಗೆ, ಎರಡು ಪುಟಗಳನ್ನ ತಿರುವಷ್ಟರಲ್ಲಿ ದೀಪಕ್ ಕಾಡಲು ಶುರು ಮಾಡುತ್ತಾನೆ ! ಥತ್  ಹಾಳಾದ್ದು ಓದಕ್ಕೆ ಆಗ್ತಿಲ್ಲ ಅಂತ ಪುಸ್ತಕ ಮುಚ್ಚಿಟ್ಟು , ಪಡಸಾಲೆಯಲ್ಲಿ ಅಜ್ಜಿಯ ಪಕ್ಕ ಬಂದು ಮಲಗುವ ನಾಟಕ ಮಾಡಿದರೂ, ನೆನ್ನೆ ರಾತ್ರಿ ಕುಡಿದ ಮತ್ತಿನಲ್ಲಿಯೇ ಎಲ್ಲವೂ ನಡೆಯಲಿಲ್ಲ ಆದರೂ ನಾನ್ಯಾವುದಕ್ಕೂ ಪ್ರತಿರೋಧ ಒಡ್ಡಲಿಲ್ಲ ಅಂದ್ರೆ ನನಗೂ ಅವನು ಮಾಡಿದ್ದೆಲ್ಲ ಇಷ್ಟ ಅಂತಲೇ ಅರ್ಥ ಅಲ್ವ ? ಕಾಲೇಜು ಅಂದ್ರೆ ಸುಂದರ ಹುಡುಗೀಯರನ್ನು ನೋಡಬಹುದು ಅಂತ ಹೇಳುವ ಹುಡುಗರ ಮಧ್ಯೆ ನನಗೆ ಮಾತ್ರ ದೀಪಕ್ ಮೋದಲ ನೋಟಕ್ಕೆ ಇಷ್ಟ ಆಗಿ ಬಿಟ್ಟಿದ್ದ, ಗಂಡು ಹೆಣ್ಣನ್ನು ಮಾತ್ರ ಇಷ್ಟ ಪಡಬೇಕು ಅಂತ ಕಾನೂನೇ ಇರುವಾಗ ನಾ ಹೇಗೆ ಧೈರ್ಯ ಮಾಡಿ ಅವನ ಹತ್ತಿರ ಹೋಗಿ ನನ್ನ ಇಷ್ಟ ಹೇಳಿಕೊಳ್ಳೋದು ಅಂತ ಮನಸ್ಸಿನಲ್ಲೇ ಕೊರಗುವಾಗ ಅವನೇ ಬಂದು ನನ್ನ ಪಕ್ಕ  ಕೂತು ನನ್ನನ್ನು  ಇಷ್ಟೊಂದು ಹಚ್ಚಿಕೊಂಡು ಬಿಟ್ಟಿದ್ದಲ್ಲದೇ  ನನಗೆ ಗೊತ್ತಿಲ್ಲದೇ, ನನ್ನ ಇಡೀಯಾಗಿ ಆವರಿಸಿದ !
to be continued.....

"ದಿ ಪ್ಲೇಗ್ " ಇಂದಿನ ಕೋವಿಡ್ -೧೯ ಸಾಂಕ್ರಾಮಿಕ ರೋಗದ ವಿರುಧ್ಧದ, ಹೋರಾಟಕ್ಕೆ ಸೂಕ್ತ ಒಳನೋಟ ಕಲ್ಪಿಸುತ್ತದೆ !

ಫ್ರೆಂಚ್ ತತ್ವಜ್ಞಾನಿ ,ಆಲ್ಬರ್ಟ್ ಕ್ಯೆಮೂ- "ದಿ ಪ್ಲೇಗ್ ": ಜಗತ್ತಿನ ಎಲ್ಲ ದುಷ್ಟ ಶಕ್ತಿಗಳಿಂದ ಸಾಧ್ಯವಾಗಬಹುದಾದ ಹಾನಿ ಎಷ್ಟು ಕಠೋರವೋ , ಅಷ್ಟೇ ಕಠೋರ ಹಾನಿ , ಪ್ಲೇಗ್ ಎಂಬ ಪಿಡುಗು ಸಹ ಮಾಡಬಲ್ಲದು " ಇದು ಮನುಷ್ಯರನ್ನು ತಮ್ಮ ಶಕ್ತಿಗೂ ಮೀರಿ ಬೆಳೆಯುವಂತೆ ಪ್ರೇರೇಪಿಸುತ್ತದೆ...... ಈ ಅಂಟುರೋಗದಿಂದ ನಾವು ನಿಜವಾಗಿಯೂ ಕಲಿಯಬೇಕಾಗಿರುವುದೇನೆಂದರೆ, ನಾವು ಅಲಕ್ಷಿಸಬಹುದಾದ ಜನರಿಗಿಂತ, ಈ ಭುವಿಯಲ್ಲಿ ಜಗವೇ ಮೆಚ್ಚುವ೦ಥ  ಅನೇಕ ಜನರಿದ್ದಾರೆ!

ಕೆಮುವಿನ ಕಾದಂಬರಿ "ದಿ ಪ್ಲೇಗ್ " ಇಂದಿನ  ಕೋವಿಡ್ -೧೯ ಸಾಂಕ್ರಾಮಿಕ  ರೋಗದ  ವಿರುಧ್ಧದ, ಹೋರಾಟಕ್ಕೆ ಸೂಕ್ತ ಒಳನೋಟ ಕಲ್ಪಿಸುತ್ತದೆ ! 

" ಈ ಅನಿರ್ದಿಷ್ಟ ದುರದೃಷ್ಟಕರ ಕಾಲಮಾನ ಏಕತಾನತೆಯಿಂದ ನರಳುವಂತೆ ಮಾಡುವುದಲ್ಲದೇ ಮಾನಸಿಕವಾಗಿ ನಮ್ಮನ್ನು ಕುಗ್ಗಿಸುತ್ತದೆ. ತಗ್ಗಿಸಲಾಗದ ಬೆಂಕಿಯಂತೆ ಮೇಲುನೋಟಕ್ಕೆ ಕಂಡುಬಂದರೂ , ಪ್ಲೇಗ್ ನಂತಹ ಮಾರಿಯನ್ನು ಸಹ ಗೆದ್ದವರ ನೆನಪಿನೊಂದಿಗೆ, ಹೆಜ್ಜೆ ಹೆಜ್ಜೆಗೂ ಅತಿರೇಕದ ರಕ್ಕಸನಂತೆ,ವಿವರಿಸಲಾಗದ ಹಿಂಸೆ, ಸಾವು ,ನೋವು, ಹತಾಶೆಯನ್ನು  ಕೊಟ್ಟ  ಈ ಕಾಯಿಲೆ ಈಗ ಇತಿಹಾಸದ ಪುಟಗಳಲ್ಲಿನ ಕರಾಳ ಅಧ್ಯಾಯ! ಈ ಸ೦ವೇದನಾಶೀಲ ಜಾಡ್ಯದ ಮುಂದೆ ಇನ್ನೆಲ್ಲವೂ ಗೌಣವೆಂಬಂತೆ ಕಾಣುವಂತೆ ಮಾಡಿರುವುದು ಅಕ್ಷರಶಃ ನಿಜ. "ಆಲ್ಬರ್ಟ್ ಕ್ಯೆಮೂ- "ದಿ ಪ್ಲೇಗ್ "-ಪುಟ ೧೭೯

ಕಾಲ್ಪನಿಕ ಕಾದಂಬರಿಯಾದರೂ, ೨ ಲಕ್ಷ ಜನಸಂಖ್ಯೆ ಇರುವ , ಉತ್ತರ ಆಫ್ರಿಕಾದ ಓರಾನ್ ಎಂಬ ಪಟ್ಟಣದಲ್ಲಿ ,ಜನ ಇದನ್ನು ತಡೆಯುವಲ್ಲಿ ಹೇಗೆ ಮಾನಸಿಕವಾಗಿ ತೈಯಾರಿ ನಡೆಸುತ್ತಿದ್ದರು , ಹಾಗೂ ಭಾವನಾತ್ಮಕವಾಗಿ ಎಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬುದನ್ನು ಕ್ಯೆಮೂ ತನ್ನ ವಿಚಾರದ ಮೂಲಕ, ಹಾಗೂ ಪಾತ್ರಗಳ ಮುಖಾಂತರ, ಸಂಭಾಷಣೆಗಳಲ್ಲಿ, ಮನುಕುಲದ ಅಸ್ತಿತ್ವವನ್ನು ಅಣುಕಿಸುವ ಅನಿಶ್ಚತತೆಯನ್ನು ಎಳೆ ಎಳೆಯಾಗಿ ವಿವರಿಸುತ್ತಾನೆ. 

ಹಾಗೆ ಹೋಲಿಸುವುದಾದರೆ  ಕ್ಯೆಮೂವಿನ ಪ್ಲೇಗ್ ಗೂ  ಹಾಗೂ ಕೋವಿಡ್ -೧೯ ಕೊರೋನಾ ಅಂಟುರೋಗಕ್ಕೂ ತುಂಬ ವ್ಯತ್ಯಾಸವಿದೆ . ಮೊದಲನೆಯದಾಗಿ ಪ್ಲೇಗ್ ಎರಡನೇ ಮಹಾಯುದ್ಧದ ಮುಂದುವರೆದ ಭಾಗದಂತೆ ಜನರನ್ನು ಕಾಡಿತ್ತು , ೭೦ ವರ್ಷದ  ಹಿಂದೆ ,ಈಗಿರುವ ವೈದ್ಯಕೀಯ ಸವಲತ್ತಾಗಲಿ, ಔಷಧವಾಗಲೀ ಇಲ್ಲದ ಕಾಲದಲ್ಲಿ ಸಮುದಾಯದ ನಾಮಾವಶೇಷ ಸಿಗದಂತೆ ಮಾಡಿದ್ದಲ್ಲದೇ, ಕುಟುಂಬ ನಡೆಸುವ ಆಧಾರ  ಸ್ಥ೦ಭವಾಗಿರುವ ಪುರುಷರನ್ನೇ ಹೆಚ್ಚಾಗಿ ಬಲಿ ತೆಗೆದುಕೊಂಡಿತ್ತು!

ದಿ ಪ್ಲೇಗ್ ನ ಮೂಲ ವಿಷಯ ಮನುಕುಲದ ಸಂಘರ್ಷವೇ ಆಗಿದ್ದರೂ, ಆಗಿನ ಕಾಲಕ್ಕೆ ನಮ್ಮ ಇಂದಿನ ಪರಿಸ್ಥಿತಿಗೂ ಹೋಲಿಕೆಯಾಗುವಂತೆ ಬೆಲೆ ಏರಿಕೆ ಹಾಗೂ ಹಾಹಾಕಾರದಿಂದ ಉಂಟಾಗುವ ಅಭಾವಗಳ ಉಲ್ಲೇಖ ಮಾಡಲಾಗಿದೆ. ಇವತ್ತಿಗೆ ಕೇಳುತ್ತಿರವ ಮಾಸ್ಕ ಹಾಗೂ ಸ್ಯಾನಿಟೈಜರ್ಗಳ  ಕೊರತೆಯನ್ನು  ಹಾಗೂ ಭಯದ ವಾತಾವರಣದಿಂದ ಜನ  ಅವಶ್ಯಕತೆಗೂ ಮೀರಿದ ಖರೀದಿಯನ್ನು ನಾವು ಕಾಣುತ್ತಲ್ಲೇ ಇದ್ದೇವೆ.  ಕಾಲ್ಪನಿಕವಾದ "ಓರಾನ್ ಪಟ್ಟಣದಲ್ಲಿ ಹಣದಾಸೆಗಾಗಿ ವ್ಯಾಪಾರಸ್ಥರು ತಮ್ಮಲ್ಲಿರುವ ಅವಶ್ಯಕತೆಯ ಆಹಾರ ಪದಾರ್ಥಗಳನ್ನು ಶ್ರೀಮಂತರಿಗೇ ಮಾರಾಟಮಾಡಿ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿ ಬಡವರಿಗೆ ತಿನ್ನಲು ಗಂಜಿಯೂ ಇಲ್ಲದಂತೆ ಮಾಡಿದ್ದರು . ಸಮುದಾಯಕ್ಕೆ ಹರಡಿದ ಸಾಮಾಜಿಕ ಪಿಡುಗಾದರೂ, ಎಲ್ಲ ವರ್ಗಗಳಿಗೆ ಸಮಾನತೆ ತರಬಹುದು ಎಂದು ಊಹಿಸುವುದೂ ಮೂರ್ಖತನ" ಪುಟ -೨೩೭. 

ಈ ವೈರಾಣುವಿನ ಜೊತೆಗಿನ ಹೋರಾಟ, ಒಂದು ರೀತಿಯ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಪ್ರದೇಶಗಳಂತೆಯೇ ಕಂಡುಬರುತ್ತದೆ, ಪೃಕೃತಿಗೆ ಹೇಗೆ ಮೇಲು -ಕೀಳು, ಶ್ರೀಮಂತ- ಬಡವ ,ಹೆಣ್ಣು -ಗಂಡು ಎಂಬ ತಾರತಮ್ಯವಿಲ್ಲವೋ ಹಾಗೆಯೆ ಈ ವೈರಾಣುವಿಗೂ ಕೂಡ! ಆದರೆ ಅತೀ ಕಡಿಮೆ ಸಂಪನ್ಮೂಲ ಹೊಂದಿ ಬದುಕುವ ಜನರಿಗೆ, ಅತೀ  ಹೆಚ್ಚಿನ ಹಾನಿ ಉಂಟಾಗುವುದಂತೂ ಎರಡೂ ವಿಷಯಗಳಲ್ಲಿ ನಿಜ ! 

ಈ ಪುಸ್ತಕದಲ್ಲಿ ನಿರೂಪಕನಾಗಿರುವವ ಡಾಕ್ಟರ್ ಬರ್ನಾರ್ಡ್, ಅವನದ್ದು ಬಿಡುವಿಲ್ಲದ ವೈದ್ಯಕೀಯ ಹೋರಾಟ!
ಕೊನೆಯ ಘಳಿಗೆಯವರೆಗೂ ಹೋರಾಡಿದರೂ ಅವನಿಗೆ ಸಿಗುತ್ತಿದ್ದ ಫಲಿತಾಂಶ ಮಾತ್ರ ೧೦೦ ಕ್ಕೆ ಒಂದರಂತೆ , ಇಂತಿಪ್ಪ ಸಾವುಗಳನ್ನು, ತನ್ನ ಅಸಹಾಯಕತೆಯನ್ನು, ಈ ಪಾತ್ರದ ಮೂಲಕ ಕ್ಯೆಮು ಸೂಕ್ಷ್ಮವಾಗಿ ವಿವರಿಸುತ್ತಾನೆ , ೯ ತಿಂಗಳ ಪ್ರತ್ಯೇಕತೆಯ ನಂತರ ಪಟ್ಟಣದಲ್ಲಿ ಎಲ್ಲರೂ ಮೊದಲಿನಂತೆ ಓಡಾಡಬಹುದು ಎಂಬ ಸಂಭ್ರಮಾಚಾರಣೆಯಲ್ಲಿ ತಾವು ಅನುಭವಿಸಿದ ನೋವನ್ನೆಲ್ಲ ಮರೆತಂತೆ ಕಂಡ ಜನರೆಡೆಗೆ ಬರ್ನಾರ್ಡ್ ಹೇಳುವ ಮಾತಿದು " ಅವನು ಎಲ್ಲರೊಳಗೊಂದಾಗಿ ಇರಲು ಇಚ್ಛಿಸಿದನೋ ಅಥವಾ ಹಾಗೆ  ೯ ತಿಂಗಳೂ ಏನೂ ನಡೆಯಲೇ  ಇಲ್ಲ ಎಂಬಂತೆ ಇರಲು  ಅವನ ಸುತ್ತಲಿನ ವಾತಾವರಣ ಕಾರಣವಾಯಿತೋ ಗೊತ್ತಿಲ್ಲ, ಆದರೆ ಮನುಷ್ಯರ ಹೃದಯದಾಳದಲ್ಲಿ ಬದಲಾವಣೆ ತರಲು, ಪ್ಲೇಗ್ ನ೦ತಹ  ಮಾರಣಾಂತಿಕ ಕಾಯಿಲೆಗೂ, ಸಾಧ್ಯವಿಲ್ಲ "  ಪುಟ ೨೯೫

ಹಾಗಾದರೆ ಈ ಜಾಡ್ಯದ ಫಲಿತಾಂಶವನ್ನು ಕ್ಯೆಮುವಿನ ಕಾದಂಬರಿಯ ದೃಷ್ಟಿಯಲ್ಲಿ ನೋಡ ಹೊರಟರೆ ಅಲ್ಲಿ,ಒಳ್ಳೆಯ ಹಾಗೂ ದುರದೃಷ್ಟಕರ ಎರಡೂ ಅಂಶಗಳಿವೆ, ಪ್ರೀತಿ ಪಾತ್ರರನ್ನು ಕಳೆದುಕೊಂಡು ಅನಾಥ ಭಾವದೊಟ್ಟಿಗೆ, ಭವಿಷ್ಯದ ಅನಿಶ್ಚಯತೆಯ ನಡುವೆ , ಹೃದಯವನ್ನು ಕಲ್ಲಾಗಿಸಿಕೊಂಡು ಬದುಕನ್ನು ಎದುರಿಸುವವರು ಒಂದುಕಡೆಯಾದರೆ, ತಮ್ಮ ಸಾವನ್ನೂ ಲೆಕ್ಕಿಸದೇ  ಕೊನೆಘಳಿಗೆವರೆಗೂ ಹೋರಾಡಿದ ವೈದ್ಯರೂ , ನರ್ಸುಗಳು ಹಾಗೂ ಸ್ವಯಂಸೇವಕರ ನಿಸ್ವಾರ್ಥ ಸೇವೆಯ ಅನಾವರಣ, ಇನ್ನೊಂದೆಡೆ. 

ಯಾವುದೊ ಹಂತದಲ್ಲಿ ಸರಿ ಇಲ್ಲವೆಂಬ ಅಂಶವನ್ನು, ಹಾಗೂ ಅನ್ಯಾಯವನ್ನು ಎದುರಿಸುವುದು ಕಷ್ಟ ಆದರೆ ಅದರ ವಿರುದ್ಧ ಧ್ವನಿ ಎತ್ತುವುದು ಅವಶ್ಯಕ! ಜನ ಗೇಲಿಮಾಡಿದರೂ ಸರಿ ಯಾರೋ ಒಬ್ಬ ಮುಂದೆ ಬಂದು ಇದು ತಪ್ಪು, ಹೀಗೆ ಮಾಡುವುದು ಅನ್ಯಾಯ ಎಂದು ಸಾರ್ವಜನಿಕವಾಗಿ  ಹೇಳಿ, ಅದಕ್ಕೆ ಪ್ರತಿಕೂಲವಾದ ಕ್ರಿಯೆಯಿಂದ ಹೇಗೆ ಇದನ್ನು ಸರಿಮಾಡಬಹುದು ಎಂದು ತೋರಿಸಿಕೊಟ್ಟರೂ ಸಾಕು, ಅದು ಒಳ್ಳೆಯ ಕ್ರಿಯೆಯಾಗಿದ್ದರೆ ಖಂಡಿತವಾಗಿಯೂ ಎಲ್ಲರೂ ಅದನ್ನು ಪಾಲಿಸಲು ಮುಂದಾಗುತ್ತಾರೆ ! ಈ ಒಂದು ಬದಲಾವಣೆಯ ಗಾಳಿಯಿಂದಲೇ ಓರಾನ್ ತನ್ನ ಅಳಿವಿನಂಚಿನಿಂದ ಹೊರಬಂದು ಮೊದಲಿನ ಚೈತನ್ಯಕ್ಕೆ ನಾಂದಿ ಹಾಡಿದ್ದು. ಇದು ಬದುಕಿನ ಪಾಠವೂ ಹೌದು! 

ನಾವು ಕ್ಯೆಮುವಿನ ದೃಷ್ಟಿಯಲ್ಲಿ ,ಪರಿಗಣಿಸಬೇಕಾದ,ಇಂದಿನ  ಕೊರೋನಾಗೂ  ಒಗ್ಗುವ, ಎರಡು ಮುಖ್ಯಾ೦ಶಗಳು 

೧.  ಜಗತ್ತಿನ ಎಲ್ಲ ದುಷ್ಟ ಶಕ್ತಿಗಳಿಂದ ಸಾಧ್ಯವಾಗಬಹುದಾದ ಹಾನಿ ಎಷ್ಟು ಕಠೋರವೋ , ಅಷ್ಟೇ ಕಠೋರ ಹಾನಿ , ಪ್ಲೇಗ್  ಎಂಬ ಪಿಡುಗು ಸಹ ಮಾಡಬಲ್ಲದು " ಇದು ಮನುಷ್ಯರನ್ನು ತಮ್ಮ ಶಕ್ತಿಗೂ ಮೀರಿ ಬೆಳೆಯುವಂತೆ ಪ್ರೇರೇಪಿಸುತ್ತದೆ. ಪುಟ-  ೧೨೫. 

೨.  ಈ ಅಂಟುರೋಗದಿಂದ ನಾವು ನಿಜವಾಗಿಯೂ ಕಲಿಯಬೇಕಾಗಿರುವುದೇನೆಂದರೆ, ನಾವು ಅಲಕ್ಷಿಸಬಹುದಾದ ಜನರಿಗಿಂತ, ಈ ಭುವಿಯಲ್ಲಿ ಜಗವೇ ಮೆಚ್ಚುವ೦ಥ  ಅನೇಕ ಜನರಿದ್ದಾರೆ! ಪುಟ -೩೦೮(ಕೊನೆಯ ಪುಟ )

ಒಂದು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ನಮ್ಮಿಂದೇನಾಗುತ್ತದೋ ಅದೆಲ್ಲವನ್ನೂ ಮಾಡೋಣ, ಸಧ್ಯ ಈ ಪಿಡುಗಿನಿಂದ ಪಾರಗಲೂ ಏನು ಮಾಡಬೇಕೋ ಅದನ್ನು ಮಾಡೋಣ , ಎಲ್ಲ ಮುಗಿದ ನಂತರ, ಪ್ಲೇಗ್ ಗಿಂತಲೂ ಕೆಟ್ಟದಾಗಿ ಅಂಟಿರುವ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಾವೂ ಕಾರಣೀಕರ್ತರಾಗುತ್ತಿರುವ, ಪಿಡುಗುಗಳಾದ, ಪರಿಸರ ವಿನಾಶ ,ಹಸಿವು,ಯುದ್ಧ,  ಹಾಗೂ ವ್ಯವಸ್ಥಿತ ಅನ್ಯಾಯದ ವಿರುದ್ಧ  ಎಲ್ಲರೂ ಒಟ್ಟಾಗಿ ಹೋರಾಡೋಣ. 


Monday, June 15, 2020

ನಮಗೆ ಪರಿಹಾರಕ್ಕಿಂತ ಜಡ್ಜ್ಮೆಂಟ್ ಮುಖ್ಯ!






ನಮ್ಮ ಫಾಸ್ಟ್ ಬದುಕೋ, ಅಥವಾ ತಂತ್ರಜ್ನ್ಯಾನದ ಕೊಡುಗೆಯೂ, ಅಥವಾ ನಾವು ನೆಚ್ಚಿಕೊಂಡ ಮೀಡಿಯಾ ಪ್ರಭಾವವೋ ಎಲ್ಲದೂ ಸೇರಿ,ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲಾಗಿ, ಆ ಸಮಸ್ಯೆಯ ಹೊಣೆಯನ್ನು ಯಾರ ಹೆಗಲಿಗೆ ಕಟ್ಟೋದು ಅಂತ ಒದ್ದಾಡುತ್ತಿರುತ್ತೇವೆ!! ಹಾಗೇ ಮಾಡುವಾಗೆಲ್ಲ ನಾವು ಸರಿ ನಮ್ಮ ಸುತ್ತಲಿರುವುದೆಲ್ಲ ತಪ್ಪು ಅನ್ನುವ ಕಲ್ಪನೆ ನಮಗೆ ಗೊತ್ತಿಲ್ಲದೇ ಬಲವಾಗುತ್ತಾ ಹೋಗುತ್ತದೆ! ಮತ್ತೆ ಸಮಸ್ಯೆಯ ಮೂಲ ಕರಣ ಹಾಗೂ ಪರಿಹಾರಕ್ಕಿಂತ ಯಾರನ್ನು ಬೈದು ಇಗೋ ತಣಿಸಿಕೊಳ್ಳಬಹುದು ಎಂಬ ಲೆಕ್ಕಾಚಾರ ನಡೆಯುತ್ತಿರುತ್ತದೆ. ಇದು ಐಚ್ಛಿಕವಾಗಿಯೋ ಅನೈಚ್ಚಿಕವಾಗಿಯೋ ನಡೆಯುವ ಕ್ರಿಯೆ, ಆದರೆ ಹೀಗೆ ನಮ್ಮ ಮೈಂಡ್ ಟ್ರೈನ್ ಆಗಿರೋದಕ್ಕೆ ಮೇಲೆ ಹೇಳಿದ ಎಲ್ಲವೂ ಕಾರಣಗಳೇ!

ನಮಗೆ ಪರಿಹಾರಕ್ಕಿಂತ ಜಡ್ಜ್ಮೆಂಟ್ ಮುಖ್ಯ! ಯಾರು ತಪ್ಪು ಯಾರು ಸರಿ ಅನ್ನುವ ವಿಂಗಡನೆ ಇಷ್ಟ! ಆ ವಿಂಗಡನೆಯಿಂದ ನಮ್ಮ ಗುಂಪು ಯಾವುದು ನಾವು ಯಾರ ಬಣದಲ್ಲಿ ಗುರುತಿಸಕೊಳ್ಳಲು ಬಯಸುತ್ತೇವೆ ಎಂಬುದನ್ನು ನಿರ್ಧರಿಸುವ ಸಾಧನ. ನಿನ್ನೆ ಅರ್ನಬ್ ನಡೆಸಿಕೊಟ್ಟ ಕೆಟ್ಟ ಡಿಬೇಟ ಪ್ರೋಗ್ರಾಮ್ಗಳಲ್ಲೇ ಅತೀ ಕೆಟ್ಟದ್ದು ಅಂದರೆ ತಪ್ಪಾಗಲಾರದೇನೋ, ಈತ ನ್ಯೂಸ್ Hour ಅನ್ನೋ ಪ್ರೈಮ್ ಟೈಮ್ ನಡೆಸಲು ಶುರು ಮಾಡಿದಾಗ ವಾವ್ ಎನಿಸುವಂತೆ ಮಾಡಿದ್ದ, ಮೊದಲ ಬಾರಿ ಮೋದಿ ಗೆಲ್ಲುವಲ್ಲೂ ಈತ ಮಾಡಿದ ಇಂಟರ್ವ್ಯೂಗಳು ನೇರ ಪರಿಣಾಮ ಬೀರಿದ್ದವು. ಇತ್ತೀಚಿಗೆ ಈ ವ್ಯಕ್ತಿ ಜರ್ನಲಿಸಂ ಬಿಟ್ಟು ಇನ್ನೇನೋ ಮಾಡುತ್ತಿರುವನೇನೋ ಎನ್ನುವಷ್ಟು ಬಿಂದಾಸಾಗಿಯೇ ತನ್ನ ಡಿಬೇಟ ನಡೆಸಿಕೊಡುತ್ತಾನೆ, ಒಬ್ಬ ಪತ್ರಕರ್ತ ಹೇಗೆ ನಡೆದುಕೊಳ್ಳಬಾರದು ಎನ್ನುವುದಕ್ಕೆ ದೊಡ್ಡ ಉದಾಹರಣೆಯಾಗಿ ನಿಲ್ಲುವವ! ಆತ ನೇಶನ್ ಫಸ್ಟ್ ಅನ್ನೋ ಟ್ಯಾಗ್ ಹಾಕಿದ್ ತಕ್ಷಣ ಅವನು ದೇಶ ಭಕ್ತ ಅಂತ ತಬ್ಬಿ ಮುದ್ದಾಡುವುವರು ಇದ್ದಾರೆ! ಅಲ್ಲಿನ ರಾಜಕೀಯ, ಎಡ ,ಬಲ ಏನೇ ಇರಲಿ, ಪ್ರತಿ ಸಾವು, ದುರ್ಘಟನೆ, ನೋವು ಅನ್ಯಾಯಗಳನ್ನು ರಾಜಕೀಯವಾಗಿ ಯೋಚಿಸುವಂತೆ  ಮಾಡಿರುವ ಕೀರ್ತಿ ಎಲ್ಲ ಮಾಧ್ಯಮಗಳಿಗೂ ಸಲ್ಲಬೇಕು ಅರ್ನಬ್ ಎದ್ದು ಕಂಡರೆ ಕಾಣದ ಕೈಗಳು ಹಲವಾರಿವೆ!! 

ಬಾಲಿವುಡ್ ಹಲವು ದಶಕಗಳಿಂದ ಯಾರ ಕಂಟ್ರೋಲ್ ನಲ್ಲಿ ಇದೆ ಎನ್ನುವುದು ಓಪನ್ ಸೀಕ್ರೆಟ್, ಖಾನ್ ಗಳು , ಕಪೂರ್ಗಳು, ಅಷ್ಟೇ ಏಕೆ ಸಂಜಯ್ ದತ್ತ್, ಅಕ್ಷಯ್ ಕುಮಾರ್ ಹಾಗೂ ಅಜಯ್ ದೇವ್ಗನ್ ಕೂಡ ಇದಕ್ಕೆ ಹೊರತೇನಲ್ಲ!! ನಾವು ನಮ್ಮ ನೆಚ್ಚಿನ ತಾರೆಯರನ್ನ ನಮ್ಮ ಸೈಧಾಂತಿಕ ಹಿನ್ನಲೆಯಲ್ಲಿ ಅಳೆಯಲು ಶುರು ಮಾಡಿದ ದಿನದಿಂದ ಎಂಟರ್ಟೈನ್ಮೆಂಟ್ ಕೂಡ ಪಾಲಿಟಿಕಲಿ ಮೋಟಿವೇಟೆಡ್ ಬಿಸಿನೆಸ್ ಆಗಿಯಾಗಿದೆ.

ಇನ್ನು ಸುಶಾಂತ್ ಸಿಂಗ್ ನಾ ಸಾವನ್ನು ಜನ ತಮಗೆ ಬೇಕಾದ ಹಾಗೆ ತಿರುಚಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ! ನೆಪೋಟಿಸಮ್ ಯಾವ ಕ್ಷೇತ್ರದಲ್ಲಿ ಇಲ್ಲ?? ಒಬ್ಬ ಸ್ಟಾರ್ ಮಗನಾಗಿದ್ದಕ್ಕೋ ಅಥವಾ ಶ್ರೀಮಂತ ಮನೆಯ ಕುಡಿಯೆನ್ನುವ ಕಾರಣಕ್ಕೋ ಜನ ಎಲ್ಲರನ್ನೂ ಸ್ವೀಕರಿಸುವ ಹಾಗಿದ್ದರೆ ಅಭಿಷೇಕ್ ಬಚ್ಚನ್ ಆಗಲಿ, ನಿಖಿಲ್ ಕುಮಾರಸ್ವಾಮಿ ಯಾಗಲಿ ಇಷ್ಟೊತ್ತಿಗೆ ಸ್ಟಾರ್ ಗಳಾಗಿ ಮೆರೆಯಬೇಕಿತ್ತು! ರಾಜಕುಮಾರ್ ಅವರ ಪರಿವಾರದ ಶ್ರೀರಕ್ಷೆ ಇದ್ದರೂ ಶಿವರಾಜ್ ಆಗಲಿ ಪುನೀತ್ ಆಗಲಿ ತಮ್ಮ ತಮ್ಮ ಪಾಲಿನ ಹೋರಾಟ ಕಷ್ಟಗಳನ್ನು ಅನುಭವಿಸಿಯೇ ಮೇಲೆ ಬಂದಿರುತ್ತಾರೆ , ಸೋಲು ಅವರುಗಳನ್ನು ಪಾತಾಳಕ್ಕೆ ತಳ್ಳದೇ ಇರಬಹುದು, ಸೋತರೂ ಒಪ್ಪುವ ಜನರು ಇರಬಹುದು ಅದನ್ನು ಬಿಟ್ಟರೆ ಪ್ರತಿ ಕ್ಷೇತ್ರ ಪ್ರತಿಭೆಗೆ ಬೆಲೆ ಕೊಟ್ಟೆ ಕೊಡುತ್ತದೆ ಅಲ್ಲಿ ನಡೆಯುವ ರಾಜಕೀಯ ಹಾಗೂ ಅನ್ಯಾಯದ ಹೊರತಾಗಿ!


ಗಾಡ್  ಫಾದರ್ ಇಲ್ಲದ ಸುಶಾಂತನಿಗೆ, ಧೋನಿಯಂತಹ ಕೋಟ್ಯಾ೦ತರ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟರ್ ನ ಪಾತ್ರ ಮಾಡಲು ಸಿಕ್ಕ ಅವಕಾಶವೇನು ಚಿಕ್ಕದೇ?? ಅದನ್ನು ಲಕ್ಷಾಂತರ ಜನ ಬೆನ್ನು ತಟ್ಟಿ ,ಧೋನಿಯೆಂದರೆ ನೀನೇ ಎನ್ನುವಷ್ಟು ಆಪ್ತವಾಗಿ ಒಪ್ಪಿಕೊಂಡಿರುವುದು ಸಣ್ಣ ಸಾಧನೆಯೇ?? ಇಷ್ಟೆಲ್ಲ ಸಿಕ್ಕ ವ್ಯಕ್ತಿಗೆ, ಅಲ್ಲಿ ನಡೆಯುವ ಫೇವರಿಸಂನ ಅರಿವಿರಲಿಲ್ಲ ಎನ್ನುವುದು ತೀರಾ ಬಾಲಿಶ ವಾದವಾಗುತ್ತದೆ!!


ಕಾರಣ ಏನೇ ಇರಬಹುದು ಪ್ರತಿ ಆತ್ಮಹತ್ಯೆಗೆ ನಮ್ಮ ಸುತ್ತಲಿನ ಸಿಸ್ಟಮ್, ಸಮಾಜ , ಆಗದಿರುವ ಜನ ಕಾರಣೀಭೂತರಾಗಿರುತ್ತಾರೆ, ಅದನ್ನು ಎದುರಿಸುವಲ್ಲಿ ಸೋತ ಮನುಷ್ಯನ ಧೈರ್ಯ ಚಿಕ್ಕದೆನಿಸುತ್ತದೆ ಯಾಕೆಂದರೆ ಖಿನ್ನತೆಯನ್ನು ನಾವು ಮನೋರೋಗವೆಂದಷ್ಟೇ ಉತ್ಪ್ರೇಕ್ಷೆ ತೋರಿ ಅದೇನೂ ದೊಡ್ಡ ವಿಷಯವೇ ಅಲ್ಲ ಎಂಬಂತೆ ಉದಾಸೀನ ಮಾಡಿರುತ್ತೇವೆ. ಶಾಲೆಗೆ ಹೋಗುವ ಮಗು ಫೇಲ್ ಆಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಪಾಲಕರನ್ನು ಕೊಲೆಗಾರರು ಎನ್ನವುದು ಸರಿಯೋ ಅಥವಾ ಹಾಗೆ ಮಾಡಿಕೊಳ್ಳುವವರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಬೇಕಾದ ಸೂಕ್ತ counselling ಅಥವಾ ಚಿಕಿತ್ಸೆಯ ಚರ್ಚೆ ಮುಖ್ಯವೋ??! 

ಮನುಷ್ಯ ಇದ್ದಾಗ ಅವನ ಆಗು  ಹೋಗುಗಳು , ನೋವು ನಲಿವುಗಳಿಗೆ  ಸ್ಪಂದಿಸದೇ, ಅವನು ಪ್ರಾಣ ಕಳೆದುಕೊಳ್ಳುವವರೆಗೂ ಸುಮ್ಮನಿದ್ದು, ಸತ್ತ ವ್ಯಕ್ತಿ ಈಗ ತಿರುಗಿ ಬರುವುದಿಲ್ಲ ಎಂದು ಧೃಡವಾದಾಗ ಮಾತ್ರ ನಮ್ಮ ಕರುಣೆ ಅನುಕಂಪ ತೋರುವುದು ಎಷ್ಟು ಸರಿ? ಅವನಿಗಾದ ಅನ್ಯಾಯವನ್ನು ಅವನು ಬದುಕಿದ್ದಾಗಲೇ ಧೈರ್ಯ ತುಂಬಿ, ಒಟ್ಟಿಗೆ ಹೋರಾಡಲು ಬಲ ಕೊಟ್ಟು , ಎದುರಿಸುವ ಬಾ ಎಂದು ಹೇಳಿದ್ದರೆ, ಇವತ್ತಿನ ಮೊಸಳೆ ಕಣ್ಣೀರಿಗೆ ಹಾಗೂ ಅನ್ಯಾಯದ  ವಿರುಧ್ಧದ ಹೇಳಿಕೆಗಳಿಗೆ ಬೆಲೆ ಇರುತ್ತಿತ್ತು!!