Total Pageviews

Tuesday, May 1, 2018

ಮೋದಿ ಎಂಬ ಮಾಯೆ ಮತ್ತು ನಾವು !


ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರು, ಕಾಲೇಜುಗಳಲ್ಲಿ  ಪಾಠ ಮಾಡುವ ಉಪನ್ಯಾಸಕರು, ಪ್ರಾಧ್ಯಾಪಕರು  ಹಾಗೂ ಸಮಾಜದಲ್ಲಿ ಮುಖಂಡ ಎನಿಸಿಕೊಂಡವ ಮತ್ತು ರಾಜಕೀಯ ನಾಯಕ , ಇವರೆಲ್ಲರಿಗೂ ವಕ್ಚಾತುರ್ಯ ಮತ್ತು ಜನರನ್ನು ಆಕರ್ಷಣೆ ಮಾಡುವ ಕಲೆ ಗೊತ್ತಿಲ್ಲದಿದ್ದರೆ ಇವರುಗಳ ಸರ್ವೈವಲ್ ತುಂಬಾ ಕಷ್ಟ !

ನಾನು ಮೋದಿ ಅಭಿಮಾನಿ ಹಾಗೂ ಇತ್ತೀಚಿಗೆ ಈ ಆಗದವರು ಅಂತೆ ಇರುವ ಕೆಲವರು ಹೆಸರಿಸಿರುವ ಹಾಗೆ ಭಕ್ತಳೂ ಹೌದು !
 ಇದಕ್ಕೆ ಕಾರಣ ಇದೆ.. ಎಲ್ಲರೂ ಹೇಳಿರಬಹುದು ಆದರೂ ನಮ್ಮ ಕರ್ನಾಟಕದ ಚುನಾವಣೆಯ ಸಂಧರ್ಭ ಆಗಿದ್ದರಿಂದ ಇದು ನನ್ನ ಅಭಿಯಾನದ ಲೇಖನ ಎಂದುಕೊಳ್ಳಬಹುದು ! ನಮ್ಮೆಲ್ಲರಿಗೂ ರಾಜಕೀಯ ಎಂದರೆ ಬರಿ ಮೋಸ , ದಗಾ , ವಂಚನೆ ಹಾಗೂ  ಹಗರಣಗಳ ಕ್ಷೇತ್ರ , ಇಲ್ಲಿ ಒಳ್ಳೆಯವರು ಮತ್ತು ಓದಿಕೊಂಡವರು ಬರುವಂತಿಲ್ಲ ಎಂಬ ಅಲಿಖಿತ ನಿಯಮ ವನ್ನು ಎಲ್ಲರೂ ಶಿರಸಾ ಪಾಲಿಸುತ್ತಿದ್ದ ದಿನಗಳಲ್ಲಿ ದಿಢೀರನೆ ಒಂದು ಚೈತನ್ಯ ಕಾಣಲು ಸಿಕ್ಕ್ಕಿತು ! ಒಂದೇನೋ ಹೊಸ ಅಲೆ , ಹೊಸ ಯೋಚನೆ,ಹೊಸ ಕನಸು ಹೊತ್ತು ಬಂದ  ಫಕೀರನಂತೆ ಕಂಡದ್ದು  ನಮ್ಮ ಮೋದಿ .

ಮೋದಿ ಎಂಬ ದೈತ್ಯ ವ್ಯಕ್ತಿತ್ವ ಎಂಥೆಂಥವರನ್ನೋ ಮಾರುಳಾಗುವಂತೆ ಮಾಡಿತು, ಏಕೆಂದರೆ ಆ ವ್ಯಕ್ತಿತ್ವ ಕೇವಲ ತನಗಾಗಿ ಮಾಡಲ್ಪಟ್ಟಿದ್ದಲ್ಲ ಬದಲಾಗಿ ಒಂದು ಹೊಸ ಅಲೆಯ ಆಗಮನಕ್ಕಾಗಿ ಇರುವಂಥದ್ದು ಅಂತ ಮನದಟ್ಟು ಮಾಡಲು ಆಯ್ದು ಕೊಂಡ ಮೊದಲ ಅಸ್ತ್ರ ಜನರನ್ನು ತಲುಪುವುದು ಮತ್ತು ತುಂಬಾ ಸರಳ ಹಾಗೂ ಮನಸಿಗೆ ನಾಟುವ ಪದಗಳಿಂದ ಜನರನ್ನ ತಲುಪುವುದು ! ಈರುಳ್ಳಿ ಬೆಲೆ ಇಂದ ಹಿಡಿದು ಬಾಹ್ಯಾಕಾಶದಲ್ಲಿ  ಹಾರಾಡುವ ರಾಕೆಟ್ ವಿಷಯ ಇರಬಹುದು ಅಥವಾ ಡಿಜಿಟಲ್ ಸಂವಹನದಿಂದ ಹಿಡಿದು ಹಲವು ಯೋಜನೆ ಗಳು , ಕಾರ್ಯಕ್ರಮಗಳು  ಕಡೆಗೆ GST ವರೆಗೂ ಪ್ರತಿ ವಿಷಯವನ್ನು ಕೂಲಂಕುಷವಾಗಿ ಅಳೆದು ತೂಗಿ ವಾಹ್ ಮಾತಾಡಿದ್ರೆ ಹೀಗೆ ಮಾತಾಡ್ಬೇಕು ಅಂತ ವಾಜಪೇಯಿ ನಂತರ ಭಾರತದಲ್ಲಿ ಜನ ಯಾರನ್ನಾದರೂ ನೋಡಿ ಪುಳಕಿತರಾಗಿದ್ದರೆ ಅದು ಮೋದಿ ಮಾತ್ರ !

ಒಂದು ಕ್ಷಣ ಯೋಚಿಸಿ ವಾಜಪೇಯಿ ನಂತರದ  ಕಾಲಮಾನದಲ್ಲಿ , ಬರೋಬ್ಬರಿ ಹತ್ತು ವರ್ಷ ನಮ್ಮ ದೇಶ ನಿಚ್ಚಳ ಮೌನದಲ್ಲಿದ್ದಂತೆ ಭಾಸವಾಗುತ್ತಿತ್ತು . ನಮಗ್ಯಾರಿಗೂ ಫೀಲ್ ಗುಡ್ ಫ್ಯಾಕ್ಟರ್ಸ್ ಗಳೇ ಇರಲಿಲ್ಲ. ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾ ಬಾಯಿಗೆ ಸಿಕ್ಕಲ್ಲಿ ಗುಟ್ಕಾ ಪಾನ್ ಜಗಿದು ಗೋಡೆಗಳನೆಲ್ಲ ರಂಗೇರಿಸುತ್ತಿದ್ದ ಜನ ಇವತ್ತು , ಸ್ವಚ್ಚ ಭಾರತ ಅಭಿಯಾನ್ ಕಣ್ರೀ ಹಿಂಗೆಲ್ಲ ಎಸಿಬಾರ್ದು ಅನ್ನೋ ಘಟ್ಟ ತಲುಪಿದ್ದಾರೆ. ಕಚೇರಿ ಇಂದ ಎದ್ದು ಹೊರಡುವಾಗ ಸಿಸ್ಟೆಮ ಆಗ್ಲಿ ಲೈಟ್ ಆಗ್ಲಿ ಆರಿಸುವಾಗ ನಂದಲ್ಲ ಕಂಪನಿ ತಾನೇ ನೋಡ್ಕೊಳ್ತಾರೆ ಬಿಡು ಅನ್ನುವ ಜನ ದೇಶದ ಸಂಪನ್ಮೂಲ ಹಾಳು  ಮಾಡಬಾರದು ಅನ್ನುತ್ತಿದ್ದಾರೆ !   ಹಳ್ಳಿಗಳಲ್ಲಿ ಲಕ್ಷ ಲಕ್ಷ ಜನ ಬಹಿರ್ದೆಸೆಯಿಂದ ಮುಕ್ತಿ ಹೊಂದಿ ಶೌಚಾಲಯದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ! ಇಲ್ಲಿ ನಾನು ಎಲ್ಲ ಬದಲಾವಣೆ ಆಗಿಯೇ ಹೋಯಿತು ಎಲ್ಲ ಅಂದು ಕೊಂಡಂತೆ ನಡೆದೇ ಹೋಯಿತು ಅಂತ ಹೇಳುತ್ತಿಲ್ಲ , ಒಂದು ಬದಲಾವಣೆಯ ಗಾಳಿಯಂತೂ ಬೀಸುತ್ತಿದೆ ( Let's not get into numerical facts and counter attacks!) ನಾ ಕಂಡಂತೆ ನನ್ನ ಪರಿಧಿಯೊಳಗೆ ನಾ ಕಂಡಷ್ಟು ಮಾತ್ರ ಇಲ್ಲಿ ಹೇಳಿದ್ದೇನೆ . ಯಾವುದೇ ವಿಷಯವನ್ನು ಜನರು  ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದಂತೂ ಇತಿಹಾಸದ ಯಾವ ಪುಟಗಳಲ್ಲೂ  ಕಾಣ ಸಿಗುವುದಿಲ್ಲ !

ಚುನಾವಣಾ ಪೂರ್ವ ಹಲವು ಭರವಸೆಗಳನ್ನು ಮಂಡಿಸಿದ್ದಿರಬಹುದು ಹಾಗೂ ಅದ್ರಲ್ಲಿ ಕೆಲವು ಈಡೇರದೇ ಇರಲುಬಹುದು, ಇಲ್ಯಾರೂ ೧೦೦ ಪ್ರತಿಶತ efficiency  ಕೊಡುವ ಮಶಿನ್ ಗಳಿಲ್ಲ , ಮಲ್ಯ ಓಡಿ  ಹೋಗಿದ್ದಕ್ಕೆ ಮೋದಿ ರಾಜೀನಾಮೆ ಕೊಡಲಿ ಎಂದು ಬೊಬ್ಬೆ ಇಡುವವರು ಅದೇ ಮಲ್ಯನ RCB ಟೀಮ್ನ ಪರ ವಹಿಸಿಕೊಂಡು ಮಲ್ಯ ತೆಂಗಿನಕಾಯಿ ಚಿಪ್ಪು ಕೊಟ್ಟರೂ ಪರ್ವಾಗಿಲ್ಲ ಕಪ್ ನಮ್ದೇ ಎಂದು ಎದೆ ಬಡಿದುಕೊಂಡು ಮ್ಯಾಚ್ ನೋಡಲು ಹೋಗುತ್ತಾರೆ !   ನಮ್ಮ ಸೋಶಿಯಲ್ ಮೀಡಿಯಾ ಪ್ರಭಾವ ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದರೆ , ಒಬ್ಬ ಮನುಷ್ಯ ತನ್ನ ಐಡೆಂಟಿಟಿ ಕ್ರೈಸಿಸ್ ನಿಂದ ಬಳಲುತ್ತಿದ್ದು ಅವನನ್ನು ಯಾರೂ ಗಮನಿಸುತ್ತಿಲ್ಲ ಅವನ ಮಾತು ಯಾರೂ ಕೇಳುತ್ತಿಲ್ಲ ಎಂದೆನಿಸಿ ರಾತ್ರೋ ರಾತ್ರಿ ಮೋದಿ ಬಗ್ಗೆ ಒಂದೆರಡು ಇಲ್ಲ ಸಲ್ಲದ ಹೇಳಿಕೆ ಅಸಲಿಗೆ ಮೋದಿಗೂ ಆ ವಿಷಯಕ್ಕೂ ಸಂಭಂದ ಇರದೇ ಇರುವ ಕೆಲವು ಪ್ರಹಸನಗಳನ್ನು ಮುಂದೆ ಇಟ್ಟುಕೊಂಡು ಮೋದಿ ತಲೆ ಕೆಟ್ಟವ, ರಾಕ್ಷಸ , ರಾಜೀನಾಮೆ ಕೊಡ್ಲಿ ಎಂದು ಹೇಳಿ  ಬಿಟ್ಟರೆ ಆಯ್ತು , ಬೆಳಿಗ್ಗೆ ಆಗುವಷ್ಟಿಗೆ ಎಲ್ಲೋ ಮೂಲೆ ಯಲ್ಲಿ ಅಡಗಿ ಕುಳಿತ ಒಂದು ವಿಲಕ್ಷಣ ವಿಚಾರಧಾರೆಗೆ ಎಲ್ಲರೂ ಬಿಟ್ಟು ಬಿಡದೆ ನೀರೆರದು ಅದನ್ನೊಂದು ದೊಡ್ಡದಾದ ಬರಡು ಮರವನ್ನಾಗಿಸುವಲ್ಲಿ ನಾವು ನೀವೆಲ್ಲರೂ ಕಾರಣಿಕರ್ತರು ! ಬರಗೆಟ್ಟ ಟಿವಿ ಮಾಧ್ಯಮಕ್ಕಂತೂ ಒಂದು ವಾರಕ್ಕಾಗುವಷ್ಟು ಆಹಾರ !


ಅಲ್ಲೆಲ್ಲೋ ದೂರದ ಊರಿನಲ್ಲಿ ಕುಳಿತು ದೇಶದ ಹಿತಕ್ಕಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದು ನಮ್ಮೆಲ್ಲ ಕನಸುಗಳನ್ನು ಈಡೇರಿಸುವತ್ತ ನಿರತರಾಗಿರುವ ಒಬ್ಬ ಪ್ರಾಮಾಣಿಕ ಹಾಗು ದಕ್ಷ ಪ್ರಧಾನ ಮಂತ್ರಿ , ಇಲ್ಯಾರೋ ಕುಡಿದ ಮತ್ತಿನ್ನಲ್ಲಿ ಅನ್ನ  ಯಾವುದು ಹೇಸಿಗೆ ಯಾವುದು ಅಂತಲೂ ಗೊತ್ತಾಗದೆ ತಿನ್ನುತ್ತಾ ಕೂತಿರುವ  ನಿರ್ಗತಿಕ ಕ್ರಿಮಿ ಕೀಟಗಳೆಲ್ಲವೂ ಸೇರಿಕೊಂಡು ತಮ್ಮದೇ ಒಂದು ಗುಂಪು ಮಾಡಿಕೊಂಡು, ಮನೆಯಲ್ಲಿ ಹೆಗ್ಗಣ ಸತ್ತರೂ ಮೋದಿ ಕಾರಣ , ಹೆಂಡತಿ ಹೊಡೆದರೂ ಮೋದಿ ಕಾರಣ ಎಂದು ಬಳೆ ಒಡೆದುಕೊಂಡು ಅಳುವುದನ್ನು ನೋಡುವುದೇ ಒಂದು ತಮಾಷೆ ! ಯಾರೋ ದೊಂಬಿ ಎಬ್ಬಿಸಿ ಗಲಾಟೆ ಮಾಡಿದರೆ, ಅಲ್ಯಾರೋ ರೇಪ್ ಮಾಡಿ ಕೊಲೆ ಮಾಡಿದರೆ ಇನ್ಯಾವನೋ ದೇಶ ಬಿಟ್ಟು ಓಡಿ  ಹೋದರೆ ಎಲ್ಲದಕ್ಕೂ ಪ್ರಧಾನಿ ನೇ ಕಾರಣ ಅಂತಾದರೆ ನಮ್ಮ ರಾಜ್ಯಕ್ಕೆ ಮುಖ್ಯಮಂತ್ರಿ ಎಂಬ ಪಟ್ಟದ ಅವಶ್ಯಕತೆ ಇದೆಯೆ ? ಅಸಲಿಗೆ ನಮ್ಮ ರಾಜ್ಯದ ಹೊರೆ ಮೊದಲು ಹೊರಬೇಕಾದ್ದು  ಪ್ರಧಾನಿ ಅಂತ ನನಗೆ ಇತ್ತೀಚಿಗಷ್ಟೇ ಮನವರಿಕೆಯಾದ ವಿಷಯ !


ಮೋದಿಯನ್ನು ನಂಬಿ ಇದುವರೆಗೂ ಹಾಳಾಗಿದ್ದಂತೂ ನಂಗೇನೂ ಕಾಣುತ್ತಿಲ್ಲ , ನಾನು ಭಕ್ತಳೆಂಬ ಕಾರಣವೂ ಇರಬಹುದು ! ಆದರೆ ಇದುವರೆಗೂ ದೇವಸ್ಥಾನ , ಮಠ,  ಮಂದಿರಗಳಿಗೆ ಸೀಮಿತವಾದ ಭಕ್ತ ಎಂಬ ವರ್ಗವೊಂದು ದೇಶ ಕಂಡ ಮಹಾನ್ ನಾಯಕನಿಗೂ ಅನ್ವಯವಾಗುತ್ತಿರುವುದು ಸಂತಸದ ವಿಷಯವೇ ಸರಿ ! ಕೇವಲ ಒಂದು ಜಿಲ್ಲೆಯ ಅಧಿಕಾರಿಯಾಗಿ ನೇಮಕಗೊಂಡವರನ್ನ ಕೇಳಿ ನೋಡಿ ಎಲ್ಲವೂ ಪಾರದರ್ಶಕವಾಗಿ ಒಂದಿಷ್ಟೂ ಹಗರಣಗಳಿಲ್ಲದೆ ನಿಷ್ಠೆಯಿಂದ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು! ಇಂತಹ ನೂರಾರು  ಜಿಲ್ಲೆಗಳನ್ನೊಳಗೊಂಡ ೨೨ ರಾಜ್ಯಗಳನ್ನು ಅದ್ಹೇಗೆ ನಿಭಾಯಿಸುತ್ತಿರಯುವ ಆ ಶಕ್ತಿ ಅದೆಂಥದ್ದಿರಬಹುದು ?!

ಗಡಿಯಲ್ಲಿ ನಮಗಾಗಿ ಬಡಿದಾಡಿ ವೀರ ಮರಣ ಹೊತ್ತ ಒಬ್ಬೇ ಒಬ್ಬ ಸೈನಿಕನ ಹೆಸರನ್ನು ಹೇಳಲಾಗದ ನಮ್ಮೆಲ್ಲರ ದೇಶಭಕ್ತಿಗೆ ಹಾಗೂ ಒಂದು ದೇಶದ ಆಡಳಿತದ ಚುಕ್ಕಾಣಿ ಹಿಡಿಯುವುದು ಎಂದರೆ ಕೋತಂಬ್ರಿ ಸೊಪ್ಪನ್ನು ಮಾರುವಷ್ಟೇ ಸುಲಭ ಎಂದು ತಿಳಿದು ಹಗಲಿರುಳು ಬಾಯಿ ಬಡೆದುಕೊಳ್ಳುವ ಜನರನ್ನು ವಿಶ್ವ ವಿಖ್ಯಾತರನ್ನಾಗಿ ಮಾಡುವ ನಮ್ಮ ಅವಿರತ ಪ್ರಯತ್ನಕ್ಕೊಂದು ದೊಡ್ಡ ಸಲಾಂ !






Monday, April 23, 2018

ಆದರೆ ನಮ್ಮ ನಿರ್ಗಮನದ ನಂತರ ಮಾತಾಡುವುದು ನಮ್ಮ ಮೌಲ್ಯ ಮಾತ್ರ !




   
           ಬರೋಬ್ಬರಿ ಮೂರು ವರ್ಷಗಳಾದವಲ್ಲ!! ಬರೆಯುವದನ್ನು ಮರೆತೇ ಹೋದ ಭಯ ಹಾಗು ನಡುಕ! ನನ್ನ ಹಳೆಯ ಪೋಸ್ಟ್ ಗಳನ್ನೆಲ್ಲ ಓದಿ ನಾನೇ ಬರೆದಿದ್ನ ಅನ್ನೋ ಅನುಮಾನ ಕಾಡುವಷ್ಟು ಶೈಲಿ ಹಾಗು ಸರಕಿನ ಕೊರತೆ ಎದ್ದು ಕಾಣುತ್ತಿದೆ.  ಬರೆಯಲೇ ಬೇಕು!  ನನ್ನ ಅಭಿವ್ಯಕ್ತಿ ಎಂಬ ಸೊರಗಿ ಹೋದ ಮಗುವನ್ನು ಪುನ:ಶ್ಚೇತನಗೊಳಿಸುವ ಸಣ್ಣ ಪ್ರಯತ್ನ.....


                     ಏನೆಲ್ಲಾ ಆಯಾಮಗಳನ್ನೊಳಗೊಂಡು, ನಾವು  ಬಯಸಿದ ಬದುಕು , ತೃಪ್ತಿ ಸಿಗುವ ದಿಗಂತದತ್ತ ನಿರಂತರ ನಮ್ಮನ್ನು ಕೈ ಜಗ್ಗಿ ಕರೆದುಕೊಂಡು ಹೋಗುವ ಹಲವು ವಿಫಲ ಯತ್ನಗಳನ್ನು ನಡೆಸುತ್ತಲೇ ಇರುತ್ತದೆ! ಮೂರು ವರ್ಷದ ಬಿಡುವು ನನ್ನನ್ನ mature ಮಾಡಿಸಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಮಗುವಂತೆ ಎಲ್ಲವನ್ನು ಸಂಭ್ರಮಿಸಿ ಅಮಾಯಕ ಕಣ್ಣುಗಳಿಂದ ಎಲ್ಲವನ್ನು ತಿಳಿದುಕೋ ಅನ್ನೋ ಪಾಠವನ್ನಂತು ಕಲಿಸಿದೆ. ನನಗೆಲ್ಲವೂ ತಿಳಿದಿದೆ ಅನ್ನುವುದೇ ಅಧ:ಪತನದ ಮೊದಲ ಮೈಲಿಗಲ್ಲು ! ಹೆಚ್ಚು ವಿಷಯಾಂತರ  ಮಾಡದೆ ನೇರ ವಿಷಯಕ್ಕೆ ಬರೋಣ.


                   ನಮಗೆಲ್ಲ ಒಂದು ನಿರಂತರ ಸ್ಪೂರ್ತಿ ನೀಡುವ ಮಷೀನ್ ನ ಅವಶ್ಯಕತೆ ಇದೆ ಅನಿಸುತ್ತದೆ , ಸರಿಯಾಗಿ ಓದಿ ತಿಳಿದು, ಅಧ್ಯಯನ ಮಾಡಿದರೆ ನಮ್ಮ ಕನ್ನಡ ಸಾಹಿತ್ಯಕ್ಕಿಂತ ಸ್ಪೂರ್ತಿ ನೀಡುವ ಇನ್ನೊಂದು ಮಾಧ್ಯಮ ನನಗಂತೂ ಕಾಣುವುದಿಲ್ಲ! ನಾನು ಅಪ್ಪನಿಗೆ ಯಾವಾಗಲೂ ನಾವೇಕೆ ಸಾಹಿತ್ಯ ಓದಬೇಕು ಎಂದು ಕೇಳುತ್ತಿದೆ , ಅದಕ್ಕೆ ಅಪ್ಪನ ಉತ್ತರ      " ನಮ್ಮ ಬದುಕು ನಾವಂದುಕೊಂಡಷ್ಟು ದೊಡ್ಡದು ಹಾಗೂ ಮಹಾನ್ ಶಕ್ತಿಯುತವಾದುದ್ದಲ್ಲ , ಅಸಲಿಗೆ ಅದರ ಆಯಸ್ಸು ನಮಗೆ ತಿಳಿದಿಲ್ಲ ಇಂತಿಪ್ಪ ಈ ಚಿಕ್ಕ ಬದುಕಿನಲ್ಲಿ ನಿನಗೇನೂ ಬೇಕೋ ಎಲ್ಲವನ್ನೂ ಮಾಡಿ ಬದುಕಿನ ಕೊನೆ ಹಂತದ ಕ್ಷಣವನ್ನೂ ಅನುಭವಿಸಿಯೂ ಇನ್ನೇನೋ ತಿಳಿದುಕೊಳ್ಳುವುದು ಇನ್ನೇನೋ ಕಲಿಯುವುದು ಉಳಿದು ಹೋಯಿತಲ್ಲ ಅಂತ ಅನ್ನಿಸದೆ ಇರಬೇಕು ಅಂದರೆ ನೀನು ಸಾಹಿತ್ಯವನ್ನ ಓದಲೇ ಬೇಕು!"  ಬದುಕಿನ ಪಾಠವನ್ನು ಯಾವ ಗುರುವೂ ಹೇಳಿಕೊಡಲಾರ ! ಒಂದು ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳುವಲ್ಲಿ ನಮ್ಮ ಕನ್ನಡ ಸಾಹಿತ್ಯದ ಪಾತ್ರ ತುಂಬಾ ಮುಖ್ಯವಾಗಿದೆ ! ಅದು ಮಂಕು ತಿಮ್ಮನ ಕಗ್ಗ ಗಳಾಗಿರಬಹುದು , ಬೇಂದ್ರೆ ಅಜ್ಜನ ಕವನ ಗಳಿರಬಹುದು , ಕಾರಂತರ ಕೃತಿಗಳಿರಬಹುದು , ಕುವೆಂಪು ಅವರ ಗ್ರಂಥಗಳಿರಬಹುದು ಹಾಗೂ ಭೈರಪ್ಪನವರ ಕಾದಂಬರಿಗಳಾಗಿರಬಹುದು.


    ನಮ್ಮ ಮನುಷ್ಯ ಸಹಜ ಪ್ರತಿಕ್ರಿಯೆ ಅದು ಯಾವುದೇ ವಿಷಯಕ್ಕೆ ಸಂಭಂದಿಸಿದ ತೊಂದರೆಯಾಗಿದ್ದರೂ , "ನನಗೆ ಯಾಕೆ" ಅಥವಾ "ನಾನೇ ಯಾಕೆ" ಅದು ಕಾಯಿಲೆ ಆಗಿರಬಹುದು, ಅಪಘಾತವಾಗಿರಬಹುದು ಹಣ ಕಾಸಿನ ತೊಂದರೆಯಾಗಿರಬಹುದು , ಸಾವು ನೋವುಗಳಿರಬಹುದು ಅಥವಾ ದೊಡ್ಡ  ಸೋಲುಗಳಿರಬಹುದು, ನಾವುಗಳೆಲ್ಲ ಅವುಗಳ್ಯಾವವೂ ನಮ್ಮ ಹತ್ತಿರ ಸುಳಿಯದಿರಲಿ ಅಂತ ಪ್ರಾರ್ಥಿಸೋಣ ಆದರೆ ಅಕಸ್ಮಾತಾಗಿ ಬಯಸದೆಯೂ ಇವುಗಳೇನಾದರೂ ನಮ್ಮ ಹತ್ತಿರ ಸುಳಿದರೆ ಇವುಗಳನ್ನು ಎದುರಿಸಲು ನಾವು ಸಿದ್ಧರೆ ?! ಎಂದು ಪ್ರಶ್ನಿಸಿಕೊಂಡರೆ ದಿಗಿಲಾಗುವಷ್ಟು ಭಯ ! ಇಲ್ಲ ಖಂಡಿತ ಇದಕ್ಕೆಲ್ಲ ಪ್ರೆಪರಶನ್ ನ ಅಗತ್ಯ ಇರುವುದಿಲ್ಲ ಬದುಕು ಬಂದಂತೆ ಎದುರಿಸುವುದಷ್ಟೇ , ನಮ್ಮ ಸಿದ್ಧತೆ ದೇಹಕ್ಕೆ ಸಂಭಂದಿಸಿರುವುದಿಲ್ಲ ಸಿದ್ಧತೆ ಮನಸ್ಸಿಗೆ ಸಂಭದಿಸಿದ್ದು , ಮಾನಸಿಕವಾಗಿ ನಾನು ಎದುರಿಸಲು ಶಕ್ತಳಾದಮೇಲೆ ತಾನೇ ದೈಹಿಕವಾಗಿ ನಮ್ಮ ದೇಹವೂ ಸಹಕರಿಸಲು ಸ್ಸಾಧ್ಯ ?

ಇಂಥ ಮಾನಸಿಕ ಸಿದ್ಧತೆ ನಮಗೆ , ಪ್ರಭುದ್ಧತೆ , ಅನುಭವ ಹಾಗೂ ಸಾಹಿತ್ಯ ಮಾತ್ರವೇ ಕೊಡಬಲ್ಲುದು! ನಮ್ಮ ಪೀಳಿಗೆಯ ಬಹು ದೊಡ್ಡ ಲಾಸ್ ಎಂದರೆ ನಮ್ಮಲ್ಲಿ ಹೆಚ್ಚಿನವರಿಗೆ ಕಷ್ಟ ಅಥವಾ ತೊಂದೆರೆ ಎಂಬ ಪದಗಳ ಡೆಫಿನಿಷನ್ ಗೊತ್ತೇ ಹೊರತು ಅದರ ಅನುಭವ ಇಲ್ಲ ! ನಮ್ಮ ಅಪ್ಪ ಅಮ್ಮ  ಕಷ್ಟ ಪಟ್ಟು ಬೆಳೆದರು ನಮ್ಮನ್ನು ಕಷ್ಟ ಪಟ್ಟು ಬೆಳೆಸಿದರು ನಾವುಗಳು ಕಷ್ಟವನ್ನು ಒಂದು ಹಂತದ ವರೆಗೆ ನೋಡುತ್ತಾ ಬೆಳೆದೆವೆ ಹೊರತು  ಅವುಗಳನ್ನು ಅನುಭವಿಸಿಲ್ಲ ! ನಮ್ಮ ಮುಂದಿನ ಪೀಳಿಗೆಯವರಿಗಂತೂ ಅನುಭವಿಸುವದಿರಲಿ  ಕಷ್ಟವನ್ನು ನೋಡುವುದು  ಸಹ ದುರ್ಲಭ ! ನಾವೆಲ್ಲ ಎಷ್ಟೊಂದು ಕಂಫರ್ಟ್ ಜೋನ್ ನಲ್ಲಿ   ಬದುಕುತ್ತಿದ್ದೇವೆ ಎಂದರೆ ಒಂಚೂರೇ ಚೂರು ನಮ್ಮ ಪರಿಧಿಯನ್ನು ವಿಸ್ತರಿಸಿಕೊಳ್ಳಲೋ ಅಥವಾ ಪರಿಧಿಯೊಳಗೆ ಇನ್ನೇನೋ ಇನ್ಯಾರನ್ನೋ ಸೇರಿಸಲೂ ಸಿದ್ಧರಿಲ್ಲ !


ತಂತ್ರಜ್ನ್ಯಾನದ ನಮ್ಮ ವಿದ್ಯಾರ್ಥಿಗಳಿಗೆ ಚೇತನ್ ಭಗತ್ ಹಾಗೂ ರವಿಂದ್ರ್ ಸಿಂಗ್ ಥರದ ಲೇಖಕರು ಅಚ್ಚು ಮೆಚ್ಚು ! ಆಫ್  ಕೋರ್ಸ್ ವಿದ್ಯಾರ್ಥಿ ಜೀವನದ ಮಧುರ ಕ್ಷಣಗಳನ್ನು , ಪ್ರೀತಿ ಪ್ರೇಮದ ಕಲ್ಪನೆಯಲ್ಲಿರುವ ಹರೆಯದ ಮನಸ್ಸುಗಳಿಗೆ ಆಪ್ತವಾಗುವಂಥ, ಒಂದಿಡೀ ತಲೆಮಾರನ್ನೇ ತಮ್ಮ ಕೃತಿಗಳೆಡೆಗೆ ಆಕರ್ಷಣೆಗೊಳಗಾಗುವಂತೆ ಮಾಡಿದವರಿವರು . ಆದರೆ ಇವರುಗಳದ್ದು ಕೇವಲ ಮನರಂಜನೆ! ಓದಿದ ನಂತರ ಒಂದು ಸಂದೇಶವೋ ಅಥವಾ ತೃಪ್ತಿ ನೀಡುವ ಬರಹಗಳಲ್ಲ ಅವು .

ಈಗಿನ ಮಕ್ಕಳು ಎಷ್ಟು ಬಿಂದಾಸ್ ಆಗಿ ತಮ್ಮ ವಿದ್ಯಾರ್ಥಿ ಜೀವನ ಸಾಗಿಸುತ್ತಾರೋ ಅದರ ತದ್ವಿರುದ್ಧವಾಗಿ ವಿಪರೀತ ಸ್ಟ್ರೆಸ್ ನಲ್ಲಿ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನ ಸಾಗಿಸುತ್ತಾರೆ . ನಾವೆಲ್ಲರೂ  ನಾವು ಅನುಭವಿಸುವ ಕಷ್ಟವೇ ಜಗತ್ತಿನೆಲ್ಲ ಕಷ್ಟಗಳಿಗಿಂತ ದೊಡ್ಡದು , ನಾವು ಪಟ್ಟಿರುವ ದುಃಖವೇ ಎಲ್ಲರ ದುಃಖಕ್ಕಿಂತ ಮಿಗಿಲಾದದ್ದು ಅನ್ನುವ ಮನುಷ್ಯ ಸಹಜ ಸೈಕಾಲಾಜಿ ಹೊಂದಿರುತ್ತೇವೆ ! ಯಾಕೆಂದರೆ ನಮಗಿಂತ ಅಥವಾ ನಮ್ಮ ತೊಂದರೆಗಳಿಗೆ ಅಲ್ಪ ಮಟ್ಟದಲ್ಲೂ ಹೋಲಿಕೆ ಇರದಂಥ ಅನೇಕ ಕಷ್ಟಗಳನ್ನು ಹೀಗೂ ಎದುರಿಸಿ ಬದುಕನ್ನು ಹೀಗೂ ಸುಂದರವಾಗಿಸಿಕೊಳ್ಳಬಹುದಾ  ಎಂದೆನಿಸುವ ಯಾವುದೇ ವ್ಯಕ್ತಿತ್ವವದ  ಪರಿಚಯವಿಲ್ಲ ! ಅಂಥ  ವ್ಯಕ್ತಿತ್ವಗಳನ್ನು ನಮ್ಮ ಕನ್ನಡ ಸಾಹಿತ್ಯ ಅನೇಕ ಕೃತಿಗಳಲ್ಲಿ ಎತ್ತಿ ಹಿಡಿದಿದೆ .

ಹೀಗೆ ನಿಜಜೀವನದಲ್ಲಂತೂ ಕಾಣ ಸಿಗದ ಇಂಥ ಅಪರೂಪ ಎನಿಸುವ ವ್ಯಕ್ತಿತ್ವವನ್ನು ಮತ್ತು ಆ ವ್ಯಕ್ತಿತ್ವದ ಸುತ್ತ ನಡೆಯುವ ಅನೇಕಾನೇಕ ವಿಚಿತ್ರ, ವಿಲಕ್ಷಣ ಸನ್ನಿವೇಶಗಳು  ಹಾಗೂ ಆ ಸನ್ನಿವೇಶಗಳನ್ನು ಎದುರಿಸುವ ಪರಿ ಎಲ್ಲವೂ ನಮ್ಮ ಜೀವನಕ್ಕೆ ಅತ್ಯುತ್ತಮ ಪ್ರೇರಣೆ! ಇಲಿ ಹೋದರೆ ಹುಲಿ ಹೋಯಿತೆಂದು ಬೊಬ್ಬೆ ಇಡುವ ನಾವುಗಳಿಗೆ " ಇಂಥವೆಲ್ಲ ನಡೆದು ಹೋಗಿರುವಾಗ ನಂದೇನು ಮಹಾ " ಎನ್ನುವ ಪ್ರಭುದ್ಧತೆ ಹಾಗೂ  ಜೀವನ ಪಾಠವನ್ನು  ನಮ್ಮ ಸುಪ್ತ ಮನಸ್ಸಿನಲ್ಲಿ ಬೇರೂರುವಂತೆ ಮಾಡಬಹುದಾದ ಏಕೈಕ ಮಾರ್ಗದರ್ಶಕ  ನಮ್ಮ ಸಾಹಿತ್ಯ ಕ್ಷೇತ್ರ !

ಎಲ್ಲರೂ ಎಲ್ಲದೂ ಒಂದು ದಿನ ನಶಿಸಿ ಹೋಗುವಂಥದೆ . ಹೇಗ್ ಹೇಗೋ ಬದುಕಿಯೂ ನಶಿಸಲೇ ಬೇಕು ! ಮೌಲ್ಯಯುತವಾದ ತತ್ವಗಳನ್ನು ಪಾಲಿಸಿಯೂ ನಶಿಸಲೇಬೇಕು ! ಆದರೆ ನಮ್ಮ ನಿರ್ಗಮನದ ನಂತರ ಮಾತಾಡುವುದು ನಮ್ಮ ಮೌಲ್ಯ ಮಾತ್ರ ! ಅಷ್ಟೇ ವ್ಯತ್ಯಾಸ .      

                     

Tuesday, April 17, 2018

ತಾಯಿಯಾಗುವುದೆಂದರೆ ತ್ಯಾಗವಲ್ಲ ಜವಾಬ್ದಾರಿ !



ಹೋಟೆಲ್ ಒಂದರಲ್ಲಿ ಸಹೋದ್ಯೋಗಿಯೊಬ್ಬರ ಔತಣ ಕೂಟವನ್ನು ಏರ್ಪಡಿಸಲಾಗಿತ್ತು ! ಆರ್ಡರ್ ಮಾಡಲಾಗಿ ಒಂದೊಂದೆ ಪದಾರ್ಥ ಬರುವಾಗ ಪುರುಷರೆಲ್ಲರೂ  ನಾಳೆ ಇಲ್ಲವೇನೋ ಎಂಬಂತೆ ತಿನ್ನುವುದರಲ್ಲೇ ಮಗ್ನರಾಗಿದ್ದರು ! ನನ್ನ ಸ್ನೇಹಿತೆ ಮಾತ್ರ ಅಯ್ಯೋ ಮಗಳನ್ನು ಡೇ ಕೇರ್ ನಲ್ಲಿ ಬಿಟ್ಟು ನಾನು ಮಾತ್ರ ಇದನ್ನೆಲ್ಲಾ ಅನುಭವಿಸ್ತಾ ಇದೀನಿ ಛೆ! ಅಂತ ಕೊರಗುತ್ತಿದ್ದಳು. ತಕ್ಷಣ ನನ್ನ ಪಿತ್ತ ನೆತ್ತಿಗೇರಿ ಕಣ್ಣು ಕೆಕ್ಕರಿಸಿ ನೋಡಿ , ಸಾಕು ವಿಶಾಲ ಹೃದಯ ತಾಯೆ ಸುಮ್ನೆ ಈ ಕ್ಷಣವನ್ನು ಹಾಳು  ಮಾಡದೇ ತಿಂದು ನಡಿ ಅಂದೆ !

ನಾ  ಹೇಳಿದ ಮಾತು ಅವಳಿಗಿಷ್ಟವಾಗಿರಲಿಲ್ಲ , ಅಸಲಿಗೆ ಅರಗಿಸಕೊಳ್ಳಲೂ ಆಗಿರಲಿಲ್ಲ , ನೀನು ಒಬ್ಬ ತಾಯಿಯಾಗಿ ಹೀಗೆ ಹೇಳಬಹುದಾ ಅಂತ ಕೇಳಿದಳು.. ನಾನು ತಾಯಿಯಾಗಿ ಹೇಳುತ್ತಿಲ್ಲ ಒಬ್ಬ ಸ್ನೇಹಿತೆಯಾಗಿ ಹೇಳುತ್ತೀನಿ ಕೇಳು.. ನಿನ್ನ ಕಳಕಳಿ ಕಾಳಜಿ ಒಪ್ಪತಕ್ಕುವಂಥದ್ದೇ ಆದ್ರೆ ಅತೀಯಾದ ಭಾವೋದ್ವೇಗ ಹಾಗು ಪ್ರತಿ ಹಂತ ಪ್ರತಿ ಕ್ಷಣದಲ್ಲೂ ನಾನು ತಾಯಿ ನಾನು ಹೀಗೇ ಇರಬೇಕು ಎಂದು ಬೇಲಿ ಹಾಕಿಕೊಂಡು ಬದುಕುವುದಿದೆಯಲ್ಲ ಅದು ತಪ್ಪು ! ನಿನ್ನ ತ್ಯಾಗ, ಕಾಳಜಿ ತಾಯ್ತನದ ಭಾಗವಾಗಿರಬೇಕೇ  ಹೊರತು ನಿನ್ನ  ಸ್ವಾತಂತ್ರ್ಯ ಹಾಗೂ  ಹೆಣ್ತನ ಕಸಿದುಕೊಳ್ಳುವ ಅಸ್ತ್ರವಾಗಬಾರದು!

ಒಂದು ಪ್ರಶ್ನೆ  ಕೇಳ್ತೀನಿ   ಬೇಜಾರಾಗಬೇಡ ಎಂದು ಪೀಠಿಕೆಯಿಟ್ಟು,  ಮರಗಿದ  ಕ್ಷಣವನ್ನು ಖಂಡಿತ ನಾನು ಗೌರವಿಸುತ್ತೇನೆ   ನಿಮ್ಮಿಂದ ದೂರದಲ್ಲಿ ಇರುವ ಮೊದಲಿನ ಲವಲವಿಕೆ   ಕಳೆದುಕೊಂಡು ಅಶಕ್ತರಾಗಿದ್ದರೂ ಯಾರ ಮೇಲು ಭಾರವಾಗದೆ ಇವತ್ತಿಗೂ ಸ್ವತಂತ್ರ ಜೀವನ ಮಾಡುತ್ತಿರವ ಅಮ್ಮನ ನೆನಪಾಯಿತೆ  ನಿಂಗೆ? ಎಂದು ಕೇಳಿದ್ದಕ್ಕೆ "ಇಲ್ಲ ಅಮ್ಮನ ನೆನಪು ಆಗಲೇ ಇಲ್ಲ!" ಎಂದಳು. ಹೀಗೆ ಇನ್ನು ಹತ್ತು ವರ್ಷಗಳ ಬಳಿಕ ನಿನ್ನ ಮಗಳು ಹೀಗೆ ಪಾರ್ಟಿ ಅಂತ ಹೊರಗಡೆ ಬಂದಾಗ ಅವಳು ನಿನ್ನ ಹಾಗೆಯೇ ಅಮ್ಮನನ್ನು ನೆನೆಸಿಕೊಳ್ಳುತ್ತಲೇ ಎಂದುಕೊಂಡೆಯ ? ನಾನು cynical ಆಗಿ ಹೇಳುತ್ತಿಲ್ಲ . ಇದು ವಸ್ತುಸ್ಥಿತಿ . ನಾವೆಲ್ಲಾ ಮಕ್ಕಳಾದ ಕೂಡಲೇ ಒಂದು ರೀತಿಯ learned ಮಷೀನ್ ಗಳಾಗಿಬಿಡುತ್ತೇವೆ.

ಮಕ್ಕಳಾಗಿದ್ದಾಗ ಪೋಷಕರಿಗಾಗಿ ಹಾಗು ನಾವು ಪೋಷಕರಾದಾಗ ಮಕ್ಕಳಿಗಾಗಿ ನಮ್ಮ  ಬದುಕನ್ನ  ಮೀಸಲಿಟ್ಟುಬಿಡುತ್ತೇವೆ . ಹಾಗಿದ್ದರೆ ನಮಗಾಗಿ ನಮ್ಮ ಬದುಕನ್ನು ಬದುಕುವುದು ಯಾವಾಗ? ನಮ್ಮ  ಪೋಷಕರ ತಲೆಮಾರಿನ ಎಲ್ಲ ಅಪ್ಪ ಅಮ್ಮಂದಿರು ನಮ್ಮ ಸಂಸ್ಕೃತಿ ಹಾಗು ಸಮಾಜದ ದೃಷ್ಟಿಕೋನದಿಂದಲೇ ಮಕ್ಕಳನ್ನು ಬೆಳೆಸಿದರು . ಅದು ಆ ಕಾಲಮಾನದ ಹಿತಾಸಕ್ತಿಯಿಂದ ಅನಿವಾರ್ಯವೂ ಹೌದಾಗಿತ್ತು! ನಾವೆಲ್ಲಾ ಯಾವುದೇ ಜಾತಿ ಧರ್ಮ  ಹಾಗೂ ಪಂಥದವರಾಗಿದ್ದರೂ  ನಮ್ಮ ಸಾಮಾಜಿಕ ಜೀವನ ಒಂದೇ ರೀತಿಯಲ್ಲಿ ನಡೆಯುತ್ತಿತ್ತು.

ಒಂಭತ್ತು ತಿಂಗಳು ಹೊತ್ತು, ಹೆತ್ತು ಮಗುವಾದ ನಂತ್ರ ಮಗುವಿನ ಉತ್ತಮ ಭವಿಷ್ಯಕ್ಕಾಗಿ ತಮ್ಮ ಭವಿಷ್ಯವನ್ನೇ ತ್ಯಾಗ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಅನೇಕ ತಾಯಂದಿರು ನನ್ನ ಸ್ನೇಹಿತರ ಪಟ್ಟಿಯಲ್ಲಿದ್ದಾರೆ . ಅದು ಅವರವರ ವೈಯಕ್ತಿಕ ನಿರ್ಧಾರ ! ಆದರೆ ನನಗೆ ಈ ತ್ಯಾಗ ಎನ್ನುವ ಪದವೇ ಒಂದು ಹೊರೆಯಂತೆ ಗೋಚರಿಸುತ್ತದೆ. ಈ ತ್ಯಾಗ ಎನ್ನುವುದು ಯಾವಾಗ ನಿರೀಕ್ಷೆಯಾಗಿ  ಪರಿವರ್ತನೆ ಹೊಂದುತ್ತದಯೆಯೋ ಆವಾಗ ಅದು ಮನುಷ್ಯನ ಯೋಚನಾ ಲಹರಿಯನ್ನು ಅಲ್ಲೋಲ್ಲ   ಕಲ್ಲೋಲ ಮಾಡಿಬಿಡುತ್ತದೆ .. ನೀವು ನಿಮ್ಮ ಮಕ್ಕಳಿಗಾಗಿ ತ್ಯಾಗ ಮಾಡಿದಿದಿರಾ ಮನಸಾರೆ  ಮಾಡಿದಿರಾ?ಫೈನ್ ಯು deserve  applause ! ನೀವು ನಿಮ್ಮ ಮಗು ನೀವು ಹೇಳಿದಂತೆ ಕೇಳಬೇಕು ನಿಮ್ಮ ಈಡೇರದ ಆಸೆ ಆಕಾಂಕ್ಷೆಗಳನ್ನು ಮುಂದೊಂದು ದಿನ ನೆರವೇರಿಸಬೇಕೆಂದು ಆಸೆ ಇಟ್ಟುಕೊಂಡು ತ್ಯಾಗ ಮಾಡಿದಿರಾ ? ಹಾಗಿದ್ದರೆ ನಿಮ್ಮ ತ್ಯಾಗ ಹಾಗೂ ಕಷ್ಟಗಳಿಗೆ ಬೆಲೆಯಿಲ್ಲ ! ಇದು ಪ್ರಕೃತಿ ನಿಯಮ !

ಈ ಅತಿಯಾದ ತ್ಯಾಗ ಎನ್ನುವ ಪದವನ್ನು ಬಳಸುವದು ನಾವು ಭಾರತೀಯರು ಮಾತ್ರ ! ಹಾಗೂ ಮಕ್ಕಳು ನಮ್ಮ ಈ ತ್ಯಾಗಗಳನ್ನು ನಿರಂತರ ಸ್ಮರಿಸುತ್ತ ನಮ್ಮನ್ನು ಕಡೆಗಣಿಸಬಾರದು ಎಂಬ ಅಲಿಖಿತ ನಿಯಮವನ್ನು ಹೊಂದಿರುವವರು ಕೂಡ ನಾವುಗಳು ಮಾತ್ರ !

ಪಾಶ್ಯಾತರಲ್ಲಿ ನಮ್ಮಷ್ಟು ಗೊಂದಲಗಳಿಲ್ಲ, ಅವರ ಬದುಕು ನೀರಿನಂತೆ  ತಿಳಿ ಹಾಗೂ ಸರಳ.... ! ಮಗು ಆದ ಕೂಡಲೇ ಅದಕ್ಕೊಂದು ಪ್ರತ್ಯೇಕ ತೊಟ್ಟಿಲು, ಸ್ವಲ್ಪ ನಡೆದಾಡುವಂತಾದ ಕೂಡಲೇ ಪ್ರತ್ಯೇಕ ಕೋಣೆಯಲ್ಲಿ ಮಲಗಲು ಅಭ್ಯಾಸಿಸುತ್ತಾರೆ . ಮಗುವಿಗಾಗಿ ಅವರೆಂದು ತಮ್ಮ ವೈಯಕ್ತಿಕ ಜೀವನ ಹಾಗೂ ಬದುಕನ್ನು ಬದಲಾಯಿಸಿಕೊಳ್ಳುವುದಿಲ್ಲ  ಬದಲಾಗಿ ಮಗುವನ್ನೇ ತಮ್ಮ ಅಗತ್ಯಕ್ಕೆ ತಕ್ಕನಾಗಿ ಹೊಂದಿಕೊಳ್ಳುವಂತೆ ಬೆಳೆಸುತ್ತಾರೆ !

ನಮ್ಮಲ್ಲಿ ಮಗು ಆದ ಕೂಡಲೇ ಅದು ಅಪ್ಪ-ಅಮ್ಮನ ಮಧ್ಯೆ ಬಂದು ಮಲಗುವದೂ ಒಂದು ಪೋಷಕರ ಅಲಿಖಿತ ನಿಯಮದಲ್ಲೊಂದು ! ಅಲ್ಲಿಗೆ ಗಂಡ ಹೆಂಡತಿಯ ಮಿಲನದ ತ್ಯಾಗ ! ಯಾವಾಗ ಮಗುವಿಗೆ ಸ್ವಲ್ಪ ತಿಳುವಳಿಕೆ ಬಂದು ಓಡಾಡಲು ಶುರು ಮಾಡುತ್ತದೆಯೋ ಆಗ ಗಂಡ ಹೆಂಡತಿ ಮಗುವಿನ ಮುಂದೆ ತಬ್ಬುವುದಾಗಲಿ ಮುತ್ತಿಡುವುದಾಗಲಿ ನಿಷೇಧ . ಅಲ್ಲಿಗೆ ರಸಿಕತೆಯ ತ್ಯಾಗ !
ಮಗು ಶಾಲೆಗೆ ಹೋಗುವಂತಾದಾಗ ಅದರ ಆಗು ಹೋಗು ಹೋಂ ವರ್ಕ್ ಮಾಡಿಸಲು ತಾಯಿ ತನ್ನ ಕೆಲಸಕ್ಕೆ ರಾಜೀನಾಮೆ ಕೊಡುವ ತ್ಯಾಗ ! ಮಗುವಿನ ರಜೆಗಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತು ಇನ್ನೊಂದುಸಲ ಮೊದಲನೇ ತರಗತಿಯಿಂದ ೧೦ನೇ ತರಗತಿಯವರೆಗೆ ಅಭ್ಯಾಸ ಮಾಡಲು ತನ್ನ ಹವ್ಯಾಸಗಳನ್ನು ಬದಿಗಿಡುವ ತ್ಯಾಗ! ಗಂಡ ಹೆಂಡತಿ ಮಗುವನ್ನು ಬಿಟ್ಟು  ಪ್ರತ್ಯೇಕವಾಗಿ ಸುತ್ತಾಡುವುದು ಪ್ರವಾಸ ಮಾಡುವುದು ಅಲಿಖಿತ ಅಪರಾಧ ಪಟ್ಟಿಗಳಲ್ಲೊಂದು !

ಇಷ್ಟೆಲ್ಲಾ ತ್ಯಾಗಗಳ ಮಧ್ಯೆ ಮಗು ೧೬ ತುಂಬಿ ಕಾಲೇಜು ಮೆಟ್ಟಿಲೇರಲು ತಯಾರಿ ನಡೆಸುವಾಗ " ಅಯ್ಯೋ ಹದಿನೈದು ವರ್ಷ ಕಳೆದು ಹೋಯಿತು ನನಗಾಗಿ ನಾನೇನೂ ಮಾದ್ಲಿಲ ಎಂದು ಕನ್ನಡಿ ಮುಂದೆ ನಿಂತು ತನ್ನ ಸ್ಥೂಲ ಕಾಯ ಹಾಗೂ ನೆರೆತ ಕೂದಲು, ನೆರಿಗೆ ಬಿದ್ದ ಮುಖ ನೋಡಿ ತಾಯಿ ಅನ್ನಿಸಿಕೊಂಡ ಅಮ್ಮನಿಗೆ  ಮಗಳಿಂದ " ಅಮ್ಮ ನೀನು ಸರಿಯಾಗಿ ಮೇಂಟೈನ್  ಮಾಡಿಲ್ಲಕೊಂಡಿಲ್ಲ, ನೋಡು ಎಷ್ಟು ವಯಸ್ಸಾದಂತೆ ಕಾಣುತ್ತಿ  " ಎಂಬ ಹಿತವಚನ ! ಇಷ್ಟು ವರ್ಷ ಯಾರಿಗಾಗಿ ಎಲ್ಲವನ್ನು ತ್ಯಾಗ ಎಂದುಕೊಂಡು ನಿಮ್ಮತನವನ್ನು ಮರೆತುಬಿಟ್ಟಿರೋ ಅವರೇ ನಿಮ್ಮನ್ನು ಪ್ರಶ್ನಿಸಲು ಹಾಗೂ ಉಪದೇಶ ಕೊಡಲು   ಶುರು ಮಾಡಿದಾಗ , ಒಂದೊಂದೇ ತ್ಯಾಗ ಬಂದು  ಅಣಕಿಸಲು ಶುರು ಮಾಡುತ್ತದೆ !

ಹೌದು ಇದನ್ನೆಲ್ಲಾ ನಮ್ಮ ಅಮ್ಮನ ತಲೆಮಾರಿನವರು ಮಾಡಿರಬಹುದು , ನಮ್ಮ ಜನರೇಶನ್ ತುಂಬಾ ಪ್ರಾಕ್ಟಿಕಲ್  ಎಲ್ಲವನ್ನು ಅಳೆದು ತೂಗಿ ಮಾಡುತ್ತೇವೆ  ಎಂದು ಹೇಳುವ ನಾವುಗಳು ನಮ್ಮ ಅಮ್ಮನ , ಅಜ್ಜಿಯ  ಯೋಚನಾ ಲಹರಿ ಹಾಗೂ ನಡವಳಿಕೆಯನ್ನು ನಮಗೆ ಗೊತ್ತಿಲ್ಲದೇ ನಮ್ಮ ಕ್ರೋಮೋಸೋಮ್ ಗಳಲ್ಲಿ ಹೊತ್ತು ತಂದಿರುತ್ತೇವೆ, ಅಮ್ಮನಂತಲ್ಲದಿದ್ದರೂ ಅಮ್ಮನ ಕೆಲವು ಅಂಶಗಳನ್ನು ನಾವು ಹೊಂದಿರಲೇ ಬೇಕಲ್ಲವೇ ?!

ನಾವೆಂದು ಮಕ್ಕಳಿರುವಾಗ ಅಮ್ಮನಿಗೆ ಹೀಗೆಲ್ಲ ತ್ಯಾಗ ಮಾಡಿ ನಮ್ಮನ್ನು ಬೆಳೆಸು ಎಂದು ಹೇಳಿರಲಿಲ್ಲ , ಈಗ ಮುಂದೆ ನಮ್ಮ ಮಕ್ಕಳು ನಮ್ಮಿಂದ ಅದನ್ನು ನಿರೀಕ್ಷಿಸುವುದೂ ಇಲ್ಲ! ಇಷ್ಟೆಲ್ಲಾ ಮಾಡಿದ ಅಮ್ಮ ಈಗ ಇಳಿಸಂಜೆಯ ವಯಸ್ಸಿನಲ್ಲಿದ್ದರೂ ಅವಳೆಂದಿಗೂ ಕ್ರಿಯಾಶೀಲ ವ್ಯಕ್ತಿ ! ಅವಳನ್ನು ಪ್ರೀತಿಸಿಯೂ ನಾವೆಂದೂ ಅವಳನ್ನು ಅವಳ ತ್ಯಾಗಕ್ಕಾಗಲೀ , ನಿಸ್ವಾರ್ಥ ಪ್ರೀತಿಗಾಗಲಿ ಧನ್ಯತೆಯಿಂದ ನೆನೆಸುವದಿಲ್ಲ! ತಾಯಿಯಾಗಿರುವ ನಮಗೆಲ್ಲರಿಗೂ ನಮ್ಮ ತಾಯಿಗಿಂತ ಮಗಳೇ ಹೆಚ್ಚಿನ ಪ್ರಿಯೋರಿಟಿ . ಅಲ್ಲೆಲ್ಲೋ ದೂರ ನಿಂತು ಮೂಕ ಪ್ರೇಕ್ಷಕಿಯಾಗಿರುವ ಅಮ್ಮ ನಸುನಕ್ಕು ಹೇಳುತ್ತಾಳೆ , ತಾಯಿಯಾಗುವುದೆಂದರೆ ತ್ಯಾಗವಲ್ಲ ಜವಾಬ್ದಾರಿ !

ನಮ್ಮ ತ್ಯಾಗಗಳು ನಮಗೆ ಫಲ ಕೊಡದೆ ಇರಬಹುದು ಆದರೆ ಜವಾಬ್ದಾರಿಗಳು ನಮಗೆ ಬದ್ಧತೆಯನ್ನು ಕಲಿಸುತ್ತವೆ . ಎಲ್ಲರೂ ಎಲ್ಲವೂ ಶೇಷ್ಠವಾಗಬೇಕಿಲ್ಲ ಹಾಗೂ ಅಸಾಧಾರಣ ಎನಿಸಿಕೊಳ್ಳಬೇಕಿಲ್ಲ . ಸಾಧಾರಣವಾಗಿದ್ದುಕೊಂಡೇ ವಿಶೇಷರಾಗಿರೋಣ ! ಶ್ರೇಷ್ಠತೆಗೆ ಎಲ್ಲರನ್ನೂ ಮೆಚ್ಚಿಸುವ ಹಂಬಲವಿದೆ ವಿಶೇಷತೆಗೆ ಆ ಕಟ್ಟುಪಾಡುಗಳಿಲ್ಲ ನಮಗೆಲ್ಲ ಜವಾಬ್ದಾರಿಯುತ ಪೋಷಕರಾಗುವ ಅಗತ್ಯತೆ ಇದೆಯೇ ಹೊರತು ತ್ಯಾಗದ ಅನಿವಾರ್ಯತೆ ಇಲ್ಲ !

ಚಿಕ್ಕ ಪುಟ್ಟ ತ್ಯಾಗ ಹಾಗೂ ಹೊಂದಾಣಿಕೆ ಜೀವರಾಶಿಯ ಪ್ರತಿ ಜೀವಿಯಲ್ಲಿಯೂ ಇದೆ . ಅದು ನಮ್ಮ ಬದುಕಿನ ಒಂದು ಸಣ್ಣ ಭಾಗವೇ ಹೊರತು ಅದೇ ಜೀವನವಲ್ಲ! , ನಮ್ಮನ್ನು ನಾವು ಪ್ರೀತಿಸುವಂತಾಗೋಣ , ಜೀವನ್ಮುಖಿಗಳಾಗೋಣ !


Sunday, July 6, 2014

ಕಬ್ ಆಯೆಂಗೆ ಅಚ್ಛೆ ದಿನ್ ??!!!

     
     
ಮೋದಿಯನ್ನು ಇಷ್ಟಪಡುವ ಅನೇಕ ಭಾರತೀಯರಲ್ಲಿ ನಾನು ಒಬ್ಬಳು .  "ಅಚ್ಛೆ  ದಿನ್" ಎಂಬ ಕಾನ್ಸೆಪ್ಟ್  ಇಟ್ಟುಕೊಂಡೇ ಕೊಟಿ ಕೋಟಿ ಭಾರತೀಯರ ಮನ ಗೆದ್ದ ಮೋದಿಯವರು ಈ ದೇಶದ ಪ್ರಧಾನ ಮಂತ್ರಿ . ನಾನೋ ಯಕ:ಶ್ಚಿತ್  ಅಭಿಮಾನಿ . ಎನೇ ಇರಲಿ ಈ ದೇಶಕ್ಕೊಂದು ಭವಿಷ್ಯವೇ ಇಲ್ಲ ಎಂದು ಭಾವಿಸಿದ್ದ ಅನೇಕ ಯುವಜನರಲ್ಲಿ  ಸಾವಿರಾರು ಆಶಾಗೋಪುರ ಕಟ್ಟಿಕೊಂಡು ನಮ್ಮ ದೇಶ ಹೇಗೆಲ್ಲ ವೃದ್ಧಿಯಾಗಬಹುದು ಮತ್ತು ಅದನ್ನು ಹೀಗೆ ಕಣ್ಣಾರೆ ಎರೆಡು  ತಲೆಮಾರು ನೋಡಿ ಆನಂದಿಸಬಹುದು ಎಂಬ ಕಾಲ್ಪನಿಕ ಖುಷಿಯನ್ನೇನೋ ತಮ್ಮ ಭಾಷಣದ ಮೂಲಕ ಕೊಟ್ಟ ಮೋದಿಯವರಿಗೆ  ಧನ್ಯವಾದಗಳನ್ನು ತಿಳಿಸುತ್ತ ಕೆಲ ವಿಷಯಗಳನ್ನ ಚರ್ಚಿಸೋಣ .

ನಾನು ಬರೆಯುತ್ತಿರುವುದು ಯಾರ ವೈಯಕ್ತಿಕ ವಿಚಾರವೂ ಅಲ್ಲ . ನನ್ನ ನಿರೀಕ್ಷೆ  ಅಪಾರವಾದ ಕಾರಣಕ್ಕೋ ನಾ  ಮೆಚ್ಚಿದ  ನಾಯಕ ಅದನ್ನು ಪೂರ್ಣ ಪ್ರಮಾಣದಲ್ಲಿ ಕೊಡಲು ಸಾಧ್ಯವಿಲ್ಲದಾಗಿ , ಯಾಕೋ ಎಲ್ಲ ಅಶ್ವಾಷಣೆಗಳು ಹುಸಿ ಎಂದೆನಿಸಲು ಇನ್ನು ಸಮಯ ಬಂದಿರದ ಕಾರಣಕ್ಕೋ ಅಥವಾ ತೀರ ಈಗಲೇ ಹೀಗೆ ಎಂದು ಹೇಳುವ ಅನಿರ್ದಿಷ್ಟ ಕಾಲವಾಗಿರುವುದರಿಂದಲೋ ನನ್ನ ಮನಸ್ಸಿನ್ನಲ್ಲಿ ಒಂಥರ ಚಡಪಡಿಕೆ ಶುರುವಾಗಿಬಿಟ್ಟಿದೆ ಕಾರಣ ಬಜೆಟ್!

ದೇಶದ ಆರ್ಥಿಕ ಪರಿಸ್ತಿತಿ ಹದಗೆಟ್ಟಿದೆ ದಶಕಗಳ ಕಾಲ ಕೈ ಆಡಳಿತದಿಂದಾಗಿ ದೇಶದ ಬೊಕ್ಕಸ ಖಾಲಿ ಯಾಗಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದೇವೆ ಎನ್ನುವುದೇನೋ ದಿಟ . ಆರ್ಥಿಕ ಬಿಕ್ಕಟ್ಟಿನ ರೂವಾರಿಗಳು ಯಾರೇ ಆಗಿರಲಿ ಅನುಭವಿಸುವವರು ಮಾತ್ರ ಜನಸಾಮಾನ್ಯರು . ಹೀಗೆ ಪ್ರತಿ ಬಿಕ್ಕಟ್ಟುಗಳನ್ನು ಸರಿ ಮಾಡಲು ಜನಸಾಮಾನ್ಯರೇ ಬೇಕಾಗಿದ್ದಲಿ ಯಾವ ಪುರುಷಾರ್ಥಕ್ಕಾಗಿ ನಾವು ನಾಯಕರನ್ನು ಆರಿಸಬೇಕು? ಬೇರೆ ಯಾವುದೇ ಪಕ್ಷ ದೇಶದ ಆಡಳಿತ ಚುಕ್ಕಾಣಿ ಹಿಡಿದುಕೊಂಡು ಆರ್ಥಿಕ ಸಮಸ್ಯೆ ನಿವಾರಣೆಯಾಗಲು ಬೇರೆ ದಾರಿ ಇಲ್ಲ ಬೆಲೆ ಹೆಚ್ಚಳ ಮಾಡಲೇಬೇಕು ಎಂದಿದ್ದರೆ ಇವರ ಹಣೆಬರಹವೇ ಇಷ್ಟು ಎಂದು ಹಲಬುತ್ತ ಜೀವನ  ಸಾಗಿಸುತ್ತಿದೆವೋ ಏನೋ ? ಆದರೆ ದೇಶ ಕಾಣದ ಅತೀ ಪ್ರಭಾವಿ ವ್ಯಕ್ತಿಯಾದ ಮೋದಿಯವರ ನೇತೃತ್ವದ ಸರ್ಕಾರದ್ದು ಇದೇ ಮಾತಾದರೆ ಎಂಥ ವಿಪರ್ಯಾಸ ?

ರೈಲ್ವೆ ಆಯ್ತು, ಸಿಲಿಂಡರ್ ಆಯ್ತು , ಹಣ್ಣು -ತರಕಾರಿ ಆಯ್ತು ,ಸರಕು ಸಾಗಣೆ ಆಯ್ತು ,ಪೆಟ್ರೋಲ್ -ಡೀಸೆಲ್ ಆಯ್ತು ,ಸರಿ ಹೀಗೆ ಏರುತ್ತಲೇ ಇರಲಿ, ಈ ಏರಿಕೆ ಇಂದ ದೇಶದ ಆರ್ಥಿಕ ಬಿಕ್ಕಟ್ಟು ನಿವಾರಣೆ ಯಾಗುವುದಾದರೆ ಸಂತೋಷ ! ಪ್ರತಿ  ಜನ ಸಾಮಾನ್ಯನು ತಾನು ಕಷ್ಟ ಪಟ್ಟು ದುಡಿದ ಹಣದಲ್ಲಿ ಪ್ರತಿ ತಿಂಗಳು ಇಂತಿಷ್ಟು ಅಂತ ಟ್ಯಾಕ್ಸ್ ಕಟ್ಟುತ್ತಲೇ ತನ್ನ ವೃತ್ತಿ ಜೀವನ ಆರಂಭಿಸುತ್ತಾನೆ . ಈ ರೀತಿಯ ಬೆಲೆ ಏರಿಕೆಯ ಪ್ರಸಂಗ ಬಂದಾಗ ಅಯ್ಯೋ ಕರ್ಮವೇ ಎಂದುಕೊಂಡು ಚುರೋ ಪಾರೋ ಬೇಜಾರು ಮಾಡಿಕೊಂಡು ಎ೦ದಿನಂತೆಯೇ ಜೀವನ ಸಾಗಿಸುತ್ತಾನೆ . ಇಂತಿಪ್ಪ ಪಾಪದ ಜನಸಾಮಾನ್ಯನ ಹೊಟ್ಟೆ ಮೇಲೆ ಹೊಡೆದು ಹೊಡೆದು ಆರ್ಥಿಕ ಬಿಕ್ಕಟ್ಟು ನಿವರಣೆಯಾಗಬೇಕಿದ್ದರೆ ಮೊದಿಯಂಥ ನಾಯಕ ನಮಗೆ ನಿಜವಾಗಿಯೂ ಬೇಕಾಗಿತ್ತೆ ??

ಮೋದಿಯ ನೇತೃತ್ವದ  ನಮ್ಮ ಪಾರ್ಲಿಮೆಂಟ್ ಈ ದೇಶ ಕಂಡ ಮಹಾನ್ ದೇಶ ಭಕ್ತರನ್ನು ಒಳಗೊಂಡಿದೆ ಅಲ್ಲವೇ? ಜನ ಸೇವೆಯೇ ಜನಾರ್ದನ ಸೇವೆ , ನಮಗೆ ದುಡ್ಡು ಮಾಡುವ ಚಟವಿಲ್ಲಾ ಮೋದಿಯನ್ನು ಪ್ರಧಾನ ಮಂತ್ರಿಯನ್ನಾಗಿಸುವುದಷ್ಟೇ ನಮ್ಮ ಗುರಿ . ಯಾವ ಯಾವುದೊ ಕ್ಷೇತ್ರದವರು ಇನ್ಯಾವುದೋ ಕ್ಷೇತ್ರದಿಂದ ಸ್ಪರ್ಧಿಸಿ  ಭಾರತ ವನ್ನು ಹೊಸ ದಿಗಂತಕ್ಕೆ ಕರೆದುಕೊಂಡು ಹೋಗುತ್ತೇವೆ ಎಂದು ಪುಂಖಾನು ಪುಂಖ ಭಾಷಣ ಮಾಡಿ ಓಟು ಗಿಟ್ಟಿಸಿಕೊಂಡು M.P  ಯಾಗಿ ಸಕಲ ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡು ಈಗೆ ಜಾಣ  ಕುರುಡು ಪ್ರದರ್ಶಿಸುತ್ತಿದ್ದಾರೆ !

ಅಲ್ಲ ಸ್ವಾಮೀ ಈ ಪರಮ ದೇಶ ಭಕ್ತರು ಜನ ಸೇವೆಗಾಗೆ ಜೀವನ ಮುಡುಪಿಟ್ಟವರು ಯಾಕೆ ಬೆಲೆ ಏರಿಕೆಯ ವಿಷಯ ಬಂದಾಗ ಈ ರೀತಿ ವರ್ತಿಸುತ್ತಾರೆ ?? ಒಬ್ಬ M.P ಯ ವಾರ್ಷಿಕ ಆದಾಯ ಮತ್ತು ಅವನ ಕರ್ಚು-ವೆಚ್ಚಗಳು ಸವಲತ್ತುಗಳು ಎಲ್ಲ ಸೇರಿ ಬರೋಬ್ಬರಿ ೫೪ ಲಕ್ಷ .(54*543= ಲೆಕ್ಕ ಹಾಕಿ ) ಹೀಗಿರುವಾಗ  ಯಾಕೆ ಎಲ್ಲ ಮಂತ್ರಿಗಳು ಮತ್ತು M.P ಗಳು ಸೇರಿಕೊಂಡು ತಮ್ಮ ಅರ್ಧ ಸಂಬಳವನ್ನು ಮತ್ತು ಶೋಕಿ ಸವಲತ್ತುಗಳನ್ನು ದೇಶದ ಹಿತಕ್ಕಾಗಿ ಕೆಲ ಸಮಯ ಕಡೆ ಪಕ್ಷ ಆರ್ಥಿಕ ಬಿಕ್ಕಟ್ಟು ನಿವಾರಣೆ ಯಾಗುವ ತನಕವಾದರೂ ಕೊಡಬಾರದು  ??  

ಜನ ಸಾಮಾನ್ಯನು ದುಡಿಯುವುದೇ ಬದುಕುವದಕ್ಕಾಗಿ ತನ್ನ ಜೀವೊನೋಪಾಯ ನಡೆಸಲು ಉದ್ಯೋಗವನ್ನು ಅವಲಂಬಿಸಿರುತ್ತಾನೆ . ಆ ದುಡಿಮೆ ಇಂದ ಮನೆ ಮಕ್ಕಳು ಸಂಸಾರ ಮತ್ತೆ ಸರ್ಕಾರದ ಪಾಲದ ಟ್ಯಾಕ್ಸ್ . ಇಷ್ಟೆಲ್ಲಾ ಮಾಡಿ ನಮ್ಮನ್ನು ನಮ್ಮ ದೇಶವನ್ನು ಒಳ್ಳೆ ರೀತಿಯಲ್ಲಿ ನಡೆಸುಕೊಂಡು ಹೋಗಲಿ ಎಂದು ಪ್ರತಿ ಸಲವೂ ಬಣ್ಣ ಬಣ್ಣದ ಕನಸು ಕಟ್ಟಿಕೊಡುವ ಅಧಿಕಾರಾಸೆಯ ಜನನೀಚರನ್ನು   ಆರಿಸಿ ಅವರ ಕೈಗಳಿಗೆ ಅಧಿಕಾರ ಚುಕ್ಕಾಣಿ ಕೊಟ್ಟು . ಅವರ ಹತ್ತು ತಲೆ ಮಾರು ತಿಂದು ತೆಗುವಷ್ಟು ದುಡ್ಡು ಮಾಡಿ ಕೊಟ್ಟು , ಅವರ ಎಲ್ಲ ಶೋಕಿ ಸವಲತ್ತುಗಳಿಗೆ ಮೂಕ ವಿಸ್ಮಿತರಾಗಿ, ನೋಡಿ ನಮ್ಮ ಟ್ಯಾಕ್ಸ್ ದುಡ್ಡಿನಿಂದ ಅವರ ಹೆಂಡರು ಮಕ್ಕಳು ವಿಲಾಸಿ ಜೀವನ ನಡೆಸುತ್ತ , ಕೈಗೊಬ್ಬ ಕಾಲಿಗೊಬ್ಬ ಆಳು ಕಾಳು , ಉಚಿತ ಸಾರಿಗೆ, ರೈಲ್ವೆ ವಿಮಾನ ಪ್ರಯಾಣ , ಉಚಿತ ಆಸ್ಪತ್ರೆ ವೆಚ್ಚ , ಇಷ್ಟೆಲ್ಲಾ  ಸೌಕರ್ಯ (ಹೆಂಡತಿ/ಗಂಡನ) ಒಳಗೊಂಡ ಜನ ನಾಯಕರೆನಿಸಿಕೊಂಡವರು ತಮ್ಮ ಆದಾಯದ ಮುಕ್ಕಾಲಂಶವನ್ನು ಕೊಟ್ಟರು ಸಾಕಾದಿತು , ನಮ್ಮ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಲೇ ಬಾರದೆಂದಲ್ಲ , ಮಂತ್ರಿಗಳು, ೫೪೩ ಜನ M.P ಗಳು ಅಗತ್ಯ ಬಿದ್ದರೆ M.L.A ಗಳ ಆದಾಯದಿಂದಲೂ ತೆಗೆದುಕೊಳ್ಳಬಹುದಲ್ಲವೇ? ಆಗ ನಮ್ಮ ಅಗತ್ಯ ಬೆಲೆ ಏರಿಕೆ ತುಸು ಇಳಿಮುಖವಾದಿತು . 

ಆದರೆ ಕೊಡುವವರ್ಯಾರು ? ತೆಗೆದುಕೊಳ್ಳುವವರು ಯಾರು?? ಇಷ್ಟು ಕಷ್ಟ ಪಟ್ಟು  M.P  M.LA  ಸೀಟ್ ಗಿಟ್ಟಿಸಿಕೊಂಡು ಗಳಿಕೆಯನ್ನೆಲ್ಲ ಬ್ಯಾಂಕ್ ಬ್ಯಾಲೆನ್ಸ್ ಮಾಡಿಡುವ , ತಮ್ಮ ವಯಕ್ತಿಕ ಕೆಲಸ ಕಾರ್ಯಗಳನ್ನು ಸರ್ಕಾರದ ಸವಲತ್ತುಗಳನ್ನು ಪಡೆದುಕೊಂಡೆ ಮಾಡುವ ಹಣ ದಾಹಿ ಅಧಿಕಾರಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಆದರೂ ಮೋದಿ ಚುಕ್ಕಾಣಿ ಹಿಡಿದ ಸು ಸಂಧರ್ಭದಲ್ಲೂ ಇದು ಆಗದಿದ್ದರೆ ಇನ್ನೆಂದು ಆದಿತು ? ಇಷ್ಟು ಬೇಗ ಒಂದು ನಿರ್ಧಾರಕ್ಕೆ ಬಂದು ಬಿಡುವುದು ಅವಸರವೇ ಇರಬಹುದು . ನಿರ್ಧಾರ ಏನೇ ಆದರೂ ಬೆಲೆ  ಏರಿಕೆಯ ಮೊದಲ  ಬಿಸಿ ಅನುಭವ ಪಡೆಯುವ ಸುದೈವಿಗಳಲ್ಲವೇ ನಾವುಗಳು? "Make the lie big, make it simple,keep saying it,and eventually people will believe it!!" ಹಿಟ್ಲರ್ ಹೇಳಿಕೆ  ಅದೇಕೋ ನಿಜವೆನಿಸುತ್ತಿದೆ!.  ಕಬ್ ಆಯೆಂಗೆ ಅಚ್ಚೆ ದಿನ್ ?? :( :'( :(  (Feeling  hopeless )




Tuesday, April 30, 2013

ಓಟು... ನೋಟು ... ಬಿಡಿಸಲಾಗದ ಒಗಟು !


         

         ಮನಸ್ಸಿನಾಳದಲ್ಲಿ  ತುಂಬಾ ಗೊಂದಲಗಳು , ನನ್ನದೆ  ಆದ   ಪೂರ್ವ ನಿರ್ಧರಿತ ಸೊ ಕಾಲ್ಡ್ ಸ್ಟ್ಯಾಂಡರ್ಡ್ ವಿಚಾರಧಾರೆಗಳು  ತಮ್ಮೊಳಗೆ ತಾವು ವ್ಯವಸ್ಥಿತವಾಗಿ  ಘರ್ಷಣೆಗೊಳಗಾದವು  . ಬರೆಯಲು  ಸರಕಿಗೇನೂ  ಕಡಿಮೆ ಇಲ್ಲ . ಎಲ್ಲಿಂದ ಬರೆಯೋದು , ಎಲ್ಲಿ ಮುಗಿಸೋದು ? ಯಾವ  ವಿಷಯ ಎತ್ತಿ ಕೊಳ್ಳೋದು  ಎಂದು ಒದ್ದಾಟ ಶುರುವಾಗಿದೆ .

ನನ್ನಷ್ಟಕ್ಕೆ ನಾನು ಮಹಾನ್ ದೇಶ ಪ್ರೇಮಿ ಎಂದು ಕಳೆದ ೨೦ ವರ್ಷಗಳಿಂದ ನನ್ನ ಭ್ರಮಾ ಲೋಕದಲ್ಲಿದ್ದೆ.  ಹದಿನೆಂಟನೆ ವಯಸ್ಸಿಗೆ  ಮತ ಚಲಾಯಿಸಲು ಅಧಿಕಾರವಿದೆ ಎಂದು ಹೈ ಸ್ಕೂಲ್ ದಿನಗಳಲ್ಲಿ  ಓದಿದ ನೆನಪು. ನನಗೆ 18 ದಾಟಿ ಆಗಲೇ ಐದು ವರ್ಷ ಕಳೆದರೂ ನನಗೆ ಒಮ್ಮೆಯೂ ಮತ ಚಲಾಯಿಸಲು ಸಾಧ್ಯವೇ ಆಗಲಿಲ್ಲ. ಬರೋಬ್ಬರಿ ಆರು ವರ್ಷದ ಬಳಿಕ ನನಗೆ voter ID ಸಿಕ್ಕಿರುವುದು  ಪರಮ ಅದೃಷ್ಟವೇ ಸರಿ . ಪ್ರತೀ ವರ್ಷವೂ ಏನಾದರೂ ತಪ್ಪು ಮಾಹಿತಿ ಎಂಟ್ರಿ ಆಗಿದ್ದರಿಂದ ಕೆಲವೊಮ್ಮೆ ಗಣತಿಗೆ ಬಂದಾಗ ನನ್ನ ಹೆಸರನ್ನೇ ನೊಂದಾಯಿಸಿ ಕೊಳ್ಳದೆ ಹೋದ್ದರಿಂದ ಇಷ್ಟೆಲ್ಲಾ ಗೊಂದಲಗಳು. ಅದು ಅಷ್ಟು  ಕಷ್ಟದ ಕೆಲಸವೂ ಅಲ್ಲ. ಯಾರಾದರೊಬ್ಬ ಏಜೆಂಟ್ ನ  ಕೈ ಬಿಸಿ  ಮಾಡಿದ್ದರೆ 15 ದಿವಸದಲ್ಲೇ ಮತದಾರನ ಚೀಟಿ ಲಂಚ  ಕೊಟ್ಟವನ ಕೈ ಸೇರಿರುತ್ತದೆ .  ಅದಿರಲಿ  ಬಿಡಿ  ಲಂಚ  ಕೊಟ್ಟರೂ  ಕೈಗೆ ಸಿಗದೇ ಓಡುವ  ಏಜೆಂಟ್ ರನ್ನು ಇಟ್ಟುಕೊಂಡು ಮತ ಚಲಾಯಿಸಲು  ಲಂಚ  ಕೊಟ್ಟು, ನಮ್ಮನ್ನಾಳುವವರು ಲಂಚಕೊರರಾಗಿರಬಾರದು  ಎಂದು  ಪುಂಖಾನು ಪುಂಖವಾಗಿ  ಭಾಷಣ ಮಾಡುತ್ತೇವೆ !  ಇನ್ನು  ನನ್ನಂತೆ  ಸ್ವಘೋಷಿತ ದೇಶಭಕ್ತನದ್ದು '' ಅರೇ  ನನ್ನದೊಂದು ವೋಟಿನಿಂದ  ದೇಶ ಉದ್ಧಾರ ಆಗುತ್ತಾ ?" ಎನ್ನುವ ಉಡಾಫೆ  ಮಾತು. ಹೀಗೆ ಪ್ರತಿಯೊಬ್ಬ ನಾಗರಿಕನು ನನ್ನದೊಂದು ನನ್ನದೊಂದು ಎನ್ನುತ್ತಲ್ಲೇ  ಒಂದು   ಹತ್ತಾಗಿ, ಹತ್ತು ನೂರಾಗಿ,  ನೂರು  ಸಾವಿರಾಗಿ , ಸಾವಿರ ಲಕ್ಷವಾಗಿ, ನಮ್ಮ  ರಾಜ್ಯವನ್ನೇ  ತೆಗೆದುಕೊಳ್ಳುವುದಾದರೆ 18 ರಿಂದ ಮೇಲ್ಪಟ್ಟ ಹಾಗೂ  25 ದಾಟಿರದ  ವಯೋಮಾನದ  ಲಕ್ಷಾಂತರ  ವಿದ್ಯಾರ್ಥಿಗಳು ಮತ ಚಲಾಯಿಸುವುದೇ  ಇಲ್ಲ.  ನಾನು  ಎಂಜಿನಿಯರಿಂಗ್  ಓದುವಾಗ ಇಡೀ  ಕಾಲೇಜ್ ನಲ್ಲೆ  ಇಬ್ಬರೋ ಮೂವರೋ  ಮಾತ್ರ ವೋಟು ಮಾಡಿರುತ್ತಿದ್ದರು . M tech  ನಲ್ಲಂತೂ ಯಾರೂ ವೋಟ್  ಮಾಡಿದ ಸುದ್ದಿನೇ  ಇಲ್ಲ .


ಹೌದು  ವೋಟ್  ಮಾಡೋಣ ...  ಯಾರಿಗೆ?  ವೋಟ್  ಮಾಡಿದರೂ  ನಮ್ಮನ್ನು  , ನಮ್ಮ ದೇಶದ ಸಂಪತ್ತನ್ನು  ಇಡೀ  ಇಡೀಯಾಗಿ  ಲೂಟಿ  ಮಾಡುವುದನ್ನ  ಕಣ್ಣಾರೆ ನೋಡಿ  ಸಂಭ್ರಮಿಸಬೇಕೆ ? ನೀವು ಯಾರನ್ನೇ ಗೆಲ್ಲಿಸಿ ಯಾರನ್ನೇ  ಸೋಲಿಸಿ ನಮ್ಮ ದೇಶದ ಪರಿಸ್ಥಿತಿಯಲ್ಲಂತೂ ಸುಧಾರಣೆ  ದು:ಸಾಧ್ಯ. ಇಷ್ಟಾಗಿಯೂ  ಯಾವ ಸಂಭ್ರಮಕ್ಕೆ   ವೋಟ್  ಮಾಡಬೇಕು .? ಕೇವಲ ರಾಜಕಾರಣಿ  ಭ್ರಷ್ಟನಲ್ಲ  ನಮ್ಮ ದೇಶದ  ಪ್ರತಿಯೊಬ್ಬನೂ  ಭ್ರಷ್ಟನೇ  ಆಗಿ ಹೋಗಿರುವಾಗ , ಭ್ರಷ್ಟ  ಭ್ರಷ್ಟನನ್ನೇ  ಆರಿಸದೇ  ಬೇರೆ ದಾರಿ ಇಲ್ಲ . ನಮಗೆ ಎರಡು   ಮೂರೂ  ರುಪಾಯಿಯ ಭ್ರಷ್ಟತೆ , ನೂರು ಇನ್ನೂರರ  ಭ್ರಷ್ಟತೆ , ಐದು  ಸಾವಿರದ ಭ್ರಷ್ಟತೆ  ಭ್ರಷ್ಟತೆಯೇ ಅಲ್ಲ , ಯಾಕೆ ಹೇಳಿ , ನೂರಾರು ಸಾವಿರಾರು  ಕೋಟಿಯ  ಲೆಕ್ಕದಲ್ಲಿ  ಭ್ರಷ್ಟಾಚಾರ  ನಡೆಯುತ್ತಿರುವಾಗ  ನಮ್ಮದೇನು ಮಹಾ ? ಇದು ಭವ್ಯ  ಭಾರತದ ಪ್ರತೀ ಪ್ರಜೆಯ ಮನಸ್ಥಿತಿ . ಇದರಿಂದ  ನಾನೂ  ಹೊರತಾಗಿಲ್ಲ . ನಮ್  ಕಾಲೇಜ್ ಬಸ್ ಸ್ಟಾಪ್  ನಿಂದ  ಕದಿರೇನಹಳ್ಳಿ ಬಸ್ ಸ್ಟಾಪ್ ಗೆ ಹೋಗಲು ೫ ರೂಪಾಯಿ ಟಿಕೆಟ್ ತೆಗೆದುಕೊಳ್ಳಬೇಕು . ೫ ರುಪಾಯೀ  ಕೊಟ್ಟ ತಕ್ಷಣ ನೆಕ್ಸ್ಟ್  ಸ್ಟಾಪ್ ಏನಮ್ಮ  ಎಂದ ಕಂಡಕ್ಟರ್ ೫ ರುಪಾಯಿಗಳನ್ನು ತೆಗೆದುಕೊಂಡ  ತಕ್ಷಣವೆ ಎರೆಡು  ರುಪಾಯಿಯನ್ನು  ವಾಪಸ್ ಕೊಡುತ್ತಾನೆ ಟಿಕೆಟ್ ಕೊಡದೆಯೇ ! ಅಯ್ಯೋ  ಆ ವಯ್ಯನ್ನ ಯಾರೂ ಕೇಳೋರು ಅಂತ ನೆಕ್ಸ್ಟ್ ಸ್ಟಾಪ್ ಬಂದ್ ತಕ್ಷಣ ಇಳಿದು ಹೊರ ನಡೆಯುತ್ತೇವೆ . ದಿನಕ್ಕೆ ಸುಮಾರು ಜನರಿಗೆ  ಟಿಕೆಟ್ ನೀಡದೆ ಅನ್ಯಾಯವಾಗಿ  ಅವರನ್ನು ಭ್ರಷ್ಟರನ್ನಾಗಿಸಿ ತನ್ನ ಕಿಸೆ ತುಂಬಿಸಿಕೊಳ್ಳುವ ಸಾವಿರಾರು ಕಂಡಕ್ಟರ್ ಗಳು  ನಮ್ಮ ನಿಮ್ಮೆಲ್ಲರಿಗೂ  ಚಿರ ಪರಿಚಿತ. ಆದರೂ ನಾವು  ಭಾರತೀಯರು  ಗಾಂಧಿ ವಾದಿಗಳಲ್ಲವೇ  ಸರ್ವ ಕೃತ್ಯ  ಸಹಿಷ್ಣುಗಳು  ಮತ್ತು  ಮೂಕ ವೀಕ್ಷಕರು !


ರಸ್ತೆ ಅಪಘಾತದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುವ  ವ್ಯಕ್ತಿಯನ್ನು  ಆಸ್ಪತ್ರೆಗೆ ಸೇರಿಸಲು ಅವನೇನು ನಮ್ಮ ಬಂಧು ಬಳಗವೆ ? ಅಥವಾ ಸ್ನೇಹಿತನೆ ?  ಅವನ ಕರ್ಮ  ನಾವೇನು ಮಾಡೋಣ ಎನ್ನುವ  ರೀತಿಯಲ್ಲಿ ರಕ್ತದ  ಮಡುವಿನಲ್ಲಿ ಬಿದ್ದು ಹೊರಳಾಡುವನನ್ನು ನೋಡಿಯೂ  ನೋಡದಂತೆ ಹೋಗಿ , ಟಿವಿ ಚಾನೆಲ್ ಗೆ ಕಾಲ್  ಮಾಡಿ  ಮನುಶ್ಯತ್ವವೇ ಇಲ್ಲ  ಸರ್  ಅಂತ  ಭಾಷಣ ಕೊಡುವವರೂ  ನಾವೇ ! ಥೂ!  ಛಿ!  ನಾಚಿಕೆ  ಬರಬೇಕು  ನಮ್ಮ  ಜನಗಳಿಗೆ  ಎಂದು ಲಬೋ ಲಬೋ  ಬಾಯಿ ಬಡೆದು ಕೊಳ್ಳುವ  ಮಾಧ್ಯಮಗಳು, ನೇರ- ದಿಟ್ಟ- ನಿರಂತರ  ಎಂದು, ಉತ್ತಮ  ಸಮಾಜಕ್ಕಾಗಿ ಹಗಲಿರುಳು ಅವಿರತ  ಪ್ರಯತ್ನಿಸುತ್ತಿರುವ  ಮಾಧ್ಯಮದ  ಮಂದಿಗೆ , VTU ನ ಕುಲಪತಿಯ  ಹಗರಣಗಳು  ನಗಣ್ಯ , ಆದ್ರೆ  ಪೂಜೆ ಮಾಡಲು ದಕ್ಷಿಣೆ  ತೆಗೆದು ಕೊಂಡ ಭಟ್ಟರು ದೈವ ಭ್ರಷ್ಟರು !  ಆ ಅಭ್ಯರ್ತಿ ಬಳಿ ಅಷ್ಟು  ಕೋಟಿ ಆಸ್ತಿ ಇದೆ  ಇಷ್ಟು ಲಕ್ಷ ಜಪ್ತಿ ಮಾಡಲಾಯಿತು  ಎಂದು ಬೊಬ್ಬೆ ಇಡುವ ನಿರೂಪಕರಿಗೆ ತಮ್ಮ ಮಾಲಿಕರು ಕೋಟಿ ಕೋಟಿ  ಸುರಿದು MP ಸೀಟು  ಖರೀದಿಸಿದ್ದು  ಗೊತ್ತೇ ಇರುವುದಿಲ್ಲ ಪಾಪ. ಒಂದು ಪಕ್ಷವನ್ನು  ಮತ್ತು ಅದರ ಅಭ್ಯರ್ತಿಯನ್ನು ಟಾರ್ಗೆಟ್ ಮಾಡಿಟ್ಟುಕೊಂಡು  ಹಗಲಿರುಳು  ಅವರನ್ನು ನಿಂದಿಸಿ ಮಾರನೇ ದಿನ ಅವರ ಪರ ಜಾಹಿರಾತು  ನೀಡಿ ಅವರನ್ನು ಗೆಲ್ಲಿಸಿ ಎಂದು ಹೇಳುವ  ಈ ಮೂರ್ಖರು ನೇರವಾಗಿ ದಿಟ್ಟವಾಗಿ ನಿರಂತರವಾಗಿ ಮಣ್ಣು ತಿನ್ನುವ ಕೆಲಸವನ್ನಷ್ಟೇ ಮಾಡುತ್ತಿವೆ  ಅಷ್ಟೇ , ಇನ್ನೂ  ಇಂಥ ಅವಿವೆಕಿಗಳಿಂದ ಉತ್ತಮ ಸಮಾಜದ ನಿರೀಕ್ಷೆ ಬೇರೆ ಕೇಡು ! ನೀತಿ  ಸಂಹಿತೆಯನ್ನೇ ಮರೆತಿರುವ ಮಾಧ್ಯಮಗಳು  ರಾಜಕಾರಣಿಗಳಿಗೆ ಕಿವಿಮಾತು  ಹೇಳಿ ಕೊಡುತ್ತೇವೆ , ಎಂದು ಹೇಳಿಕೊಳ್ಳುವುದುಕ್ಕಿಂತ  ಹಾಸ್ಯಾಸ್ಪದ  ವಿಷಯ ಇನ್ನೊಂದು ಇಲ್ಲ !


ಒಂದು  ಉತ್ತಮ  ಸಮಾಜವನ್ನು ಕೇವಲ ಒಂದು ಮಾಧ್ಯಮ ಕೊಡುವ ಹಾಗಿದ್ದರೆ ನಮ್ಮ ದೇಶ ಎಂದೋ ರಾಮರಾಜ್ಯ ವಾಗಿ  ಬಿಡುತ್ತಿತ್ತು .  ಭ್ರಷ್ಟತೆಗೆ  ನಾವೆಲ್ಲರೂ  ಪ್ರತ್ಯಕ್ಷವಾಗಿ  ಪರೋಕ್ಷವಾಗಿ  ಕಾರಣೀಭೋತರಾಗಿದ್ದೆವೆ.  ಯಾಕೆಂದರೆ  ಮನೆಯ  ಕಸ ತೆಗೆಯುವುದು ನಮಗೆ ಮೊದಲಿನಿಂದ ಅಭ್ಯಾಸವಿಲ್ಲದ ಕೆಲಸ.  ಇದೇ  ನಮಗೂ ವಿದೇಶಿಯರಿಗೂ ಇರುವ ವ್ಯತ್ಯಾಸ .  ನಮ್ಮ ಮನೆಯ ಕಸವೇ ನಮಗೆ  ಅಸಹ್ಯ ಹುಟ್ಟಿಸುವುದಾದರೆ ನಮ್ಮ  ನಗರದ, ನಮ್ಮ ರಸ್ತೆಯ , ನಮ್ಮ  ದೇಶದ ಕಸವನ್ನು ಎಂದು   ತೆಗೆದೆವು?


WTC  ದಾಳಿಯ ನಂತರ  ಬಾಸ್ಟನ್ ನಲ್ಲಿ ಇನ್ನೊಂದು  ದಾಳಿ ನಡೆಯಲು ಬರೋಬ್ಬರಿ 12 ವರ್ಷಗಳೇ  ಬೆಕಾದವು. ಅದು  ಬ್ಲಾಸ್ಟ್  ಆದ ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ  ಯಾರು ಮಾಡಿದ್ದು  ಎಂದು  ತಿಳಿದು,  ಮುಂದಿನ  12 ಗಂಟೆಗಳಲ್ಲಿ  ಘಟನೆಯ ರೂವಾರಿಯ  ಹೆಣ  ಬಿದ್ದಿತ್ತು , ಇನ್ನೊಬ್ಬನನ್ನ ಹಿಡಿಯಲು ನಮ್ಮ ಪೊಲೀಸರಂತೆ ವರ್ಷಗಳನ್ನು  ತೆಗೆದು ಕೊಳ್ಳಲಿಲ್ಲ .  ಇಂಥ ಅನೇಕ ಸ್ಫೋಟಗಳು  ಗಲ್ಲಿ ಗಲ್ಲಿ ಗಳಲ್ಲಿ  ಪ್ರತಿ ವಾರ ನಮ್ಮ ದೇಶದಲ್ಲಿ ಮಾತ್ರವೇ ಆಗಲು ಸಾಧ್ಯ ! ಆಗ ಪಾಪ ಮಾಡಿದ  ಪುಣ್ಯಾತ್ಮರು  ಫೈವ್  ಸ್ಟಾರ್  ಹೋಟೆಲ್ಗಳಲ್ಲಿ  ನೆಮ್ಮದಿಯ ನಿಟ್ಟುಸಿರು  ಬಿಡುತ್ತಿರುವಾಗ , ಹಿಂದೂ ಉಗ್ರಗಾಮಿಗಳದ್ದೇ  ಕೈವಾಡ ಎಂದು  ಒಂದು ಪಕ್ಷ , ಮುಸ್ಲಿಂ ಉಗ್ರಗಾಮಿ ಎಂದು  ಇನ್ನೊಂದು ಪಕ್ಷ  ವೋಟು  ಬ್ಯಾಂಕಿಗಾಗಿ  ಕೆಸೆರೆರೆಚಾಟ ನಡೆಸುವುದನ್ನು ನೋಡಲು  ಎರೆಡೂ  ಕಣ್ಣುಗಳು  ಸಾಲವು ! .  ಅಪ್ಪಿ ತಪ್ಪಿ ಆರೋಪಿ  ಸಿಕ್ಕಿ ಹಾಕಿ ಕೊಂಡ  ಅಂದ್ರೆ   ಮುಗಿತು ಕತೆ. ಏನು  ರಾಜಮರ್ಯಾದೆ  ಏನು ವೈದ್ಯಕೀಯ ಚಿಕಿತ್ಸೆ! ಅದೆಂಥ ಭದ್ರತಾ ವ್ಯವಸ್ಥೆ.  ಜೀವಮಾನವೆಲ್ಲ ಈ  ಸುಪ್ಪತ್ತಿಗೆಯಲ್ಲೇ  ಕಳೆದರೂ  ಆರೋಪಿಗಳಿಗೆ  ಶಿಕ್ಷೆ ಘೋಷಣೆ  ಮಾತ್ರ ದೂರದ ಕನಸು ! ನಮ್ಮ  ದೇಶವೇನು ಅಮೇರಿಕಾದಂತೆ  ಕೆಟ್ಟ ಹೊಯ್ತ ಒಂದೇ ದಿವಸದಲ್ಲಿ  ಎಲ್ಲ  ಕೆಲಸ ಮುಗ್ಸಿ  ಆರೋಪಿಗಳನ್ನ  ಅರೆಸ್ಟ್  ಮಾಡಲಿಕ್ಕೆ ?


ಒಬ್ಬ ತನಗೆ ತೊಂದರೆ  ಯಾಗಿದೆ , ಕಳ್ಳತನ ವಾಗಿದೆ , ತನ್ನ ಮಗಳಿಗೆ  ಅನ್ಯಾಯವಾಗಿದೆ  , ಅತ್ಯಚಾರವಾಗಿದೆ , ಅಪಘಾತವಾಗಿದೆ  ಎಂದು  ದೂರು ಕೊಡಲು  ಹೋದರೆ , ದೂರನ್ನು  ದಾಖಲಿಸಿಕೊಳ್ಳೋದಕ್ಕೂ  ಲಂಚ ಕೊಡಬೇಕು. ಇನ್ನು  ಆರೋಪಿಯನ್ನು  ಕರೆಸಿ ವಿಚಾರಣೆ  ಮಾಡದಷ್ಟು  ನಮ್ಮ ಪೊಲೀಸರು ಬ್ಯುಸಿ ಮನುಷ್ಯರು . ಕಂಪ್ಲೇಂಟ್ ವಿಷಯ  ಏನಾಯ್ತು ಸರ್ ಎಂದು ಕೇಳಲು ಹೊದ  ಸಾಮಾನ್ಯನ  ಮನಸ್ಥಿತಿ  ಅರ್ಥ  ಮಾಡಿಕೊಳ್ಳದೆ ನಂಗೇನ್ ಬೇರೆ ಕೆಲಸ ಇಲ್ವೆನ್ರಿ  ಕರೆಸಿ ಮಾತಡ್ತಿವಿ  ಹೋಗ್ರಿ  ಎಂದು  ಅಂಜಿಸಿ ಅಲ್ಲಿಯೂ  ಕೇಸ್ ಮುಂದ್ ಹೋಗ್ಬೇಕು ಅಂದ್ರೆ ಮಿನಿಮಂ  ಮೂವತ್ತು  ಸಾವಿರ  ಕರ್ಚಾಗುತ್ತೆ. ಏನ್ ತಲೆ ಕೆಡಿಸ್ಕೋಬೇಡಿ  ಏನ್ ದು ಹಲ್ಲು ಗಿಂಜಿ  ಕಲಿಸುವ ಕಾನ್ಸ್ಟೇಬಲ್ ಗಳು , ಇನ್ಸ್ಪೆಕ್ಟರ್ ಗಳು , ರೋಗ ಗ್ರಸ್ಥ  ಠಾಣೆ ಗಳು. ಅಷ್ಟು ದುಡ್ಡು ಕರ್ಚು ಮಾಡಿ ಕೇಸ್ ಮುಂದುವರೆಸುವಷ್ಟ್ರಲ್ಲಿ  ದೌರ್ಜನ್ಯ ಕ್ಕೊಳಗಾದ ವನ  ಮಗ/ಮಗಳು  ಅಪಘಾತದಲ್ಲಿ  ಅತ್ಯಚರದಲ್ಲಿ ಜರ್ಜಜರಿತರಾಗಿ  ಪ್ರಾಣ ಕಳೆದು ಕೊಂಡಿರುತ್ತಾರೆ , ಕೇಸ್  ಕ್ಲೋಸ್ ಕೂಡ ಆಗಿರುವುದಿಲ್ಲ  ಸತ್ತ ಆ ದೇಹಗಳನ್ನ ಪೋಸ್ಟ್ ಮಾರ್ಟಂ  ಮಾಡಲೂ ಸಹ ವೈದ್ಯನಿಗೆ ಲಂಚ ಕೊಡಬೇಕು....!! ಅಸ್ಥಿ  ವಿಸ್ರ್ಜನೆ ಗೂ ಲಂಚ.  ಒಟ್ಟಿನಲ್ಲಿ  ಹೇಳುವುದಾದರೆ  ನಮ್ಮ ದೇಶದಲ್ಲಿ  ಹುಟ್ಟುವ  ಪ್ರತಿ ಮಗುವು ಲಂಚ ದಲ್ಲೇ ಹುಟ್ಟಿ ಲಂಚದಲ್ಲೇ ಬೆಳೆದು ಲಂಚದಲ್ಲೇ ಸಾಯುತ್ತದೆ .! ಜನ ಸಾಮಾನ್ಯ  ಈ  ಸಂಭ್ರಮಕ್ಕೆ ವೋಟ್  ಮಾಡಬೇಕ ?



 ನಾನು ಬರಿಯದೇ ಸುಮಾರು  ಆರೇಳು ತಿಂಗಳುಗಳೇ  ಆಗಿವೆ , ಆದರೂ ಓದುಗರು ಏನಾದರೂ ಬರೆದಿರಬಹುದಾ  ಎಂಬ ಕುತೂಹಲದಿಂದ ನನ್ನ ಬ್ಲಾಗ್ ಗೆ ಭೇಟಿ ನೀಡಿ, ತುಂಬಾ ದಿನಗಳ ನಂತರ ಈಗಲಾದರೂ  ಏನಾದರೂ ಬರಿ ಎಂದು ಕೈ  ಜಗ್ಗಿ   ಬರೆಯಲು ಪ್ರೇರೇಪಿಸಿದ , ಭಾರತದ ಓದುಗರಿಗೂ , ಹಾಗೂ ಕರ್ನಾಟಕದಿಂದ ಹೊರಗಿದ್ದೂ ಕನ್ನಡ ಬ್ಲಾಗ್ ಗಳನ್ನ ಓದುವ ಅನೇಕ ವಿದೇಶಿ ಕನ್ನಡಿಗರಿಗೆ , ಪ್ರಮುಖವಾಗಿ  ಅಮೇರಿಕಾದಲ್ಲಿರುವ  ಓದುಗರಿಗೆ, ಹಾಗೂ ಗಲ್ಫ್  ಕನ್ನಡಿಗರಿಗೆ  ಧನ್ಯವಾದ ತಿಳಿಸುತ್ತ , ಇನ್ನು ಮೇಲೆ ತಿಂಗಳಿಗೆ ಎರಡಾದರೂ  ಲೇಖನಗಳನ್ನು ಬರೆಯಬೇಕೆಂದು ನಿರ್ಧರಿಸಿರುವುದಾಗಿ ತಿಳಿಸಲು ನನಗೆ ತುಂಬಾ ಖುಷಿಯಾಗಿದೆ.... ಮತ್ತ್  ನಿಮಗ ?




Thursday, January 17, 2013

ಮನವೆಂಬ ಕಿಟಕಿ!!

         ಸುಂದರ ಬೆಳದಿಂಗಳು... ಜುಮ್ಮನೆ ಸೋಕಿದ ತಂಗಾಳಿ... ಸುಂದರ ಕನ್ನಿಕೆಯರು..  ಈಜು ಕೊಳ... ಬಿಳಿ ಹಂಸಗಳು... ನವಿಲು ಗರಿ ಹಿಡಿದು ಸುತ್ತ ನಿಂತಿರುವ  ದಾಸಿಯರು...ರಾಜ ಮರ್ಯಾದೆಯಲ್ಲಿ  ಕುಳಿತ ನಾನು  ಇದೆಲ್ಲಿ  ಅಂತ  ಯೋಚಿಸುತ್ತಿರುವಾಗ, ಅದ್ಯಾರೋ ರಾಗವಾಗಿ "ತಂಪು ತಂಗಾಳಿಯು ತಿಲ್ಲಾನ ಹಾಡಿತ್ತು  ಕೇಳೋಕೆ  ನಾ  ಹೋದರೆ ..." ಎಂಬ ಅಮೃತವರ್ಷಿಣಿಯ ಸಾಲುಗಳು ಕಿವಿಗಳನ್ನು ತೂರಿ ಬರುತ್ತಿತ್ತು... ಅದ್ಯಾವುದೋ  ಲೋಕ  ಅಲ್ಲಿ ನಾನು... ಹಾಂ..  ನಾನೊಬ್ಬಳೆ ! ಪರಿಚಯವಿಲ್ಲದ  ಹಲವರ ನಡುವೆ , ಚೂರು ಔಟ್ ಡೇಟೆಡ್ ಶೈಲಿಯಲ್ಲಿ ಇಷ್ಟೆಲ್ಲಾ ಸುಖದಲ್ಲಿ ತೇಲಾಡುತ್ತಿರುವಾಗ.... ಒಮ್ಮೆಲೇ  ಚುರು  ಚುರು  ಎನಿಸುವ ಬಿಸಿಲು  ಮೈತಾಕಿದಂತಾಗಿ ಎದ್ದು ನೋಡಿದರೆ , ಆಹಾ! ಅಂತ:ಪುರದ ರಾಜಕುಮಾರಿಯಂತೆ   ಕನಸು ಕಾಣುವಾಗ... ಕಿಟಕಿಯಿಂದ ಇಣುಕಿ ಒಳಬಂದ ಸೂರ್ಯನ ಕಿರಣಗಳ ಮೇಲೂ ಅದನ್ನು ಬರಲನುವು  ಮಾಡಿಕೊಟ್ಟ ಕಿಟಕಿಯಮೇಲೂ ಮುನಿಸಿಕೊಂಡು  ಆಕಳಿಸುತ್ತಾ ಎದ್ದು ನೋಡಿದರೆ ಸಮಯ ೮ ಗಂಟೆ  ...ಮಿಂಚಿನ ವೇಗದಲ್ಲಿ ಕಾಲೇಜ್  ಹೋಗಲು ಸಿದ್ಧಳಾದೆ, ಕಿಟಕಿ ಎಂಬ ಮಹಾನ್  ಮಿತ್ರನೆಡೆಗೆ ಮುಗುಳ್ನಗು ಬೀರಿ ಧನ್ಯವಾದ ಹೇಳಿ ಹೊರಟೆ.

        ಬೆಳಗ್ಗೆ  ನನಗೆ ಅಷ್ಟೊಂದು ಸಹಾಯ ಮಾಡಿದ್ದಕ್ಕೋ ಏನೋ ತಲೆಯಲ್ಲಿ  ಕಿಟಕಿಯದ್ದೆ  ಯೋಚನಾ ಲಹರಿ ಹರಿದಾಡುತ್ತಿತು, ಕ್ಲಾಸ್ನಲ್ಲಿ ಬಂದೆನೋ ಕುಳಿತೆ , ಪಾಠ ಕೇಳಲು  ಕಿಟಕಿ  ಬಿಡಲಿಲ್ಲ, ಸರಿ ತಲೆ ಹೊಕ್ಕಿದೆಯಲ್ಲಾ ಎಂದು ಕಿಟಕಿಯನ್ನೇ ದಿಟ್ಟಿಸುತ್ತಾ  ಕುಳಿತೆ. ನಮ್ಮ  ಮೇಷ್ಟ್ರು  ಅದೇನೋ  ಗಾದೆ ಹೇಳುತ್ತಿದ್ದರು , ''Let the doors of knowledge open''  ಅಂತ .ಅರೇ  ಇದೆಂಥ ಮೋಸ  ಬರೀ ಬಾಗಿಲಿಗೇ ಯಾಕೆ ಅಷ್ಟು ಪ್ರಾಮುಖ್ಯತೆ ?  ನಾನು  ಮನಸ್ಸಿನಲ್ಲೇ  ''Let the windows of happiness be always open''  ಅಂದುಕೊಂಡು  ಸುಮ್ಮನಾದೆ.  ಒಂದು ಮನೆ ಅಥವಾ ಬಂಗಲೆ ಅದೆಷ್ಟೇ  ಭವ್ಯವಾಗಿ, ಸುಂದರವಾಗಿ ಕಟ್ಟಿಸಿದರೂ , ಕಳೆ  ಅಂತ ಬರುವುದು ಕಿಟಕಿಯಿಂದಲೇ ಅಲ್ಲವೇ ? ಕಿಟಕಿ ನಮ್ಮ ಮನೆಯ ಮನದ ಅವಿಭಾಜ್ಯ ಅಂಗವೇ  ಆಗಿ ಹೋಗಿದೆ.

           ಬರಿಗಣ್ಣಿನಲ್ಲಿ  ನೋಡಿದರೆ ಕಿಟಕಿಯು  ಗಾಜು , ಕಟ್ಟಿಗೆ , ಕಬ್ಬಿಣದ ಸಲಾಕೆಯಿಂದ ಮಾಡಿದ ಗಂಭೀರ ಸೈನಿಕನಂತೆ  ಗೋಚರಿಸುತ್ತದೆ, ನಮಗೆ ಅರಿವಿಲ್ಲದೆಯೇ  ನಮ್ಮ ಬಾಲ್ಯದಿಂದ   ಶುರುವಾದ ಕಿಟಕಿಯ ಸ್ನೇಹ ವೃದ್ಧಾಪ್ಯದ  ದಿನದವರೆಗೂ  ನಮ್ಮೊಂದಿಗೆ ಸಂಬಂಧ ಬೆಳೆಸಿಕೊಂಡಿರುತ್ತದೆ.. ಕಿಟಕಿಗೂ ಕನಸಿಗೂ ನಂಟಿದೆ.  ನನ್ನೆಲ್ಲಾ ಮಹತ್ವಾಕಾಂಕ್ಷೆಯ ಕನಸುಗಳು  ಚಿಗುರಿದ್ದೆ ಕಿಟಕಿಯ ಮುಂದೆ . ಕಿಟಕಿಯಿಂದಾಚೆ  ಸುಂದರ ಪ್ರಪಂಚ , ವಿಪರೀತ ಸಂಚಲನ ಮೂಡಿಸುವ ವಾಸ್ತವ ಸಾಮಾಜಿಕ ಬದುಕು, ಕಿಟಕಿಯೊಳಗೆ ನಮ್ಮದೇ ಎನ್ನುವ ಖಾಸಗಿ ಬದುಕು.

           ನನ್ನ ಹದಿ ಹರೆಯದ ವಯಸ್ಸಿನಲ್ಲಿ ಕಿಟಕಿ  ಅದರಲ್ಲಿಯೂ ನನ್ನ ಕೋಣೆಯ ಕಿಟಕಿ ನನ್ನ excitement  ನ  ಒಂದು ಭಾಗವೇ ಆಗಿಹೋಗಿತ್ತು  ಅದೇನೋ ಗೊತ್ತಿಲ್ಲ , ಕಿಟಕಿಯಿಂದಾಚೆ  ನನ್ನ ಕನಸಿನ ಹುಡುಗ  ಸದಾ ನನ್ನ ಗಮನಿಸುತ್ತಿರಬಹುದೇನೋ ಎಂಬ ಹುಚ್ಚು ಭ್ರಮೆ, ಸುಮ್ಮನೆ  ಕಿಟಕಿಯ ಮುಂದೆ ನಾಚಿ ಕುಳಿತು ಸಂಭ್ರಮಿಸಿದ ದಿನಗಳೆಷ್ಟೋ, ಅಲ್ಲಿ ಯಾರು ಇಲ್ಲವೆಂಬುದು ಗೊತ್ತಿದ್ದೂ , ಅದೆಂತಹ ಹುಡುಕಾಟವೋ  ನಾ ಕಾಣೆ, ಇವತ್ತಿಗೂ ಕಿಟಕಿಯಾಚೆ  ಯಾರೋ ಬಂದು ನಿಂತ  ಭಾವ ಆಗಾಗ ಬಂದು ಹೋಗುತ್ತಿರುತ್ತದೆ.

            ಕಣ್ಣಂಚಿನ ಭಾವನೆಗಳನ್ನು  ಹರಿದು  ಬಿಡಲು ಒಳ್ಳೆ ಮಾಧ್ಯಮ ಈ  ಕಿಟಕಿ.  ಮೈತುಂಬ ಕಿಟಕಿ ಹೊದ್ದ ಮನೆಗೆ ಕಿಟಕಿ ಎಂದಿಗೂ  ಭಾರವಲ್ಲ , ನಮ್ಮೆಲ್ಲ ಯೋಚನೆ, ಭಾವನೆ, ಕನಸು , ಸಿಟ್ಟು , ಹತಾಶೆ ,ದುಃಖ, ಸಂತಸಗಳನ್ನು  ಯಾವುದೇ ತಾರತಮ್ಯವಿಲ್ಲದೆ , ನಾವಿದ್ದ ರೀತಿಯಲ್ಲಿ ನಮ್ಮನ್ನು  ಸ್ವೀಕರಿಸುವ ಅಪರೂಪದ ಸ್ನೇಹಿತನಲ್ಲವೇ ಅದು? ಅದೆಷ್ಟೋ ದುರ್ಭರ ಅನಿಸುವ ಕ್ಷಣಗಳಲ್ಲಿ ಸುಮ್ಮನೆ ಕಿಟಕಿಯನ್ನು ಬಿಗಿಯಾಗಿ ಹಿಡಿದು ಗಳ ಗಳ ಅತ್ತು ನಿರಮ್ಮಳಾಗುವ ಭಾವನೆ ಯನ್ನು  ಮತ್ಯಾರು ಕೊಡಲು ಸಾಧ್ಯವಿಲ್ಲ. ಕಿಟಕಿಯ ಬಾಗಿಲನ್ನು ತೆಗೆದು ನೋಡಿದರೆ ಮತ್ತದೇ ನವೋಲ್ಲಾಸ, ಬಣ್ಣ ಬಣ್ಣದ ಕನಸುಗಳು ತುಂಬಿದ  ಹೊಸ ಲೋಕ. ಅತ್ತರೆ ಸಮಾಧಾನ ಮಾಡುವವರು ಇದ್ದೆ ಇರುತ್ತಾರೆ , ಆ ದುಃಖವನ್ನು ತಕ್ಷಣಕ್ಕೆ ಮರೆಸಿ ಹೊಸ ದಿಗಂತಕ್ಕೆ ಕೈ ಚಾಚುವಂತೆ ಪ್ರೇರೇಪಿಸುವ ಶಕ್ತಿ  ಕೊಡಲು ಕಿಟಕಿ ಎಂಬ ಮಹಾನ್ ಮಾಂತ್ರಿಕನಿಗಷ್ಟೇ ಸಾಧ್ಯ !

             ಬೆಳ್ಳಂ ಬೆಳಗ್ಗೆಯ ಸೂರ್ಯನ ರಶ್ಮಿ ನಮ್ಮನು ಚುಂಬಿಸುವದರಿಂದ ಹಿಡಿದು , ಮುಸ್ಸಂಜೆಯ ತಂಗಾಳಿ ಸ್ಪರ್ಶದ ನವಿರಾದ ಅನುಭವಕ್ಕೆಲ್ಲ ಕಿಟಕಿ ಮೂಕ ಪ್ರೇಕ್ಷಕ, ಅದು ನಮ್ಮಿಂದ  ಬಯಸುವದಾದರು ಏನು? ನಾವುಗಳು ಅದಕ್ಕೆ  ಕೊಡಬಹುದಾದರೂ ಏನು ? ಇದೆಲ್ಲವುಗಳನ್ನು ಮೀರಿ ಅದು ನಮ್ಮ ಮನದಾಳದ, ಅನೇಕ ಗೊಂದಲಗಳಿಗೆ  ಆಪ್ತ  ಸಲಹೆಗಾರ. ಎಷ್ಟೇ ಆತಂಕ, ದ್ವಂದ್ವಗಳಿದ್ದರೂ, ಕಿಟಕಿಯ ಮುಂದೆ ಅವುಗಳೆಲ್ಲ  ಗೌಣ! ಇಂತಿಪ್ಪ ಈ ಕಿಟಕಿ ಎಂಬ ಪುಟ್ಟ ಭಾಗ, ನಮ್ಮ  ಕಲ್ಪನಾ ಲಹರಿಯನ್ನು ಮೀರಿಸುವಷ್ಟು  ದೈತ್ಯ  ಶಕ್ತಿ ! ನಮಗೆ ಅರಿವಿದ್ದೋ , ಇಲ್ಲದೆಯೋ  ಅಸಂಖ್ಯಾತ ಬಾರಿ ನಾವುಗಳೆಲ್ಲ  ಕಿಟಕಿಯ ತೆಕ್ಕೆಯನ್ನು  ಒಂದಿಲ್ಲೊಂದು ರೀತಿಯಲ್ಲಿ  ಅವಲಂಬಿಸಿರುರುತ್ತೇವೆ. ಕೆಲುವು ಬಾರಿ ಮರೆತು ಹೋಗಿದಂತಾಗಿ , ಮತ್ತೆ  ನೆನಪಾಗುವ  ಹಳೇ  ಗೆಳೆಯನಂತೆ, ಬಿಗಿ ಅಪ್ಪಿಗೆಯೆ  ಮುದ ನೀಡುವಂತೆ ಭಾಸವಾಗುವ  ನಿಮ್ಮ ಮನದ ಕಿಟಕಿಗಳನ್ನೊಮ್ಮೆ  ಇಣುಕಿ ನೋಡಿ , ನಿಮ್ಮ  ನೆನಪಿನಾಳದ ಸಾಗರದಲ್ಲಿ ಮನವನೊಮ್ಮೆ ಹಾಗೆ ತೇಲಿ ಬಿಡಿ, ಹೊಸ  ಕನಸುಗಳೊಂದಿಗೆ ಜೀವನೋತ್ಸಾಹದೊಂದಿಗೆ ನಿಮ್ಮ ದಿನ ಶುರುವಾಗಲಿ.

Monday, August 27, 2012

ನಿರಂತರ ಓಟ ...!!




                     ಚುಮು ಚುಮು ಚಳಿಯಲ್ಲಿ, ಬೆಳಗ್ಗೆ ಆಯ್ತಲ್ಲ ಇನ್ನು ಹೊರಡೋ ತಯಾರಿ ಮಾಡಿಕೊಳ್ಳಬೇಕು ಎಂದು ವಲ್ಲದ ಮನಸ್ಸಿನಿಂದೆದ್ದು , ನಿದ್ದೆಗಣ್ಣಿನಲ್ಲಿ ಬಾಲ್ಕನಿ ಯಲ್ಲಿ  ನಿಂತು ನೋಡಿದಾಗ ಕಂಡಿದ್ದು ,ಸುಮಾರು  3-4 ವರ್ಷದ ಮಗು ಪ್ರಪಂಚದ ಅರಿವೇ ಇಲ್ಲದೇ, ತನ್ನ ಪಾಡಿಗೆ ತಾನು ಅದ್ಯಾವ ಪರಿ ತನ್ನ ಆಟದಲ್ಲಿ ಮಗ್ನವಾಗಿತ್ತೆಂದರೆ , ತಾನೊಂದೆ  ಆಟ ಆಡುತ್ತಿದ್ದೇನೆ ಎನ್ನುವ ಅರಿವಿದ್ದೋ ಇಲ್ಲದೆಯೋ  ನಾಲ್ಕು  ಸುತ್ತು  ಹಾಕಿ, ನಿಂತು , ಎಲ್ಲರನ್ನು ನೋಡಿ, ಮತ್ತೆ ಅದೇನೋ ನೆನಪಾದಂತೆ ನಕ್ಕು , ಮತ್ತೆ ಜಿಗಿದು, ಕುಣಿದು, ಸಂಭ್ರಮಿಸಿ, ಬಾಲ್ಯದ  ಸಂಪೂರ್ಣತೆಯನ್ನು  ಅನುಭವಿಸುತ್ತಿದೆ ಎಂದೆನಿಸಿತು....

                     ಆ ಮಗುವಿನ ಲವಲವಿಕೆ ನನಗೆ ಬೆಳಗಿನ ಅತ್ಯಂತ ಸಂತೋಷದ ಕ್ಷಣವಾಗಬೇಕಿತ್ತು , ಬದಲಿಗೆ ಆ ಪುಟ್ಟ ಮಗುವಿನ ಮೇಲೆ ಸಣ್ಣ ಅಸೂಯೆ ಮೂಡಿದಂತಾಗಿ  ನನ್ನ ನಾನೇ ಶಪಿಸಿಕೊಂಡೆ .. ನಾನು ಆ ಮಗು ಥರಾನೆ ಇದ್ದು ಬಿಡಬಹುದಿತ್ತಲ್ಲ ಅಂತ ಅನಿಸಿದ್ದು ಸುಳ್ಳಲ್ಲ!! ಬಹುಶ : ಬಾಲ್ಯದ ದಿನಗಳನ್ನು ನಾನೂ  ಹಾಗೆ ಸಂಭ್ರಮಿಸಿಯೇ ಕಳೆದಿರಬಹುದು , ಆದರೆ ನಾನು ಬೆಳೆಯುತ್ತ ಹೋದಂತೆಲ್ಲ ನನ್ನಲ್ಲಿರುವ ಆ ಪುಟ್ಟ ಮಗುವನ್ನು ಅದೆಲ್ಲಿ ಬಚ್ಚಿಟ್ಟೆ ?  ಅದು ಹೊರಗೆ ಬಾರದಂತೆ ಕಟ್ಟಿ ಹಾಕಿದ್ದೆನೆಯೇ? ಆ ಮಗುವಿನಂತೆ ಎಲ್ಲ ಮರೆತು ಒಂದು ಕ್ಷಣವಾದರೂ ಅನುಭವಿಸಬಲ್ಲೇನೆ ? ಅಮಾಯಕತೆಯನ್ನು ಮರೆತೇ ಬಿಟ್ಟೆನೆ? ಇಂತಹ ಅನೇಕ ವಿಚಾರ ಗಳನ್ನು  ಹೊತ್ತ ಇರುವೆಗಳು ಮಿದುಳಿನಲ್ಲಿ ಓಡಾಡಿದ ಅನುಭವ!!

                       ನಾವೆಲ್ಲರೂ ಸಮಯದ ಆಚಕ್ರವನ್ನು ಕಾಲಿಗೆ ಕಟ್ಟಿಕೊಂಡೆ ಓಡಾಡುತ್ತಿದೇವೆ . ಗುರಿ ತಲುಪಲೇ ಬೇಕಿದೆ, ದಾರಿ ಅಸ್ಪಷ್ಟ , ಎಲ್ಲರೂ ಒಟ್ಟಿನಲ್ಲಿ ಓಡುತ್ತಿದ್ದೇವೆ  ಜಿದ್ದಿಗೆ ಬಿದ್ದು , ಓಡುವುದು  ಅನಿವಾರ್ಯವೋ? ಅವಶ್ಯಕತೆಯೋ ? ಅಥವಾ ಅಸ್ತಿತ್ವವೋ ? ಗೊಂದಲ ! ದಾರಿ ಹೇಗಿದ್ದರೂ ಸರಿ ಗುರಿ ತಲುಪುವ ಭರದಲ್ಲಿ ಓಟದಲ್ಲಂತೂ ನಾವಿದ್ದೇವೆ , ಇರುತ್ತೇವೆ , ನಿರಂತರ..

                      ಮಗುವಿನ ಲವಲವಿಕೆ, ಅಮ್ಮನ ನಿರಂತರ ಪ್ರೋತ್ಸಾಹ , ಅಪ್ಪನ ಹೊಗಳಿಕೆ, ಅಜ್ಜಯ್ಯನ ಆಶೀರ್ವಾದ, ನನ್ನ ಓಟದಲ್ಲಿ  ಕಾಣ ಸಿಗುವ ಸಣ್ಣ ಸಣ್ಣ ತಂಗುದಾಣಗಳು ! ಮಗುವಿನಂತೆ ಇರಬಯಸಿ , ಒಂದು ತಾಣದಲ್ಲಿ ತಂಗಲು  ತೆರಳಿದರೆ , ಅದೆಲ್ಲೋ ದೂರ ನಿಂತ ಅಮ್ಮ  ನಿಧಾನವಾಗಿ ಓಡುತ್ತಿದೀಯ , ನಿನ್ನ ಜತೆ ಓಡುತ್ತಿರುವರು ದೂರ  ಬಂದಿದ್ದಾರೆ, ಓಡು  ಮಗು ಸಾಕು ವಿಶ್ರಾಂತಿ ಎಂಬಂತಾಗಿ ಹೇಳಲು , ಮತ್ತೆ ಕಷ್ಟ ಪಟ್ಟು ಓಡಿ ಇನ್ನರ್ಧ ಓಟ  ಮುಗಿಸಿ  ಅಪ್ಪನ ತಂಗುದಾಣಕ್ಕೆ ಬಂದು ನಿಂತರೆ, ಚೆನ್ನಾಗಿ ಓಡಿದೆ ಮಗು  ಇನ್ನು  ನಿಲ್ಲಬೇಡ, ನಿನ್ನ ಹಿಂದೆ ಓಡುವವರು ಇನ್ನೇನು ಇಲ್ಲಿ  ಬಂದು ಬಿಡಬಹುದು ಓಡಿನ್ನು ಎಂದು ಮತ್ತೆ  ಓಟಕ್ಕೆ ನನ್ನನ್ನು ಸಜ್ಜಾಗಿಸಿದರು..

                       ನಮಗಿಂತ ಮೊದಲು ಓಟ ಶುರು ಮಾಡಿದ  ಅಜ್ಜಯ್ಯ ಈಗ ಪೂರ್ಣಾವಸ್ಥೆಯ ವಿಶ್ರಾಂತಿಯಲ್ಲಿದ್ದಾನೆ, ಈಗ  ಅಜ್ಜಯನ ತಂಗುದಾಣದಲ್ಲಿ ಬಂದು ನಿಂತರೇ , ಅಜ್ಜಯ್ಯ  ಓಡು ಎನ್ನುವ ಯಾವುದೇ  ಸೂಚನೆಗಳನ್ನು ಕೊಡುತ್ತಿಲ್ಲ , ಹಾಗೆಯೇ ಇದೇ ನಿನ್ನ ಅಂತಿಮ ತಾಣವೆಂದೂ  ಹೇಳುತ್ತಿಲ್ಲ , ಸುಮ್ಮನೆ ನನ್ನ ಕಾಲು ಭಾಗ  ಓಟವನ್ನು ಮೆಲಕು ಹಾಕಿ ನಗು ಮುಖದಿಂದ ಇನ್ನು ಮುಕ್ಕಾಲು ಭಾಗ ಓಡುವುದಿದೆ, ಆದರೆ  ಓಡುವ  ಮುನ್ನ ಸಾಕಷ್ಟು ಜಾಗ್ರತೆ ಇಂದ  ಓಡು, ಇನ್ನು ಕಾಲು ಓಟದಲ್ಲಿ  ಮಾತ್ರ  ನಾ ಭಾಗಿಯಾಗಬಲ್ಲೆ , ಅದಾದ ನಂತರ  ನಿನ್ನ  ಬರಮಾಡಿಕೊಳ್ಳಲು  ನನ್ನ ತಂಗುದಾಣದಲ್ಲಿ  ನಾನಿರಲಾರೆ, ಅಪ್ಪ-ಅಮ್ಮನ  ತಂಗುದಾಣಗಳು, ಇನ್ನರ್ಧ  ಓಟದಲ್ಲಿ  ಸಹಾಯ ಮಾಡಬಲ್ಲವೇ  ಹೊರತು ಅದರಿಂದಾಚೆಗೆ ನಿನ್ನೋಬ್ಬಳದೆ ನಿರಂತರ ಹೋರಾಟದ ಓಟ  ಜಾಗ್ರತೆ...ಯಾತಕ್ಕೆ ಅಜ್ಜಯ್ಯ?? ಅಂತ ಕೇಳುವಷ್ಟರಲ್ಲಿ ಇನ್ಯಾರೋ  ನನ್ನ ದಾಟಿ ಮುಂದೆ ಓಡಿ ಹೋದಂತಾಗಿ , ಇನ್ನು ಸಮಯ ವ್ಯರ್ಥ ಮಾಡುವುದು ಬೇಡ , ಜಾಸ್ತಿ ಹೊತ್ತು ಇಲ್ಲಿರಬೇಡ ಸಾಗಿನ್ನು ಎನ್ನಲು , ಅವರಿವರು ಓಡುತ್ತಿದ್ದಾರೆಂದು ನಾನ್ಯಾಕೆ ಓಡಲಿ  ಅಜ್ಜಯಾ?? ನಾ  ವಲ್ಲೆ ..ಎಂದೆ.

                      ನಮ್ಮ ಓಟ ಓಡಲೇ ಬೇಕು ಮಗು , ಓಡದೆ ಇರಲಾಗುವುದಿಲ್ಲ , ನಿನ್ನ ಓಟದಲ್ಲೇ  ನಿನ್ನ ಉತ್ತರ ಹುಡುಕಿಕೊಳ್ಳಬೇಕು, ಉತ್ತರದ  ಹುಡುಕಾಟಕ್ಕಾದರೂ  ವಲ್ಲದ  ಮನಸ್ಸಿನಿಂದ ಓಡಲೇ ಬೇಕು  ಎಂದು ಮತ್ತೆ ಶುರು ಮಾಡಿದೆ .
ಮತ್ತದೇ ಅಸ್ಪಷ್ಟ  ದಾರಿ , ಮತ್ತದೇ  ಸಹ ಸ್ಪರ್ಧಿಗಳು , ಮತ್ತದೇ ಗುರಿ ,ಮತ್ತವೇ  ತಂಗುದಾಣಗಳು, ಓಡುತ್ತಿದೇನೆ , ಓಡಬೇಕು , ವಿಶ್ರಮಿಸುವಂತಿಲ್ಲ  ಇದಷ್ಟೇ  ತಲೆಯಲ್ಲಿ ಇಟ್ಟುಕೊಂಡು ಓಡುತ್ತಿರುವ  ನಾನು  ಯಾರಿಗೆ , ಏತಕ್ಕಾಗಿ  ಓಡುತ್ತಿದೇನೆ  ಎನ್ನುವುದನ್ನು  ವಿವರಿಸಲಾರೆ  ವಿಪರ್ಯಾಸ! ಆದರೆ  ಓಟ  ವ್ಯರ್ಥ ವೆನಿಸುತ್ತಿಲ್ಲ , ನಾನು ಓಡುತ್ತಲೇ  ಇದ್ದೇನೆ , ಇನ್ನು ಅದೆಷ್ಟು ಹೊಸ ತಂಗು ದಾಣ ಗಳಲ್ಲಿ  ವಿಶ್ರಮಿಸಲ್ಲಿದ್ದೇನೋ? ಅಸ್ಪಷ್ಟ, ಅನಿಖರತೆ ...ಉತ್ತರದ  ನಿರಂತರ  ಹುಡುಕಾಟದಲ್ಲಿ  ಮತ್ತೆ ನನ್ನ ಓಟ , ಜತೆಯಲ್ಲಿ  ನೀವು  ಇರುವಿರಲ್ಲ ???